ಬುಲ್ಡೋಜರ್ ಸಂಸ್ಕೃತಿ ನಮ್ಮದಲ್ಲ: ಸತ್ಯಾಸತ್ಯತೆ ಅರಿಯದೇ ಪಿಣರಾಯಿ ವಿಜಯನ್ ರಾಜ್ಯದ ವಿಚಾರದಲ್ಲಿ ಹಸ್ತಕ್ಷೇಪ ಸಲ್ಲದು; ಡಿ.ಕೆ. ಶಿವಕುಮಾರ್

ಪಿಣರಾಯಿ ವಿಜಯನ್ ರಂತಹ ಹಿರಿಯ ನಾಯಕರು ಸತ್ಯಾಸತ್ಯತೆ ಅರಿಯದೇ ಮಾತನಾಡಿರುವುದು ದುರಾದೃಷ್ಟಕರ. ಬೆಂಗಳೂರಿನ ವಿಚಾರ ಏನು ಎಂದು ಅವರು ತಿಳಿಯಬೇಕು.
Dk Shivakumar
ಡಿ.ಕೆ. ಶಿವಕುಮಾರ್
Updated on

ಬೆಂಗಳೂರು : ಕೋಗಿಲು ಬಡಾವಣೆಯಲ್ಲಿ ಅಕ್ರಮ ಒತ್ತುವರಿ ಪ್ರದೇಶ ನೆಲಸಮಗೊಳಿಸಿರುವ ಪ್ರಕರಣದಲ್ಲಿ ಸತ್ಯಾಸತ್ಯತೆ ಅರಿಯದೇ ಕೇರಳ ಸಿಎಂ ಪಿಣರಾಯಿ ವಿಜಯನ್ ಅವರು ಹಸ್ತಕ್ಷೇಪ ಮಾಡಬಾರದು ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದರು.

ಸದಾಶಿವನಗರ ನಿವಾಸದ ಬಳಿ ಮಾಧ್ಯಮಗಳ ಪ್ರಶ್ನೆಗಳಿಗೆ ಶಿವಕುಮಾರ್ ಅವರು ಶನಿವಾರ ಪ್ರತಿಕ್ರಿಯೆ ನೀಡಿದರು. ಕೋಗಿಲು ಬಡಾವಣೆ ಅಕ್ರಮ ಒತ್ತುವರಿ ಸಂಬಂಧ ಕೇರಳ ಸಿಎಂ ಪಿಣರಾಯಿ ವಿಜಯನ್ ಅವರು ಕರ್ನಾಟಕದಲ್ಲಿ ಬುಲ್ಡೋಜರ್ ರಾಜ್ ನಡೆಯುತ್ತಿದೆ ಎಂಬ ಹೇಳಿಕೆ ಬಗ್ಗೆ ಕೇಳಿದಾಗ, “ಪಿಣರಾಯಿ ವಿಜಯನ್ ರಂತಹ ಹಿರಿಯ ನಾಯಕರು ಸತ್ಯಾಸತ್ಯತೆ ಅರಿಯದೇ ಮಾತನಾಡಿರುವುದು ದುರಾದೃಷ್ಟಕರ. ಬೆಂಗಳೂರಿನ ವಿಚಾರ ಏನು ಎಂದು ಅವರು ತಿಳಿಯಬೇಕು.

