

ಬೆಂಗಳೂರು: ಬೆಳಗಾವಿಯಲ್ಲಿ ಚಳಿಗಾಲ ಅಧಿವೇಶನ ಮುಗಿಸಿ ಮುಖ್ಯಮಂತ್ರಿ ಮತ್ತು ಉಪ ಮುಖ್ಯಮಂತ್ರಿಯವರು ಬೆಂಗಳೂರಿಗೆ ವಾಪಸ್ಸಾಗಿದ್ದಾರೆ. ನಿನ್ನೆ ಉತ್ತರ ಕನ್ನಡ ಜಿಲ್ಲೆಯ ಗೋಕರ್ಣ ಕ್ಷೇತ್ರಕ್ಕೆ ಭೇಟಿ ನೀಡಿ ಡಿ ಕೆ ಶಿವಕುಮಾರ್ ವಿಶೇಷ ಅರ್ಚನೆ, ಆತ್ಮಲಿಂಗಕ್ಕೆ ಅಭಿಷೇಕ ಮಾಡಿಸಿದ್ದರು.
ಇಂದು ಬೆಂಗಳೂರಿನ ಸದಾಶಿವನಗರದಲ್ಲಿರುವ ಡಿ ಕೆ ಶಿವಕುಮಾರ್ ನಿವಾಸಕ್ಕೆ ಹರಿದ್ವಾರದಿಂದ ಬಂದ ನಾಗ ಸಾಧುಗಳು ಆಶೀರ್ವಾದ ಮಾಡಿರುವುದು ಸಿಎಂ ಹುದ್ದೆ ಗದ್ದಲ ನಡುವೆ ತೀವ್ರ ಕುತೂಹಲ ಕೆರಳಿಸಿದೆ. ಕೆಲವು ಸಮಯ ಹಿಂದೆ ಕಾಶಿಯಿಂದ ಬಂದ ನಾಗ ಸಾಧುಗಳು ಡಿಕೆಶಿ ಸಿಎಂ ಆಗಲೆಂದು ಆಶೀರ್ವಾದ ಮಾಡಿದ್ದರು. ಇಂದು ಅವರ ನಿವಾಸಕ್ಕೆ 20ಕ್ಕೂ ಹೆಚ್ಚು ನಾಗ ಸಾಧುಗಳು ಬಂದು ಆಶೀರ್ವಾದ ಮಾಡಿದ್ದಾರೆ.
ಅವರು ಬಂದು ಹೋದ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಡಿ ಕೆ ಶಿವಕುಮಾರ್, ನಾಗಸಾಧುಗಳು ಮನೆಯ ಬಾಗಿಲಿಗೆ ಬಂದಿದ್ರು. ಬಂದಾಗ ಅವರನ್ನ ಹೋಗಿ ಎನ್ನಲು ಆಗುವುದಿಲ್ಲ ಅವರು ಬಂದು ಆಶೀರ್ವಾದ ಮಾಡಿದ್ರು. ಯಾರಾದ್ರೂ ನಿಮ್ಮ ಮನೆಗೆ ಬಂದ್ರೆ ನೀವೂ ಹಾಗೇ ಕಳಿಸ್ತೀರಾ? ಹಾಗೆ ಧಾರ್ಮಿಕತೆಯಲ್ಲಿ ಬಂದಿದ್ರು, ಬಂದವರನ್ನ ಭೇಟಿ ಮಾಡಿ ಆಶೀರ್ವಾದ ಪಡೆದುಕೊಂಡೆ, ನಾವು ರಾಜಕೀಯದಲ್ಲಿರುವವರು, ರಾಜಕೀಯದಲ್ಲಿರುವವರಿಗೆ ಎಲ್ಲರೂ ಬೇಕಾಗುತ್ತದೆ ಎಂದರು.
