

ಬೆಂಗಳೂರು: ಕ್ರಿಸ್ ಮಸ್ ರಜೆಗೆ ಗೋಕರ್ಣಕ್ಕೆ ಹೋಗಿ ಸಂತೋಷದಿಂದ ಕಳೆಯಬೇಕೆಂದಿದ್ದವರು ದುರಂತಕ್ಕೀಡಾಗಬೇಕಾದ ಘಟನೆ ನಿನ್ನೆ ಚಿತ್ರದುರ್ಗದಲ್ಲಿ ಖಾಸಗಿ ಬಸ್ ಹೊತ್ತಿ ಉರಿದು ನಡೆಯಿತು.
32 ಸೀಟಿನ ನಾನ್-ಎಸಿ ಸೀಬರ್ಡ್ ಟೂರಿಸ್ಟ್ ಬಸ್ ಮೊನ್ನೆ ಬುಧವಾರ ರಾತ್ರಿ 8:30 ಕ್ಕೆ ಬೆಂಗಳೂರಿನ ಮೆಜೆಸ್ಟಿಕ್‌ನಿಂದ ಹೊರಟಿತ್ತು. ಬೆಂಗಳೂರಿನಿಂದ ಹೆಚ್ಚಿನ ಪ್ರಯಾಣಿಕರು ಗೋಕರ್ಣಕ್ಕೆ ಹೋಗುವವರಾಗಿದ್ದರು. ಕೆಲವರು ಕುಮಟಾ ಮತ್ತು ಶಿವಮೊಗ್ಗಕ್ಕೆ ಹೋಗುವವರಿದ್ದರು.
ನಾನ್ ಎಸಿ ಬಸ್
ಬಸ್ ನಾನ್ ಎಸಿಯಾಗಿದ್ದರಿಂದ ಬಸ್ ಬೆಂಕಿಗೆ ಆಹುತಿಯಾದಾಗ ಮೃತಪಟ್ಟವರ ಸಂಖ್ಯೆ ಕಡಿಮೆಯಾಯಿತು. ಹಲವು ಪ್ರಯಾಣಿಕರಿಗೆ ತಪ್ಪಿಸಿಕೊಳ್ಳಲು ಸಾಧ್ಯವಾಯಿತು ಎಂದು ಹೇಳುತ್ತಿದ್ದಾರೆ. "ನಾವು ಬಸ್‌ನಿಂದ ಹೊರಬರಲು ಪ್ರಯತ್ನಿಸಿದಾಗ, ಮುಂಭಾಗದ ಬಾಗಿಲು ಜಾಮ್ ಆಗಿರುವುದು ಗೊತ್ತಾಯಿತು. ಅದನ್ನು ತೆರೆಯಲು ಹಲವು ಬಾರಿ ಪ್ರಯತ್ನ ಮಾಡಿದರೂ ಸಾಧ್ಯವಾಗಲಿಲ್ಲ. ಆಗ ನನ್ನ ಪತ್ನಿ ಬೆಂಕಿ ಹೆಚ್ಚು ವ್ಯಾಪಿಸುತ್ತಿದ್ದಂತೆ ಕಿಟಕಿಯಿಂದ ಜಿಗಿಯಲು ಹೇಳಿದಳು. ಆ ಕ್ಷಣದಲ್ಲಿ, ನಾನ್ ಎಸಿ ಬಸ್ ಆಗಿದ್ದರಿಂದ ಸಾಧ್ಯವಾಯಿತು ಎಂದು ಮುಖ್ಯ ಬಾಗಿಲಿನ ಹತ್ತಿರ ಮೇಲಿನ ಬರ್ತ್ ಬುಕ್ ಮಾಡಿದ್ದ ಹೇಮರಾಜ್ ಕುಮಾರ್ ಹೇಳುತ್ತಾರೆ.
ವರ್ತೂರಿನ ನಿವಾಸಿ 37 ವರ್ಷದ ಹೇಮರಾಜ್, ವಾರಾಂತ್ಯದ ವಿಹಾರಕ್ಕೆ ಗೋಕರ್ಣಕ್ಕೆ ತನ್ನ ಪತ್ನಿ ಮತ್ತು ಎಂಟು ವರ್ಷದ ಮಗನೊಂದಿಗೆ ಪ್ರಯಾಣಿಸುತ್ತಿದ್ದರು. ಅವರ ಮಗ ಯಾವುದೇ ಹಾನಿಗೊಳಗಾಗದೆ ಉಳಿದಿದ್ದರೂ, ಅವರ ಪತ್ನಿ ಕಲ್ಪನಾ ಪ್ರಜಾಪತಿ ಬೆನ್ನಿಗೆ ಗಾಯಗಳಾಗಿವೆ.