ಈ ಜಾಗ ಘನತ್ಯಾಜ್ಯ ವಿಲೇವಾರಿ ಮಾಡುವ ಕ್ವಾರಿ ಪಿಟ್ ಆಗಿದೆ. ಈ ಪ್ರದೇಶದಲ್ಲಿ ಅನೇಕ ಆರೋಗ್ಯ ಸಂಬಂಧಿತ ಸಮಸ್ಯೆಗಳಿವೆ. ಕೆಲವರು ಕಾನೂನುಬಾಹಿರವಾಗಿ ಆ ಜಾಗವನ್ನು ಅತಿಕ್ರಮಣ ಮಾಡಿದ್ದಾರೆ. ನಮಗೂ ಮಾನವೀಯತೆ ಇದೆ. ಅವರಿಗೆ ಬೇರೆ ಜಾಗಗಳಿಗೆ ಹೋಗಲು ಸರ್ಕಾರ ಹಾಗೂ ಸ್ಥಳೀಯ ಶಾಸಕರು ಅವಕಾಶ ನೀಡಿದ್ದೆವು. ಅಲ್ಲಿದ್ದವರ ಪೈಕಿ ಕೆಲವರು ಮಾತ್ರ ಸ್ಥಳೀಯರಾಗಿದ್ದು ಉಳಿದವರು ಏಕಾಏಕಿ ಅತಿಕ್ರಮಣ ಮಾಡಿದ್ದಾರೆ. ಇದು ಘನತ್ಯಾಜ್ಯ ವಿಲೇವಾರಿ ಘಟಕವಾಗಿದ್ದು 9 ವರ್ಷಗಳ ಹಿಂದೆಯೇ ಅಧಿಸೂಚನೆ ಹೊರಡಿಸಲಾಗಿದೆ.

ಪಿಣರಾಯಿ ಅವರಂತಹ ನಾಯಕರು ಇಂತಹ ವಿಚಾರದಲ್ಲಿ ಹಸ್ತಕ್ಷೇಪ ಮಾಡಬಾರದು. ನಮಗೆ ಬೆಂಗಳೂರು ಬಗ್ಗೆ ಚೆನ್ನಾಗಿ ಗೊತ್ತಿದೆ. ಲ್ಯಾಂಡ್ ಮಾಫಿಯಾದವರು ಸ್ಲಂಗಳನ್ನು ನಿರ್ಮಿಸಲು ನಾವು ಬಿಡುವುದಿಲ್ಲ. ನಾವು ನಮ್ಮ ಭೂಮಿಯನ್ನು ರಕ್ಷಣೆ ಮಾಡಿಕೊಳ್ಳುತ್ತೇವೆ. ಅವರಲ್ಲಿ ಯಾರೆಲ್ಲಾ ಅರ್ಹರಿದ್ದಾರೆ, ಅವರಿಗೆ ರಾಜೀವ್ ಗಾಂಧಿ ಯೋಜನೆಯಲ್ಲಿ ಮನೆಗಳನ್ನು ನೀಡಲು ಬದ್ಧವಾಗಿದ್ದೇವೆ” ಎಂದು ತಿಳಿಸಿದರು.

Dk Shivakumar
ಉತ್ತರ ಪ್ರದೇಶದಂತೆ ಕರ್ನಾಟಕ ಸರ್ಕಾರ 'ಬುಲ್ಡೋಜರ್ ನೀತಿ' ಅನುಸರಿಸುತ್ತಿದೆ: ಕೇರಳ ಸಿಎಂ ಪಿಣರಾಯಿ ವಿಜಯನ್ ತೀವ್ರ ಟೀಕೆ

ಪ್ರಕರಣದ ಸತ್ಯಾಸತ್ಯತೆ ತಿಳಿಯದೇ ಪಿಣರಾಯಿ ಅವರು ಈ ರೀತಿ ಮಾತನಾಡಬಾರದು ಎಂದು ಮನವಿ ಮಾಡುತ್ತೇನೆ. ಬುಲ್ಡೋಜರ್ ಸಂಸ್ಕೃತಿ ನಮ್ಮಲ್ಲಿ ಇಲ್ಲ. ನಗರದ ಹೃದಯ ಭಾಗದಲ್ಲಿರುವ ಸರ್ಕಾರಿ ಜಮೀನನ್ನು ರಕ್ಷಣೆ ಮಾಡಿಕೊಳ್ಳಲಾಗಿದೆ. ತ್ಯಾಜ್ಯ ವಿಲೇವಾರಿ ಘಟಕಕ್ಕೆ ನಿಗದಿಯಾಗಿರುವ ಜಾಗವನ್ನು ಒತ್ತುವರಿ ಮಾಡಿಕೊಳ್ಳಲು ಬಿಡುವುದಿಲ್ಲ. ಈ ಬಗ್ಗೆ ನಮ್ಮ ಪಕ್ಷ ಹಾಗೂ ಕೇರಳದ ನಾಯಕರಿಗೆ ವರದಿ ರವಾನೆ ಮಾಡುತ್ತೇನೆ” ಎಂದರು.

