News headlines 18-12-2025 | ಚೀನಾದ GPS ಸಾಧನ ಅಳವಡಿಸಿರುವ ಸೀಗಲ್ ಪತ್ತೆ; ಪಾರಿವಾಳಗಳಿಗೆ ಆಹಾರ ನೀಡಿದರೆ ದಂಡ; ಜೈಲು!; ದ್ವೇಷ ಅಪರಾಧಗಳ ಪ್ರತಿಬಂಧಕ ಕಾಯ್ದೆ ವಿಧಾನಸಭೆಯಲ್ಲಿ ಅಂಗೀಕಾರ

News headlines 18-12-2025 | ಚೀನಾದ GPS ಸಾಧನ ಅಳವಡಿಸಿರುವ ಸೀಗಲ್ ಪತ್ತೆ; ಪಾರಿವಾಳಗಳಿಗೆ ಆಹಾರ ನೀಡಿದರೆ ದಂಡ; ಜೈಲು!; ದ್ವೇಷ ಅಪರಾಧಗಳ ಪ್ರತಿಬಂಧಕ ಕಾಯ್ದೆ ವಿಧಾನಸಭೆಯಲ್ಲಿ ಅಂಗೀಕಾರ

1. ದ್ವೇಷ ಅಪರಾಧಗಳ ಪ್ರತಿಬಂಧಕ ಕಾಯ್ದೆ ವಿಧಾನಸಭೆಯಲ್ಲಿ ಅಂಗೀಕಾರ

ರಾಜ್ಯದಲ್ಲಿ ದ್ವೇಷಭಾಷಣಗಳಿಗೆ ಕಡಿವಾಣ ಹಾಕಲು ರಾಜ್ಯ ಸರ್ಕಾರ ಗುರುವಾರ ಕರ್ನಾಟಕ ದ್ವೇಷ ಭಾಷಣ ಮತ್ತು‌ ದ್ವೇಷ ಅಪರಾಧಗಳ (ಪ್ರತಿಬಂಧಕ) ವಿಧೇಯಕ- 2025 ನ್ನು ವಿಧಾನಸಭೆಯಲ್ಲಿ ಅಂಗೀಕರಿಸಿದೆ. ಗೃಹ ಸಚಿವ ಡಾ. ಜಿ ಪರಮೇಶ್ವರ ಅವರು, ದ್ವೇಷ ಭಾಷಣ ಪ್ರತಿಬಂಧಕ ಮಸೂದೆಯನ್ನು ವಿಧಾನಸಭೆಯಲ್ಲಿ ಮಂಡಿಸಿದ್ದರು. ದ್ವೇಷ ಭಾಷಣ ತಡೆಯುವ ದೇಶದ ಮೊದಲ ಕಾನೂನು ಇದಾಗಿದ್ದು, ಈ ಮಸೂದೆಯು ಒಂದು ಲಕ್ಷ ರೂ.ಗಳವರೆಗೆ ದಂಡ ಮತ್ತು ಗರಿಷ್ಠ 10 ವರ್ಷಗಳವರೆಗೆ ಜೈಲು ಶಿಕ್ಷೆಗೆ ಅವಕಾಶ ನೀಡುತ್ತದೆ. ಈ ಮಸೂದೆ ಅಂಗೀಕಾರಗೊಳ್ಳುತ್ತಿದ್ದಂತೆ ಸಚಿವ ಭೈರತಿ ಸುರೇಶ್ ಮತ್ತು ಬಿಜೆಪಿ ಶಾಸಕ ಚನ್ನಬಸಪ್ಪ ನಡುವೆ ಏಕವಚನದಲ್ಲಿ ವಾಕ್ಸಮರ ನಡೆಯಿತು. ಬೈರತಿ ಸುರೇಶ್, ದ್ವೇಷ ಭಾಷಣ ಮತ್ತು ದ್ವೇಷ ಅಪರಾಧದಿಂದಾಗಿ ಕರಾವಳಿ ಕರ್ನಾಟಕ "ಹೊತ್ತಿ ಉರಿಯುತ್ತಿದೆ". ಅಲ್ಲಿ ಬೆಂಕಿ ಹಚ್ಚಿದ್ದೀರಿ. ಈಗ ಇಲ್ಲಿಯೂ ಬೆಂಕಿ ಹಚ್ಚುತ್ತಿದ್ದೀರಿ ಎಂದು ಹೇಳಿದರು. ಅದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಬಿಜೆಪಿ ಶಾಸಕರು ಸದನದ ಬಾವಿಗೆ ಇಳಿದು ಪ್ರತಿಭಟನೆ ನಡೆಸಿದರು ಮತ್ತು ಸಚಿವರು ಕ್ಷೇಮೆ ಕೇಳಬೇಕು ಎಂದು ಒತ್ತಾಯಿಸಿದರು. ಪ್ರತಿಪಕ್ಷ ನಾಯಕ ಆರ್. ಅಶೋಕ್ ಅವರು ಮಸೂದೆ ಅಂಗೀಕಾರವಾಗುತ್ತಿದ್ದಂತೆ, ಬಿಲ್ ಪ್ರತಿಯನ್ನು ಹರಿದು ಬಿಸಾಡಿ ಆಕ್ರೋಶ ವ್ಯಕ್ತಪಡಿಸಿದರು. ಕರ್ನಾಟಕ ವಿಧಾನ ಪರಿಷತ್ತು ಬೆಳಗಾವಿ ಚಳಿಗಾಲ ಅಧಿವೇಶನದಲ್ಲಿ ಬುಧವಾರ 11 ಮಸೂದೆಗಳನ್ನು ಅಂಗೀಕರಿಸಿದೆ.

