

ಬೆಂಗಳೂರು: ರೌಡಿ ಶೀಟರ್ ಬಿಕ್ಲು ಶಿವ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಆರ್ ಪುರಂ ಬಿಜೆಪಿ ಶಾಸಕ ಭೈರತಿ ಬಸವರಾಜ್ ಜಾಮೀನು ಅರ್ಜಿಯನ್ನು ಮಂಗಳವಾರ ಕೋರ್ಟ್ ವಜಾಗೊಳಿಸಿದೆ.
ಪ್ರಸ್ತುತ ತಲೆ ಮರೆಸಿಕೊಂಡಿರುವ ಭೈರತಿ ಬಸವರಾಜು ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿಯ ವಿಚಾರಣೆ ನಡೆಸಿದ ಜನಪ್ರತಿನಿಧಿಗಳ ವಿಶೇಷ ಕೋರ್ಟ್ ನ್ಯಾಯಾಧೀಶ ಸಂತೋಷ್ ಗಜಾನನ್ ಭಟ್ ಅವರು, ಜಾಮೀನು ತಿರಸ್ಕರಿಸಿ ಆದೇಶ ಹೊರಡಿಸಿದ್ದಾರೆ. ಹೀಗಾಗಿ ಭೈರತಿ ಬಸವರಾಜ್ ಅವರನ್ನು ಪೊಲೀಸರು ಯಾವುದೇ ಕ್ಷಣದಲ್ಲೂ ಬಂಧಿಸಬಹುದು.
ಭೈರತಿ ಬಸವರಾಜ್ ಪರ ವಕೀಲ ಸಂದೇಶ್ ಚೌಟ ವಾದ ಮಂಡಿಸಿದ್ರೆ, ಸಿಐಡಿ ಪರ ಎಸ್‌ಪಿಪಿ ಅಶೋಕ್ ನಾಯ್ಕ್ ಅವರು ವಾದ ಮಂಡಿಸಿದರು.
ಈಗಾಗಲೇ ಕೋರ್ಟ್ಗೆ ಚಾರ್ಜ್ಶೀಟ್ ಪ್ರತಿ ಸಲ್ಲಿಕೆ ಮಾಡಿದ್ದು, ಚಾರ್ಜ್ಶೀಟ್ನ ಪೇಜ್ ನಂ.298ರಲ್ಲಿ ಟವರ್ ಲೊಕೇಷನ್ ನಮೂದಿಸಿದೆ. ಎ1 ಮತ್ತು ಎ 5 ನಡುವೆ ದೂರವಾಣಿ ಮಾತುಕತೆ ಇರುವ ದಾಖಲೆಯಿದೆ. ಬಂಧಿಸಿ ವಿಚಾರಣೆಗೆ ಒಳಪಡಿಸಿದ ನಂತರ ಹೆಚ್ಚಿನ ಮಾಹಿತಿ ತಿಳಿಯಲಿದೆ. ಹೀಗಾಗಿ ಜಾಮೀನು ನೀಡದಂತೆ ಎಸ್ಎಸ್ ಪಿ ಅಶೋಕ್ ನಾಯ್ಕ್ ಅವರು ವಾದಿಸಿದರು.
ಇದಕ್ಕೆ ಪ್ರತಿಯಾಗಿ ಭೈರತಿ ಬಸವರಾಜ್ ಪರವಾಗಿ ವಾದ ಮಂಡಿಸಿದ ಹಿರಿಯ ವಕೀಲ ಸಂದೇಶ್ ಚೌಟ ಅವರು, ತಮ್ಮ ಕಕ್ಷಿದಾರರು ಕೊಲೆಯಲ್ಲಿ ಭಾಗಿಯಾಗಿರುವುದಕ್ಕೆ ಇದುವರೆಗೂ ಯಾವುದೇ ಸಾಕ್ಷ್ಯಗಳು ಲಭ್ಯವಿಲ್ಲ. 5 ತಿಂಗಳಾದರೂ ಇವರಿಗೆ ಯಾವುದೇ ಸಾಕ್ಷ್ಯ ಸಿಕ್ಕಿಲ್ಲ. ಎ1 ಜಗ್ಗ, ಎ 5 ಭೈರತಿ ಬಸವರಾಜ್ ನಡುವಿನ ಸಂಪರ್ಕ ಸಾಬೀತಿಗೆ ಯತ್ನಿಸುತ್ತಿದ್ದಾರೆ ಎಂದರು.
ಪ್ರಕರಣದ ಎಫ್‌ಐಆರ್‌ನಲ್ಲಿ ಬಿಜೆಪಿ ಶಾಸಕ ಭೈರತಿ ಬಸವರಾಜ್ ಅವರನ್ನು ಐದನೇ ಆರೋಪಿಯನ್ನಾಗಿ ಹೆಸರಿಸಲಾಗಿದ್ದು, ಗ್ಯಾಂಗ್‌ಸ್ಟರ್ ಜಗದೀಶ್ ಪದ್ಮನಾಭ ಅಲಿಯಾಸ್ ಜಗ(45)ನನ್ನು ಪ್ರಮುಖ ಆರೋಪಿಯನ್ನಾಗಿ ಮಾಡಲಾಗಿದೆ.
Advertisement