

ಬಾಳೆಹೊನ್ನೂರು: 'ದ್ವೇಷ ಭಾಷಣ ಮಸೂದೆ' ಕಾನೂನಾಗಿ ಜಾರಿಗೊಳಿಸಿದರೆ ಜಿಹಾದಿ ಮನಸ್ಥಿತಿ ಉಳ್ಳವರನ್ನು ರಾಜ್ಯ ಸರ್ಕಾರ ಮೊದಲು ಜೈಲಿಗೆ ಹಾಕಬೇಕಾಗುತ್ತದೆ ಎಂದು ಕೇಂದ್ರ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಪ್ರಲ್ಹಾದ ಜೋಶಿ ಶನಿವಾರ ಹೇಳಿದ್ದಾರೆ.
ಬಾಳೆಹೊನ್ನೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ರಾಜ್ಯ ಕಾಂಗ್ರೆಸ್ ಸರ್ಕಾರ ತುಷ್ಟೀಕರಣಕ್ಕಾಗಿ ಈ ಕಾನೂನು ಜಾರಿಗೆ ತರುತ್ತಿದೆ ಎಂದು ಕಿಡಿ ಕಾರಿದರು.
ಸರ್ಕಾರದ ವಿರುದ್ಧ ಏನು ಮಾತನಾಡಿದರೂ ಅವರನ್ನು ಜೈಲಿಗೆ ಹಾಕಬೇಕೆಂಬ ಮನಸ್ಥಿತಿಯಲ್ಲಿ ಈ ಸರ್ಕಾರವಿದೆ. ಹಾಗಾಗಿ ಹೋರಾಟಗಾರರನ್ನು ಜೈಲಿಗೆ ಹಾಕಬೇಕು. ಹೆದರಿಸಬೇಕೆಂದು ಇದನ್ನು ಮಾಡಿದ್ದಾರೆ ಎಂದು ಪ್ರತಿಕ್ರಿಯಿಸಿದರು.
ಬಹಳ ಜನ ಜಿಹಾದಿ ಮನಸ್ಥಿತಿಯಲ್ಲಿ ಭಾಷಣ ಮಾಡುವರು ಇದ್ದಾರೆ. ಸರ್ಕಾರ ಮೊದಲು ಇಂಥವರನ್ನು ಒಳಗೆ ಹಾಕಬೇಕಿದೆ. ರಾಜ್ಯದಲ್ಲಿ ಈ ಮಸೂದೆ ಅನುಷ್ಠಾನ ಆಗುವುದಿಲ್ಲ ಎಂದರು.
ರಾಜ್ಯದಲ್ಲಿ ದ್ವೇಷ ಭಾಷಣ ಮಾಡಿದರೆ ಜೈಲು ಶಿಕ್ಷೆ ಮಸೂದೆ ಅನುಷ್ಠಾನ ಅಸಾಧ್ಯ. ಒಂದು ವೇಳೆ ಸರ್ಕಾರ ಅನುಷ್ಠಾನ ಮಾಡಿದರೆ ದೇಶದಲ್ಲಿ ನ್ಯಾಯಾಂಗ ವ್ಯವಸ್ಥೆ ಇದೆ ಎಂದು ಮಾರ್ಮಿಕವಾಗಿ ನುಡಿದ ಸಚಿವರು, ಕಾಂಗ್ರೆಸ್ ಪಕ್ಷ ತುಷ್ಟೀಕರಣಕ್ಕಾಗಿ ಈ ಕಾಯಿದೆ ಮಾಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
Advertisement