ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಇಂದು 2025 ನೇ ಸಾಲಿನ ಪೂರ್ಣ ಪ್ರಮಾಣದ ಬಜೆಟ್ ಮಂಡಿಸಿದರು. ಆದಾಯ ತೆರಿಗೆ ವಿನಾಯಿತಿ ಮಿತಿಯನ್ನು 12 ಲಕ್ಷಕ್ಕೆ ಏರಿಕೆ, ಮೂಲಸೌಕರ್ಯ ಅಭಿವೃದ್ಧಿಗೆ ರಾಜ್ಯಗಳಿಗೆ ಬಡ್ಡಿ ರಹಿತ ಸಾಲ, ಜಿಲ್ಲಾ ಆಸ್ಪತ್ರೆಗಳಲ್ಲಿ ಡೇಕೇರ್ ಕ್ಯಾನ್ಸರ್ ಕೇಂದ್ರಗಳ ಸ್ಥಾಪನೆ, 1 ಕೋಟಿ ಗಿಗ್ ಕಾರ್ಮಿಕರಿಗೆ ಐ-ಕಾರ್ಡ್, ಸ್ಟಾರ್ಟಪ್ ಗಳಿಗೆ 10 ಸಾವಿರ ಕೋಟಿ ರೂ.ಗಳ ನಿಧಿ ಯೋಜನೆ, ಕಿಸಾನ್ ಕ್ರೆಡಿಟ್ ಕಾರ್ಡ್ ಸಾಲ 5 ಲಕ್ಷಕ್ಕೆ ಏರಿಕೆ, ನವೀಕೃತ ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸಲು ಸಮಯ ಮಿತಿ ವಿಸ್ತರಣೆ, 36 ಜೀವ ರಕ್ಷಕ ಔಷಧಗಳ ಸೀಮಾ ಸುಂಕ ರದ್ದು, ಹಿರಿಯ ನಾಗರಿಕರಿಗೆ ಬಡ್ಡಿಯ ಮೇಲಿನ ತೆರಿಗೆ ಕಡಿತದ ಮಿತಿ 1 ಲಕ್ಷ ರೂಪಾಯಿಗಳಿಗೆ ಏರಿಕೆ ಮಾಡಿರುವುದು ಸೇರಿದಂತೆ ಹಲವು ಯೋಜನೆಗಳನ್ನು ಪ್ರಕಟಿಸಿದ್ದಾರೆ.
ಬಜೆಟ್ ಬಗ್ಗೆ ಪ್ರತಿಕ್ರಿಯೆ ನೀಡಿರುವ ಪ್ರಧಾನಿ ನರೇಂದ್ರ ಮೋದಿ, ಇದು ಜನರ ಹಣವನ್ನು ಜನರಿಗೆ ತಲುಪಿಸುವ ಬಜೆಟ್, ನಾಗರಿಕರನ್ನು ಅಭಿವೃದ್ಧಿಯಲ್ಲಿ ಪಾಲುದಾರರನ್ನಾಗಿಸುವ ಆಯ-ವ್ಯಯ ಎಂದು ಬಣ್ಣಿಸಿದ್ದರೆ, ನಿರ್ಮಲಾ ಸೀತಾರಾಮನ್ ಮಂಡಿಸಿರುವ ಬಜೆಟ್ ಬಜೆಟ್ ರಾಜ್ಯ ಮತ್ತು ದೇಶದ ದೃಷ್ಟಿಯಿಂದ ಬಹಳ ನಿರಾಶಾದಾಯಕ ಬಜೆಟ್ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಟೀಕಿಸಿದ್ದಾರೆ. ಬಜೆಟ್ ನಲ್ಲಿ ನಮ್ಮ ಬೇಡಿಕೆಗಳು ಬೇಡಿಕೆಗಳಾಗಿಯೇ ಉಳಿದಿವೆ. ಒಂದೇ ಒಂದು ಬೇಡಿಕೆಯೂ ಈಡೇರಿಲ್ಲ ಎಂದು ಸಿಎಂ ಅಸಮಾಧಾನ ವ್ಯಕ್ತಪಡಿಸಿದರು. ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ಸೋಮಣ್ಣ ಮಾತನಾಡಿ, ನಿರ್ಮಲಾ ಸೀತಾರಾಮನ್ ಬಜೆಟ್ ಭಾರತೀಯ ಮಧ್ಯಮ ವರ್ಗದವರ ಅಶೋತ್ತರಗಳಿಗೆ ಸ್ಪಂದಿಸುವ ಬಜೆಟ್ ಆಗಿದ್ದು, ಈ ಬಜೆಟ್‌ನಲ್ಲಿ ರೈಲ್ವೆ ಇಲಾಖೆಗೆ 2.65 ಲಕ್ಷ ಕೋಟಿ ನೀಡಲಾಗಿದೆ. ಕರ್ನಾಟಕಕ್ಕೆ ರೇಲ್ವೆ ಬಜೆಟ್ ನಲ್ಲಿ ರೂ.7564 ಕೋಟಿ ನೀಡಲಾಗಿದೆ. ಸಬ್ ಅರ್ಬನ್ ರೇಲ್ವೆಗೆ 350 ಕೋಟಿ ನೀಡಲಾಗಿದೆ ಎಂದು ಹೇಳಿದರು.
ನಕ್ಸಲ್ ನಾಯಕ ವಿಕ್ರಂ ಗೌಡ ಎನ್‌ಕೌಂಟರ್ ಸಂದರ್ಭದಲ್ಲಿ ನಾಪತ್ತೆಯಾಗಿದ್ದ ಮಾವೋವಾದಿ ರವೀಂದ್ರ ಪ್ರಮುಖ ಬೆಳವಣಿಗೆಯೊಂದರಲ್ಲಿ ಶನಿವಾರ ಮಧ್ಯಾಹ್ನ ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮುಂದೆ ಶರಣಾಗಿದ್ದಾರೆ. ಶಾಂತಿಗಾಗಿ ನಾಗರಿಕ ವೇದಿಕೆ ಮುಖಂಡರು ರವೀಂದ್ರ ಜತೆ ಮಾತುಕತೆ ನಡೆಸಿ ಮನವೊಲಿಸಿದ ನಂತರ ಅವರು ಶರಣಾಗಿದ್ದಾರೆ. ಕಳೆದ 18 ವರ್ಷಗಳಿಂದ ಭೂಗತರಾಗಿದ್ದ ನಕ್ಸಲ್ ರವೀಂದ್ರ ಅವರ ವಿರುದ್ಧ ಕೇರಳ, ಕರ್ನಾಟಕದಲ್ಲಿ ಒಟ್ಟು 26 ಪ್ರಕರಣಗಳಿವೆ. ರವೀಂದ್ರ ಶರಣಾಗತಿಗೆ ನಕ್ಸಲ್ ಶರಣಾಗತಿ ಕಮಿಟಿ ಹರಸಾಹಸ ಪಟ್ಟಿತ್ತು. ಇತ್ತೀಚೆಗೆ 6 ಮಂದಿ ನಕ್ಸಲರು ಸಿಎಂ ಸಿದ್ದರಾಮಯ್ಯ ಎದುರು ಶಸ್ತ್ರಾಸ್ತ್ರ ತ್ಯಜಿಸಿ ಶರಣಾಗಿದ್ದರು.
ಮಹತ್ವದ ಬೆಳವಣಿಗೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಆಪ್ತ ಹಾಗೂ ಅಳಂದ ಕಾಂಗ್ರೆಸ್ ಶಾಸಕ ಬಿಆರ್ ಪಾಟೀಲ್ ಶನಿವಾರ ಸಿಎಂ ರಾಜಕೀಯ ಸಲಹೆಗಾರ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ. ರಾಜೀನಾಮೆ ಪತ್ರವನ್ನು ಸಿಎಂ ಸಿದ್ದರಾಮಯ್ಯ ಅವರಿಗೆ ಈಗಾಗಲೇ ತಲುಪಿಸಿದ್ದೇನೆ ಎಂದು ಬಿಆರ್ ಪಾಟೀಲ್ ಮಾಧ್ಯಮಗಳಿಗೆ ತಿಳಿಸಿದ್ದಾರೆ. ಆದರೆ ರಾಜೀನಾಮೆಗೆ ಕಾರಣ ಏನು ಎಂಬ ಪ್ರಶ್ನೆಗೆ, ನಾನಾಗಿಯೇ ತನ್ನ ರಾಜೀನಾಮೆ ನೀಡಿದ್ದೇನೆ ಎಂದು ಹೇಳಿದ್ದಾರೆ. ಸಿದ್ದರಾಮಯ್ಯ ಸರ್ಕಾರ ಅಸ್ತಿತ್ವಕ್ಕೆ ಬಂದ ಬಳಿಕ ತಮಗೆ ಯಾವುದೇ ಸ್ಥಾನಮಾನ ನೀಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದ ಶಾಸಕರ ಪೈಕಿ ಬಿಆರ್ ಪಾಟೀಲ್ ಕೂಡ ಇದ್ದರು.
ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ, ಅವರ ಕುಟುಂಬದ ಸದಸ್ಯರು ಮತ್ತು ಸಂಬಂಧಿಗಳು ರಾಮನಗರ ಜಿಲ್ಲೆ ಬಿಡದಿ ಹೋಬಳಿಯ ಕೇತಗಾನಹಳ್ಳಿಯಲ್ಲಿ ಸರ್ಕಾರಿ ಜಮೀನುಗಳನ್ನು ಕಬಳಿಸಿದ್ದಾರೆ ಎಂಬ ಆರೋಪದ ಕುರಿತು ತನಿಖೆ ನಡೆಸಲು ಬೆಂಗಳೂರು ವಿಭಾಗದ ಪ್ರಾದೇಶಿಕ ಆಯುಕ್ತ ಅಮ್ಲಾನ್ ಆದಿತ್ಯ ಬಿಸ್ವಾಸ್ ಅಧ್ಯಕ್ಷತೆಯಲ್ಲಿ ವಿಶೇಷ ತನಿಖಾ ತಂಡ (ಎಸ್‌ಐಟಿ) ರಚಿಸಲಾಗಿದೆ. ಭೂ ಮಾಪನ, ಕಂದಾಯ ವ್ಯವಸ್ಥೆ ಮತ್ತು ಭೂ ದಾಖಲೆಗಳ ಇಲಾಖೆಯ ಜಂಟಿ ನಿರ್ದೇಶಕ ನಿಸಾರ್ ಅಹಮ್ಮದ್, ಬೆಂಗಳೂರು ವಿಭಾಗದ ಹೆಚ್ಚುವರಿ ಪ್ರಾದೇಶಿಕ ಆಯುಕ್ತ ಇಸ್ಲಾವುದ್ದೀನ್ ಗದ್ಯಾಳ, ಕಂದಾಯ ಆಯುಕ್ತಾಲಯದ ತಹಶೀಲ್ದಾರ್ ಗಣಪತಿ ಶಾಸ್ತ್ರಿ ಎಸ್ಐಟಿ ಸದಸ್ಯರನ್ನಾಗಿ ನೇಮಕ ಮಾಡಲಾಗಿದೆ. ಧಾರವಾಡದ ಸಮಾಜ ಪರಿವರ್ತನಾ ಸಮುದಾಯದ ಸಂಸ್ಥಾಪಕ ಎಸ್.ಆರ್. ಹಿರೇಮಠ ಅವರು ಹೈಕೋರ್ಟ್‌ನಲ್ಲಿ ಹೆಚ್ ಡಿ ಕುಮಾರಸ್ವಾಮಿ ವಿರುದ್ಧ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು.
Advertisement