2. ಸಾರ್ವಜನಿಕ ಪ್ರದೇಶದಲ್ಲಿ ಪಾರಿವಾಳಗಳಿಗೆ ಆಹಾರ ನೀಡಿದರೆ ದಂಡ; 6 ತಿಂಗಳ ಜೈಲು

ಪಾರಿವಾಳಗಳಿಂದ ಕಾಯಿಲೆಗಳು ಹರಡುತ್ತಿರುವುದು ಹೆಚ್ಚಾಗುತ್ತಿದ್ದು, ಈ ಬೆಳವಣಿಗೆಯನ್ನು ಗಂಭೀರವಾಗಿ ಪರಿಗಣಿಸಿರುವ ರಾಜ್ಯ ಸರ್ಕಾರ ಸಾರ್ವಜನಿಕ ಸ್ಥಳಗಳಲ್ಲಿ ಅವುಗಳಿಗೆ ಆಹಾರ ನೀಡುವುದನ್ನು ನಿಷೇಧಿಸಿದೆ. ಪಾರಿವಾಳಗಳ ಮಲ-ಮೂತ್ರದಿಂದ ಸೋಂಕು ಹರಡುವುದು, ಉಸಿರಾಟ ತೊಂದರೆ ಸೇರಿದಂತೆ ಶ್ವಾಸಕೋಶ ಸಂಬಂಧಿತ ಗಂಭೀರ ಸಮಸ್ಯೆಗಳಾಗುತ್ತಿವೆ. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಹೊಸ ನಿಯಂತ್ರಣ ಮಾರ್ಗಸೂಚಿಗಳನ್ನು ಹೊರಡಿಸಿದೆ. ನಿಯಮ ಉಲ್ಲಂಘಿಸಿ ಪಾರಿವಾಳಗಳಿಗೆ ಆಹಾರ ನೀಡಿದವರಿಗೆ, ಸಾಂಕ್ರಾಮಿಕ ರೋಗ ಹರಡಿದ ನಿರ್ಲಕ್ಷ್ಯದ ಪ್ರಕರಣ ದಾಖಲಿಸಿ, ದಂಡ, 6 ತಿಂಗಳವರೆಗೆ ಜೈಲು ಶಿಕ್ಷೆ ವಿಧಿಸಬಹುದಾಗಿದೆ.

