

ಕಾರವಾರ: ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಜಲಾಂತರ್ಗಾಮಿ ನೌಕೆಯಲ್ಲಿ ಸಂಚರಿಸಿ ಹೊಸ ದಾಖಲೆ ಬರೆದಿದ್ದಾರೆ.
ಕಾರವಾರದ ಐ.ಎನ್.ಎಸ್ ಕದಂಬ ನೌಕಾನೆಲೆ ಡಾಕ್ ನಿಂದ ಐ.ಎನ್.ಎಸ್ ವಾಗ್ಶಿರ್ ಜಲಾಂತರ್ಗಾಮಿ ನೌಕೆಯಲ್ಲಿ ಸಮುದ್ರಯಾನ ನಡೆಸಿದ್ದಾರೆ. ಮಾಜಿ ರಾಷ್ಟ್ರಪತಿ ಡಾ.ಎಪಿಜೆ ಅಬ್ದುಲ್ ಕಲಾಂ ನಂತರ ಸಬ್ ಮೇರಿನ್ ನಲ್ಲಿ ಪ್ರಯಾಣಿಸಿದ ಎರಡನೇ ರಾಷ್ಟಪತಿ ದ್ರೌಪದಿ ಮುರ್ಮು ಆಗಿದ್ದಾರೆ.
ಐಎನ್ಎಸ್ ವಾಘಶೀರ್ ಭಾರತೀಯ ನೌಕಾಪಡೆಗೆ ಸೇರಿದ ಆರನೇಯ ಕಲ್ವರಿ-ವರ್ಗದ ಜಲಾಂತರ್ಗಾಮಿ ನೌಕೆಯಾಗಿದೆ. ಇದು ದೇಶದ ಅತ್ಯಂತ ಸುಧಾರಿತ ಜಲಾಂತರ್ಗಾಮಿಯಾಗಿದ್ದು, 'ಮೇಕ್ ಇನ್ ಇಂಡಿಯಾ'ದ ರಕ್ಷಣಾ ಉಪಕ್ರಮ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
ರಾಷ್ಟ್ರಪತಿಗಳೊಂದಿಗೆ ನೌಕಪಡೆಯ ಮುಖ್ಯಸ್ಥ ಅಡ್ಮಿರಲ್ ದಿನೇಶ್ ಕುಮಾರ್ ತ್ರಿಪಾಠಿ ಮತ್ತಿತರರು ಉಪಸ್ಥಿತರಿದ್ದರು. ಆಳ ಸಮುದ್ರದಲ್ಲಿ ನೌಕಾಪಡೆಯು ಎದುರಿಸುವ ಸವಾಲುಗಳು ಮತ್ತು ಜಲಾಂತರ್ಗಾಮಿ ಕಾರ್ಯಾಚರಣೆಗಳ ಸಂಕೀರ್ಣತೆಯನ್ನು ಹತ್ತಿರದಿಂದ ವೀಕ್ಷಿಸಲು ಈ ಭೇಟಿ ಸಹಕಾರಿಯಾಯಿತು.
ಇದಕ್ಕೂ ಮುನ್ನಾ ಕಾರವಾರದ ಕದಂಬ ನೌಕಾನೆಲೆಗೆ ಆಗಮಿಸಿದ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ರಾಜ್ಯಪಾಲ ಥಾವರ್ ಚಂದ್ ಗೆಹಲೋಟ್ , ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲ ಸಾರಿಗೆ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ ಸ್ವಾಗತಿಸಿದರು.
ಈ ಸಂದರ್ಭದಲ್ಲಿ ಪ್ರಾದೇಶಿಕ ಆಯುಕ್ತೆ ಜಯಂತಿ, ಜಿಲ್ಲಾಧಿಕಾರಿ ಕೆ. ಲಕ್ಷ್ಮಿಪ್ರಿಯಾ, ಎಡಿಜಿಪಿ ಹಿತೇಂದ್ರ ಹಾಗೂ ನೌಕಾಪಡೆಯ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.
Advertisement