ಅಪಘಾತ ಸಂಭವಿಸಿದಾಗ ನಾವೆಲ್ಲರೂ ನಿದ್ರಿಸುತ್ತಿದ್ದೆವು. ನನಗೆ ಉಸಿರಾಡಲು ತೊಂದರೆಯಾದಾಗ ಎಚ್ಚರವಾಯಿತು, ಕಿಟಕಿಯ ರಾಡ್ ಇದ್ದಕ್ಕಿದ್ದಂತೆ ನನ್ನ ಮುಖದ ಮೇಲೆ ಬಿದ್ದಿತು. ನಾವು ಹೊರಬರುವ ಹೊತ್ತಿಗೆ, ಚಾಲಕ, ಕಂಡಕ್ಟರ್ ಮತ್ತು ಇತರ ಕೆಲವು ಪ್ರಯಾಣಿಕರು ಬಸ್ಸಿನಿಂದ ಹೊರಬಂದಿದ್ದರು. ನಾವು ಹೊರಬಂದ ಕೆಲವೇ ಕ್ಷಣಗಳಲ್ಲಿ, ಇಡೀ ಬಸ್ ಬೆಂಕಿಗೆ ಆಹುತಿಯಾಯಿತು ಎಂದು ವಿವರಿಸಿದರು.
ಅದೇ ರೀತಿ, 23 ವರ್ಷದ ಐಟಿ ಉದ್ಯೋಗಿ ಕಿರಣ್ ಪಾಲ್ ಎಚ್ ತನ್ನ ಸ್ನೇಹಿತರಾದ ಕೀರ್ತನ್ ಎಂ, ನಂದಿತಾ ಜಿಬಿ ಮತ್ತು ದೇವಿಕಾ ಎಚ್ ಅವರೊಂದಿಗೆ ಗೋಕರ್ಣಕ್ಕೆ ಪ್ರಯಾಣಿಸುತ್ತಿದ್ದರು. ಅವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು ಗೋಕರ್ಣಕ್ಕೆ ಹೋಗುವ ಬದಲು ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದರು. ಇಬ್ಬರಿಗೆ ಸುಟ್ಟಗಾಯಗಳು ಮತ್ತು ಇಬ್ಬರಿಗೆ ಇತರ ಗಾಯಗಳು.
ಕಿರಣ್ ಅವರ ಸಹೋದರ ಕಿಶನ್ ಪಾಲ್ ಅವರಿಗೆ ಅಪಘಾತದ ಬಗ್ಗೆ ಬೆಳಗ್ಗೆ 6 ಗಂಟೆಗೆ ಗೊತ್ತಾಯಿತು. ಅಪಘಾತವು ಬಹಳ ಹಿಂದೆಯೇ ಸಂಭವಿಸಿದ್ದರೂ, ನನ್ನ ಸಹೋದರ ನಮಗೆ ಗಾಬರಿಯಾಗಬಾರದೆಂದು ತಿಳಿಸಲಿಲ್ಲ. ಅವರು ಸ್ಥಳೀಯ ಆಸ್ಪತ್ರೆಯಲ್ಲಿದ್ದಾಗ ಕರೆ ಮಾಡಿ ಹೇಳಿದರು. ಕಿಟಕಿಯಿಂದ ಹಾರಿದ್ದರಿಂದ ಅವರ ತೋಳುಗಳು ಮತ್ತು ಕಾಲುಗಳಿಗೆ ಗಾಯಗಳಾಗಿವೆ. ಹಲವಾರು ಗಾಜಿನ ಚೂರುಗಳು ಚುಚ್ಚಿವೆ. ಅವರೆಲ್ಲರೂ ಕಿಟಕಿಯ ಮೂಲಕ ಜಿಗಿಯಬೇಕಾಯಿತು ಎಂದು ಹೇಳಿಕೊಂಡರು.