3. ಕೃಷ್ಣ ಬೈರೇಗೌಡ ವಿರುದ್ಧ ಭೂಕಬಳಿಕೆ ಆರೋಪ

ಕೋಲಾರ ಜಿಲ್ಲೆಯ ನರಸುಪುರ ಹೋಬಳಿ ಗರುಡನಪಾಳ್ಯದಲ್ಲಿ 21 ಎಕರೆ ಜಮೀನನ್ನು ಕಬಳಕೆ ಮಾಡಿದ ಆರೋಪ ಕಂದಾಯ ಕೃಷ್ಣ ಬೈರೇಗೌಡ ವಿರುದ್ಧ ಕೇಳಿಬಂದಿದೆ. ನಕಲಿ ದಾಖಲೆ ಸೃಷ್ಟಿ ಮಾಡಿ, ಅಧಿಕಾರ ದುರ್ಬಳಕೆ ಮಾಡಿ ಜಮೀನನ್ನು ತಮ್ಮ ಹೆಸರಿಗೆ ಮಾಡಿಕೊಂಡಿದ್ದಾರೆ ಎಂದು ಸದನದಲ್ಲಿ ಬಿಜೆಪಿ ನಾಯಕರು ಆರೋಪ ಮಾಡಿದ್ದಾರೆ. ಆದರೆ ತಮ್ಮ ವಿರುದ್ಧದ ಆರೋಪವನ್ನು ಕೃಷ್ಣ ಬೈರೇಗೌಡ ನಿರಾಕರಣೆ ಮಾಡಿದ್ದು. "ಪಿತ್ರಾರ್ಜಿತ ಆಸ್ತಿಯಾಗಿದೆ. ನಾನು ಯಾವುದೇ ರೀತಿಯಲ್ಲಿ ಅಕ್ರಮ ಎಸಗಿಲ್ಲ. ಪ್ರಕರಣದ ಬಗ್ಗೆ ತನಿಖೆಗೆ ನಾನು ಸಿದ್ದ, ಲೋಕಾಯುಕ್ತ ತನಿಖೆಗೂ ಸಿದ್ದವಾಗಿದ್ದೇನೆ, ಇಲ್ಲದಿರುವುದು ಹುಡುಕಿ ಆರೋಪ ಮಾಡುವುದು ಅವರ ಸಂಸ್ಕೃತಿ ಎಂದು ಹೇಳಿದ್ದಾರೆ.

4. ಮಹೇಶ್ ಶೆಟ್ಟಿ ತಿಮರೋಡಿ ಮತ್ತೆ ಗಡಿಪಾರು; ಚಿನ್ನಯ್ಯ ಜೈಲಿನಿಂದ ಬಿಡುಗಡೆ

ಧರ್ಮಸ್ಥಳದಲ್ಲಿ ಅಪರಾಧ ಕೃತ್ಯಗಳಿಗೆ ಸಂಬಂಧಿಸಿದ ಅನೇಕ ಮೃತದೇಹಗಳನ್ನು ಹೂತು ಹಾಕಲಾಗಿದೆ ಎಂದು ಆರೋಪಿಸಲಾದ ಪ್ರಕರಣದ ಸಾಕ್ಷಿ ದೂರುದಾರ ಚಿನ್ನಯ್ಯ ಅವರನ್ನು ಶಿವಮೊಗ್ಗ ಜೈಲಿನಿಂದ ಗುರುವಾರ ಬೆಳಿಗ್ಗೆ ಷರತ್ತುಬದ್ಧ ಜಾಮೀನಿನ ಮೇಲೆ ಬಿಡುಗಡೆಗೊಳಿಸಲಾಗಿದೆ. ಆತನಿಗೆ ಮಂಗಳೂರಿನ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಲಯ ನ.24ರಂದು ಷರತ್ತುಬದ್ಧ ಜಾಮೀನು ಮಂಜೂರು ಮಾಡಿತ್ತು. ಈಮಧ್ಯೆ, ಧರ್ಮಸ್ಥಳ ಕ್ಷೇತ್ರದ ವಿರುದ್ಧ ಹೋರಾಟ ನಡೆಸುತ್ತಿರುವ ಮಹೇಶ್ ಶೆಟ್ಟಿ ತಿಮರೋಡಿಗೆ ಎರಡನೇ ಬಾರಿಗೆ ಗಡಿಪಾರು ಮಾಡಿ ಪುತ್ತೂರು ಎ.ಸಿ ಆದೇಶ ಹೊರಡಿಸಿದ್ದಾರೆ. ಪುತ್ತೂರು ವಿಭಾಗಾಧಿಕಾರಿ ಸ್ಟೆಲ್ಲಾ ವರ್ಗೀಸ್ ತನ್ನ ಹಿಂದಿನ ಆದೇಶವನ್ನು ಮಾರ್ಪಡಿಸಿ ಮತ್ತೆ ಜಾರಿಗೊಳಿಸಿದ್ದಾರೆ. ಈ ಹಿಂದಿನ ಆದೇಶದಂತೆ, ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿಗೆ ಗಡಿಪಾರು ಮಾಡಿ ಆದೇಶ ಮಾಡಿದ್ದಾರೆ. ವಿಷಯ ತಿಳಿದ ಮಹೇಶ್ ಶೆಟ್ಟಿ ಪೊಲೀಸರು ಮನೆ ತಲುಪುವ ಮೊದಲೇ ಅಲ್ಲಿಂದ ನಾಪತ್ತೆಯಾಗಿದ್ದಾರೆ.

