ಮಂಡ್ಯ: ಮೈಕ್ರೋಫೈನಾನ್ಸ್ ನವರು ಕಿರುಕುಳ ಕೊಟ್ಟರೆ ನನಗೆ ಕರೆ ಮಾಡಿ- ಎಚ್.ಡಿ ಕುಮಾರಸ್ವಾಮಿ

'ಯಾರೇ ಮೈಕ್ರೋಫೈನಾನ್ಸ್ ನವರು ಬಂದು ಕಿರುಕುಳ ನೀಡಿದರೆ ಹೆದರಬೇಡಿ. ರೌಡಿಗಳನ್ನು ಕರೆದುಕೊಂಡು ಬಂದು ಗಲಾಟೆ ಮಾಡಿದರೆ ತಕ್ಷಣ ನನಗೆ ಕರೆ ಮಾಡಿ, ನಾನಿದ್ದೇನೆ'
HD Kumaraswamy
ಎಚ್ ಡಿ ಕುಮಾರಸ್ವಾಮಿ
Updated on

ಮಂಡ್ಯ: ಜಿಲ್ಲೆಯಲ್ಲಿ ಮೈಕ್ರೋಫೈನಾನ್ಸ್ ನವರ ಉಪಟಳ ಜಾಸ್ತಿಯಾಗಿದ್ದು, ಅವರಲ್ಲಿ ಯಾರೇ ಆಗಲಿ ನಿಮ್ಮ ಮನೆ ಬಳಿಗೆ ಬಂದು ಕಿರುಕುಳ ನೀಡಿದರೆ ತಕ್ಷಣವೇ ನನಗೆ ದೂರವಾಣಿ ಕರೆ ಮಾಡಿ ಎಂದು ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಅವರು ಧೈರ್ಯ ತುಂಬಿದರು.

ಶ್ರೀರಂಗಪಟ್ಟಣ ವಿಧಾನಸಭೆ ಕ್ಷೇತ್ರದ ಸಂತೆಕಸಲಗೆರೆ ಗ್ರಾಮದಲ್ಲಿ ಭೂಮಿ ಸಿದ್ದೇಶ್ವರಸ್ವಾಮಿ ದೇವಾಲಯ ಜೀರ್ಣೋದ್ಧಾರ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಕುಮಾರಸ್ವಾಮಿ, ಯಾರೇ ಮೈಕ್ರೋ ಫೈನಾನ್ಸ್ ನವರು ಬಂದು ಕಿರುಕುಳ ನೀಡಿದರೆ ಹೆದರಬೇಡಿ. ರೌಡಿಗಳನ್ನು ಕರೆದುಕೊಂಡು ಬಂದು ಗಲಾಟೆ ಮಾಡಿದರೆ ತಕ್ಷಣ ನನಗೆ ಕರೆ ಮಾಡಿ, ನಾನಿದ್ದೇನೆ. ನಿಮ್ಮ ಜೀವ ಬಹಳ ಮುಖ್ಯ. ಯಾವುದೇ ಕಾರಣಕ್ಕೂ ಜೀವ ತೆಗೆದುಕೊಳ್ಳುವ ಕೆಲಸ ಮಾಡಬೇಡಿ ಎಂದು ಅವರು ಹೇಳಿದರು.

ಬಡ್ಡಿ, ಚಕ್ರಬಡ್ಡಿ ವಿಧಿಸಿ ಜನರಿಗೆ ಹಿಂಸೆ ಕೊಡುತ್ತಿದ್ದಾರೆ. ಇದು ಅಮಾನವೀಯ. ಅಸಲು ತೀರುವುದೇ ಇಲ್ಲ ಎಂದ ಸಚಿವರು, ಹಳ್ಳಿಗಳ ಯುವಕರು ಆನ್ಲೈನ್ ಗೇಮ್ ಗಳ ಚಟಕ್ಕೆ ಸಿಕ್ಕಿಕೊಳ್ಳುತ್ತಿದ್ದಾರೆ. ಅಲ್ಲಿಯೂ ಸಾಲಕ್ಕೆ ಅವರು ಸಿಕ್ಕಿಕೊಂಡು ಕೊನೆಗೆ ಸಾವಿಗೆ ಶರಣಾಗುತ್ತಿದ್ದಾರೆ. ಇದು ಅತ್ಯಂತ ದಾರುಣ ಎಂದು ಸಚಿವರು ಕಳವಳ ವ್ಯಕ್ತಪಡಿಸಿದರು.