25 ವರ್ಷದ ಶಶಿಕಾಂತ್ ಎಂ ಆಂಧ್ರಪ್ರದೇಶದಿಂದ ಬರುವ ವಿಮಾನ ವಿಳಂಬವಾದ ಕಾರಣ ಬಸ್ ಗೆ ಸರಿಯಾದ ಸಮಯಕ್ಕೆ ಬರಲು ಸಾಧ್ಯವಾಗಿರಲಿಲ್ಲ. ಈ ದುರಂತ ನಂತರ ವಿಮಾನ ತಡವಾಗಿದ್ದೇ ಒಳ್ಳೆಯದಾಯಿತು ಎಂದು ಖುಷಿಪಟ್ಟರು.
ವಿವಾಹ ಪೂರ್ವ ಪಾರ್ಟಿಯಲ್ಲಿ ಭಾಗಿಯಾಗಬೇಕಿದ್ದ ಕುಟುಂಬ
ಚಿತ್ರದುರ್ಗದಲ್ಲಿ ಅಪಘಾತದ ನಂತರ ಬೆಂಕಿಗೆ ಆಹುತಿಯಾದ ಬೆಂಗಳೂರಿನಿಂದ ಬಂದ ಬಸ್ಸಿನಲ್ಲಿದ್ದ 33 ಪ್ರಯಾಣಿಕರಲ್ಲಿ ಇಪ್ಪತ್ತೈದು ಮಂದಿ ಪ್ರವಾಸಿ ತಾಣವಾದ ಗೋಕರ್ಣಕ್ಕೆ ಹೋಗುತ್ತಿದ್ದರು.
ಏಳು ಜನರ ಗುಂಪು ಗೋಕರ್ಣದಲ್ಲಿ ನಡೆಯಲಿದ್ದ ವಿವಾಹ ಪೂರ್ವ ಪಾರ್ಟಿಯಲ್ಲಿ ಭಾಗವಹಿಸಬೇಕಿತ್ತು. ಅವರಲ್ಲಿ ಒಬ್ಬರು ಫೆಬ್ರವರಿಯಲ್ಲಿ ಮದುವೆಯಾಗಲಿದ್ದಾರೆ. ಐವರು ಐಟಿ ಕಂಪನಿಗಳಲ್ಲಿ ಕೆಲಸ ಮಾಡುತ್ತಾರೆ. ಮಂಜುನಾಥ್, ವಧು-ವರ ಕವಿತಾ, ದಿಲೀಪ್, ಸಂಧ್ಯಾ, ಶಶಾಂಕ್, ಬಿಂದು ಮತ್ತು ಅವರ ಎಂಟು ವರ್ಷದ ಮಗಳು ಗ್ರಿಯಾ, ಎಲ್ಲರೂ ಮಾವಳ್ಳಿ ಮತ್ತು ಬಿನ್ನಿಪೇಟೆ ನಿವಾಸಿಗಳು.
ಮಂಜುನಾಥ್ ಹೊರತುಪಡಿಸಿ, ಉಳಿದವರು ಸೋದರಸಂಬಂಧಿಗಳು. ಮಂಜುನಾಥ್ ಅವರನ್ನು ವಿಕ್ಟೋರಿಯಾ ಆಸ್ಪತ್ರೆಯ ಸುಟ್ಟ ಗಾಯಗಳ ವಾರ್ಡ್‌ನಲ್ಲಿ ದಾಖಲಿಸಲಾಗಿದ್ದರೆ, ಶಶಾಂಕ್ ಮತ್ತು ಸಂಧ್ಯಾ ಅವರಿಗೆ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ನನ್ನ ಸಹೋದರನಿಗೆ ಮೂರನೇ ಹಂತದ ಸುಟ್ಟ ಗಾಯಗಳಾಗಿದ್ದು, ಈಗ ಆತನನ್ನು ನಿಗಾದಲ್ಲಿ ಇರಿಸಲಾಗಿದೆ. ಆತನ ಸ್ನೇಹಿತ ದಿಲೀಪ್ ನನ್ನು ಆಸ್ಪತ್ರೆಗೆ ಸ್ಥಳಾಂತರಿಸಿದ್ದಾರೆ. ದಿಲೀಪ್ ಸಹೋದರಿ ಬಿಂದು ಮತ್ತು ಆಕೆಯ ಮಗಳು ಎಲ್ಲಿದ್ದಾರೆ ಎಂಬುದು ತಿಳಿದಿಲ್ಲ. ಡಿಕ್ಕಿಯ ಪರಿಣಾಮ, ಕಾರಿನ ಗಾಜು ಮುರಿದುಹೋಯಿತು. ನನ್ನ ಸಹೋದರ ಮತ್ತು ಆತನ ಸ್ನೇಹಿತರು ಬಸ್ಸಿನಿಂದ ಹಾರಿದರು ಎಂದು ಮಂಜುನಾಥ್ ಸಹೋದರ ದೀಪಕ್ ಸುದ್ದಿಗಾರರಿಗೆ ತಿಳಿಸಿದರು.
