ಕುದುರೆಮುಖ ಕಂಪನಿಯ ಮಂಗಳೂರು ಕಾರ್ಖಾನೆ ಮುಚ್ಚಿಸಲು ರಾಜ್ಯ ಸರ್ಕಾರದ ಷಡ್ಯಂತ್ರ: ಕುಮಾರಸ್ವಾಮಿ ಆರೋಪ

ಸಚಿವನಾಗಿ ಅಧಿಕಾರ ವಹಿಸಿಕೊಂಡ ಮೇಲೆ ಮೊದಲ ಸಹಿ ಹಾಕಿದ್ದೇ ಕುದುರೆಮುಖ ಕಬ್ಬಿಣ ಅದಿರು ಸಂಸ್ಥೆ ಉಳಿಸಲು.
ಕುದುರೆಮುಖ ಕಂಪನಿಯ ಮಂಗಳೂರು ಕಾರ್ಖಾನೆ ಮುಚ್ಚಿಸಲು ರಾಜ್ಯ ಸರ್ಕಾರದ ಷಡ್ಯಂತ್ರ: ಕುಮಾರಸ್ವಾಮಿ ಆರೋಪ
Updated on

ಹಾಸನ: ನನ್ನ ಮೇಲಿನ ರಾಜಕೀಯ ಹಗೆತನದಿಂದ ಕರ್ನಾಟಕದ ಪ್ರತಿಷ್ಠಿತ ಕೈಗಾರಿಕೆ, ಅಸಂಖ್ಯಾತರಿಗೆ ಉದ್ಯೋಗ ಕಲ್ಪಿಸಿದ್ದ ಕುದುರೆಮುಖ ಕಬ್ಬಿಣ ಅದಿರು ಸಂಸ್ಥೆ (KIOCL) ಮಂಗಳೂರು ಕಾರ್ಖಾನೆಯನ್ನು ಮುಚ್ಚಿಸಲು ರಾಜ್ಯ ಕಾಂಗ್ರೆಸ್ ಸರಕಾರ ಷಡ್ಯಂತ್ರ ನಡೆಸಿದೆ ಎಂದು ಕೇಂದ್ರದ ಸಚಿವ ಎಚ್. ಡಿ. ಕುಮಾರಸ್ವಾಮಿ ಗಂಭೀರ ಆರೋಪ ಮಾಡಿದ್ದಾರೆ.

ಚನ್ನರಾಯಪಟ್ಟಣದಲ್ಲಿ ಮಾಧ್ಯಮಗಳ ಜೊತೆಗೆ ಮಾತನಾಡಿದ ಕೇಂದ್ರ ಸಚಿವರು, ನಾನು ಕೇಂದ್ರ ಮಂತ್ರಿಯಾಗಿ ಏಳು ತಿಂಗಳಾಯಿತು. ನನ್ನ ಎರಡೂ ಇಲಾಖೆಗಳ ಎಲ್ಲಾ ಕಾರ್ಖಾನೆ, ಕಂಪನಿಗಳಿಗೆ ಭೇಟಿ ನೀಡಿದ್ದೇನೆ. ನನ್ನ ಮನವಿಗಳನ್ನು ಪ್ರಧಾನಿ ಮೋದಿ ಅವರು ದೊಡ್ಡ ಮನಸ್ಸಿನಿಂದ ಪುರಸ್ಕರಿದ್ದಾರೆ. ಆದರೆ, ಕರ್ನಾಟಕಕ್ಕೆ ಇಂತಹದ್ದು ಬೇಕು ಎಂದು ರಾಜ್ಯದಿಂದ ಯಾರೊಬ್ಬರೂ ನನ್ನ ಮುಂದೆ ಬಂದು ಚರ್ಚೆ ಮಾಡಿಲ್ಲ ಎಂದರು.