5. ಕಾರವಾರ: ಕದಂಬ ನೌಕಾ ನೆಲೆಯ ಬಳಿ ಚೀನಾದ GPS ಸಾಧನ ಅಳವಡಿಸಿರುವ ಸೀಗಲ್ ಪತ್ತೆ

ಕಾರವಾರದ ಕಡಲ ತೀರ ಭಾಗದ ತಿಮ್ಮಕ್ಕ ಗಾರ್ಡನ್ ಹಿಂಭಾಗದಲ್ಲಿ ಕೂತಿದ್ದ ಸೀಗಲ್ ಹಕ್ಕಿಯ ಬೆನ್ನಿನ ಭಾಗದಲ್ಲಿ ಚೀನಾದ ಜಿಪಿಎಸ್ ಟ್ರ್ಯಾ ಕರ್ ಪತ್ತೆಯಾಗಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ. ಟ್ರ್ಯಾಕರ್ ಜೊತೆಗೆ ಪಕ್ಷಿಯನ್ನು ನೋಡಿದ ದಾರಿಹೋಕರೊಬ್ಬರು ಪೊಲೀಸರಿಗೆ ಮಾಹಿತಿ ನೀಡಿದರು. ಅಧಿಕಾರಿಗಳು ಸೀಗಲ್ ಮತ್ತು ಜಿಪಿಎಸ್ ಟ್ರ್ಯಾಕರ್ ಅನ್ನು ಪರಿಶೀಲಿಸಿದರು, ಅದರ ಮೇಲೆ 'ಪರಿಸರ ವಿಜ್ಞಾನ, ಚೈನೀಸ್ ಅಕಾಡೆಮಿ ಆಫ್ ಸೈನ್ಸಸ್' ಎಂದು ಬರೆಯಲಾಗಿದೆ. ಸೀಗಲ್‌ಗಳ ಚಲನೆ, ಆಹಾರ ಮಾದರಿಗಳು ಮತ್ತು ವಲಸೆಯನ್ನು ಅಧ್ಯಯನ ಮಾಡಲು ಟ್ರ್ಯಾಕರ್ ಅಳವಡಿಸಲಾಗಿದೆ. ಪಕ್ಷಿಯನ್ನು ಸಾಗರ ಅರಣ್ಯ ವಿಭಾಗದ ಕಚೇರಿಗೆ ಕಳುಹಿಸಲಾಗಿದೆ. ಈ ಮಧ್ಯೆ, ಅರಣ್ಯ ಅಧಿಕಾರಿಗಳು ಚೈನೀಸ್ ಅಕಾಡೆಮಿಯೊಂದಿಗೆ ಸಂಪರ್ಕದಲ್ಲಿದ್ದಾರೆ. ಪೊಲೀಸ್ ಇಲಾಖೆ ಮತ್ತು ನೌಕಾ ಪೊಲೀಸರು ತನಿಖೆಯನ್ನು ಪ್ರಾರಂಭಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com