ಕವಿತಾ ಅವರ ತಂದೆ ಕಾಂತರಾಜು, ನನಗೆ ಅಪಘಾತದ ಬಗ್ಗೆ ನಸುಕಿನ ಜಾವ 3 ಗಂಟೆ ಸುಮಾರಿಗೆ ತಿಳಿಯಿತು. ನನ್ನ ಮಗಳು ಉರಿಯುತ್ತಿದ್ದ ಬಸ್ಸಿನಿಂದ ಹೊರಗೆ ಹಾರಿ ಪ್ರಾಣ ಉಳಿಸಿಕೊಂಡಳು, ಆದರೆ ಅವಳ ಬೆನ್ನಿಗೆ ಸಾಕಷ್ಟು ನೋವಾಗಿದೆ, ಅವಳು ಈಗ ಮಾತನಾಡುವ ಸ್ಥಿತಿಯಲ್ಲಿಲ್ಲ ಎಂದರು.
ಅಪಘಾತದಲ್ಲಿ ಗಾಯಗೊಂಡ ಗಗನಾ ಅವರ ತಂದೆ ಸಿದ್ದರಾಜು, ನನ್ನ ಮಗಳು ದೊಡ್ಡ ಶಬ್ದ ಕೇಳಿ ಎಚ್ಚರಗೊಂಡಳು. ಡಿಕ್ಕಿಯಾದ ಕೂಡಲೇ ಅವಳು ಬಸ್ಸಿನಿಂದ ಹೊರಗೆ ಹಾರಿದಳು. ನಾನು ಸ್ಥಳಕ್ಕೆ ಹೋಗಿ ಅವಳನ್ನು ಮನೆಗೆ ಕರೆತಂದೆ ಎಂದರು.
ಇಶಾ ಅವರ ತಾಯಿ ನಳಿನಿ ಅವರು ತಮ್ಮ ಮಗಳು ಮತ್ತು ಅವರ ಸ್ನೇಹಿತರು ಮುರಿದ ಕಿಟಕಿಯಿಂದ ಜಿಗಿದು ಬೆಂಕಿಯಿಂದ ಪಾರಾದರು ಎಂದರು.
ಆಭರಣಗಳಿಂದ ಮಗಳ ಶವ ಗುರುತು ಹಿಡಿದ ಪೋಷಕರು
ಅಪಘಾತದಲ್ಲಿ ಮೃತಪಟ್ಟ ಆರು ಜನರಲ್ಲಿ ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲ್ಲೂಕಿನ ಇಬ್ಬರು ಸಾಫ್ಟ್‌ವೇರ್ ಎಂಜಿನಿಯರ್‌ಗಳು ಸೇರಿದ್ದಾರೆ. ಚನ್ನರಾಯಪಟ್ಟಣ ಪಟ್ಟಣದ ಎಚ್‌ಸಿ ಮಾನಸ (27ವ) ಮತ್ತು ಅಂಕನಹಳ್ಳಿಯ ಎಎಂ ನವ್ಯಾ (26ವ) ಗೋಕರ್ಣಕ್ಕೆ ರಜೆಯ ಮೇಲೆ ತೆರಳುತ್ತಿದ್ದರು. ಬೆಂಗಳೂರಿನ ವಿವಿಧ ಕಂಪನಿಗಳಲ್ಲಿ ಕೆಲಸ ಮಾಡುತ್ತಿದ್ದರು. ಅವರ ಪೋಷಕರು ಅವರು ಧರಿಸಿದ್ದ ಆಭರಣಗಳ ಆಧಾರದ ಮೇಲೆ ಶವಗಳನ್ನು ಗುರುತು ಹಿಡಿದಿದ್ದಾರೆ. ಮಾನಸ ಅವರ ನಿಶ್ಚಿತಾರ್ಥ ಮೂರು ತಿಂಗಳ ಹಿಂದೆ ನಡೆದಿತ್ತು, ನವ್ಯಾ ಇತ್ತೀಚೆಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದರು ಎಂದು ಮೂಲಗಳು ತಿಳಿಸಿವೆ.
Advertisement