

ಬೆಂಗಳೂರು: ಸುಮಾರು 15 ಕೋಟಿ ರೂಪಾಯಿ ಮೌಲ್ಯದ ಚಿನ್ನ ಕಳ್ಳಸಾಗಣೆ ಪ್ರಕರಣದಲ್ಲಿ ಬಂಧಿತರಾಗಿರುವ ಕನ್ನಡದ ನಟಿ ರನ್ಯಾ ರಾವ್ ಹಾಗೂ ಇತರ ಆರೋಪಿಗಳಾದ ತರುಣ್ ರಾಜ್ ಮತ್ತು ಸಾಹಿಲ್ ಜೈನ್ ಸಲ್ಲಿಸಿದ್ದ ಹೇಬಿಯಸ್ ಕಾರ್ಪಸ್ ಅರ್ಜಿಯನ್ನು ಹೈಕೋರ್ಟ್ ಶುಕ್ರವಾರ ವಜಾಗೊಳಿಸಿದೆ.
ವಿದೇಶಿ ವಿನಿಮಯ ನಿಯಂತ್ರಣ ಮತ್ತು ಕಳ್ಳಸಾಗಣೆ ಚಟುವಟಿಕೆಗಳ ತಡೆ ಕಾಯ್ದೆ 1974(COFEPOSA ಕಾಯ್ದೆ, 1974) ಅಡಿಯಲ್ಲಿ ಬಂಧನ ಕಾನೂನು ಬಾಹಿರ ಎಂದು ಘೋಷಿಸುವಂತೆ ಕೋರಿ ಬಂಧಿತ ನಟಿಯ ತಾಯಿ ಹರ್ಷವರ್ಧಿನಿ ರಾವ್ ಹಾಗೂ ಇತರು ಇಬ್ಬರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಅನು ಶಿವರಾಮನ್ ಹಾಗೂ ವಿಜಯ್ ಕುಮಾರ್ ಪಾಟೀಲ್ ಅವರನ್ನೊಳಗೊಂಡ ಪೀಠ, ಅರ್ಜಿದಾರರ ವಾದವನ್ನು ತಳ್ಳಿ ಹಾಕಿದೆ.
ಬಂಧನ ಪ್ರಕ್ರಿಯೆಯಲ್ಲಿ ಯಾವುದೇ ಕಾನೂನು ಉಲ್ಲಂಘನೆ ಕಂಡುಬಂದಿಲ್ಲ ಎಂದು ಅಭಿಪ್ರಾಯಪಟ್ಟ ನ್ಯಾಯಾಲಯ, ಮೂವರು ಆರೋಪಿಗಳ ಬಂಧನ ಕಾನೂನುಬದ್ಧವಾಗಿದೆ ಎಂದು ಸ್ಪಷ್ಟಪಡಿಸಿದೆ. ಹೀಗಾಗಿ, ರನ್ಯಾ ರಾವ್, ತರುಣ್ ರಾಜ್ ಹಾಗೂ ಸಾಹಿಲ್ ಜೈನ್ ಸಲ್ಲಿಸಿದ್ದ ಹೇಬಿಯಸ್ ಕಾರ್ಪಸ್ ಅರ್ಜಿಯನ್ನು ವಜಾಗೊಳಿಸಿ ಆದೇಶ ಹೊರಡಿಸಿದೆ.
ಪ್ರಕರಣದ ತನಿಖೆ ನಡೆಸುತ್ತಿರುವ ಕಂದಾಯ ಗುಪ್ತಚರ ನಿರ್ದೇಶನಾಲಯದ (DRI) ಶಿಫಾರಸಿನ ಮೇರೆಗೆ ನಟಿ ಮತ್ತು ಇತರ ಆರೋಪಿಗಳ ವಿರುದ್ಧ ಕೇಂದ್ರೀಯ ಆರ್ಥಿಕ ಗುಪ್ತಚರ ಬ್ಯೂರೋ (CEIB)COFEPOSA ಕಾಯ್ದೆಯನ್ನು ಜಾರಿಗೊಳಿಸಿದೆ. ಈ ಕಾಯ್ದೆ ಅನ್ವಯ ಆರೋಪಿ ರನ್ಯಾ ರಾವ್‌ಗೆ ಒಂದು ವರ್ಷ ಜಾಮೀನು ಪಡೆಯಲು ಅವಕಾಶವಿರುವುದಿಲ್ಲ.
ಕಳೆದ ಮಾರ್ಚ್ 3ರ ರಾತ್ರಿ ದುಬೈನಿಂದ ಎಮಿರೇಟ್ಸ್ ಏರ್‌ಲೈನ್ಸ್ ವಿಮಾನದಲ್ಲಿ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದ ನಟಿಯನ್ನು ಕಂದಾಯ ಗುಪ್ತಚರ ನಿರ್ದೇಶನಾಲಯ(ಡಿಆರ್‌ಐ)ದ ಅಧಿಕಾರಿಗಳು ತಪಾಸಣೆಗೆ ಒಳಪಡಿಸಿದ್ದು, ಈ ವೇಳೆ ನಟಿ ಬಳಿ 14.80 ಕೆಜಿ ಚಿನ್ನ ಪತ್ತೆಯಾಗಿತ್ತು. ತಕ್ಷಣ ನಟಿಯನ್ನು ಬಂಧಿಸಲಾಗಿತ್ತು.
Advertisement