ಕರ್ನಾಟಕ ಪಬ್ಲಿಕ್ ಸ್ಕೂಲ್ ಅಭಿವೃದ್ಧಿಗೆ ಏಷ್ಯಾ ಅಭಿವೃದ್ಧಿ ಬ್ಯಾಂಕ್ 2,000 ಕೋಟಿ ರೂ ಸಾಲ ನೀಡಲು ಮುಂದು: ಮಧು ಬಂಗಾರಪ್ಪ

ಎಡಿಬಿ ಸಾಲಗಳನ್ನು ಸುಲಭವಾಗಿ ಮಂಜೂರು ಮಾಡುವುದಿಲ್ಲ, ಎಡಿಬಿ ಮೊದಲ ಬಾರಿಗೆ ರಾಜ್ಯದ ಶಿಕ್ಷಣ ಇಲಾಖೆಗೆ ಸಾಲವನ್ನು ಮಂಜೂರು ಮಾಡಿದೆ ಎಂದರು. ಶಿಕ್ಷಣ ಇಲಾಖೆ ಹಲವಾರು ಸವಾಲುಗಳನ್ನು ಎದುರಿಸುತ್ತಿದೆ,
Madhu Bangarappa
ಸಚಿವ ಮಧು ಬಂಗಾರಪ್ಪ
Updated on

ಶಿವಮೊಗ್ಗ: ರಾಜ್ಯದಲ್ಲಿ ಹೊಸದಾಗಿ ಆರಂಭಿಸಲಾಗುತ್ತಿರುವ 450 ಕರ್ನಾಟಕ ಪಬ್ಲಿಕ್ ಶಾಲೆ (ಕೆಪಿಎಸ್‌)ಗಳಲ್ಲಿ ಮೂಲ ಸೌಕರ್ಯ ಕಲ್ಪಿಸಲು ಏಷ್ಯಾ ಅಭಿವೃದ್ಧಿ ಬ್ಯಾಂಕ್ 2,000 ಕೋಟಿ ರು. ದೀರ್ಘಾವಧಿ ಸಾಲ ನೀಡಲು ಮುಂದಾಗಿದೆ ಎಂದು ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆ ಸಚಿವ‌ ಮಧು ಬಂಗಾರಪ್ಪ ಹೇಳಿದರು.

ಇದರೊಂದಿಗೆ ರಾಜ್ಯ ಸರ್ಕಾರ 500 ಕೋಟಿ ಅನುದಾನ ನೀಡಲಿದೆ ಎಂದು ಮಾಹಿತಿ ನೀಡಿದ ಸಚಿವರು, ಎಡಿಬಿ ಸಾಲಗಳನ್ನು ಸುಲಭವಾಗಿ ಮಂಜೂರು ಮಾಡುವುದಿಲ್ಲ, ಎಡಿಬಿ ಮೊದಲ ಬಾರಿಗೆ ರಾಜ್ಯದ ಶಿಕ್ಷಣ ಇಲಾಖೆಗೆ ಸಾಲವನ್ನು ಮಂಜೂರು ಮಾಡಿದೆ ಎಂದರು. ಶಿಕ್ಷಣ ಇಲಾಖೆ ಹಲವಾರು ಸವಾಲುಗಳನ್ನು ಎದುರಿಸುತ್ತಿದೆ, ಜನರು ಈ ಸಮಸ್ಯೆಗಳನ್ನು ಪರಿಹರಿಸಲು ನಮ್ಮನ್ನು ಅಧಿಕಾರಕ್ಕೆ ತಂದಿದ್ದಾರೆ ಎಂದರು.

ಈ ಅನುದಾನದಲ್ಲಿ ಕೆಪಿಎಸ್ ಶಾಲೆಗಳಿಗೆ ನೂತನ ಕಟ್ಟಡ, ಮೈದಾನ ಸೇರಿದಂತೆ ಅಗತ್ಯ ಸೌಲಭ್ಯ ಕಲ್ಪಿಸಲು 6 ಕೋಟಿಯಿಂದ ₹ 8 ಕೋಟಿಯವರೆಗೆ ವ್ಯಯಿಸಲಾಗುವುದು. ಪಾಲಕರಿಂದ ಬೇಡಿಕೆ ಹೆಚ್ಚುತ್ತಿರುವ ಕಾರಣ ಮುಂಬರುವ ಶೈಕ್ಷಣಿಕ ವರ್ಷದಿಂದ ಎಲ್ಲ ಸರ್ಕಾರಿ ಶಾಲೆಗಳಲ್ಲೂ ಎಲ್‌ಕೆಜಿ– ಯುಕೆಜಿ ವಿಭಾಗ ಆರಂಭಿಸಲು ನಿರ್ಧರಿಸಲಾಗಿದೆ. ಇಲ್ಲಿಯವರೆಗೆ ಆಯ್ದ ಶಾಲೆಗಳಲ್ಲಿ ಪ್ರಾಯೋಗಿಕವಾಗಿ ಈ ತರಗತಿಗಳು ನಡೆಯುತ್ತಿವೆ ಎಂದರು.

