
ಒಲಿಂಪಿಕ್ ಕ್ರೀಡಾಕೂಟದಲ್ಲಿ ಪದಕ ಗೆಲ್ಲುವ ರಾಜ್ಯದ ಕ್ರೀಡಾಪಟುಗಳಿಗೆ ಸರ್ಕಾರದಿಂದ 6 ಕೋಟಿ ರೂ ನಗದು ಜೊತೆಗೆ ಕ್ಲಾಸ್ 1 ಸರ್ಕಾರಿ ಹುದ್ದೆ ಬೆಳ್ಳಿ ಪದಕ ಗೆದ್ದರೆ 4 ಕೋಟಿ ರೂಪಾಯಿ, ಕಂಚಿನ ಪದಕ ಗೆದ್ದರೆ 3 ಕೋಟಿ ರೂ ಕೊಡುವುದಾಗಿ ಸಿಎಂ ಸಿದ್ದರಾಮಯ್ಯ ಘೋಷಿಸಿದ್ದಾರೆ. ಬೆಂಗಳೂರಿನ ಯವನಿಕ ಸಭಾಂಗಣದಲ್ಲಿ ಏಕಲವ್ಯ, ಜೀವಮಾನ ಸಾಧನೆ, ಕ್ರೀಡಾ ರತ್ನ, ಕ್ರೀಡಾ ಪೋಷಕ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಮಾತನಾಡಿದ ಸಿದ್ದರಾಮಯ್ಯ, 2028ರ ಒಲಂಪಿಕ್‌ಗೆ 60 ಮಂದಿ ಆಯ್ಕೆ ಮಾಡಿದ್ದಾರೆ. ಪ್ರತಿ ವರ್ಷ ತರಬೇತಿಗಾಗಿ 10 ಲಕ್ಷ ಹಣ ಕೊಡುತ್ತೇವೆ. ಉತ್ತಮ ತರಬೇತುದಾರರಿದ್ದರೆ ಚಿನ್ನ ಗೆಲ್ಲುವುದು ಕಷ್ಟವಲ್ಲ ಎಂದರು. ಕಾರ್ಯಕ್ರಮದಲ್ಲಿ 2022, 2023 ಎರಡು ಸಾಲಿಗೂ ಸೇರಿ ಒಟ್ಟು 30 ಮಂದಿಗೆ ಏಕಲವ್ಯ ಪ್ರಶಸ್ತಿ ಪ್ರದಾನ ಮಾಡಲಾಗಿದೆ. ಏಕಲವ್ಯ ವಿಗ್ರಹ ಜೊತೆಗೆ 4 ಲಕ್ಷ ನಗದು ನೀಡಲಾಗಿದೆ. ರಾಜ್ಯಕ್ಕೆ ಕೀರ್ತಿ ತಂದ ಕ್ರೀಡಾಪಟುಗಳನ್ನ ರೂಪಿಸಿದ ತರಬೇತುದಾರರಿಗೆ ಜೀವಮಾನ ಸಾಧನೆ ಪ್ರಶಸ್ತಿ ಹಾಗೂ ನೆನಪಿನ ಕಾಣಿಕೆ ಜೊತೆಗೆ 3 ಲಕ್, ನಗದು ಒಳಗೊಂಡಿದೆ.
