

ಬೆಂಗಳೂರು: 17ನೇ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ರಾಯಭಾರಿಯಾಗಿ ನಟ ಪ್ರಕಾಶ್ ರಾಜ್ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ.
ವಿಧಾನಸೌಧದಲ್ಲಿ ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಸಂಬಂಧ ನಡೆದ ಸಭೆಯಲ್ಲಿ ಮಾತನಾಡಿದ ಅವರು, 17ನೇ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಜ.29 ರಿಂದ ಫೆ.6ರವರೆಗೆ ಬೆಂಗಳೂರಿನಲ್ಲಿ ನಡೆಯಲಿದ್ದು, ವಿಧಾನಸೌಧದ ಗ್ರ‍್ಯಾಂಡ್ ಸ್ಟೆಪ್ಸ್ ಮೇಲೆ ಉದ್ಘಾಟನೆಯಾಗಲಿದೆ. ನಾನೇ ಉದ್ಘಾಟನೆ ಮಾಡ್ತೀನಿ. ಈ ಚಲನಚಿತ್ರೋತ್ಸವಕ್ಕೆ ರಾಯಭಾರಿಯಾಗಿ ನಟ ಪ್ರಕಾಶ್ ರಾಜ್ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಹೇಳಿದ್ದಾರೆ.
ಸಮಿತಿ ನಿರ್ಧರಿಸಿದಂತೆ ಪ್ರಕಾಶ್ ರಾಜ್ ಅವರನ್ನು ರಾಯಭಾರಿಯಾಗಿ ಆಯ್ಕೆ ಮಾಡಲಾಗಿದೆ. ಚಲನಚಿತ್ರೋತ್ಸವದಲ್ಲಿ 60 ದೇಶಗಳ 200 ಚಲನಚಿತ್ರಗಳು ಪ್ರದರ್ಶನ ಆಗಲಿದೆ. 400 ಪ್ರದರ್ಶನಗಳು ಇರಲಿವೆ. ಈ ವರ್ಷ ಆಸ್ಕರ್ ಪ್ರಶಸ್ತಿಗಳಿಗೆ ಶಾರ್ಟ್ ಲಿಸ್ಟ್ ಆಗಿರೋ ಚಿತ್ರಗಳು ಪ್ರದರ್ಶನ ಆಗಲಿವೆ. ಜೊತೆಗೆ ಇತ್ತೀಚಿಗೆ ಅಗಲಿದ ನಟ ಧರ್ಮೇಂದ್ರ, ಸರೋಜಾದೇವಿ, ಉಮೇಶ್, ಶಾಜಿ ಎನ್ ಕರುಣ್, ರಘು, ಇನ್ನಿತರ ಗಣ್ಯರ ಸ್ಮರಣಾರ್ಥ ಶ್ರದ್ಧಾಂಜಲಿ ಮತ್ತು ಸವಿನೆನಪು ವಿಭಾಗದಲ್ಲಿ ಚಲನಚಿತ್ರ ಪ್ರದರ್ಶಿಸಲಾಗುತ್ತದೆ.
ಮಹಿಳೆಯರ ಸಬಲೀಕರಣದ ಥೀಮ್ ಮಾಡುವ ಯೋಚನೆ ಇದೆ. ಸಂಜೆ ಒಳಗೆ ಥೀಮ್ ಬಿಡುಗಡೆ ಮಾಡ್ತೀವಿ. ಈ ಎಲ್ಲಾ ಸಿನಿಮಾಗಳನ್ನು ಒಂದೇ ಕಡೆ ನೋಡಲು ಈ ಉತ್ಸವ ಅನುಕೂಲ ಮಾಡಿಕೊಡುತ್ತದೆ. ಲೂಲು ಮಾಲ್‌ನಲ್ಲಿರುವ ಸಿನಿ ಪೊಲಿಸ್‌ನ 11 ಸ್ಕ್ರೀನ್‌ನಲ್ಲಿ ಪ್ರದರ್ಶನ ಮಾಡಲಾಗುವುದು. ಈವರೆಗೂ 110 ಚಿತ್ರಗಳಿಂದ ಅರ್ಜಿ ಬಂದಿದ್ದು, ಡಿಸೆಂಬರ್ 31 ಅರ್ಜಿ ಸಲ್ಲಿಕೆ ಕೊನೆಯ ದಿನಾಂಕವಾಗಿದೆ ಎಂದಿದ್ದಾರೆ.
