News Headlines 31-12-2025 | ಮದ್ಯಸೇವನೆ ಮಾಡಿದವರನ್ನು ಡ್ರಾಪ್ ಮಾಡುವ ವ್ಯವಸ್ಥೆ ಹೇಳಿಕೆಗೆ ಟೀಕೆ: ಕೋಗಿಲು: NIA ತನಿಖೆಗೆ ಅಶೋಕ್ ಆಗ್ರಹ; ನನ್ನ ದೂರು ನಿಲಕ್ಷ್ಯಿಸಲಾಗಿದೆ- ವಿಜಯಲಕ್ಷ್ಮಿ ದರ್ಶನ್

News headlines
ಸುದ್ದಿ ಮುಖ್ಯಾಂಶಗಳುonline desk

1. New Year 2026: ಮದ್ಯಸೇವನೆ ಮಾಡಿದರವರನ್ನು ಡ್ರಾಪ್ ಮಾಡುವ ವ್ಯವಸ್ಥೆ ಹೇಳಿಕೆಗೆ ವ್ಯಾಪಕ ಟೀಕೆ: Dr G Parameshwara ಸ್ಪಷ್ಟನೆ

ಹೊಸ ವರ್ಷ 2026 ಸಂಭ್ರಮಾಚರಣೆ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಸರ್ಕಾರ ಹಾಗೂ ಗ್ರೇಟರ್ ಬೆಂಗಳೂರು ಪ್ರಾಧಿಕಾರ ಸರ್ವಸಿದ್ಧತೆಗಳನ್ನು ಮಾಡಿದ್ದು, ಈ ನಡುವೆ ಸಚಿವ ಡಾ.ಜಿ.ಪರಮೇಶ್ವರ್ ನೀಡಿರುವ ಹೇಳಿಕೆಯೊಂದು ತೀವ್ರ ಚರ್ಚೆಗೆ ಕಾರಣವಾಗಿದೆ. ಬೆಂಗಳೂರಿನಲ್ಲಿ ಹೊಸ ವರ್ಷಾಚರಣೆಯ ದಿನ ಮದ್ಯಸೇವನೆ ಮಾಡಿದರವರನ್ನು ಡ್ರಾಪ್ ಮಾಡುವ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಪರಮೇಶ್ವರ್ ಅವರು ಹೇಳಿದ್ದರು. ಈ ಹೇಳಿಕೆ ಭಾರೀ ಚರ್ಚೆಗೆ ಕಾರಣವಾಗಿದೆ. ಈ ಹಿನ್ನೆಲೆಯಲ್ಲಿ ಸ್ಪಷ್ಟನೆ ನೀಡಿರುವ ಪರಮೇಶ್ವರ್ ಅವರು, ಮದ್ಯ ಸೇವನೆ ಮಾಡಿರುವ ಎಲ್ಲರನ್ನೂ ಮನೆಗೆ ಬಿಡುವ ವ್ಯವಸ್ಥೆ ಇರುವುದಿಲ್ಲ. ಯಾರು ತೀರ ಮದ್ಯ ಸೇವನೆ ಮಾಡಿ ನಡೆಯುವುದಕ್ಕೇ ಸಾಧ್ಯವಿಲ್ಲದ ಪರಿಸ್ಥಿತಿಯಲ್ಲಿ ಇರುತ್ತಾರೆ ಹಾಗೂ ಪ್ರಜ್ಞೆ ಕಳೆದುಕೊಂಡ ಸ್ಥಿತಿಯಲ್ಲಿ ಇರುತ್ತಾರೋ ಅವರನ್ನು ಡ್ರಾಪ್ ಮಾಡಲಾಗುವುದು ಎಂದು ಹೇಳಿದ್ದಾರೆ. ಮದ್ಯಸೇವನೆ ಮಾಡಿದವರನ್ನು ಅವರ ಮನೆಗೆ ಕರೆದುಕೊಂಡು ಹೋಗುವುದಿಲ್ಲ. ವಿಶ್ರಾಂತಿ ಸ್ಥಳಗಳನ್ನು ಸ್ಥಾಪಿಸಲಾಗಿದ್ದು, ಅಲ್ಲಿಗೆ ಕರೆದುಕೊಂಡು ಹೋಗಲಾಗುವುದು ಎಂದು ತಿಳಿಸಿದರು.

