Videos-ಚಿತ್ರದುರ್ಗ ಬಳಿ ಬಸ್ ದುರಂತದಲ್ಲಿ 9 ಮಂದಿ ಸಾವು: 42 ಮಂದಿ ಶಾಲಾ ಮಕ್ಕಳು ಪಾರು, ಅಪಘಾತ ಹೇಗಾಯಿತು?

ಈ ದುರಂತದಲ್ಲಿ ಸುಮಾರು 25 ಪ್ರಯಾಣಿಕರ ಪೈಕಿ 9 ಮಂದಿ ಮೃತಪಟ್ಟಿರುವುದಾಗಿ ಪ್ರಾಥಮಿಕ ವರದಿಯು ತಿಳಿಸಿದೆ.
Bus accident photos
ಚಿತ್ರದುರ್ಗ ಬಸ್ ದುರಂತದ ಚಿತ್ರಗಳು
Updated on

ಚಿತ್ರದುರ್ಗ: ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ಗೊರ್ಲತ್ತು ಕ್ರಾಸ್ ಬಳಿ ರಾಷ್ಟ್ರೀಯ ಹೆದ್ದಾರಿ 48ರಲ್ಲಿ ಮಧ್ಯರಾತ್ರಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಲಾರಿ ಡಿಕ್ಕಿಯಾಗಿ ಖಾಸಗಿ ಸ್ಲೀಪರ್ ಕೋಚ್ ಬಸ್​ಗೆ ಬೆಂಕಿ ಹೊತ್ತಿಕೊಂಡು 9 ಮಂದಿ ಪ್ರಯಾಣಿಕರು ಮೃತಪಟ್ಟಿದ್ದಾರೆ.

ಬೆಂಗಳೂರಿನಿಂದ ಗೋಕರ್ಣಕ್ಕೆ ಹೊರಟಿದ್ದ ಈ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ಹಲವರು ಗಾಯಗೊಂಡಿದ್ದಾರೆ.

42 ಮಕ್ಕಳು ಬಚಾವ್

ಈ ದುರಂತದಲ್ಲಿ ಸುಮಾರು 25 ಪ್ರಯಾಣಿಕರ ಪೈಕಿ 9 ಮಂದಿ ಮೃತಪಟ್ಟಿರುವುದಾಗಿ ಪ್ರಾಥಮಿಕ ವರದಿಯು ತಿಳಿಸಿದೆ. ಅಪಘಾತದ ಸಂದರ್ಭದಲ್ಲಿ, ಬೆಂಕಿಯಿಂದ ಹೊತ್ತಿ ಉರಿಯುತ್ತಿದ್ದ ಬಸ್‌ನ ಹಿಂದೆ ಇದ್ದ ದಾಂಡೇಲಿಗೆ ತೆರಳುತ್ತಿದ್ದ 42 ಶಾಲಾ ಮಕ್ಕಳಿದ್ದ ಮತ್ತೊಂದು ಬಸ್ಸಿಗೂ ಕೂಡ ಬೆಂಕಿ ಹತ್ತಿದೆ. ಇದರ ಪರಿಣಾಮ ಶಾಲಾ ಬಸ್ಸು ರಾಷ್ಟ್ರೀಯ ಹೆದ್ದಾರಿಯ ಬೇಲಿಯನ್ನು ಕಿತ್ತು ಚರಂಡಿ ದಾಟಿ ಆ ಕಡೆಗೆ ಹೋಗಿ ನಿಂತಿದೆ.

Bus accident photos
ಚಿತ್ರದುರ್ಗ ಬಸ್ ದುರಂತ: ಸಿಎಂ ಸಿದ್ದರಾಮಯ್ಯ-ಪ್ರಧಾನಿ ಮೋದಿ ತೀವ್ರ ಸಂತಾಪ, ಮೃತರ ಕುಟುಂಬಕ್ಕೆ ತಲಾ 2 ಲಕ್ಷ ರೂ. ಪರಿಹಾರ ಘೋಷಣೆ

