

ಚಿಕ್ಕಮಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಹೊಸ ತೆರಿಗೆ ಹಾಕುವುದರಲ್ಲಿ ನಿಪುಣರು. ಅವರು ಹೋಗಿ ಯುಎಸ್ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಸಲಹೆಗಾರರಾಗಿ ಸೇವೆ ಸಲ್ಲಿಸಿದರೆ ಉತ್ತಮ. ಇದರಿಂದ ಟ್ರಂಪ್‌ಗೆ ಸಹಾಯವಾಗಬಹುದು ಮತ್ತು ಕರ್ನಾಟಕ ರಾಜ್ಯಕ್ಕೂ ಒಳ್ಳೆಯದಾಗಬಹುದು ಎಂದು ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ಮುಖ್ಯಮಂತ್ರಿ ಸಿದ್ದರಾಮಯ್ಯ ಬಗ್ಗೆ ಲೇವಡಿ ಮಾಡಿದ್ದಾರೆ.
ಚಿಕ್ಕಮಗಳೂರಿನ ಬಾಳೆಹೊನ್ನೂರಿನಲ್ಲಿ ನಿನ್ನೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತೆರಿಗೆ ವಿಚಾರದಲ್ಲಿ ಅಮೆರಿಕ ಅಧ್ಯಕ್ಷ ಟ್ರಂಪ್ ಸಾಕಷ್ಟು ಹೋರಾಟ ಮಾಡುತ್ತಿದ್ದಾರೆ. ಸರಿಯಾದ ಪರಿಣತರು ಸಿಗದೇ ನರಳುತ್ತಿದ್ದಾರೆ. ಸಿದ್ದರಾಮಯ್ಯನವರ ಆರ್ಥಿಕ ಜ್ಞಾನಕ್ಕೆ ಕರ್ನಾಟಕ ತುಂಬಾ ಚಿಕ್ಕದು. ಟ್ರಂಪ್ ಇಡೀ ಜಗತ್ತಿಗೆ ಏನೋ ಮಾಡಲು ಹೊರಟಿದ್ದಾರೆ. ಸಿದ್ದರಾಮಯ್ಯ ಟ್ರಂಪ್ ಜೊತೆಗಿದ್ದರೆ ಎಲ್ಲರಿಗೂ ಒಳ್ಳೆಯದಾಗುತ್ತದೆ' ಎಂದು ಲೇವಡಿ ಮಾಡಿದರು.
ಮುಂದಿನ ಬಜೆಟ್ ನ್ನು ನಾನೇ ಮಂಡಿಸುತ್ತೇನೆ ಎಂದು ಸಿದ್ದರಾಮಯ್ಯ ಹೇಳಿದರೆ, ಬೇರೆಯವರು ದೇವರ ಬಳಿ ಮಾತನಾಡಿದ್ದೇನೆ ಎನ್ನುತ್ತಾರೆ. ಇನ್ನು 45 ದಿನಗಳಲ್ಲಿ ಏನಾಗುತ್ತೋ ಕಾದು ನೋಡೋಣ. ಯಾರು ಮುಖ್ಯಮಂತ್ರಿಯಾಗುತ್ತಾರೆ ಎಂಬುದು ನಮಗೆ ಮುಖ್ಯವಲ್ಲ. ನನಗೆ ಬೇಕಾಗಿರುವುದು ರಾಜ್ಯದ ಅಭಿವೃದ್ಧಿ ಎಂದರು.
ರಾಜ್ಯದ ಜನತೆ ಹಣವನ್ನು ಲೂಟಿ ಮಾಡಲಾಗುತ್ತಿದೆ. ಹೆಲಿಕಾಪ್ಟರ್ ಪ್ರಯಾಣಕ್ಕೆ 47 ಕೋಟಿ ರೂಪಾಯಿ ವ್ಯಯಿಸಲಾಗಿದೆ. ನನಗೆ ಇಂದು ಆರೋಗ್ಯ ಸರಿಯಿಲ್ಲದಿದ್ದರೂ ರಸ್ತೆ ಮಾರ್ಗವಾಗಿ ಬಾಳೆಹೊನ್ನೂರಿಗೆ ಬಂದಿದ್ದೇನೆ. ರಸ್ತೆಗಳನ್ನು ನೋಡಿದರೆ ಅಭಿವೃದ್ಧಿ ಕಾಣುತ್ತಿದೆ. ಹೆಲಿಕಾಪ್ಟರ್‌ನಲ್ಲಿ ಪ್ರಯಾಣಿಸುವುದು ತಪ್ಪು ಎಂದು ನಾನು ಹೇಳುತ್ತಿಲ್ಲ. ಆದರೆ ಮೈಸೂರಿನಿಂದ ಚಾಮರಾಜನಗರಕ್ಕೆ ಬರಲು ಕೇವಲ ಅರ್ಧ ಗಂಟೆ ತೆಗೆದುಕೊಳ್ಳುತ್ತದೆ ಎಂದಾದರೆ ಅಲ್ಲಿಗೆ ಹೆಲಿಕಾಪ್ಟರ್‌ನಲ್ಲಿ ಹೋಗುವುದೇಕೆ ಎಂದು ಕೇಳಿದರು.
Advertisement