
ಮೈಸೂರು ಅರಮನೆ ಮುಂಭಾಗದ ಜಯಮಾರ್ತಾಂಡ ದ್ವಾರದ ಬಳಿ ಗುರುವಾರ ಸಂಜೆ ಬಲೂನಿಗೆ ಹೀಲಿಯಂ ಗ್ಯಾಸ್ ತುಂಬುವ ಸಿಲಿಂಡರ್ ಸ್ಫೋಟಗೊಂಡು ಉತ್ತರಪ್ರದೇಶ ಮೂಲದ ಸಲೀಂ ಎಂಬಾತ ಮೃತಪಟ್ಟಿದ್ದಾರೆ. ಗಂಭೀರವಾಗಿ ಗಾಯಗೊಂಡಿದ್ದ ನಂಜನಗೂಡು ಮೂಲದ ಮಂಜುಳಾ ಎಂಬುವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಶುಕ್ರವಾರ ಮೃತಪಟ್ಟಿದ್ದಾರೆ. ಘಟನೆಯಲ್ಲಿ ಬೆಂಗಳೂರಿನ ಕಾಮಾಕ್ಷಿಪಾಳ್ಯದ ಲಕ್ಷ್ಮಿ, ಕೋಲ್ಕತ್ತಾದ ಶಮಿನಾ ಶಬಿಲ್, ರಾಣೆಬೆನ್ನೂರಿನ ಕೊಟ್ರೇಶ್ ಅವರಿಗೆ ಗಾಯಗಳಾಗಿವೆ. ಘಟನೆಯ ಬಗ್ಗೆ NIA ಮಾಹಿತಿ ಕಲೆಹಾಕಿದ್ದು, ತನಿಖೆಗೆ ಅಗತ್ಯವಾದ ಸಾಮಗ್ರಿಗಳನ್ನು ಸ್ಥಳದಿಂದ ಸಂಗ್ರಹಿಸಿದೆ. ಸಿಲಿಂಡರ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಿ ವರದಿ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ ಎಂದು ಗೃಹ ಸಚಿವ ಪರಮೇಶ್ವರ್ ತಿಳಿಸಿದ್ದಾರೆ. ಮೈಸೂರಿನ ಅರಮನೆಗೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಬರುವುದರಿಂದ ಈ ಘಟನೆಯನ್ನು ಸೂಕ್ಷ್ಮ ದೃಷ್ಟಿಯಿಂದ ನೋಡಬೇಕು. ಪ್ರವಾಸೋದ್ಯಮ ಇಲಾಖೆಯ ಅಧಿಕಾರಿಗಳೊಂದಿಗೆ ಚರ್ಚಿಸಿ ಅಗತ್ಯ ಕ್ರಮ ತೆಗೆದುಕೊಳ್ಳುವಂತೆ ಸೂಚನೆ ನೀಡಿದ್ದೇನೆ ಎಂದರು.
ಚಿತ್ರದುರ್ಗದ ಹಿರಿಯೂರಿನ ಗೊರ್ಲತ್ತು ಗ್ರಾಮದ ಬಳಿ ಖಾಸಗಿ ಬಸ್ ಹಾಗೂ ಕಂಟೇನರ್ ನಡುವೆ ಸಂಭವಿಸಿದ ದುರಂತದಲ್ಲಿ ಗಂಭೀರ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದ ಬಸ್ ಚಾಲಕ ಹಾವೇರಿ ಮೂಲದ ಮೊಹಮ್ಮದ್ ರಫೀಕ್ ಹುಲಗೂರ ಮೃತಪಟ್ಟಿದ್ದಾರೆ. ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮೊಹಮ್ಮದ್ ರಫೀಕ್ ಅವರ ಕಾಲು, ಹೊಟ್ಟೆಗೆ ಬಲವಾಗಿ ಪೆಟ್ಟುಬಿದ್ದಿತ್ತು. ಬಹು ಅಂಗಾಂಗ ವೈಫಲ್ಯದಿಂದಾಗಿ ಚಿಕಿತ್ಸೆಗೆ ಸ್ಪಂದಿಸದೆ ಇಂದು ಬೆಳಿಗ್ಗೆ ಮೃತಪಟ್ಟಿದ್ದಾರೆ. ಇದರಿಂದ ದುರಂತದಲ್ಲಿ ಮೃತಪಟ್ಟವರ ಸಂಖ್ಯೆ 7ಕ್ಕೇರಿದೆ. ಈಮಧ್ಯೆ, ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಪ್ರತಿಕ್ರಿಯಿಸಿ ಸಾರ್ವಜನಿಕ ಸಾರಿಗೆಗಾಗಿ ಬಳಸುವ ವಾಹನಗಳಿಗೆ ತುರ್ತು ನಿರ್ಗಮನದ ಬಾಗಿಲುಗಳು ಇಲ್ಲದಿದ್ದರೆ FC ಮಾಡದಂತೆ ಕಟ್ಟುನಿಟ್ಟಿನ ಆದೇಶ ನೀಡಲಾಗಿದೆ ಎಂದು ಹೇಳಿದ್ದಾರೆ.