ನೋಟಿನಲ್ಲಿರುವ ಫೋಟೋ ಬೇಕಾದ್ರೆ ತೆಗೀಲಿ
ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆ ನರೇಗಾ ಹೆಸರು ಬದಲಾವಣೆ ವಿಚಾರವಾಗಿ ಮಾತನಾಡಿದ ಡಿಸಿಎಂ, ಬೇಕಾದ್ರೆ ನೋಟ್‌ನಲ್ಲಿರುವ ಮಹಾತ್ಮಾ ಗಾಂಧಿ ಫೋಟೋ ತೆಗೆಯಲಿ. ಆದ್ರೆ ಬಡ ಕೂಲಿ ಕಾರ್ಮಿಕರ ಜೀವನಾಧಾರವಾಗಿರುವ ನರೇಗಾದಿಂದ ಅವರ ಹೆಸರು ತೆಗೆದಿರುವುದು ಅತಿದೊಡ್ಡ ದೊಡ್ಡ ಅನ್ಯಾಯ ಮತ್ತು ಪ್ರಮಾದ. ಕೇಂದ್ರ ಸರ್ಕಾರಕ್ಕೆ ಈ ಯೋಜನೆ ಸಾಯಿಸುವ ಉದ್ದೇಶ, ಗಾಂಧಿ ಮಹಾತ್ಮರ ಹೆಸರು ತೆಗೆಯೋದು ಸರಿಯಾದ ಕ್ರಮವಲ್ಲ. ಇದು ಕೇಂದ್ರ ಸರ್ಕಾರ ಮಾಡಿದ ದೊಡ್ಡ ತಪ್ಪು. ಇದಕ್ಕೆ ಜನ ಉತ್ತರ ನೀಡುತ್ತಾರೆ, ಕರ್ನಾಟಕದಲ್ಲಿ ಇದರ ವಿರುದ್ಧ ಮುಂದಿನ ದಿನಗಳಲ್ಲಿ ದೊಡ್ಡ ಮಟ್ಟದಲ್ಲಿ ಹೋರಾಟ ನಡೆಸುತ್ತೇವೆ ಎಂದು ಆಕ್ರೋಶ ಹೊರಹಾಕಿದರು.
ಹೈಕಮಾಂಡ್ ಕರೆಯ ನಿರೀಕ್ಷೆಯಲ್ಲಿ
ನಾನು ಮಂಗಳವಾರ ದೆಹಲಿಗೆ ಹೋಗುತ್ತಿದ್ದೇನೆ. ಜಲಮಂಡಲಿಯಿಂದ ಒಂದು ಕೆಲಸ ಇದೆ, ಅದನ್ನು ಮುಗಿಸಬೇಕು. ಜೊತೆಗೆ ಮೇಕೆದಾಟು ವಿಚಾರ ಚರ್ಚೆ ಮಾಡಲಾಗುವುದು. ಇಲಾಖೆಯ ಕೆಲಸದ ಬಗ್ಗೆ ಚರ್ಚೆ ಆಗಬೇಕಿದೆ, ಅರಣ್ಯ ಸಚಿವರನ್ನು ಮತ್ತು ನಗರಾಭಿವೃದ್ದಿ ಸಚಿವರನ್ನು ಸಹ ಕರ್ನಾಟಕ ರಾಜ್ಯದ ಹಿತಾಸಕ್ತಿಯಿಂದ ಭೇಟಿ ಮಾಡಲು ದೆಹಲಿಗೆ ಹೋಗುತ್ತಿದ್ದೇನೆ, ಪ್ರಧಾನ ಮಂತ್ರಿಯನ್ನು ಸಹ ಭೇಟಿ ಮಾಡುತ್ತೇನೆ ಎಂದರು.
ದೆಹಲಿಗೆ ಹೋದರೆ ಹೈಕಮಾಂಡ್ ಭೇಟಿಯಾಗುತ್ತೀರಾ ಎಂದು ಕೇಳಿದಾಗ, ಸೂಕ್ತ ಸಮಯದಲ್ಲಿ ನನ್ನನ್ನು ಮತ್ತು ಸಿಎಂ ಅವರನ್ನು ಕರೆಯುವುದಾಗಿ ಹೇಳಿದ್ದಾರೆ. ನಾವು ಕರೆಗಾಗಿ ಕಾಯುತ್ತೇವೆ, ಹಾಗೆ ಹೋಗುವುದಿದ್ದರೆ ನಿಮಗೆ ಹೇಳ್ಬಿಟ್ಟೇ ಹೋಗ್ತೀನಿ, ನಿಮಗೆ ಹೇಳದೆ ನಾನು ಹೋಗೋದಿಲ್ಲ ಎಂದರು.
Advertisement