News headlines 25-12-2025 | ಚಿತ್ರದುರ್ಗ ರಸ್ತೆ ಅಪಘಾತ; 6 ಮಂದಿ ಸಾವು; ರಾಜ್ಯ ಸರ್ಕಾರದ ನಡೆಗೆ HD ದೇವೇಗೌಡ ಕಣ್ಣೀರು; ಕುತೂಹಲ ಮೂಡಿಸಿದ ಖರ್ಗೆ-ಡಿಕೆಶಿ ಭೇಟಿ

News headlines (file photo)
ಸುದ್ದಿ ಮುಖ್ಯಾಂಶಗಳುonline desk

1. ಚಿತ್ರದುರ್ಗ ರಸ್ತೆ ಅಪಘಾತ; 6 ಮಂದಿ ಸಾವು

ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ಗೊರ್ಲತ್ತು ಕ್ರಾಸ್ ಬಳಿ ರಾಷ್ಟ್ರೀಯ ಹೆದ್ದಾರಿ 48ರಲ್ಲಿ ಮಧ್ಯರಾತ್ರಿ ಸಂಭವಿಸಿದ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಲಾರಿ ಡಿಕ್ಕಿಯಾಗಿ ಖಾಸಗಿ ಸ್ಲೀಪರ್ ಕೋಚ್ ಬಸ್ಗೆ ಬೆಂಕಿ ಹೊತ್ತಿಕೊಂಡು ಒಂದು ಮಗು ಸೇರಿದಂತೆ ಕನಿಷ್ಠ ಆರು ಜನರು ಮೃತಪಟ್ಟಿದ್ದಾರೆ. ಅಲ್ಲದೆ ಟ್ರಕ್‌ನ ಚಾಲಕ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ. ಘಟನೆಯಲ್ಲಿ ಮೃತಪಟ್ಟವರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ತೀವ್ರ ಸಂತಾಪ ಸೂಚಿಸಿ, ಮೃತಪಟ್ಟವರ ಕುಟುಂಬಗಳಿಗೆ ತಲಾ ರೂ.5 ಲಕ್ಷ ಹಾಗೂ ಗಾಯಗೊಂಡವರಿಗೆ ತಲಾ ರೂ.50,000 ಪರಿಹಾರ ನೀಡುವುದಾಗಿ ಘೋಷಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ, ಮೃತರ ಕುಟುಂಬಕ್ಕೆ ತೀವ್ರ ಸಂತಾಪ ಸೂಚಿಸಿದ್ದು, ಮೃತರ ಕುಟುಂಬಕ್ಕೆ ತಲಾ 2 ಲಕ್ಷ ರೂ.ಪರಿಹಾರ ಘೋಷಣೆ ಮಾಡಿದ್ದಾರೆ. ಅಪಘಾತದ ಸಂದರ್ಭದಲ್ಲಿ, ಬೆಂಕಿಯಿಂದ ಹೊತ್ತಿ ಉರಿಯುತ್ತಿದ್ದ ಬಸ್‌ನ ಹಿಂದೆ ಇದ್ದ ದಾಂಡೇಲಿಗೆ ತೆರಳುತ್ತಿದ್ದ 42 ಶಾಲಾ ಮಕ್ಕಳಿದ್ದ ಮತ್ತೊಂದು ಬಸ್ಸಿಗೂ ಕೂಡ ಬೆಂಕಿ ಹತ್ತಿದೆ. ಇದರ ಪರಿಣಾಮ ಶಾಲಾ ಬಸ್ಸು ರಾಷ್ಟ್ರೀಯ ಹೆದ್ದಾರಿಯ ಬೇಲಿಯನ್ನು ಕಿತ್ತು ಚರಂಡಿ ದಾಟಿ ಆ ಕಡೆಗೆ ಹೋಗಿ ನಿಂತಿದೆ. ಅದೃಷ್ಟವಶಾತ್, ಬಸ್ಸಿನಲ್ಲಿದ್ದ 42 ಮಕ್ಕಳಲ್ಲಿ ಯಾರಿಗೂ ಯಾವುದೇ ಗಾಯಗಳಾಗಿಲ್ಲ.