ಹೊಸ ವರ್ಷದ ಸ್ವಾಗತಕ್ಕೆ ಸಿಲಿಕಾನ್ ಸಿಟಿ ಬೆಂಗಳೂರು ಸಜ್ಜಾಗಿದ್ದು, ಈ ನಡುವೆ ಶಾಂತಿ ಮತ್ತು ಸುರಕ್ಷತೆ ಕಾಪಾಡಲು ಬೆಂಗಳೂರು ನಗರ ಪೊಲೀಸ್ ಸಿದ್ಧತೆ ನಡೆಸುತ್ತಿದ್ದಾರೆ. ನಗರಾದ್ಯಂತ ಜಾರಿಗೊಳಿಸಿರುವ ಭದ್ರತಾ ಕ್ರಮಗಳನ್ನು ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಖುದ್ದು ಪರಿಶೀಲನೆ ನಡೆಸಿದರು. ನಂತರ ಹೋಟೆಲ್, ಪಬ್ ಮತ್ತು ಬಾರ್ ಮಾಲೀಕರ ಜೊತೆ ಸಭೆ ನಡೆಸಿದ ಸೀಮಂತ್ ಕುಮಾರ್, ಸಿಸಿ ಕ್ಯಾಮರಾ ಅಳವಡಿಕೆ, ಶಬ್ದ ಮಾಲಿನ್ಯ ಮತ್ತು ಹೆಣ್ಮಕ್ಕಳ ಸುರಕ್ಷತೆ ಸೇರಿದಂತೆ 30 ಸೂಚನೆಗಳನ್ನು ಕೊಟ್ಟಿದ್ದಾರೆ. ಇನ್ನು ಬಾರ್ ಮತ್ತು ಪಬ್ಗಳಿಗೆ ರಾತ್ರಿ 1 ಗಂಟೆವರೆಗೆ ಅವಕಾಶ ನೀಡಲಾಗಿದೆ. ಎಮರ್ಜೆನ್ಸಿ ಕಾಂಟ್ಯಾಕ್ಟ್, ರೇವ್ ಪಾರ್ಟಿ, ಕಾನೂನುಬಾಹಿರ ಪಾರ್ಟಿ ಬಗ್ಗೆ ಪ್ರದರ್ಶನ ಮಾಡಬಾರದು. ಪಟಾಕಿ, ಆಯುಧಗಳು ಇರಬಾರದು. ಹೋಗಿ ಬರುವ ಜನರಿಗೆ ಸರದಿ ಸಾಲು ಇರಬೇಕು. ಹೀಗೆ ಎಲ್ಲದರ ಬಗ್ಗೆಯೂ ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.
