ಪಾದಚಾರಿ ಮಾರ್ಗದ ಮೇಲೆ ವಾಹನ ಚಲಾಯಿಸುವವರ ವಾಹನ ಪರವಾನಗಿಯನ್ನು (ಡಿಎಲ್) ರದ್ದು ಮಾಡಲು ನಗರದ ಸಂಚಾರಿ ಪೊಲೀಸರು ಮುಂದಾಗಿದ್ದಾರೆ. ಪಾದಚಾರಿಗಳ ಸುರಕ್ಷತೆ ದೃಷ್ಠಿಯಿಂದ ಸಂಚಾರಿ ಪೊಲೀಸರು ಈ ನಿಯಮ ಜಾರಿಗೆ ತಂದಿದ್ದಾರೆ. ಈ ಹಿಂದೆ ಪಾದಚಾರಿ ಮಾರ್ಗದ ಮೇಲೆ ಗಾಡಿ ಓಡಿಸಿದರೆ ಸಂಚಾರಿ ಪೊಲೀಸರು ದಂಡ ಹಾಕುತ್ತಿದ್ದರು. ದಂಡ ವಿಧಿಸಿದರೂ ಸವಾರರು ಮಾತ್ರ ನಿಯಮ ಉಲ್ಲಂಘಿಸುವುದನ್ನು ಮುಂದುವರೆಸಿದ್ದಾರೆ. ಈ ಹಿನ್ನೆಲೆಯಲ್ಲಿ ಸಂಚಾರಿ ಪೊಲೀಸರು ಈ ಕ್ರಮಕ್ಕೆ ಮುಂದಾಗಿದ್ದಾರೆ.
NAAC ಗ್ರೇಡ್ ಕೊಡಲು ಲಂಚಕ್ಕೆ ಬೇಡಿಕೆ ಇಟ್ಟ ಆರೋಪದ ಮೇಲೆ ದಾವಣಗೆರೆ ವಿವಿಯ ಪ್ರೊ.ಗಾಯತ್ರಿ ದೇವರಾಜ್ ಅವರನ್ನು ಹೈದರಾಬಾದ್ನಲ್ಲಿ ಸಿಬಿಐ ಅಧಿಕಾರಿಗಳು ಬಂಧಿಸಿದ್ದಾರೆ. ಗಾಯತ್ರಿ ಅವರು ದಾವಣಗೆರೆ ವಿಶ್ವವಿದ್ಯಾನಿಲಯದ ಮಾಜಿ ರಿಜಿಸ್ಟ್ರಾರ್ (ಆಡಳಿತ) ಆಗಿದ್ದರು ಮತ್ತು ಮೈಕ್ರೋಬಯಾಲಜಿ ಅಧ್ಯಯನ ವಿಭಾಗದ ಹಿರಿಯ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದರು. ಅವರು ರಾಷ್ಟ್ರೀಯ ಮೌಲ್ಯಮಾಪನ ಮತ್ತು ಮಾನ್ಯತೆ ಮಂಡಳಿಯ (NAAC) ಏಳು ಸದಸ್ಯರ ತಪಾಸಣೆ ತಂಡದ ಭಾಗವಾಗಿದ್ದರು. ಬಂಧಿತ ವ್ಯಕ್ತಿಗಳಲ್ಲಿ ತಪಾಸಣಾ ಸಮಿತಿಯ ಅಧ್ಯಕ್ಷರು ಮತ್ತು ಆರು ಸದಸ್ಯರು ಸೇರಿದ್ದಾರೆ. ಬಂಧಿತರಲ್ಲಿ ಆಂಧ್ರಪ್ರದೇಶದ ಗುಂಟೂರಿನಲ್ಲಿರುವ ಕೋನೇರು ಲಕ್ಷ್ಮಯ್ಯ ಶಿಕ್ಷಣ ಪ್ರತಿಷ್ಠಾನದ (ಕೆಎಲ್‌ಇಎಫ್) ಉಪಕುಲಪತಿಗಳು ಮತ್ತು ಇಬ್ಬರು ಕಾರ್ಯನಿರ್ವಾಹಕರು ಸೇರಿದ್ದಾರೆ. ಸಿಬಿಐ ಈ ಪ್ರಕರಣದ ಸಂಬಂಧ ವಿಜಯವಾಡ, ಚೆನ್ನೈ, ಬೆಂಗಳೂರು, ಪಲಮು, ಸಂಬಲ್‌ಪುರ್, ಭೋಪಾಲ್, ಬಿಲಾಸ್‌ಪುರ, ಗೌತಮ್ ಬುದ್ಧ ನಗರ ಮತ್ತು ನವದೆಹಲಿ ಸೇರಿದಂತೆ ವಿವಿಧ ನಗರಗಳ 20 ಸ್ಥಳಗಳಲ್ಲಿ ಶೋಧ ನಡೆಸಿತ್ತು.
ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿ ವಿಸಿ ನಾಲೆಗೆ ಬಿದ್ದ ಪರಿಣಾಮ ಓರ್ವ ವ್ಯಕ್ತಿ ಸಾವನ್ನಪ್ಪಿ, ಇಬ್ಬರು ನಾಪತ್ತೆಯಾಗಿರುವ ಘಟನೆ ಮಂಡ್ಯದಲ್ಲಿ ನಡೆದಿದೆ. ತಿಬ್ಬನಹಳ್ಳಿ ಗ್ರಾಮದ ಬಳಿ ನಡೆದ ಈ ಘಟನೆಯಲ್ಲಿ ಓರ್ವ ವ್ಯಕ್ತಿಯನ್ನು ರಕ್ಷಿಸಲಾಗಿದ್ದು, ಇಬ್ಬರು ನಾಪತ್ತೆಯಾಗಿದ್ದಾರೆ. ಕಾರಿನಲ್ಲಿದ್ದ ನಾಲ್ವರು ಮಂಡ್ಯದ ಹಾಲಹಳ್ಳಿ ಸ್ಲಂ ನಿವಾಸಿಗಳಾಗಿದ್ದು, ಈ ಪೈಕಿ ಕಾರು ಮಾಲೀಕ ಫಯಾಜ್ ಸಾವನ್ನಪ್ಪಿದ್ದರೆ, ನಯಾಜ್ ಎಂಬಾತನನ್ನು ರಕ್ಷಣೆ ಮಾಡಲಾಗಿದೆ. ಉಳಿದ ಇಬ್ಬರು ನಾಪತ್ತೆಯಾಗಿದ್ದು ಅವರಿಗಾಗಿ ಶೋಧ ಕಾರ್ಯಾಚರಣೆ ನಡೆಯುತ್ತಿದೆ. ಸದ್ಯ ಶಿವಳ್ಳಿ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಸರ್ಕಾರಿ ಶಾಲೆಯ ಶೌಚಾಲಯದಲ್ಲಿ 8 ವರ್ಷದ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಇಬ್ಬರು ಆರೋಪಿಗಳ ವಿರುದ್ಧ ಸೋಮವಾರ ಪೋಕ್ಸೋ ಪ್ರಕರಣ ದಾಖಲಿಸಿದ್ದಾರೆ. ಜನವರಿ 31 ರಂದು ನಡೆದಿದ್ದ ಘಟನೆ ತಡವಾಗಿ ಬೆಳಕಿಗೆ ಬಂದಿತ್ತು. ಕೇಕ್ ಕೊಡಿಸಿ, ಚಾಕು ಹಾಕುವುದಾಗಿ ಬೆದರಿಸಿ ಸರ್ಕಾರಿ ಶಾಲೆಯ ಶೌಚಾಲಯದಲ್ಲಿ 8 ವರ್ಷದ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಲಾಗಿತ್ತು. ಸರ್ಕಾರಿ ಶಾಲೆಯ ಎರಡನೇ ತರಗತಿಯ ವಿದ್ಯಾರ್ಥಿನಿಯಾಗಿರುವ ಬಾಲಕಿಯನ್ನು ಇಬ್ಬರು ಹುಡುಗರು ಶೌಚಾಲಯಕ್ಕೆ ಕರೆದೊಯ್ದಿದ್ದಾರೆ. ಬಳಿಕ ಬಟ್ಟೆ ತೆಗೆಯುವಂತೆ ಬೆದರಿಸಿ, ನಂತರ ಕೋಲಿನಿಂದ ಹೊಡೆದಿದ್ದಾರೆ ಎಂದು ಸಂತ್ರಸ್ಥೆ ಆರೋಪಿಸಿದ್ದಾರೆ.
ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನದಿಂದ ವಿಜಯೇಂದ್ರ ಅವರನ್ನು ಕೆಳಗಿಳಿಸಬೇಕೆಂದು ಆಗ್ರಹಿಸುತ್ತಿರುವ ಯತ್ನಾಳ್ ನೇತೃತ್ವದ ಬಿಜೆಪಿಯ ಭಿನ್ನಮತೀಯ ನಾಯಕರು ಇಂದು ದೆಹಲಿಗೆ ತೆರಳಿದ್ದಾರೆ. ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ಮಾಜಿ ಸಂಸದ ಜಿ.ಎಂ. ಸಿದ್ದೇಶ್ವರ್, ಶಾಸಕ ಬಿ.ಪಿ. ಹರೀಶ್, ಮಾಜಿ ಸಚಿವರಾದ ಅರವಿಂದ ಲಿಂಬಾವಳಿ, ರಮೇಶ್ ಜಾರಕಿಹೊಳಿ, ಕುಮಾರ ಬಂಗಾರಪ್ಪ, ಮುಖ್ಯಮಂತ್ರಿಗಳ ಮಾಜಿ ರಾಜಕೀಯ ಕಾರ್ಯದರ್ಶಿ ಎನ್.ಆರ್. ಸಂತೋಷ್ ಸೇರಿದಂತೆ ಹಲವು ಮಂದಿ ಭಿನ್ನಮತೀಯ ನಾಯಕರು ಇನ್ನು ಮೂರು ದಿನ ದೆಹಲಿಯಲ್ಲೇ ಉಳಿಯುವ ಈ ಭಿನ್ನಮತೀಯ ನಾಯಕರು ಕೇಂದ್ರದ ಗೃಹ ಸಚಿವ ಅಮಿತ್ ಶಾ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ರಾಜ್ಯ ಬಿಜೆಪಿ ಉಸ್ತುವಾರಿ ರಾಧಾ ಮೋಹನ್‌ದಾಸ್ ಸೇರಿದಂತೆ ಹೈಕಮಾಂಡ್ ನಾಯಕರನ್ನು ಭೇಟಿ ಮಾಡಿ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಹಿರಿಯರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುತ್ತಿಲ್ಲ. ಸರ್ವಾಧಿಕಾರಿ ಧೋರಣೆ ಹೊಂದಿದ್ದಾರೆ. ಅವರನ್ನು ಮತ್ತೆ ಅಧ್ಯಕ್ಷರನ್ನಾಗಿ ಮುಂದುವರೆಸಿದರೆ ಪಕ್ಷ ಸಂಘಟನೆ ಸಾಧ್ಯವಿಲ್ಲ ಎಂದು ದೂರು ನೀಡಲಿದ್ದಾರೆ.
Advertisement