ಅದೃಷ್ಟವಶಾತ್, ಬಸ್ಸಿನಲ್ಲಿದ್ದ 42 ಮಕ್ಕಳಲ್ಲಿ ಒಬ್ಬರಿಗೂ ಯಾವುದೇ ಗಾಯಗಳಾಗಿಲ್ಲ ಎಂದು ತಿಳಿದುಬಂದಿದೆ. ಮಕ್ಕಳಿದ್ದ ಬಸ್ಸಿನ ಚಾಲಕ ಘಟನೆಗೆ ಪ್ರತ್ಯಕ್ಷ ಸಾಕ್ಷಿಯಾಗಿದ್ದು, ಅವರ ಹೇಳಿಕೆಗಳನ್ನು ಪೊಲೀಸರು ದಾಖಲಿಸಿಕೊಂಡಿದ್ದಾರೆ. ಪ್ರಸ್ತುತ, ಅಪಘಾತದ ತನಿಖೆ ನಡೆಯುತ್ತಿದ್ದು, ಮೃತದೇಹಗಳನ್ನು ಗುರುತಿಸುವ ಕಾರ್ಯ ನಡೆಯುತ್ತಿದೆ. ಮೃತಪಟ್ಟ ಪ್ರಯಾಣಿಕರು ಡಿಜಿಟಲ್ ಮೂಲಕ ಟಿಕೆಟ್ ಕಾಯ್ದಿರಿಸಿದ್ದರಿಂದ, ಅವರ ದೂರವಾಣಿ ಸಂಖ್ಯೆಗಳನ್ನು ಬಳಸಿ ಸಂಬಂಧಿಕರನ್ನು ಸಂಪರ್ಕಿಸುವ ಪ್ರಯತ್ನದಲ್ಲಿ ಪೊಲೀಸ್ ಅಧಿಕಾರಿಗಳು ನಿರತರಾಗಿದ್ದಾರೆ. ಅಪಘಾತಕ್ಕೆ ಕಾರಣವೇನು ಮತ್ತು ಅದು ಹೇಗೆ ಸಂಭವಿಸಿತು ಎಂಬುದರ ಕುರಿತು ತನಿಖೆ ನಡೆಯುತ್ತಿದೆ.

ಅಪಘಾತ ಸಂಭವಿಸಿದಾಗ, ಶಾಲಾ ಮಕ್ಕಳ ಪ್ರವಾಸಕ್ಕೆ ಹೊರಟಿದ್ದ ಬಸ್ಸಿನ ಚಾಲಕ ಸಚಿನ್ ಘಟನೆಯನ್ನು ಪ್ರತ್ಯಕ್ಷ ಕಂಡು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ. ಮಧ್ಯರಾತ್ರಿ ಎರಡು ಗಂಟೆ ಸುಮಾರಿಗೆ ಲಾರಿಯೊಂದು ಡಿವೈಡರ್ ಗೆ ಹಾರಿ ಬಂದು ಸ್ಲೀಪರ್ ಬಸ್ಸಿನ ಡೀಸೆಲ್ ಟ್ಯಾಂಕ್‌ಗೆ ಡಿಕ್ಕಿ ಹೊಡೆದಿದೆ. ಕೂಡಲೇ ಬೆಂಕಿ ಕಾಣಿಸಿಕೊಂಡಿದ್ದು, ಸ್ಫೋಟವೂ ಸಂಭವಿಸಿತು. ಶಾಲಾ ಬಸ್ಸನ್ನು ಪಕ್ಕಕ್ಕೆ ಸರಿಸಿ ಅಪಘಾತಕ್ಕೀಡಾದ ಬಸ್ಸಿನಲ್ಲಿದ್ದ 7 ಜನರ ರಕ್ಷಣೆಗೆ ನಾನು ಕೂಡ ಹೋಗಿದ್ದೆ ಎಂದಿದ್ದಾರೆ.

ಮಕ್ಕಳನ್ನು ಹೊತ್ತೊಯ್ಯುತ್ತಿದ್ದ ತಮ್ಮ ಬಸ್ಸಿಗೆ ಸ್ವಲ್ಪ ಹಾನಿಯಾಗಿದ್ದು, ಅದೃಷ್ಟವಶಾತ್ ಮಕ್ಕಳಾಗಲೀ, ಶಿಕ್ಷಕರಾಗಲೀ ಯಾರಿಗೂ ಗಾಯಗಳಾಗಿಲ್ಲ. ಗಾಯಗೊಂಡವರನ್ನು ಚಿತ್ರದುರ್ಗ ಜಿಲ್ಲಾ ಆಸ್ಪತ್ರೆ ಮತ್ತು ಶಿರಾ ಸರ್ಕಾರಿ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

Bus accident photos
ಚಿತ್ರದುರ್ಗದಲ್ಲಿ ಹೊತ್ತಿ ಉರಿದ ಖಾಸಗಿ ಬಸ್​​​​: 9 ಮಂದಿ ಸಜೀವ ದಹನ; ಹಲವರಿಗೆ ಗಂಭೀರ ಗಾಯ, ತನಿಖೆಗೆ ಆದೇಶ

ಬಸ್ ದುರಂತ ಹೇಗಾಯ್ತು

ವಿರುದ್ಧ ದಿಕ್ಕಿನಲ್ಲಿ ಬಂದ ಟ್ರಕ್‌ ಬಸ್ಸಿನ ಡೀಸೆಲ್‌ ಟ್ಯಾಂಕ್‌ಗೆ ಗುದ್ದಿದ್ದರಿಂದ ಈ ದುರಂತ ಸಂಭವಿಸಿದೆ ಎಂದು ಸೀಬರ್ಡ್‌ ಬಸ್‌ ಮಾಲೀಕ ನಾಗರಾಜು ತಿಳಿಸಿದ್ದಾರೆ.