ಸರ್ಕಾರಿ ಪದವಿಪೂರ್ವ ಕಾಲೇಜುಗಳ 25,000 ವಿದ್ಯಾರ್ಥಿಗಳಿಗೆ ಕಳೆದ ವರ್ಷ ನೀಟ್, ಸಿಇಟಿ ತರಬೇತಿ ನೀಡಲಾಗಿತ್ತು. ಈ ವರ್ಷದಿಂದ ಯಾವುದೇ ಮಿತಿ ಇರುವುದಿಲ್ಲ. ಎಲ್ಲ ವಿದ್ಯಾರ್ಥಿಗಳಿಗೂ ತರಬೇತಿಯ ವ್ಯವಸ್ಥೆ ಮಾಡಲಾಗುವುದು ಎಂದು ಅವರು ಹೇಳಿದರು.

Madhu Bangarappa
ಶಿಕಾರಿಪುರ ಸರ್ಕಾರಿ ಶಾಲೆಗಳು ಕರ್ನಾಟಕ ಪಬ್ಲಿಕ್ ಶಾಲೆಯಾಗಿ ಮೇಲ್ದರ್ಜೇಗೆ: ಮಧು ಬಂಗಾರಪ್ಪ

ಬೆಂಗಳೂರಿನಲ್ಲಿ ಶೈಕ್ಷಣಿಕವಾಗಿ ಉತ್ತಮವಾಗಿ ಕಾರ್ಯನಿರ್ವಹಿಸುವ ವಿದ್ಯಾರ್ಥಿಗಳು ಹೆಚ್ಚಾಗಿ ಉದ್ಯೋಗ ಸಂದರ್ಶನಗಳ ಸಮಯದಲ್ಲಿ ಕಷ್ಟಪಡುತ್ತಾರೆ. 10 ಅಭ್ಯರ್ಥಿಗಳಲ್ಲಿ ಒಬ್ಬರು ಮಾತ್ರ ಈ ಸಂದರ್ಶನಗಳಲ್ಲಿ ಉತ್ತೀರ್ಣರಾಗುತ್ತಾರೆ, ಉಳಿದವರು ಪ್ರಬಲ ಅರ್ಹತೆ ಹೊಂದಿದ್ದರೂ ಬೇರೆ ಉದ್ಯೋಗಗಳನ್ನು ಅವಲಂಬಿಸುತ್ತಾರೆ,ಈ ಸಮಸ್ಯೆ ಪರಿಹರಿಸಲು, ನಾವು ನಂದನ್ ನಿಲೇಕಣಿ ಫೌಂಡೇಶನ್‌ನ ಸಹಯೋಗದೊಂದಿಗೆ ಮೊದಲ ಬಾರಿಗೆ AI ಆಧಾರಿತ ಯೋಜನೆ ಪ್ರಾರಂಭಿಸುತ್ತಿದ್ದೇವೆ, ಇದು ವಿದ್ಯಾರ್ಥಿಗಳು ದೇಹ ಭಾಷೆ ಸೇರಿದಂತೆ ಅವರ ಸಂದರ್ಶನ ಕೌಶಲ್ಯಗಳನ್ನು ಸುಧಾರಿಸಲು ಮತ್ತು ಅವರ ಯಶಸ್ಸಿನ ಸಾಧ್ಯತೆಗಳನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ ಎಂದು ಅವರು ವಿವರಿಸಿದರು.

ಮಕ್ಕಳನ್ನು ಮತ್ತೆ ಶಾಲೆಗೆ ಕರೆತರುವ ಪ್ರಯತ್ನಗಳು ಸೇರಿದಂತೆ ಶಿಕ್ಷಣಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಪರಿಹರಿಸಲು ತಾಲ್ಲೂಕು ಮಟ್ಟದ ಶಿಕ್ಷಣ ಸಮಿತಿಗಳನ್ನು ರಚಿಸಲಾಗುವುದು ಎಂದು ಸಚಿವರು ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com