ಇಂದಿನಿಂದ ರಾಜ್ಯಾದ್ಯಂತ 'ರಾಷ್ಟ್ರೀಯ ಪಲ್ಸ್ ಪೋಲಿಯೋ' ಲಸಿಕಾ ಕಾರ್ಯಕ್ರಮ ನಡೆಯುತ್ತಿದ್ದು ಗೃಹ ಕಚೇರಿ ಕೃಷ್ಣಾದಲ್ಲಿ ಮಕ್ಕಳಿಗೆ ಪೋಲಿಯೋ ಹನಿ ಹಾಕುವ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅಭಿಯಾನಕ್ಕೆ ಚಾಲನೆ ನೀಡಿದರು. ಈ ವೇಳೆ ಮಾತನಾಡಿದ ಮುಖ್ಯಮಂತ್ರಿ, ಡಿಸೆಂಬರ್ 24ರ ಒಳಗಾಗಿ ತಪ್ಪದೇ ಸಮೀಪದ ಲಸಿಕಾ ಕೇಂದ್ರಕ್ಕೆ ತೆರಳಿ ಪ್ರತಿಯೊಬ್ಬರೂ ತಮ್ಮ 5 ವರ್ಷದೊಳಗಿನ ಮಕ್ಕಳಿಗೆ ತಪ್ಪದೇ ಪೋಲಿಯೊ ಲಸಿಕೆ ಹಾಕಿಸುವ ಮೂಲಕ ಪೋಲಿಯೊ ಮುಕ್ತ ಭಾರತದ ನಮ್ಮ ಅಭಿಯಾನಕ್ಕೆ ಬೆಂಬಲವಾಗಿ ನಿಲ್ಲಬೇಕು ಎಂದರು. ಇದೇ ವೇಳೆ ಮಾತನಾಡಿದ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್, ರಾಜ್ಯದಲ್ಲಿ ಒಟ್ಟಾರೆ 62.4 ಲಕ್ಷ ಮಕ್ಕಳಿಗೆ ಪಲ್ಸ್ ಪೋಲಿಯಾ ಹಾಕುವ ಗುರಿ ಇದ್ದು ಪೋಷಕರು ವದಂತಿಗಳನ್ನು ನಿರ್ಲಕ್ಷಿಸಿ ತಮ್ಮ ಮಕ್ಕಳು ಪೋಲಿಯೊ ಹನಿಗಳನ್ನು ಹಾಕಿಸಬೇಕು ಎಂದು ಒತ್ತಾಯಿಸಿದರು.
ಅಪ್ರಾಪ್ರ ಬಾಲಕಿ ಮೇಲೆ ಅತ್ಯಾಚಾರ ಎಸಗಿದ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಬೆಳಗಾವಿಯ ಪೋಕ್ಸೊ ನ್ಯಾಯಾಲಯ ಹಠಯೋಗಿ ಲೋಕೇಶ್ವರ ಮಹಾಸ್ವಾಮೀಜಿಗೆ 35 ವರ್ಷ ಜೈಲು ಶಿಕ್ಷೆ ಹಾಗೂ 1 ಲಕ್ಷ ರೂಪಾಯಿ ದಂಡ ವಿಧಿಸಿ ಆದೇಶಿಸಿದೆ. ರಾಯಬಾಗ ತಾಲೂಕು ಮೇಖಳಿ ಗ್ರಾಮದ ಹಠಯೋಗಿ ಲೋಕೇಶ್ವರ ಮಹಾಸ್ವಾಮಿ ಅಲಿಯಾಸ್ ಲೋಕೇಶ್ವರ ಸಾಬಣ್ಣ ಜಂಬಗಿ ಮೇಲಿನ ಆರೋಪ ಸಾಬೀತಾಗಿದ್ದು, ನ್ಯಾಯಾಧೀಶೆ ಸಿ.ಎಂ.ಪುಷ್ಪಲತಾ ಅವರು ದೋಷಿ ಎಂದು ತೀರ್ಪು ನೀಡಿದ್ದು ಇಂದು ಶಿಕ್ಷೆ ಪ್ರಮಾಣ ಪ್ರಕಟಿಸಿದೆ. 2025ರ ಮೇ 13ರಂದು ಮನೆಗೆ ಬಿಡುವುದಾಗಿ ಹೇಳಿ ಬಾಲಕಿಯನ್ನು ತಮ್ಮ ಕಾರಿಗೆ ಹತ್ತಿಸಿಕೊಂಡು ರಾಯಚೂರಿನ ಲಾಡ್ಜ್ ವೊಂದಕ್ಕೆ ಕರೆದೊಯ್ದು ಬಾಲಕಿ ಮೇಲೆ ಅತ್ಯಾಚಾರ ಮಾಡಿದ್ದನು. ಈ ಸಂಬಂಧ ಮೂಡಲಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಮಂಗಳೂರಿನ ಬಂಟ್ವಾಳದ ಕೇಪು ಗ್ರಾಮದಲ್ಲಿ ಪೊಲೀಸರ ವಿರೋಧದ ನಡುವೆ ಅಕ್ರಮವಾಗಿ ಕೋಳಿ ಪಂದ್ಯ ನಡೆಯುತ್ತಿದ್ದ ಅಡ್ಡೆ ಮೇಲೆ ದಾಳಿ ನಡೆಸಿದ ವಿಟ್ಲ ಪೊಲೀಸರು ಪುತ್ತೂರು ಕಾಂಗ್ರೆಸ್ ಶಾಸಕ ಅಶೋಕ್ ಕುಮಾರ್ ರೈ ಸೇರಿದಂತೆ 16 ಮಂದಿ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಕೇಪುವಿನಲ್ಲಿ ಅಕ್ರಮವಾಗಿ ಕೋಳಿ ಜಗಳ ನಡೆಯುತ್ತಿರುವ ಬಗ್ಗೆ ಖಚಿತ ಮಾಹಿತಿ ಮೇರೆಗೆ ವಿಟ್ಲ ಸಬ್ ಇನ್ಸ್‌ಪೆಕ್ಟರ್ ಮತ್ತು ತಂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದು ಈ ವೇಳೆ 22 ಹುಂಜಗಳು ಮತ್ತು ಪಂದ್ಯದಲ್ಲಿ ಬಳಸಿದ ಕತ್ತಿಗಳನ್ನು ವಶಪಡಿಸಿಕೊಂಡಿದ್ದರು. ಅಲ್ಲಿಗೆ ಬಂದ ಪುತ್ತೂರು ಶಾಸಕ ಅಶೋಕ್ ರೈ ಸ್ಥಳಕ್ಕೆ ಧಾವಿಸಿ ಪೊಲೀಸರ ಆಕ್ಷೇಪದ ನಡುವೆಯೂ ಕೋಳಿ ಜಗಳ ಮುಂದುವರಿಸಲು ಪ್ರಚೋದನೆ ನೀಡಿದ್ದಾರೆ. ದೈವಸ್ಥಾನದ ವಾರ್ಷಿಕ ಉತ್ಸವದ ಅಂಗವಾಗಿ ಕೋಳಿ ಜಗಳ ಪಂದ್ಯ ಆಯೋಜಿಸಲಾಗುತ್ತಿದ್ದು, ಇದನ್ನು ಜೂಜು ಎಂದು ಭಾವಿಸಬಾರದು ಎಂದು ಶಾಸಕರು ಸಮರ್ಥಿಸಿಕೊಂಡರು.
ಬೆಂಗಳೂರು ಉತ್ತರ ನಗರ ಪಾಲಿಕೆ ವ್ಯಾಪ್ತಿಯ ಯಲಹಂಕದ ಕೋಗಿಲು ಬಂಡೆ ಬಳಿ ಘನತ್ಯಾಜ್ಯ ನಿರ್ವಹಣಾ ಸಂಸ್ಥೆಗೆ ಮೀಸಲಿಟ್ಟ 14 ಎಕರೆ ಜಾಗದಲ್ಲಿ ಅನಧಿಕೃತವಾಗಿ ನಿರ್ಮಿಸಲಾಗಿದ್ದ 150ಕ್ಕೂ ಅಧಿಕ ಶೆಡ್ ಹಾಗೂ ಶೀಟ್ ಮನೆಗಳನ್ನು ಶನಿವಾರ ತೆರವುಗೊಳಿಸಲಾಗಿದೆ. ಈ ಪ್ರದೇಶದಲ್ಲಿ ಸುಮಾರು 5 ಎಕರೆ ಜಾಗವನ್ನು ಅಕ್ರಮವಾಗಿ ಒತ್ತುವರಿ ಮಾಡಿಕೊಂಡು ನಿರ್ಮಿಸಲಾಗಿದ್ದ 150ಕ್ಕೂ ಹೆಚ್ಚು ಶೆಡ್, ಮನೆಗಳನ್ನು 9 ಟ್ರ್ಯಾಕ್ಟರ್, 9 ಜೆಸಿಬಿ ಯಂತ್ರ ಬಳಸಿ ನೆಲಸಮಗೊಳಿಸಲಾಗಿತ್ತು. ಇದರಿಂದ ರೊಚ್ಚಿಗೆದ್ದ ಸ್ಥಳೀಯರು ಯಾವುದೇ ನೋಟಿಸ್ ನೀಡಿದ ಏಕಾಏಕಿ ಬಂದು ಮನೆ ಕೆಡವಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದು ಸಹಕಾರ ನಗರ ಬಳಿ ಇರುವ ಕಂದಾಯ ಸಚಿವ ಕೃಷ್ಣಭೈರೇಗೌಡ ನಿವಾಸಕ್ಕೆ ಮುತ್ತಿಗೆ ಹಾಕಲು ಯತ್ನಿಸಿದ್ದಾರೆ. ಪ್ರತಿಭಟನಾಕಾರರನ್ನು ನಿಯಂತ್ರಿಸಲು ಪೊಲೀಸರ ಹರಸಾಹಸಪಟ್ಟರು.
Advertisement