ಗೊರ್ಲತ್ತು ಗ್ರಾಮದ ಬಳಿ ಭೀಕರ ಅಪಘಾತ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಹಿತಿ ನೀಡಿದ ಅವರು, ಬೆಂಗಳೂರಿನಿಂದ ಗೋಕರ್ಣಕ್ಕೆ ಹೊರಟಿದ್ದ ಸ್ಲೀಪರ್‌ ಬಸ್ಸಿನಲ್ಲಿ 29 ಜನ ಪ್ರಯಾಣಿಸುತ್ತಿದ್ದರು. ಟ್ರಕ್‌ ವಿರುದ್ಧ ದಿಕ್ಕಿನಿಂದ ಬಂದು ಡೀಸೆಲ್‌ ಟ್ಯಾಂಕ್‌ ಬಳಿ ಗುದ್ದಿದೆ. ಗುದ್ದಿದ ರಭಸಕ್ಕೆ ಮೊದಲು ಟ್ರಕ್‌ಗೆ ಬೆಂಕಿ ಹೊತ್ತಿಕೊಂಡಿತು. ನಂತರ ಬಸ್ಸಿನಲ್ಲಿ ಬೆಂಕಿ ಕಾಣಿಸಿಕೊಂಡಿದೆ ಎಂದು ವಿವರಿಸಿದರು.

ಪ್ರಯಾಣಿಕರ ಸುರಕ್ಷೆಗೆ ಸಂಬಂಧಿಸಿದ ಎಲ್ಲಾ ಮಾನದಂಡಗಳನ್ನು ಬಸ್ಸು ಹೊಂದಿತ್ತು. ಎರಡೂ ತುರ್ತು ನಿರ್ಗಮನ ದ್ವಾರವೂ ಇತ್ತು ಎಂದು ಹೇಳಿದರು.

29 ಪ್ರಯಾಣಿಕರ ಪೈಕಿ 25 ಮಂದಿ ಗೋಕರ್ಣಕ್ಕೆ ಬುಕ್‌ ಮಾಡಿದರೆ 2 ಮಂದಿ ಶಿವಮೊಗ್ಗ, 2 ಮಂದಿ ಕುಮಟಾಕ್ಕೆ ಸೀಟ್‌ ಬುಕ್‌ ಮಾಡಿದ್ದರು ಎಂದು ಮಾಹಿತಿ ನೀಡಿದರು.

ಬಸ್ಸಿನ ಕ್ಲೀನರ್‌ ಸಾಧಿಕ್‌ ಪ್ರತಿಕ್ರಿಯಿಸಿ, ರಾತ್ರಿ 1:30 ರಿಂದ 2 ಗಂಟೆಯ ನಡುವೆ ಈ ಅಪಘಾತ ಸಂಭವಿಸಿದೆ. ಡಿಕ್ಕಿ ಹೊಡೆದ ರಭಸಕ್ಕೆ ಮಲಗಿದ್ದ ಬಸ್ಸಿನಿಂದ ನಾನು ಹೊರ ಬಿದ್ದಿದ್ದೆ. ನೋಡ ನೋಡುತ್ತಿದ್ದಂತೆ ಧಗಧಗನೆ ಬಸ್ ಹೊತ್ತಿ ಉರಿಯತೊಡಗಿತು. ಡ್ರೈವರ್ ಹೊರ ಬಿದ್ದಿದ್ದು ಅವರ ಕಾಲು ಕೈಗಳಿಗೆ ಗಂಭೀರ ಗಾಯವಾಗಿದೆ. ಕೂಡಲೇ ಸ್ಥಳೀಯರು ನಮ್ಮ ಸಹಾಯಕ್ಕೆ ಬಂದರು. ಅಪಘಾತವಾಗುತ್ತಿದ್ದಂತೆ ಏನು ಆಗಿದೆ ಎನ್ನುವುದು ಗೊತ್ತಾಗದೆ ಶಾಕ್‌ನಲ್ಲಿ ಇದ್ದೆವು ಎಂದು ತಿಳಿಸಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com