
ಚಿಕ್ಕಮಗಳೂರು: ಇತ್ತೀಚಿಗಷ್ಟೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮುಂದೆ ಆರು ನಕ್ಸಲ್ರು ಶರಣಾಗಿದ್ದರು. ಈ ವೇಳೆ ಶರಣಾಗದೆ ಉಳಿದಿದ್ದ ನಕ್ಸಲ್ ರವೀಂದ್ರ(ರವಿ) ಅವರು ಶನಿವಾರ ಮಧ್ಯಾಹ್ನ ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮುಂದೆ ಶರಣಾಗಿದ್ದಾರೆ.
ಶಾಂತಿಗಾಗಿ ನಾಗರಿಕ ವೇದಿಕೆ ಮುಖಂಡರು ರವೀಂದ್ರನ ಜತೆ ಮಾತುಕತೆ ನಡೆಸಿ ಮನವೊಲಿಸಿದ್ದು, ಇಂದು ಮಧ್ಯಾಹ್ನ ಜಿಲ್ಲಾಧಿಕಾರಿ ಮೀನಾ ನಾಗರಾಜ್ ಹಾಗೂ ಎಸ್ಪಿ ವಿಕ್ರಮ್ ಆಮ್ಟೆ ಅವರ ಮುಂದೆ ಶರಣಾದರು.
ಕಳೆದ 18 ವರ್ಷಗಳಿಂದ ಭೂಗತರಾಗಿದ್ದ ನಕ್ಸಲ್ ರವೀಂದ್ರ ಅವರ ವಿರುದ್ಧ ಒಟ್ಟು 26 ಪ್ರಕರಣಗಳಿವೆ. ನಕ್ಸಲ್ ರವೀಂದ್ರ ವಿರುದ್ಧ ಕರ್ನಾಟಕದಲ್ಲಿ 17, ಕೇರಳದಲ್ಲಿ 9 ಕೇಸ್ ದಾಖಲಾಗಿವೆ. ಚಿಕ್ಕಮಗಳೂರು ಜಿಲ್ಲೆಯೊಂದರಲ್ಲೇ 14 ಪ್ರಕರಣಗಳು ದಾಖಲಾಗಿವೆ.
ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ತಾಲೂಕಿನ ಕೋಟೆಹೊಂಡ ಗ್ರಾಮದ ರವೀಂದ್ರ, 18 ವರ್ಷಗಳಿಂದ ನಕ್ಸಲ್ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದರು. ನಕ್ಸಲ್ರ ನಾಯಕ ವಿಕ್ರಮ್ ಗೌಡ ಎನ್‌ಕೌಂಟರ್ ಬಳಿಕ ರವೀಂದ್ರ ನಾಪತ್ತೆಯಾಗಿದ್ದರು.
ರವೀಂದ್ರ ಶರಣಾಗತಿಗೆ ನಕ್ಸಲ್ ಶರಣಾಗತಿ ಕಮಿಟಿ ಹರಸಾಹಸ ಪಟ್ಟಿತ್ತು. ಕೊನೆಗೂ ರಾಜ್ಯ ಸರ್ಕಾರದ ನಕ್ಸಲ್ ಶರಣಾಗತಿ ಪ್ಯಾಕೇಜ್ ಒಪ್ಪಿ ರವಿಂದ್ರ ಶರಣಾಗಿದ್ದಾರೆ.
Advertisement