ಬಂಡೀಪುರ ಹುಲಿ ಸಂರಕ್ಷಿತ ಅರಣ್ಯ ಸಮೀಪದ ಗ್ರಾಮಗಳಲ್ಲಿ ಆಗಾಗ್ಗೆ ಕಾಣಿಸಿಕೊಂಡು ಆತಂಕ ಸೃಷ್ಟಿಸಿದ್ದ ಹೆಣ್ಣು ಹುಲಿಯೊಂದು ಗುಂಡ್ಲುಪೇಟೆ ತಾಲ್ಲೂಕಿನ ದೇಪಾಪುರ ಗ್ರಾಮದಲ್ಲಿಟ್ಟ ಬೋನಿನಲ್ಲಿ ಸೆರೆಯಾಗಿದೆ. ಹುಲಿಯ ಚಲನವಲನದಿಂದ ದೇಪಾಪುರ ಹಾಗೂ ಸುತ್ತಮುತ್ತಲ ಗ್ರಾಮಗಳ ನಿವಾಸಿಗಳು ಆತಂಕ ವ್ಯಕ್ತಪಡಿಸಿದ್ದರು. ದೇಪಾಪುರ ಸೇರಿದಂತೆ ಹಲವಾರು ಗ್ರಾಮಗಳ ಜನರ ಒತ್ತಾಯದ ಮೇರೆಗೆ ಅರಣ್ಯಾಧಿಕಾರಿಗಳು ಹುಲಿ ಸೆರೆಗೆ ಬೋನಿರಿಸಿದ್ದರು. ಅರಣ್ಯಾಧಿಕಾರಿಗಳು ಹುಲಿಯ ಆರೋಗ್ಯ ಹಾಗೂ ವರ್ತನೆ ಪರಿಶೀಲನೆಯ ನಂತರ ಹುಲಿಯನ್ನು ವನ್ಯಜೀವಿ ಪುನರ್ವಸತಿ ಕೇಂದ್ರಕ್ಕೆ ಸಾಗಿಸಿದರು.
ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣವು ಡಿಸೆಂಬರ್ 26 ರಿಂದ ಜಾರಿಗೆ ಬರುವಂತೆ ಟರ್ಮಿನಲ್ 1 ಆಗಮನ ಪಿಕಪ್ ಪಿಕಪ್ ಪ್ರದೇಶಗಳಾದ ಪಿ3 ಮತ್ತು ಪಿ4 ನಲ್ಲಿ ಉಚಿತ ಪಾರ್ಕಿಂಗ್ ಅವಧಿಯನ್ನು 10 ನಿಮಿಷಗಳಿಂದ 15 ನಿಮಿಷಗಳಿಗೆ ವಿಸ್ತರಿಸಿದೆ. ಇದು ಖಾಸಗಿ ವಾಹನಗಳು ಮತ್ತು ಟ್ಯಾಕ್ಸಿ ಸೇವೆಗಳೆರಡಕ್ಕೂ ಅನ್ವಯಿಸುತ್ತದೆ ಎಂದು ಬಿಐಎಎಲ್ ತಿಳಿಸಿದೆ. ಪ್ರಯಾಣಿಕರ ಆಗಮನ, ನಿರ್ಗಮನ ಸುಗಮಗೊಳಿಸಲು ಪ್ರಯಾಣಿಕರು ಪಿ3/ಪಿ4 ಪಿಕ್-ಅಪ್ ಪ್ರದೇಶಗಳಿಗೆ ಮತ್ತು ಅಲ್ಲಿಂದ ಪ್ರತಿ 7 ನಿಮಿಷಗಳಿಗೊಮ್ಮೆ ಲಭ್ಯವಿರುವ ಶಟಲ್ ಬಸ್‌ಗಳನ್ನು ಅಥವಾ 6 ಕಾರುಗಳು ಮತ್ತು 10 ಬಗ್ಗಿಗಳಲ್ಲಿ ತಮಗೆ ಅಗತ್ಯಕ್ಕನುಗುಣವಾಗಿ ಆಯ್ಕೆ ಮಾಡಬಹುದು. ಇದು ಪ್ರಯಾಣಿಕರಿಗೆ ಇನ್ನಷ್ಟು ಹೆಚ್ಚಿನ ಅನುಕೂಲ ಮಾಡಿಕೊಡಲಿದೆ.
Advertisement