2. ಕೋಗಿಲು ಫಕೀರ್‌ ಬಡಾವಣೆಗೆ R Ashoka, Chalavadi Narayanaswamy ಭೇಟಿ; ಅಕ್ರಮ ನಿವಾಸಿಗಳ ಪೌರತ್ವ ಪರಿಶೀಲನೆಗೆ ಒತ್ತಾಯ

ಕೋಗಿಲು ಕ್ರಾಸ್‌ನ ಫಕೀರ್‌ ಬಡಾವಣೆ ಕ್ರಮೇಣ ಸ್ಲೀಪರ್‌ ಸೆಲ್‌ಗಳ ಕೇಂದ್ರವಾಗುವ ಅಪಾಯವಿದೆ. ಆದ್ದರಿಂದ ಅಕ್ರಮ ನಿವಾಸಿಗಳ ಪೌರತ್ವವನ್ನು ಸರ್ಕಾರ ಪರಿಶೀಲಿಸಬೇಕು. ಹೀಗಾಗಿ ಇದನ್ನು ಎನ್‌ಐಎ ತನಿಖೆಗೆ ನೀಡಬೇಕು ಎಂದು ಪ್ರತಿಪಕ್ಷ ನಾಯಕ ಆರ್‌.ಅಶೋಕ ಆಗ್ರಹಿಸಿದ್ದಾರೆ. ಕೋಗಿಲು ಕ್ರಾಸ್‌ನಲ್ಲಿ ಒತ್ತುವರಿ ತೆರವು ಮಾಡಿದ ವಿವಾದಿತ ಸ್ಥಳಕ್ಕೆ ಪ್ರತಿಪಕ್ಷ ನಾಯಕ ಆರ್‌.ಅಶೋಕ ಅವರು ಇಂದು ಬಿಜೆಪಿ ಮುಖಂಡರೊಂದಿಗೆ ಭೇಟಿ ನೀಡಿದರು. ಸ್ಥಳದಲ್ಲೇ ಇದ್ದ ನಿವಾಸಿಗಳ ಜೊತೆ ಮಾತನಾಡಿದ ಅವರು, ಗುರುತಿನ ಚೀಟಿ ಹಾಗೂ ಇತರೆ ದಾಖಲೆಗಳನ್ನು ಕೇಳಿ ಪರಿಶೀಲಿಸಿದರು. ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅಶೋಕ್, ಮನೆ ಕಟ್ಟಿಕೊಡುವುದೇ ಮಾನದಂಡವಾದರೆ ಇನ್ನು ಮುಂದೆ ಸರ್ಕಾರ ಯಾವ ಮುಖ ಇಟ್ಟುಕೊಂಡು ಒತ್ತುವರಿ ತೆರವು ಮಾಡಲಿದೆ? ಬೆಂಗಳೂರಿನಲ್ಲಿ 40 ಕಡೆ 150-200 ಎಕರೆ ಒತ್ತುವರಿ ತೆರವು ಮಾಡಲಾಗಿದೆ. ಇವರೆಲ್ಲರಿಗೂ ಮನೆ ನಿರ್ಮಿಸಿಕೊಡಲು ಸಾಧ್ಯವೇ?ಎಂದು ಪ್ರಶ್ನಿಸಿದ್ದಾರೆ.