2. ರಾಜ್ಯ ಸರ್ಕಾರದ ನಡೆಗೆ ಹೆಚ್ ಡಿ ದೇವೇಗೌಡ ಕಣ್ಣೀರು

ಬೆಂಗಳೂರು- ಮೈಸೂರು ಮೂಲಸೌಕರ್ಯ ಯೋಜನೆಗೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ನಲ್ಲಿ ರಿಟ್ ಅರ್ಜಿ ಸಲ್ಲಿಕೆಯಾಗಿದ್ದು, ನನ್ನ ಹೆಸರನ್ನು ಇದರಲ್ಲಿ ಉಲ್ಲೇಖಿಸಲಾಗಿದೆ ಎಂದು ಮಾಜಿ ಪ್ರಧಾನಿ, ಎಚ್.ಡಿ. ದೇವೇಗೌಡರು ಹೇಳಿದ್ದಾರೆ. ನಗರದ ಜೆಪಿ ಭವನದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ರಾಜ್ಯ ಸರ್ಕಾರ ಕೆಲವು ರೈತರು ಹಾಗೂ ನನ್ನನ್ನು ಉಲ್ಲೇಖ (ಪಾರ್ಟಿ) ಮಾಡಿದೆ. ನಾನು ಈ ರಾಜ್ಯದಲ್ಲಿ ಮುಖ್ಯಮಂತ್ರಿ ಆಗಿದ್ದಾಗ ಸಿದ್ದರಾಮಯ್ಯ ಅವರು ಹಣಕಾಸು ಸಚಿವರಾಗಿದ್ದರು. ಬಿಎಂಐಸಿ ಯೋಜನೆಗೆ ಹಣಕಾಸು ಇಲಾಖೆಯ ಸಹಮತಿಯೂ ಇತ್ತು. ಆಗ ಯೋಜನೆಗೆ ಒಪ್ಪಂದ ಮಾಡಿಕೊಳ್ಳಲಾಗಿತ್ತು. ಆ ಒಪ್ಪಂದದ ಎಲ್ಲಾ ಮಾಹಿತಿಯೂ ಅವರಿಗೆ ಕೂಡ ಇದೆ ಎಂದು ತಿಳಿಸಿದರು. ಈ ಇಳಿವಯಸ್ಸಿನಲ್ಲೂ ನಾನು ವಕೀಲರಿಗೆ ಶುಲ್ಕ ಕೊಟ್ಟು ನ್ಯಾಯಾಲಯದಲ್ಲಿ ಹೋರಾಟ ಮಾಡಬೇಕಾಗಿದೆ. ನೈಸ್ ಕಂಪೆನಿ ವಿಚಾರದಲ್ಲಿ ಕಾನೂನು ಸಲಹೆಗಾರರಿಗೆ 55 ಲಕ್ಷ ರೂಪಾಯಿ ಕೊಡುತ್ತಿದ್ದಾರಂತೆ. ರಾಜ್ಯ ಸರಕಾರದ ಅಡ್ವೋಕೇಟ್ ಜನರಲ್, ಕಾನೂನು ಸಲಹೆಗಾರರು ಇದ್ದರೂ ಸಹ ಇನ್ನೊಬ್ಬರನ್ನು ನೈಸ್ ಕಂಪೆನಿಗೆ ಸಂಬಂಧಿಸಿದಂತೆ ಕಾನೂನು ಸಲಹೆಗಾರರನ್ನು ನೇಮಿಸಿಕೊಂಡಿದ್ದಾರೆ ಎಂದು ಅವರು ಆರೋಪಿಸಿದರು.