ಸಚಿವನಾಗಿ ಅಧಿಕಾರ ವಹಿಸಿಕೊಂಡ ಮೇಲೆ ಮೊದಲ ಸಹಿ ಹಾಕಿದ್ದೇ ಕುದುರೆಮುಖ ಕಬ್ಬಿಣ ಅದಿರು ಸಂಸ್ಥೆ ಉಳಿಸಲು. 2011ರಲ್ಲಿ ಸಿದ್ದರಾಮಯ್ಯ ಅವರ ಸರಕಾರವೇ ಒಪ್ಪಿಗೆ ನೀಡಿದ್ದ ಸಂಡೂರಿನ ದೇವದಾರಿ ಗಣಿ ಯೋಜನೆ ಅನುಷ್ಠಾನಕ್ಕೆ ಹಣಕಾಸು ನೆರವು ಪಡೆಯಲು ಅನುಮತಿ ಕೊಡುವ ಬಗ್ಗೆ ಹಣಕಾಸು ಸಚಿವಾಲಯಕ್ಕೆ ಶಿಫಾರಸು ಮಾಡಿದ್ದೆ. ಅದನ್ನೇ ತಿರುಚಿ ಹೇಳಿದ ಕಾಂಗ್ರೆಸ್ ನಾಯಕರು, ನನ್ನ ಮೇಲಿನ ರಾಜಕೀಯ ಹಗೆತನಕ್ಕೆ ನನ್ನ ಒಳ್ಳೆಯ ಪ್ರಯತ್ನಕ್ಕೆ ವ್ಯವಸ್ಥಿತವಾಗಿ ಅಡ್ಡಿಪಡಿಸಿದರು ಎಂದು ದೂರಿದರು.

ಕುದುರೆಮುಖ ಕಂಪನಿಯ ಮಂಗಳೂರು ಕಾರ್ಖಾನೆಯನ್ನು ಮುಚ್ಚಿಸಲು ರಾಜ್ಯ ಕಾಂಗ್ರೆಸ್ ಸರಕಾರ ಏನೇನು ಷಡ್ಯಂತ್ರ ಮಾಡಬೇಕೋ ಎಲ್ಲವನ್ನೂ ಮಾಡಿತು ಎಂದು ಅವರು ನೇರ ಆರೋಪ ಮಾಡಿದರಲ್ಲದೆ, ದೇವದಾರಿ ಗಣಿ ಯೋಜನೆಗೆ ರಾಜ್ಯ ಸರಕಾರ ಅಡ್ಡಿಪಡಿಸಿದ ಕಾರಣದಿಂದ ಮಂಗಳೂರಿನ ಕುದುರೆಮುಖ ಕಬ್ಬಿಣದ ಅದಿರು ಕಂಪನಿ ಕಾರ್ಖಾನೆಯಲ್ಲಿ ನೂರಾರು ಕಾರ್ಮಿಕರು ಕೆಲಸ ಕಳೆದುಕೊಂಡರು. ಅವರೆಲ್ಲರೂ ನನ್ನಲ್ಲಿ ಬಂದು ದುಃಖ ತೋಡಿಕೊಂಡರು. ನನ್ನ ರಾಜ್ಯದ ಪ್ರತಿಷ್ಠಿತ ಕಾರ್ಖಾನೆಗೆ ಬೀಗ ಬೀಳಬಾರದು ಎಂಬ ಸದುದ್ದೇಶದಿಂದ ಕುದುರೆಮುಖ ಕಂಪನಿಯನ್ನು ರಾಷ್ಟ್ರೀಯ ಖನಿಜಾಭಿವೃದ್ಧಿ ನಿಗಮ (NMDC) ದಲ್ಲಿ ವಿಲೀನ ಮಾಡುವ ನಿರ್ಧಾರ ಕೈಗೊಳ್ಳಲಾಗಿದೆ. ರಾಜ್ಯ ಸರಕಾರದ ರಾಜಕೀಯ ಪ್ರತಿಷ್ಠೆಯಿಂದ ಕೈಗಾರಿಕೆಗಳ ಕತ್ತು ಹಿಸುಕಲು ಪ್ರಯತ್ನ ಮಾಡುತ್ತಿದ್ದರೆ ನರೇಂದ್ರ ಮೋದಿ ಅವರ ಸರಕಾರ ಅವುಗಳಿಗೆ ಜೀವ ಕೊಡುವ ಕೆಲಸ ಮಾಡುತ್ತಿದೆ ಎಂದು ಕೇಂದ್ರ ಸಚಿವರು ಹೇಳಿದರು.