3. Bengaluru: ಲೋಕಾಯುಕ್ತ ಬಲೆಗೆ ವಿಶೇಷ ಸಾರ್ವಜನಿಕ ಅಭಿಯೋಜಕ

ಸ್ಥಳೀಯ ನ್ಯಾಯಾಲಯದಲ್ಲಿ ಬಾಕಿ ಇರುವ ಎಸ್‌ಸಿ/ಎಸ್‌ಟಿ ದೌರ್ಜನ್ಯ ಪ್ರಕರಣದಲ್ಲಿ 'ಉತ್ತಮ ವಾದ' ಮಂಡಿಸಲು ಲಂಚ ಪಡೆದ ಆರೋಪದ ಮೇಲೆ ಲೋಕಾಯುಕ್ತ ಅಧಿಕಾರಿಗಳು ವಿಶೇಷ ಸಾರ್ವಜನಿಕ ಅಭಿಯೋಜಕರನ್ನು ಬಂಧಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ತೆಲಂಗಾಣದ ವಿಕಾರಾಬಾದ್ ಜಿಲ್ಲೆಯ ಕಂದನುಲಿ ಗ್ರಾಮದ ನಿವಾಸಿ ನವೀನ್ ಅವರು ಸಲ್ಲಿಸಿದ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಿಸಲಾಗಿದೆ. ಲೋಕಾಯುಕ್ತ ಅಧಿಕಾರಿಗಳು ಹೇಳುವಂತೆ ಆರೋಪಿ ಈ ಹಿಂದೆ ದೂರುದಾರರಿಂದ ₹20,000 ಸ್ವೀಕರಿಸಿದ್ದರು ಮತ್ತು ಬಾಕಿ ಮೊತ್ತವನ್ನು ನೀಡುವಂತೆ ಒತ್ತಾಯಿಸುತ್ತಿದ್ದರು. ದೂರಿನ ಮೇರೆಗೆ ಕಾರ್ಯಾಚರಣೆ ನಡೆಸಿದ ಲೋಕಾಯುಕ್ತ ಪೊಲೀಸರು ಮಂಗಳವಾರ ಬೆಳಿಗ್ಗೆ ಆರೋಪಿ ₹25,000 ನಗದನ್ನು ಸ್ವೀಕರಿಸುತ್ತಿದ್ದಾಗ ರೆಡ್ ಹ್ಯಾಂಡ್ ಆಗಿ ಹಿಡಿಯಲಾಗಿದ್ದು, ಆತನ ಬಳಿಯಿಂದ ₹25,000 ನಗದನ್ನು ವಶಪಡಿಸಿಕೊಳ್ಳಲಾಗಿದೆ.