ಮೈಕ್ರೋ ಫೈನಾನ್ಸ್ ಉಪಟಳ ಕೆಲ ತಿಂಗಳ ಹಿಂದೆ ಚಾಮರಾಜನಗರದಲ್ಲಿ ಆರಂಭವಾಯಿತು. ರಾಜ್ಯದ ಉದ್ದಗಲಕ್ಕೂ ಸರಣಿ ಸಾವುಗಳು ಸಂಭವಿಸುತ್ತಿವೆ. ಆದರೆ, ನಮ್ಮ ರಾಜ್ಯದ ಕಾನೂನು ಸಚಿವರು ಇನ್ನೂ ಸಮಗ್ರವಾಗಿ ಚಿಂತನೆ ಮಾಡುತ್ತಿದ್ದಾರೆ! ಬೇರೆ ಯಾವುದೇ ವಿಷಯಕ್ಕೆ ಶರವೇಗದಲ್ಲಿ ನಿರ್ಧಾರ ಕೈಗೊಳ್ಳುವ ಸರಕಾರ ಮೈಕ್ರೋ ಫೈನಾನ್ಸ್ ಗಳಿಂದ ಜನರನ್ನು ರಕ್ಷಣೆ ಮಾಡಲು ಮೀನಮೇಷ ಎಣಿಸುತ್ತಿದೆ. ಇದು ಯಾಕೆ ಅನುಮಾನ ಕಾಡುತ್ತಿದೆ ಎಂದು ಅವರು ಹೇಳಿದರು.

HD Kumaraswamy
ಮೈಕ್ರೋಫೈನಾನ್ಸ್ ಕಂಪನಿ ಹಾವಳಿ ತಡೆಗೆ ಕಾನೂನು: ಸುಗ್ರೀವಾಜ್ಞೆ ಕರಡು ಮುಖ್ಯಮಂತ್ರಿಗೆ ರವಾನೆ

ಹಳ್ಳಿಯ ಬದುಕು ಅಯೋಮಯವಾಗಿದೆ. ಹಳೆಯ ಕಾಲದ ಹಳ್ಳಿಗಳು ಮರೆಯಾಗುತ್ತಿವೆ. ಮಾನವೀಯ ಮೌಲ್ಯಗಳು ಅಳಿದು ಹೋಗುತ್ತಿವೆ. ಭಾರತ ಇಂದು ಜಗತ್ತಿನ ಮೂರನೇ ಅತಿದೊಡ್ಡ ಜಾಗತಿಕ ಶಕ್ತಿಯಾಗಿ ಹೊರಹೊಮ್ಮುತ್ತಿದೆ. ಆದರೆ, ಸಮಾಜ ಕಲುಷಿತವಾಗುತ್ತಿದೆ. ಯುವ ಪೀಳಿಗೆ ದಾರಿ ತಪ್ಪುತ್ತಿದೆ. ನಾವು ಬೆಳೆಯಬೇಕು, ಅಭಿವೃದ್ಧಿ ಹೊಂದಬೇಕು ಹಾಗೂ ನಮ್ಮ ಸಮಾಜ ಸಂತೋಷವಾಗಿರಬೇಕು ಎಂದು ಸಚಿವರು ಆಶಿಸಿದರು.

ಹಿಂದೆ ಸಮಾಜದಲ್ಲಿ ಸೇವಾ ಮನೋಭಾವ, ನಿಸ್ವಾರ್ಥತೆ ಇತ್ತು. ಸಮಸ್ಯೆ ಬಂದರೆ ಗ್ರಾಮಸ್ಥರೇ ಕೂತು ಬಗೆಹರಿಸಿಕೊಳ್ಳುತ್ತಿದ್ದರು. ಈಗ ಅಂತಹ ಪರಿಸ್ಥಿತಿ ಇಲ್ಲ. ಸಣ್ಣ ತುಂಡು ಭೂಮಿಗಾಗಿ ಅಣ್ಣತಮ್ಮಂದಿರು ಜಗಳ ಮಾಡಿಕೊಂಡು ಪೊಲೀಸ್ ಠಾಣೆ, ಕೋರ್ಟ್ ಅಂತ ಅಲೆಯುತ್ತಿದ್ದಾರೆ. ನೆಮ್ಮದಿಯ ಬದುಕು ದೂರವಾಗಿದೆ. ಹಳ್ಳಿ ಅಭಿವೃದ್ಧಿಯಾಗಬೇಕು, ಆದರೆ ನಮ್ಮ ಮೌಲ್ಯಗಳನ್ನು ಬಿಟ್ಟು ಕೊಡಬಾರದು ಎಂದು ಸಚಿವರು ಹೇಳಿದರು. ರಾಜಕಾರಣಕ್ಕೆ ಪರಸ್ಪರ ಜಗಳ ಬೇಡ. ನಿಮ್ಮ ಮತ ನಿಮ್ಮ ಇಷ್ಟ. ರಾಜಕಾರಣ ನಿತ್ಯದ ಕೆಲಸವಾಗಬಾರದು ಎಂದು ಅವರು ಕಿವಿಮಾತು ಹೇಳಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com