3. ಮದ್ಯದಂಗಡಿ ಪರವಾನಗೆಗೆ 1. 95 ಕೋಟಿ ರೂ ನಿಗದಿ: ರಾಜ್ಯ ಸರ್ಕಾರದ ವಿರುದ್ಧ HDK ಟೀಕಾಪ್ರಹಾರ

ಮದ್ಯದಂಗಡಿ ಪರವಾನಗೆಗೆ 1. 95 ಕೋಟಿ ರೂ ನಿಗದಿಪಡಿಸಿರುವ ರಾಜ್ಯ ಸರ್ಕಾರದ ವಿರುದ್ಧ ಕೇಂದ್ರ ಬೃಹತ್ ಉದ್ದಿಮೆ ಮತ್ತು ಉಕ್ಕು ಖಾತೆ ಸಚಿವ ಎಚ್. ಡಿ. ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ. ಮದ್ಯದಂಗಡಿ ಹರಾಜು ರಾಜ್ಯ ಸರ್ಕಾರದ ಹೊಸ ವರ್ಷದ ಕೊಡುಗೆ ಎಂದು ಗುರುವಾರ ಕಿಡಿಕಾರಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯ ಸರ್ಕಾರ ಪ್ರತಿ ಇಲಾಖೆಯನ್ನೂ ಲೂಟಿ ಮಾಡುತ್ತಿದೆ ಎಂದು ಆರೋಪಿಸಿದರು. ಪರಿಶಿಷ್ಟ ಜಾತಿ ಉಪ ಯೋಜನೆ (ಎಸ್ ಸಿಎಸ್ ಪಿ) ಹಾಗೂ ಪರಿಶಿಷ್ಟ ಪಂಗಡ ಉಪ ಯೋಜನೆ (ಟಿಎಸ್ ಪಿ) ಸೇರಿದಂತೆ ಎಲ್ಲವನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ. ರಾಜ್ಯದ ಖಜಾನೆಯನ್ನು ಬರಿದು ಮಾಡಲಾಗುತ್ತಿದೆ ಎಂದು ಟೀಕಿಸಿದ್ದಾರೆ.

4. power sharing: ಕುತೂಹಲ ಮೂಡಿಸಿದ ಖರ್ಗೆ-ಡಿಕೆ ಶಿವಕುಮಾರ್ ಭೇಟಿ

ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಇಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಅವರ ನಿವಾಸದಲ್ಲಿ ಭೇಟಿಯಾಗಿದ್ದು, ಇದು ರಾಜ್ಯದಲ್ಲಿ ಸಿಎಂ ಹುದ್ದೆಗಾಗಿ ನಡೆಯುತ್ತಿರುವ ಅಧಿಕಾರ ಹಸ್ತಾಂತರ ವಿಷಯಕ್ಕೆ ಸಂಬಂಧಿಸಿದಂತೆ ಊಹಾಪೋಹಗಳಿಗೆ ಕಾರಣವಾಗಿದೆ. ಡಿಕೆ ಶಿವಕುಮಾರ್ ದೆಹಲಿಗೆ ತೆರಳಿ ರಾಹುಲ್ ಗಾಂಧಿ ಭೇಟಿಗೆ ಯತ್ನಿಸಿದ್ದರು. ಆದರೆ ಅದು ಆಗದಿದ್ದಕ್ಕೆ ಬರಿಗೈನಲ್ಲೇ ವಾಪಸ್ ಆಗಿದ್ದಾರೆ. ಇತ್ತ ಕಾಂಗ್ರೆಸ್‌ ಕಾರ್ಯಕಾರಿ ಸಮಿತಿ (CWC) ಸಭೆಗೆ ಡಿಕೆಶಿಗೆ ಆಹ್ವಾನ ಬಂದಿಲ್ಲ. ಬದಲಿಗೆ ಸಿಎಂ ಸಿದ್ದರಾಮಯ್ಯಗೆ ಮಾತ್ರ ಆಹ್ವಾನ ನೀಡಲಾಗಿದೆ. ಹೀಗಾಗಿ ಡಿಸೆಂಬರ್ 26 ಸಿದ್ದರಾಮಯ್ಯ ದೆಹಲಿಗೆ ತೆರಳಲಿರುವುದು ಮತ್ತಷ್ಟು ಕುತೂಹಲ ಮೂಡಿಸಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com