

ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಯಾವುದೇ ರಸ್ತೆಗುಂಡಿ ಸಮಸ್ಯೆಯಿಲ್ಲ, ಅವೆಲ್ಲ ಸೋಷಿಯಲ್ ಮೀಡಿಯಾ ಸೃಷ್ಟಿ ಎಂದು ಡಿಸಿಎಂ ಹಾಗೂ ಬೆಂಗಳೂರು ನಗರಾಭಿವೃದ್ಧಿ ಸಚಿವ ಡಿ ಕೆ ಶಿವಕುಮಾರ್ ಹೇಳಿದ್ದಾರೆ.
ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಬೆಂಗಳೂರಿನಲ್ಲಿ ಹೊಂಡಗುಂಡಿ ಬಿದ್ದ ರಸ್ತೆಗಳು ಇಲ್ಲ, ಯಾವುದೇ ಸಮಸ್ಯೆಯಿಲ್ಲ. ಇದೆಲ್ಲ ಕೇವಲ ಸೋಷಿಯಲ್ ಮೀಡಿಯಾಗಳಲ್ಲಿ ಸೃಷ್ಟಿ ಮಾಡುವುದಷ್ಟೆ ಎಂದರು.
ಬೆಂಗಳೂರಿನಲ್ಲಿ ಎಲ್ಲಾ ಚಟುವಟಿಕೆಗಳು ಸುಸೂತ್ರವಾಗಿ ಸುಗಮವಾಗಿ ಸಾಗುತ್ತಿಲ್ಲ, ಜಗತ್ತಿನ ನಾನಾ ಭಾಗಗಳಿಂದ ಇಲ್ಲಿಗೆ ಜನರು ಬರುತ್ತಾರೆ. ಇಲ್ಲಿ ಹೂಡಿಕೆ ಮಾಡುತ್ತಾರೆ, ಕೆಲಸ ಮಾಡುತ್ತಾರೆ, ಜೀವನ ಮಾಡುತ್ತಾರೆ.
ಇದಕ್ಕೆ ರಸ್ತೆಗುಂಡಿಗಳಿರುವ ಬೆಂಗಳೂರಿನ ರಸ್ತೆಯ ವಿಡಿಯೊ ಪೋಸ್ಟ್ ಮಾಡಿ ಎಂದಿನ ಶೈಲಿಯಲ್ಲಿ ಟೀಕಿಸಿರುವ ಪ್ರತಿಪಕ್ಷ ಬಿಜೆಪಿ, ಡಿಸಿಎಂ ಡಿ ಕೆ ಶಿವಕುಮಾರ್ ಓಳು ಬಿಡುತ್ತಿದ್ದಾರೆ ಎಂದು ಆರೋಪಿಸಿದೆ.
ಅನೇಕ ಸಾಮಾಜಿಕ ಕಾರ್ಯಕರ್ತರು, ನಾಗರಿಕರು ಸಹ ಡಿಸಿಎಂ ಡಿ ಕೆ ಶಿವಕುಮಾರ್ ಮತ್ತು ಸರ್ಕಾರದ ಜನಪ್ರತಿನಿಧಿಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಟ್ಯಾಗ್ ಮಾಡಿ ಹದಗೆಟ್ಟ ರಸ್ತೆಗಳು, ಹೊಂಡಗುಂಡಿ ಬಿದ್ದ ರಸ್ತೆಗಳ ಫೋಟೋ-ವಿಡಿಯೊಗಳನ್ನು ಹಾಕಿ ಟೀಕಿಸುತ್ತಿದ್ದಾರೆ.
ಬೆಂಗಳೂರಿನ ಶಿಥಿಲಗೊಂಡ ರಸ್ತೆಗಳ ಮೇಲೆ ಮತ್ತೊಮ್ಮೆ ಬೆಳಕು ಚೆಲ್ಲುವ ವಿಡಿಯೊ ಇದಾಗಿದೆ. ಪ್ರಯಾಣಿಕರಿಗೆ ಗಂಭೀರ ಅಪಾಯವನ್ನುಂಟುಮಾಡುವ ರಸ್ತೆಯಲ್ಲಿನ ಆಳವಾದ ಬಿರುಕುಗಳನ್ನು ತೋರಿಸುವ ದೃಶ್ಯಗಳಿವೆ.
ನಾಗರಿಕರು ಮತ್ತು ಕಾರ್ಯಕರ್ತರು ರಸ್ತೆ ಗುಣಮಟ್ಟ ಮತ್ತು ಸರ್ಕಾರದ ಕೆಲಸದ ವೈಖರಿಯನ್ನು ಎತ್ತಿ ತೋರಿಸುತ್ತಿದ್ದಾರೆ. (ವಿಡಿಯೊ ಕೃಪೆ ಸಲಾರ್ ನ್ಯೂಸ್-Video credit)
Advertisement