
ಬೆಂಗಳೂರು: ವಿಧಾನಸೌಧದ ಸುತ್ತಮುತ್ತ ಬೀದಿನಾಯಿಗಳ ಕಾಟ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಇದಕ್ಕೆ ಕಡಿವಾಣ ಹಾಕಲು ಶಕ್ತಿ ಕೇಂದ್ರದ ಆವರಣದಲ್ಲಿಯೇ ಶ್ವಾನಗಳಿಗೆ ಶೆಲ್ಟರ್ ನಿರ್ಮಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ.
ಈ ಸಂಬಂಧ ಇಂದು ವಿಧಾನಸಭೆ ಸ್ವೀಕರ್ ಯುಟಿ ಖಾದರ್ ಅವರು, ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ, ರಾಜ್ಯ ಸರ್ಕಾರದ ಮುಖ್ಯಕಾರ್ಯದರ್ಶಿ ಶಾಲಿನಿ ರಜನೀಶ್, ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಸೇರಿದಂತೆ ಹಿರಿಯ ಪೊಲೀಸ್ ಅಧಿಕಾರಿಗಳ ಜೊತೆ ಸಭೆ ನಡೆಸಿದ್ದು, ವಿಧಾನಸೌಧದ ಆವರಣದಲ್ಲೇ ಬೀದಿ ನಾಯಿಗಳಿಗೆ ಶೆಲ್ಟರ್ ನಿರ್ಮಿಸಲು ತೀರ್ಮಾನಿಸಲಾಗಿದೆ.
ಸಭೆಯಲ್ಲಿ ಬೀದಿ ನಾಯಿಗಳ ಹಾವಳಿ ನಿಯಂತ್ರಣ ಮತ್ತು ಶ್ವಾನಗಳ ರಕ್ಷಣೆಗೆ ಸಂಬಂಧಿಸಿದಂತೆ ಕೈಗೊಳ್ಳಬಹುದಾದ ಕ್ರಮಗಳ ಕುರಿತು ಚರ್ಚಿಸಲಾಯಿತು.
ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಯುಟಿ ಖಾದರ್ ಅವರು, ಮನುಷ್ಯರಿಗೆ ಬದುಕುವ ಹಕ್ಕು ಇರುವಂತೆಯೇ ಪ್ರಾಣಿಗಳಿಗೂ ಬದುಕುವ ಹಕ್ಕು ಇದೆ. ಆದರೆ ಪ್ರಾಣಿಗಳಿಗೆ ಮಾತನಾಡಲು ಆಗುತ್ತಾ, ಅವುಗಳ ಕಷ್ಟವನ್ನು ನಾವು ನೋಡಬೇಕು ಎಂದರು.
ವಿಧಾನಸೌಧ ವ್ಯಾಪ್ತಿಯಲ್ಲಿ ವಾಕಿಂಗ್ ಮಾಡುವಾಗ ನಾಯಿ ಹಾವಳಿ ಹೆಚ್ಚಾಗಿದೆ. ಇದರಿಂದ ವಿಧಾನಸೌಧ ನೋಡಲು ಮಕ್ಕಳು ಬಂದಾಗ ಭಯಭೀತರಾಗುತ್ತಾರೆ. ವಿಧಾನಸೌಧದ ಆವರಣದಿಂದ ಸ್ಥಳಾಂತರದ ಬಗ್ಗೆ ಚರ್ಚಿಸಿದ್ದೇವೆ. ಸಭಾಪತಿ, ಆರೋಗ್ಯ ಸಚಿವರು, ಸಿಎಸ್, ಡಿಪಿಎಆರ್, ಪೊಲೀಸ್. ಲೋಕೋಪಯೋಗಿ ಇಲಾಖೆ ಅಧಿಕಾರಿಗಳ ಜೊತೆ ಸಭೆ ಮಾಡಿದ್ದು, ನಾಯಿಗಳನ್ನು ಎಲ್ಲಿ ಬಿಡುತ್ತಾರೆ ಎನ್ನುವ ಬಗ್ಗೆ ಪರ, ವಿರೋಧ ಚರ್ಚೆ ಆಯ್ತು ಎಂದರು.
ವಿಧಾನಸೌಧದ ಸುತ್ತಮುತ್ತ ಸುಮಾರು 54 ನಾಯಿಗಳಿವೆ. ಮಳೆಗಾಲ, ಬೇಸಿಗೆ ಕಾಲದಲ್ಲಿ ಎಲ್ಲಿ ಜಾಗ ಸಿಗುತ್ತೋ ಅಲ್ಲಿಗೆ ಬರುತ್ತವೆ. ವಿಧಾನಸೌಧ ಸುತ್ತಮುತ್ತ ಇರುವ ನಾಯಿಗಳನ್ನು ಸ್ಥಳಾಂತರಿಸಲಾಗಲ್ಲ. ವಿಧಾನಸೌಧದ ಆವರಣದಲ್ಲೇ ನಾಯಿಗಳಿಗೆ ಸ್ಥಳ ನಿಗದಿ ಮಾಡುವುದು. ಅವುಗಳನ್ನು ನೋಡಿಕೊಳ್ಳಲು NGOಗೆ ನೀಡಿದ್ರೆ ಯೋಗಕ್ಷೇಮ ನೋಡಿಕೊಳ್ಳುತ್ತಾರೆ. ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಸ್ಥಳ ಪರಿಶೀಲನೆ ಮಾಡುತ್ತಾರೆ. 15 ದಿನದೊಳಗೆ ಟೆಂಡರ್ ಕರೆಯುತ್ತೇವೆ ಎಂದು ಮಾಹಿತಿ ನೀಡಿದರು.
Advertisement