“ಬೆಂಗಳೂರು ಬೇರೆ ನಗರಗಳಂತೆ ಅಲ್ಲ. ನಮ್ಮಲ್ಲಿ ಹೆಚ್ಚು ಕೊಳಗೇರಿ ಪ್ರದೇಶಗಳಿಲ್ಲ. ಹೊಸದಾಗಿ ಕೊಳಗೇರಿ ಪ್ರದೇಶ ನಿರ್ಮಾಣ ಮಾಡಲು ಬಿಡುವುದಿಲ್ಲ. ಇದು ಸಚಿವ ಕೃಷ್ಣ ಭೈರೇಗೌಡ ಅವರ ಕ್ಷೇತ್ರವಾಗಿದ್ದು, ಅವರು ಬಹಳ ಹಿರಿಯ ನಾಯಕರಿದ್ದು, ಅವರು ಅಧಿಕಾರಿಗಳ ಜೊತೆ ಮಾತನಾಡಿದ್ದಾರೆ. ಜಾಗ ಖಾಲಿ ಇದೆ ಎಂದು ಏಕಾಏಕಿ ಗುಡಿಸಲು ಹಾಕಿಕೊಳ್ಳಲು ಆಗುವುದಿಲ್ಲ.

ಇದು ಅಲ್ಪಸಂಖ್ಯಾತರು ಅಥವಾ ಬೇರೆ ವಿಚಾರವಲ್ಲ. ಯಾರಿಗಾದರೂ ಜಾಗ ಬೇಕಾಗಿದ್ದರೆ ಅವರು ಅರ್ಹರಾಗಿದ್ದರೆ ಅವರಿಗೆ ಸರ್ಕಾರ ವಸತಿ ನೀಡಲಿದೆ. ಬೇರೆ ಸರ್ಕಾರಗಳು ಜನರಿಗೆ ಮನೆ ಕಟ್ಟಿಕೊಡಲು ಸಾಧ್ಯವಾಗಿರಲಿಲ್ಲ. ಸಿಎಂ, ವಸತಿ ಸಚಿವರಾದ ಜಮೀರ್ ಅಹ್ಮದ್ ಸೇರಿದಂತೆ ನಮ್ಮ ಸರ್ಕಾರ ಬಡವರಿಗೆ ಲಕ್ಷಾಂತರ ಮನೆ ನಿರ್ಮಾಣ ಮಾಡಿದೆ. ಅರ್ಹರಿಗೆ ನಾವು ಸೂಕ್ತ ರೀತಿಯಲ್ಲಿ ಪುನರ್ವಸತಿ ಕಲ್ಪಿಸುತ್ತೇವೆ” ಎಂದು ಸ್ಪಷ್ಟನೆ ನೀಡಿದರು.

ಇದೆಲ್ಲವೂ ರಾಜಕೀಯ ಹೇಳಿಕೆ ಹಾಗೂ ರಾಜಕೀಯ ಪ್ರೇರಿತ ಪ್ರತಿಭಟನೆಗಳು. ಸತ್ಯಾಸತ್ಯತೆ ಅರಿಯದೇ ನಮ್ಮ ರಾಜ್ಯದ ವಿಚಾರದಲ್ಲಿ ಹಸ್ತಕ್ಷೇಪ ಮಾಡಬಾರದು. ಚುನಾವಣೆ ಸಮಯದಲ್ಲಿ ಇಂತಹ ರಾಜಕೀಯ ಗಿಮಿಕ್ ಮಾಡುತ್ತಿದ್ದಾರೆ” ಎಂದರು. ಯಾರೆಲ್ಲಾ ಕರ್ನಾಟಕದಲ್ಲಿ ವಾಸವಿದ್ದು, ದಾಖಲೆ ಹೊಂದಿದ್ದಾರೋ ಅವರಿಗೆ ರಾಜ್ಯದ ಕಾನೂನಿನಂತೆ ಅಗತ್ಯ ನೆರವು ನೀಡಲಾಗುವುದು. ಈ ಕುರಿತು ಸ್ಪಷ್ಟ ವರದಿ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ” ಎಂದು ತಿಳಿಸಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com