4. ನನ್ನ ದೂರು ನಿಲಕ್ಷ್ಯಿಸಲಾಗಿದೆ: ವಿಜಯಲಕ್ಷ್ಮಿ ದರ್ಶನ್

ಸೋಶಿಯಲ್ ಮೀಡಿಯಾದಲ್ಲಿ ತಮ್ಮ ವಿರುದ್ಧ ಅವಹೇಳನಕಾರಿ ಕಮೆಂಟ್ ಮಾಡಿದ್ದವರ ವಿರುದ್ಧ ನೀಡಿದ್ದ ದೂರಿನ ಸಂಬಂಧ ಪೊಲೀಸರು ಇದುವರೆಗೆ ಯಾವುದೇ ಕ್ರಮ ತೆಗೆದುಕೊಂಡಿಲ್ಲ ಎಂದು ವಿಜಯಲಕ್ಷ್ಮಿ ದರ್ಶನ್ ಸೋಷಿಯಲ್ ಮೀಡಿಯಾದಲ್ಲಿ ಅಸಮಾಧಾನ ಹೊರಹಾಕಿದ್ದಾರೆ. ಈ ಬಗ್ಗೆ ವಿಚಾರಿಸಲು ಇಂದು ಸ್ವತಃ ವಿಜಯಲಕ್ಷ್ಮಿ ಪೊಲೀಸ್ ಆಯುಕ್ತರ ಕಚೇರಿಗೆ ಬಂದಿದ್ದರು. ‘ನಮ್ಮ ದೇಶದಲ್ಲಿ ವ್ಯವಸ್ಥೆ ಮತ್ತು ಕಾನೂನು ಎಲ್ಲರಿಗೂ ಒಂದೇ ಎಂದು ನಾನು ಯಾವಾಗಲೂ ನಂಬಿದ್ದೆ. ಆದರೆ ನನ್ನ ವಿಚಾರದಲ್ಲಿ ಆ ನಂಬಿಕೆಯನ್ನು ಪ್ರಶ್ನಿಸುವಂತೆ ಮಾಡಿದೆ ಎಂದು ವಿಜಯಲಕ್ಷ್ಮಿ ದರ್ಶನ್ ಬರೆದಿದ್ದಾರೆ. ನಾನು ದಾಖಲಿಸಿದ ದೂರು ಸಂಪೂರ್ಣವಾಗಿ ನಿರ್ಲಕ್ಷಿಸಲ್ಪಟ್ಟಿದೆ, ಆದರೆ ಬೇರೊಬ್ಬ ಮಹಿಳೆಯ ದೂರಿನ ಮೇಲೆ ಒಂದೇ ದಿನದಲ್ಲಿ ಕ್ರಮ ಕೈಗೊಳ್ಳಲಾಗಿದೆ. ಇದು ನಿಜವಾಗಿಯೂ ನನಗೆ ಆಶ್ಚರ್ಯವನ್ನುಂಟು ಮಾಡುತ್ತದೆ. ನನ್ನ ದೂರು ಕಡಿಮೆ ಮುಖ್ಯವೇ ಅಥವಾ ಮೌಲ್ಯವೇ ಎಂದು ವಿಜಯಲಕ್ಷ್ಮಿ ದರ್ಶನ್ ಪ್ರಶ್ನಿಸಿದ್ದಾರೆ.

5. BMIC NICE ಯೋಜನೆ: HD Devegowda ಹೇಳಿಕೆ ನಿರಾಕರಿಸಿದ ನೈಸ್ ಕಂಪನಿ

BMIC/NICE ಯೋಜನೆಗೆ ಸಂಬಂಧಿಸಿದ ಪ್ರಕರಣದಲ್ಲಿ ಈ ಇಳಿ ವಯಸ್ಸಿನಲ್ಲಿ ನನ್ನನ್ನು ಎಳೆಯಲಾಗುತ್ತಿದೆ ಎಂಬ ಮಾಜಿ ಪ್ರಧಾನಮಂತ್ರಿ ಹೆಚ್.ಡಿ.ದೇವೇಗೌಡ ಅವರಹೇಳಿಕೆಯನ್ನು ನೈಸ್ ಕಂಪನಿ ನಿರಾಕರಿಸಿದೆ. ಈ ಕುರಿತು ಹೇಳಿಕೆ ನೀಡಿರುವ ಕಂಪನಿಯು, ದೇವೇಗೌಡ ಅವರ ಹೇಳಿಕೆ ವಾಸ್ತವಾಂಶಗಳಿಗೆ ವಿರುದ್ಧವಾಗಿದ್ದು, ತಪ್ಪುದಾರಿಗೆಳೆಯುವಂತಿದೆ ಎಂದು ಆರೋಪಿಸಿದೆ. ಪ್ರಸ್ತುತ ನಡೆಯುತ್ತಿರುವ ಪ್ರಕರಣಗಳು ದೇವೇಗೌಡ ಅವರು ಹಿಂದೆ ಕೈಗೊಂಡಿದ್ದ ಕ್ರಮಗಳ ನೇರ ಪರಿಣಾಮವಾಗಿವೆ. ನೈಸ್ ಲಿಮಿಟೆಡ್ ಅಥವಾ ಸರ್ಕಾರವು ಅವರ ಮೇಲೆ ಅಥವಾ ರೈತರ ಮೇಲೆ ಯಾವುದೇ ಹೊಸ ಪ್ರಕರಣಗಳನ್ನು ದಾಖಲಿಸಿಲ್ಲ ಎಂದು ಸ್ಪಷ್ಟಪಡಿಸಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com