

ಬೆಂಗಳೂರು: ಉದ್ಯೋಗ ಖಾತರಿ ಯೋಜನೆಯಿಂದ ಮಹಾತ್ನ ಗಾಂಧಿ ಹೆಸರು ತೆಗೆದು ಹಾಕುವ ವಿಕಸಿತ ಭಾರತ - ಉದ್ಯೋಗ ಖಾತರಿ ಮತ್ತು ಜೀವನೋಪಾಯ ಮಿಷನ್(ಗ್ರಾಮೀಣ) (ವಿಬಿ-ಜಿ ರಾಮ್ ಜಿ) ಕಾಯ್ದೆ ಅನುಷ್ಠಾನಗೊಳಿಸದಂತೆ ಒತ್ತಾಯಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಗಳವಾರ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದಾರೆ.
ಈ ಹೊಸ ಕಾನೂನು ಮೂಲಭೂತವಾಗಿ ಉದ್ಯೋಗ ಖಾತರಿ ಚೌಕಟ್ಟನ್ನು ಮತ್ತು ಸಹಕಾರಿ ಒಕ್ಕೂಟವನ್ನು ದುರ್ಬಲಗೊಳಿಸುತ್ತದೆ ಎಂದು ಸಿಎಂ ಸಿದ್ದರಾಮಯ್ಯ ಎಚ್ಚರಿಸಿದ್ದಾರೆ.
ಇಂದು ಮೋದಿ ಅವರಿಗೆ ಬರೆದ ವಿವರವಾದ ಪತ್ರದಲ್ಲಿ, ಮುಖ್ಯಮಂತ್ರಿಗಳು ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಕಾಯ್ದೆ (ಎಂಜಿಎನ್‌ಆರ್‌ಇಜಿಎ)ರದ್ದತಿಯ ಬಗ್ಗೆ ಗಂಭೀರ ಕಳವಳ ವ್ಯಕ್ತಪಡಿಸಿದ್ದಾರೆ. ಈ ಹೊಸ ಕಾಯ್ದೆ ಗ್ರಾಮೀಣ ಕುಟುಂಬಗಳಿಗೆ ನಿರ್ಣಾಯಕ ಜೀವನೋಪಾಯದ ಹಕ್ಕನ್ನು ಕಸಿದುಕೊಳ್ಳುತ್ತದೆ ಎಂದು ಹೇಳಿದ್ದಾರೆ.
ಹೊಸ ಕಾಯ್ದೆಯು 258 ಮತ್ತು 250ನೇ ವಿಧಿಯ ಉಲ್ಲಂಘಿಸುತ್ತದೆ. ರಾಜ್ಯಗಳ ಜೊತೆಗೆ ಚರ್ಚೆ ನಡೆಸದೆ ಇದನ್ನು ಜಾರಿಗೆ ತರಲಾಗಿದೆ. ಈ ವಿಧಾನವು ಸಹಕಾರಿ ಒಕ್ಕೂಟದ ನಾಶಕ್ಕೆ ದಾರಿ ಮಾಡಿಕೊಡುತ್ತದೆ. ಹಾಗಾಗಿ ಜಿ ರಾಮ್ ಜಿ ಕಾಯಿದೆ ಜಾರಿಗೊಳಿಸಬೇಡಿ. ಸಮೃದ್ಧ ಭಾರತ ನಿರ್ಮಿಸಬೇಕೆಂದು ನಾನು ಮನವಿ ಮಾಡುತ್ತೇನೆ ಎಂದು ಪ್ರಧಾನಿಗೆ ಪತ್ರ ಬರೆದು ಸಿಎಂ ತಿಳಿಸಿದ್ದಾರೆ.
ಈ ಹಿಂದಿನ ಮನರೇಗಾ ಯೋಜನೆ ಅಡಿಯಲ್ಲಿ ಕೇಂದ್ರ ಸರ್ಕಾರದ್ದು ಶೇ. 90 ಹಾಗೂ ರಾಜ್ಯಗಳದ್ದು ಶೇ.10 ರಷ್ಟು ಹಣ ಹಂಚಿಕೆಯಾಗಿದ್ದು ಈಗಿನ ಕಾಯ್ದೆಯು ರಾಜ್ಯ ಸರ್ಕಾರದ ಆರ್ಥಿಕತೆಗೆ ಹೊರೆಯಾಗಲಿದೆ. ಹೊಸ ಕಾಯ್ದೆಯು ಇದನ್ನು ಬಹುತೇಕ ರಾಜ್ಯಗಳಿಗೆ 60:40ಕ್ಕೆ ಬದಲಾಯಿಸಿದೆ. ಇದು ಈಗಾಗಲೇ ಜಿಎಸ್‌ಟಿ ಪರಿಹಾರದ ಕೊರತೆ ಹಾಗೂ ಅನ್ಯಾಯಕರ ಹಣಕಾಸು ವಿಂಗಡಣೆ ಕಾರಣದಿಂದ ಆರ್ಥಿಕ ಒತ್ತಡದಲ್ಲಿರುವ ರಾಜ್ಯಗಳ ಮೇಲೆ ಹೆಚ್ಚಿನ ಭಾರ ಹೇರುತ್ತಿದೆ. ಈ ಬದಲಾವಣೆಯನ್ನು ರಾಜ್ಯ ಸರ್ಕಾರಗಳೊಂದಿಗೆ ಅರ್ಥಪೂರ್ಣ ಸಮಾಲೋಚನೆ ಇಲ್ಲದೆ ಜಾರಿಗೊಳಿಸಲಾಗಿದೆ ಎಂದು ಹೇಳಿದ್ದಾರೆ.
ಉದ್ಯೋಗ ಭರವಸೆ ಕಾಯ್ದೆ ಕೇವಲ ಕಲ್ಯಾಣ ಯೋಜನೆಯಲ್ಲ; ಅದು ಮಹಾತ್ಮ ಗಾಂಧಿಯವರ ಹೆಸರನ್ನು ಹೊತ್ತಿರುವ, ಗ್ರಾಮ ಸ್ವರಾಜ್ಯ ಮತ್ತು ಅಂತ್ಯೋದಯದ ಮೌಲ್ಯಗಳನ್ನು ಪ್ರತಿಬಿಂಬಿಸುವ, ಐತಿಹಾಸಿಕ ಹಾಗೂ ಜಾಗತಿಕವಾಗಿ ಪ್ರಶಂಸಿತ ಹಕ್ಕು ಆಧಾರಿತ ಕಾನೂನು. ಈ ಕಾಯ್ದೆಯಿಂದ ಅವರ ಹೆಸರನ್ನು ತೆಗೆದುಹಾಕುವುದು ದುರ್ಭಾಗ್ಯಕರ ಸಂದೇಶವನ್ನು ನೀಡುತ್ತದೆ ಮತ್ತು ಅದರ ನೈತಿಕ ಶಕ್ತಿಯನ್ನು ಕುಗ್ಗಿಸುತ್ತದೆ. ಈ ವಿಧಾನವು ಸಹಕಾರಿ ಒಕ್ಕೂಟದ ನಾಶಕ್ಕೆ ದಾರಿಯಾಗಿರುವ ಕಾರಣ ವಿಬಿ-ಜಿ ರಾಮ್ ಜಿ ಕಾಯ್ದೆಯನ್ನು ಸ್ಥಗಿತಗೊಳಿಸುವಂತೆ ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.
Advertisement