ಹೆಚ್‌ಎಂಟಿ ವಿಷಯದಲ್ಲಿಯೂ ಅಡ್ಡಿ: ಹೆಚ್‌ಎಂಟಿಗೆ ಜೀವ ಕೊಡಲು ನಾನು ಹೊರಟರೆ ಅದಕ್ಕೂ ರಾಜ್ಯ ಕಾಂಗ್ರೆಸ್ ಸರಕಾರ ಕೊಕ್ಕೆ ಹಾಕುತ್ತಿದೆ. ಅರಣ್ಯ ಇಲಾಖೆ ಭೂಮಿ ಅಂತ ಕಿತಾಪತಿ ಶುರು ಮಾಡಿದೆ. ಅವರಿಗೆ ಅಭಿವೃದ್ಧಿ ಬೇಕಿಲ್ಲ, ಕೇವಲ ರಾಜಕೀಯ ಬೇಕಷ್ಟೇ. ಜನತೆಗೆ ಶಾಶ್ವತವಾಗಿ ಬದುಕು ರೂಪಿಸಿ ಕೊಡುವ ಉದ್ದೇಶ ಇಲ್ಲ. ಕೇವಲ ಚುನಾವಣೆ ರಾಜಕೀಯಕ್ಕಾಗಿ ಶಾಶ್ವತ ಅಭಿವೃದ್ಧಿಯನ್ನು ಕಾಂಗ್ರೆಸ್ ಸರಕಾರ ಹಾಳು ಮಾಡುತ್ತಿದೆ ಎಂದು ಕೇಂದ್ರ ಸಚಿವ ಕುಮಾರಸ್ವಾಮಿ ಅವರು ಆಕ್ರೋಶ ವ್ಯಕ್ತಪಡಿಸಿದರು.

ಭದ್ರಾವತಿ ಕಾರ್ಖಾನೆಗೂ ಮರುಜೀವ: ಇದೇ ಹುರುಪಿನಲ್ಲಿ ಭದ್ರಾವತಿಯಲ್ಲಿ ಮೈಸೂರು ಮಹಾರಾಜರು ಮತ್ತು ಸರ್ ಎಂ ವಿಶ್ವೇಶ್ವರಯ್ಯ ಅವರು ಕಟ್ಟಿರುವ ಉಕ್ಕು ಮತ್ತು ಕಬ್ಬಿಣ ಕಾರ್ಖಾನೆ ಮುಚ್ಚಿ ಹೋಗಿದೆ. ಅದಕ್ಕೆ ಮರು ಜೀವ ಪ್ರಯತ್ನಕ್ಕೂ ಕೈ ಹಾಕಿದ್ದೇನೆ. ಅದಕ್ಕೆ ಈ ಕಾಂಗ್ರೆಸ್ ಸರಕಾರ ಎಷ್ಟರಮಟ್ಟಿಗೆ ನನಗೆ ಬೆಂಬಲ ಕೊಡುತ್ತೋ, ಬಿಡುತ್ತೋ ಗೊತ್ತಿಲ್ಲ. ಈಚೆಗೆ ಜಾರ್ಖಂಡ್ ರಾಜ್ಯದ ಬೋಕಾರೋ ಉಕ್ಕು ಕಾರ್ಖಾನೆಗೆ ಭೇಟಿ ನೀಡಿದ್ದೆ. ಅಲ್ಲಿ ವಿಸ್ತರಣಾ ಯೋಜನೆಗೆ ₹20,000 ಕೋಟಿ ಹೂಡಿಕೆ ಮಾಡುತ್ತಿದ್ದೇವೆ. ಬೇರೆ ರಾಜ್ಯ ರಾಜ್ಯಗಳಲ್ಲಿ ನಾವು ಕೆಲಸ ಮಾಡುತ್ತೇವೆ ಎಂದು ಹೋದರೆ ಅಲ್ಲಿನ ನಾಯಕರು ಪಕ್ಷಾತೀತವಾಗಿ ಸಹಕಾರ ಕೊಡುತ್ತಾರೆ. ನಮ್ಮವರಿಗೆ ಏನಾಗಿದೆ? ಕುಮಾರಸ್ವಾಮಿ ಕರ್ನಾಟಕಕ್ಕೆ ಬರುತ್ತಾನೆ ಎಂದರೆ ಇವರಿಗೆ ಹೊಟ್ಟೆನೋವು ಆಗುತ್ತದೆ ಎಂದು ಕೇಂದ್ರ ಸಚಿವರು ಬೇಸರ ವ್ಯಕ್ತಪಡಿಸಿದರು.

ಕುದುರೆಮುಖ ಕಂಪನಿಯ ಮಂಗಳೂರು ಕಾರ್ಖಾನೆ ಮುಚ್ಚಿಸಲು ರಾಜ್ಯ ಸರ್ಕಾರದ ಷಡ್ಯಂತ್ರ: ಕುಮಾರಸ್ವಾಮಿ ಆರೋಪ
HD ಕುಮಾರಸ್ವಾಮಿ ವಿರುದ್ಧದ ಭೂಕಬಳಿಕೆ ಆರೋಪ: ತನಿಖೆಗಾಗಿ ರಾಜ್ಯ ಸರ್ಕಾರ ಎಸ್‌ಐಟಿ ರಚನೆ

