

ಬೆಳಗಾವಿ: ಫೆಬ್ರವರಿ-ಮಾರ್ಚ್ ತಿಂಗಳ ಗೃಹಲಕ್ಷ್ಮಿ ಯೋಜನೆ ಹಣವನ್ನು ಸರ್ಕಾರ ಬಿಡುಗಡೆ ಮಾಡಿಲ್ಲ, ಬಡವರ ಹಣ ಲೂಟಿ ಮಾಡಿದೆ ಎಂಬ ವಿರೋಧ ಪಕ್ಷ ಬಿಜೆಪಿ ನಾಯಕ ಬಿ ವೈ ವಿಜಯೇಂದ್ರ ಆರೋಪಕ್ಕೆ ಡಿಸಿಎಂ ಡಿ ಕೆ ಶಿವಕುಮಾರ್ ಪ್ರತಿಕ್ರಿಯಿಸಿದ್ದಾರೆ,
ಬೆಳಗಾವಿಯಲ್ಲಿಂದು ಸುದ್ದಿಗಾರರ ಜೊತೆ ಮಾತನಾಡಿದ ಅವರು, ರಾಜ್ಯದಲ್ಲಿ ಕಲೆಕ್ಷನ್ ಕಿಂಗ್ ಅಂದರೆ ಅದು ಬಿ ವೈ ವಿಜಯೇಂದ್ರ. ಅವರ ಕಲೆಕ್ಷನ್ ಬಗ್ಗೆ ಬಿಚ್ಚಿಡಬೇಕಾ, ವಿಜಯೇಂದ್ರಗೆ ಅನುಭವದ ಕೊರತೆಯಿದೆ. ಅವರ ತಂದೆ ಯಡಿಯೂರಪ್ಪ ಹೆಸರು ಕೆಡಿಸಿದ್ದು ವಿಜಯೇಂದ್ರನೇ ಎಂದು ಗುಡುಗಿದ್ದಾರೆ.
ವಿರೋಧ ಪಕ್ಷದವರ ಮಾತು, ಆರೋಪದಲ್ಲಿ ಇತಿಮಿತಿ ಇರಬೇಕು, ರಾಜ್ಯದ ಯಾವ ಖಜಾನೆ ಖಾಲಿಯಾಗಿದೆ, ಈ ಬಗ್ಗೆ ಸದನಕ್ಕೆ ಬಂದು ಮಾತನಾಡಲಿ, ತಪ್ಪಿಸಿಕೊಂಡು ಹೊರಗೆ ಮಾತನಾಡುವುದಲ್ಲ, ಸದನದಲ್ಲಿ ಪ್ರಶ್ನೆ ಮಾಡಲಿ ಎಂದು ಸವಾಲು ಹಾಕಿದರು.
ಸದನದಲ್ಲಿ ಇಂದು ಉತ್ತರ
ಸದನದಲ್ಲಿ ಇಂದು ಮತ್ತು ನಾಳೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಕಂದಾಯ ಸಚಿವರು ಉತ್ತರ ಕರ್ನಾಟಕ ಅಭಿವೃದ್ಧಿ ಬಗ್ಗೆ ಮಾತನಾಡುತ್ತಾರೆ. ಮಹದಾಯಿ ಮತ್ತು ನೀರಾವರಿ ಅಭಿವೃದ್ಧಿ ಬಗ್ಗೆ ನಾನು ಸಹ ಉತ್ತರ ಕೊಡುತ್ತೇನೆ. ಕಬ್ಬು, ಮೆಕ್ಕೆಜೋಳಕ್ಕೆ ಬೆಂಬಲ ಬೆಲೆ ನೀಡಿದ್ದೇವೆ. ಇದರಿಂದ ರಾಜ್ಯ ಸರ್ಕಾರಕ್ಕೆ ಮತ್ತು ಕಬ್ಬು ಕಾರ್ಖಾನೆಗಳಿಗೆ ಸಾಕಷ್ಟು ಹೊರೆಯಾಗಿದೆ. ಇದನ್ನು ರಾಜ್ಯದ ರೈತರು ಅರ್ಥಮಾಡಿಕೊಳ್ಳಬೇಕು. ಸರ್ಕಾರ ರೈತರ ಪರವಾಗಿದೆ ಎಂದರು.
ನ್ಯಾಷನಲ್ ಹೆರಾಲ್ಡ್ ಪ್ರಕರಣವನ್ನು ಈಗಾಗಲೇ ಕೈಬಿಡಲಾಗಿದೆ. ಒಂದು ಎಫ್‌ಐಆರ್ ಇದೆ, ಅದನ್ನು ಹಿಂಪಡೆದರೆ ಉತ್ತಮ, ಗೃಹಲಕ್ಷ್ಮಿ ಯೋಜನೆ ಬಗ್ಗೆ ಯಾವುದೇ ತಪ್ಪು ಮಾಹಿತಿ ಸರ್ಕಾರ ಕಡೆಯಿಂದ ಆಗಿಲ್ಲ. ನ್ಯಾಷನಲ್ ಹೆರಾಲ್ಡ್ ಪ್ರಕರಣದ ಬಗ್ಗೆ ನಾವು ಧ್ವನಿ ಎತ್ತುತ್ತಿರುವುದರಿಂದ ಬಿಜೆಪಿಯವರು ಮುಖ್ಯ ವಿಷಯಗಳಿಂದ ವಿಮುಖರಾಗಲು ಗೃಹಲಕ್ಷ್ಮಿ ವಿಚಾರವನ್ನು ಎತ್ತುತ್ತಿದ್ದಾರೆ ಎಂದು ಡಿ ಕೆ ಶಿವಕುಮಾರ್ ಟೀಕಿಸಿದರು.
Advertisement