

ಬೆಳಗಾವಿ: ಯಾವುದೇ ವ್ಯಕ್ತಿ, ಕುಟುಂಬ, ಕುಟುಂಬದ ಸದಸ್ಯರನ್ನು ಸಾಮಾಜಿಕವಾಗಿ ಬಹಿಷ್ಕರಿಸಿದರೆ 1 ಲಕ್ಷ ರೂಪಾಯಿವರೆಗೂ ದಂಡ ಹಾಗೂ ಮೂರು ವರ್ಷದವರೆಗೆ ಜೈಲು ಶಿಕ್ಷೆ ಅಥವಾ ಎರಡನ್ನೂ ವಿಧಿಸಲು ಹಾಗೂ ಸ್ವಯಂ ಪ್ರೇರಿತವಾಗಿ ದೂರು ದಾಖಲಿಸಿಕೊಳ್ಳಲು ಅವಕಾಶವಿರುವ ಮಸೂದೆಗೆ ವಿಧಾನಸಭೆ ಗುರುವಾರ ಸರ್ವಾನುಮತದಿಂದ ಅನುಮೋದನೆ ನೀಡಿತು.
ಸಮಾಜ ಕಲ್ಯಾಣ ಇಲಾಖೆ ಸಚಿವ ಡಾ. ಎಚ್. ಸಿ. ಮಹಾದೇವಪ್ಪ, ಕರ್ನಾಟಕ ಸಾಮಾಜಿಕ ಬಹಿಷ್ಕಾರ (ಪ್ರತಿಬಂಧ, ನಿಷೇಧ ಮತ್ತು ಪರಿಹಾರ) ಮಸೂದೆಯನ್ನು ಚರ್ಚೆಗೆ ಮಂಡಿಸಿದರು.
ಬಳಿಕ ಮಾತನಾಡಿದ ಸಚಿವರು, ದೇಶಕ್ಕೆ ಸ್ವಾತಂತ್ರ್ಯ ಬಂದು 75 ವರ್ಷವಾದರೂ ಸಾಮಾಜಿಕವಾಗಿ ಬಹಿಷ್ಕಾರ ಹಾಕುವುದು ನಡೆದಿದೆ. ಇದು ಮಾನವ ಹಕ್ಕುಗಳ, ನಾಗರಿಕ ಹಕ್ಕುಗಳ ಉಲ್ಲಂಘನೆ, ಇದನ್ನು ನಿಷೇಧಿಸಲು ಐತಿಹಾಸಿಕ ಮಸೂದೆಯನ್ನು ರೂಪಿಸಲಾಗಿದೆ ಎಂದರು.
ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಮಾತನಾಡಿ, 21ನೇ ಶತಮಾನದಲ್ಲಿ ನಾವೆಲ್ಲರೂ ಒಂದೇ ಎಂದು ಭಾಷಣ ಮಾಡಿದರೂ ನಿರ್ಬಂಧ, ತಾರತಮ್ಯ ಮುಂದುವರಿದಿದೆ. ಹೋಟೆಲ್, ಕ್ಷಾರ ಸೇರಿದಂತೆ ಇತರ ಸೇವೆ ನಿರ್ಬಂಧಿಸುವುದು, ಬಹಿಷ್ಕಾರ ಹಾಕುವುದು ಅಕ್ಷಮ್ಯವಾಗಿದ್ದು, ಕಾಯ್ದೆ ಜಾರಿಯಾದಾಗ ಹಳ್ಳಿಗಳಲ್ಲಿ ಸಾಮಾಜಿಕ ಬಹಿಷ್ಕಾರ ನಿಷೇಧ, ದಂಡ ಹಾಗೂ ಶಿಕ್ಷೆ ಬಗ್ಗೆ ಅರಿವು ಮೂಡಿಸಬೇಕು ಎಂದು ಸಲಹೆ ನೀಡಿದರು.
ಬಿಜೆಪಿಯ ಶಾಸಕರಾದ ಎಸ್. ಸುರೇಶ್ ಕುಮಾರ್, ಆರಗ ಜ್ಞಾನೇಂದ್ರ, ಸಿಮೆಂಟ್ ಮಂಜು ಹಾಗೂ ಜೆಡಿಎಸ್ ನ ನೇಮಿರಾಜ ನಾಯ್ಕ್ ಮತ್ತಿತರರು ಮಾತನಾಡಿದರು.
ಕಾಂಗ್ರೆಸ್ ನ ಟಿ. ಬಿ. ಜಯಚಂದ್ರ ಮಾತನಾಡಿ, ಸಾಮಾಜಿಕ ಬಹಿಷ್ಕಾರಕ್ಕೆ ಸಂಬಂಧಿಸಿದಂತೆ ಪೊಲೀಸರು ಸ್ವಯಂ ಪ್ರೇರಿತರಾಗಿ ದೂರು ದಾಖಲಿಸಿಕೊಳ್ಳಲು ಅವಕಾಶ ಕಲ್ಪಿಸಿ ಮಸೂದೆಗೆ ತಿದ್ದುಪಡಿ ತರಬೇಕು ಎಂದು ಸಲಹೆಯನ್ನು ಅಳವಡಿಸಿಕೊಳ್ಳುವುದಾಗಿ ಮಹದೇವಪ್ಪ ಭರವಸೆ ನೀಡಿದರು. ಬಳಿಕ ಸದನ ಪಕ್ಷಾತೀತವಾಗಿ ಮಸೂದೆಗೆ ಅನುಮೋದನೆ ನೀಡಿತು.
Advertisement