ಬಜೆಟ್ ಟೀಕಿಸುವ ನೈತಿಕತೆ ಕಾಂಗ್ರೆಸ್ ನಾಯಕರಿಗೆ ಇಲ್ಲ: ದೇಶದಲ್ಲಿ ಸುದೀರ್ಘ ಕಾಲ ಆಡಳಿತ ನಡೆಸಿದ ಕಾಂಗ್ರೆಸ್ ಪಕ್ಷ ರಾಜ್ಯಕ್ಕೆ ಏನು ಮಾಡಿದೆ ಎನ್ನುವುದು ಗೊತ್ತಿದೆ. ಕೇಂದ್ರ ಬಜೆಟ್ ಬಗ್ಗೆ ಟೀಕೆ ಮಾಡುವುದಕ್ಕೆ ಕಾಂಗ್ರೆಸ್‌ನವರಿಗೆ ಏನು ನೈತಿಕತೆ ಇದೆ ಎಂದು ಸಚಿವ ಕುಮಾರಸ್ವಾಮಿ ವಾಗ್ದಾಳಿ ನಡೆಸಿದರಲ್ಲದೆ, ವಿಕಸಿತ ಭಾರತ ಸಾಕಾರಕ್ಕೆ ಸಮಗ್ರ ಆಯವ್ಯಯವನ್ನು ಕೇಂದ್ರದ ಹಣಕಾಸು ಸಚಿವರಾದ ನಿರ್ಮಲಾ ಸೀತಾರಾಮನ್ ಅವರು ಮಂಡಿಸಿದ್ದಾರೆ. ಎಲ್ಲಾ ರಾಜ್ಯಗಳಿಗೂ ಆದ್ಯತೆ ಕೊಟ್ಟಿದ್ದಾರೆ ಎಂದರು.

ಸಿದ್ದರಾಮಯ್ಯ ಅವರ ಹೇಳಿಕೆಗಳನ್ನು ‌ಗಮನಿಸಿದ್ದೇನೆ. 1947ರಲ್ಲಿ ದೇಶಕ್ಕೆ ಸ್ವಾತಂತ್ರ್ಯ ಬಂತು. 1983ರವರೆಗೆ ಕಾಂಗ್ರೆಸ್ ರಾಜ್ಯ, ರಾಷ್ಟ್ರದಲ್ಲಿ ಅಧಿಕಾರದಲ್ಲಿತ್ತು. ಹಾರಂಗಿ, ಹೇಮಾವತಿ, ವಾಟೆಹೊಳೆ, ಕಬಿನಿ ಜಲಾಶಯಗಳ ನಿರ್ಮಾಣಕ್ಕೆ ಕೇಂದ್ರದಿಂದ ನಯಾಪೈಸೆ ದುಡ್ಡು ಕೊಡಲಿಲ್ಲ. ಐವತ್ತು ವರ್ಷ ದೇಶ ಆಳಿ ಈ ಯೋಜನೆಗಳಿಗೆ ದುಡ್ಡು ಕೊಟ್ಟರಾ ಅವರು. ದೇವೇಗೌಡರು ಪ್ರಧಾನಮಂತ್ರಿ ಆಗಿದ್ದಾಗ ಆಕ್ಸಿಲರೇಟೆಡ್ ಇರಿಗೇಷನ್ ಸ್ಕೀಂ ಅನ್ನು ಇಡೀ ದೇಶದಲ್ಲಿ ಜಾರಿಗೆ ತಂದರು. ಆಗ ಉತ್ತರ ಕರ್ನಾಟಕಕ್ಕೆ 15ರಿಂದ 20 ಸಾವಿರ ಕೋಟಿ ರೂಪಾಯಿ ಅನುದಾನ ಕೊಟ್ಟರು. ಕಾಂಗ್ರೆಸ್ ನವರು ಏನು ಕೊಟ್ಟರು. ಮೈಸೂರು ಮಹಾರಾಜರು, ಸರ್ ಎಂ ವಿಶ್ವೇಶ್ವರಯ್ಯ ಅವರು ಕಟ್ಟಿದ್ದ ಕೆಆರ್ ಎಸ್ ನಿಂದ ಹಾಗೂ ದೇವೇಗೌಡರ ಹೋರಾಟದ ಫಲವಾಗಿ ನಿರ್ಮಾಣವಾದ ಹಾರಂಗಿ, ಕಬಿನಿ ಜಲಾಶಯಗಳಿಂದ ತಮಿಳುನಾಡಿಗೆ ನೀರು ಬಿಟ್ಟುಕೊಂಡು ಕೂತಿದ್ದಾರೆ ಎಂದು ಟೀಕಾ ಪ್ರಹಾರ ನಡೆಸಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com