
ಬೆಂಗಳೂರು: ಹಿಟ್ಟಿನಲ್ಲಿ ತುಂಬಿದ್ದ ಕಚ್ಚಾ ಬಾಂಬ್ ಸ್ಫೋಟಗೊಂಡ ಪರಿಣಾಮ ಎಮ್ಮೆಯೊಂದರ ಬಾಯಿಗೆ ಗಂಭೀರವಾಗಿ ಗಾಯವಾಗಿರುವ ಘಟನೆ ಬೆಂಗಳೂರು-ಕನಕಪುರ ಮುಖ್ಯರಸ್ತೆಯಲ್ಲಿ ನಗರದ ಹೊರವಲಯದಲ್ಲಿ ನಡೆದಿದೆ.
ಇದು ಕಾಡುಹಂದಿ ಕಳ್ಳ ಬೇಟೆಗಾರರ ಕೃತ್ಯವಾಗಿದೆ ಎಂದು ಶಂಕಿಸಿರುವ ಪೊಲೀಸರು ಅವರ ಪತ್ತೆಗೆ ಮುಂದಾಗಿದ್ದಾರೆ. ಬೆಂಗಳೂರು-ಕನಕಪುರ ಮುಖ್ಯರಸ್ತೆಯಲ್ಲಿ ನಗರದ ಹೊರವಲಯದಲ್ಲಿ ಸಾಕಷ್ಟು ಕಾಡುಹಂದಿಗಳನ್ನು ಬೇಟೆಯಾಡಲು ಕಳ್ಳ ಬೇಟೆಗಾರರು ಹವಣಿಸುತ್ತಿರುತ್ತಾರೆ, ಇದಕ್ಕಾಗಿ ಅವರು ಕಚ್ಚಾ ಬಾಂಬ್‌ಗಳನ್ನು ಎಸೆದಿದ್ದರು. ತಿನ್ನುವ ಪದಾರ್ಥ ಎಂದು ಎಮ್ಮೆ ಅದಕ್ಕೆ ಬಾಯಿ ಹಾಕಿದಾಗ ಅಡಗಿಸಿಟ್ಟಿದ್ದ ಕಚ್ಚಾ ಬಾಂಬ್ ಸ್ಫೋಟಗೊಂಡಿದೆ, ಪರಿಣಾಮ ತೀವ್ರ ಸುಟ್ಟ ಗಾಯಗಳಾಗಿವೆ. ಕಳೆದ ಒಂದು ವರ್ಷದಲ್ಲಿ ಇದು ನಾಲ್ಕನೇ ಘಟನೆಯಾಗಿದೆ. ಉಯ್ಯಂಬಳ್ಳಿಯ ಯಳಗಳ್ಳಿ ಗ್ರಾಮದಲ್ಲಿ ಶುಕ್ರವಾರ ಸಂಜೆ 5.30ರ ಸುಮಾರಿಗೆ ಈ ಘಟನೆ ನಡೆದಿದೆ.
ಉಯ್ಯಂಬಳ್ಳಿ ನಿವಾಸಿ ಡಿ.ಗೋವಿಂದಪ್ಪ ಎಂಬುವರು ಅಪರಿಚಿತ ಕಾಡುಹಂದಿ ಬೇಟೆಗಾರರ ವಿರುದ್ಧ ಸಾತನೂರು ಪೊಲೀಸರಿಗೆ ದೂರು ನೀಡಿದ್ದಾರೆ. ಹಿಟ್ಟನ್ನು ತಿನ್ನಲು ಹೋದಾಗ ಬಾಂಬ್ ಸ್ಫೋಟಿಸಿ ಎಮ್ಮೆ ಮುಖಕ್ಕೆ ಗಾಯಗಳಾಗಿವೆ ಎಂದು ದೂರುದಾರ ಗೋವಿಂದಪ್ಪ ಅವರ ಸೋದರಳಿಯ ಸಂಪತ್ ಎಂಬುವರು ತಿಳಿಸಿದ್ದಾರೆ.
ಆರೋಪಿಯು ಹಿಟ್ಟನ್ನು ಹುಲ್ಲಿನಲ್ಲಿ ಬಚ್ಚಿಟ್ಟು ಬಯಲಿನಲ್ಲಿ ಎಸೆದಿದ್ದ. ನಾವೆಲ್ಲ ಮನೆಯಿಂದ ಹೊರ ಬರುವಾಗ ಭಾರಿ ಸ್ಫೋಟ ಸಂಭವಿಸಿತು. ನಮ್ಮ ಉಯ್ಯಂಬಳ್ಲಿ ಗ್ರಾಮವು ಸಂಗಮ ಅರಣ್ಯ ಪ್ರದೇಶಕ್ಕೆ ಸಮೀಪದಲ್ಲಿದೆ , ಹೀಗಾಗಿ ಕಾಡುಹಂದಿ ಬೇಟೆಗಾರರು ಅವುಗಳನ್ನು ಬೇಟೆಯಾಡಲು ಹಿಟ್ಟಿನೊಂದಿಗೆ ಅಂಟಿಕೊಂಡಿರುವ ಸ್ಫೋಟಕಗಳನ್ನು ಎಸೆಯುತ್ತಾರೆ ಎಂದು ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ತಿಳಿಸಿದ್ದಾರೆ.
ಕಾಡುಹಂದಿಯನ್ನು ಅದರ ಮಾಂಸ ಮತ್ತು ಚರ್ಮಕ್ಕಾಗಿ ಬೇಟೆಯಾಡುವ ಸಲುವಾಗಿ ಆರೋಪಿಗಳು ಗನ್‌ಪೌಡರ್‌ನಿಂದ ತಯಾರಿಸಿದ ಕಚ್ಚಾ ಬಾಂಬ್ ಎಸೆದಿದ್ದಾರೆ ಎಂದು ತೋರುತ್ತದೆ. ಹೆಚ್ಚಿನ ಕಾಡುಹಂದಿ ಬೇಟೆಗಾರರು ನೆರೆಯ ತಮಿಳುನಾಡಿನಿಂದ ಬರುತ್ತಾರೆ. ಸ್ಥಳೀಯರ ಕೈವಾಡವನ್ನೂ ತಳ್ಳಿಹಾಕುವಂತಿಲ್ಲ. 2-3 ಕಿಮೀ ಸಮೀಪದಲ್ಲಿ ಕಾಡುಗಳಿರುವುದರಿಂದ ಕಾಡುಹಂದಿಗಳು ಹೇರಳವಾಗಿವೆ ಎಂದು ಅಧಿಕಾರಿಯೊಬ್ಬರು ತಿಳಿಸಿದರು. ಅಪರಿಚಿತ ಆರೋಪಿಗಳ ವಿರುದ್ಧ 1908ರ ಸ್ಫೋಟಕ ವಸ್ತುಗಳ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ.
Advertisement