ಡಾ. ರಾಜ್ ಕುಮಾರ್ ಭವನ, ಕಲಾವಿದರ ಸಂಘ, ಚಾಮರಾಜಪೇಟೆ ಹಾಗೂ ಬನಶಂಕರಿಯಲ್ಲಿರುವ ಸುಚಿತ್ರ ಫಿಲಂ ಸೊಸೈಟಿ ಚಿತ್ರಮಂದಿರಗಳಲ್ಲೂ ಚಲನಚಿತ್ರಗಳ ಪ್ರದರ್ಶನವಿರಲಿದೆ. ನ್ನಡ ಮತ್ತು ಭಾರತೀಯ ಚಿತ್ರಗಳು ಸೇರಿದಂತೆ ಒಟ್ಟಾರೆ 60ಕ್ಕೂ ಹೆಚ್ಚು ದೇಶಗಳ 200 ಚಲನಚಿತ್ರಗಳ, 400ಕ್ಕೂ ಹೆಚ್ಚು ಪ್ರದರ್ಶನಗಳಿರಲಿವೆ.
ವಿಶ್ವದ ಪ್ರತಿಷ್ಠಿತ ಚಲನಚಿತ್ರೋತ್ಸವಗಳಲ್ಲಿ ಪಾಲ್ಗೊಂಡು ವಿವಿಧ ಪ್ರಶಸ್ತಿಗಳನ್ನು ಪಡೆದ ಮತ್ತು ಜನಮನ್ನಣೆಗಳಿಸಿದ ದೇಶ-ವಿದೇಶದ ಅತ್ಯುತ್ತಮ ಚಲನಚಿತ್ರಗಳು 17ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಭಾಗವಹಿಸುತ್ತಿವೆ ಎಂದು ಮಾಹಿತಿ ನೀಡಿದರು.
ಕಾನ್ಸ್ (ಫ್ರಾನ್ಸ್), ಬರ್ಲಿನ್ (ಜರ್ಮನಿ, ವೆನಿಸ್ (ಇಟಲಿ), ಕಾರ್ಲೋವಿ ವೇರಿ (ಜೆಕ್ ರಿಪಬ್ಲಿಕ್, ಲೊಕಾರ್ನೂ (ಸಿಟ್ಟರ್ಲೆಂಡ್), ರಾಟರ್‌ಡ್ಯಾಮ್ (ನೆದರ್ ಲ್ಯಾಂಡ್), ಬೂಸಾನ್ (ದಕ್ಷಿಣ ಕೂರಿಯಾ), ಟೊರಂಟೋ (ಕೆನಡಾ) ದೇಶಗಳ ಚಿತ್ರೋತ್ಸವದಲ್ಲಿ ಭಾಗವಹಿಸಿ ಪ್ರಶಸ್ತಿ, ಮೆಚ್ಚುಗೆ ಪಡೆದ ಚಲನಚಿತ್ರಗಳು ಬೆಂಗಳೂರು ಚಿತ್ರೋತ್ಸವದಲ್ಲಿ ಒಂದೇ ಕಡೆ ಸಿನಿಮಾ ಪ್ರಿಯರಿಗೆ ವೀಕ್ಷಿಸಲು ದೊರೆಯಲಿವೆ. ಜೊತೆಗೆ ಈ ಬಾರಿಯ ಆಸ್ಕರ್ ಪ್ರಶಸ್ತಿಗೆ ಶಾರ್ಟ್ ಲಿಸ್ಟ್ ಆಗಿರುವ ವಿವಿಧ ದೇಶದ ಅತ್ಯುತ್ತಮ ಚಲನಚಿತ್ರಗಳು ಸಹ ನಮ್ಮ ಚಿತ್ರೋತ್ಸವದಲ್ಲಿ ಪ್ರದರ್ಶನಗೊಳ್ಳಲಿವೆ.
Advertisement