
ಬೆಂಗಳೂರು: ದೇಶಾದ್ಯಂತ ಮಹಾಕುಂಭಮೇಳದ ಬಗ್ಗೆ ಚರ್ಚೆ ನಡೆಯುತ್ತಿದೆ.
ಸಂಸತ್ ಅಧಿವೇಶನದ ಉಭಯ ಸದನಗಳಲ್ಲೂ ಕುಂಭಮೇಳ ಕಾಲ್ತುಳಿತದ ಬಗ್ಗೆ ವಿಪಕ್ಷಗಳು ಪ್ರಸ್ತಾಪಿಸಿದ್ದು, ಮೃತರ ನಿಖರ ಸಂಖ್ಯೆಗಳನ್ನು ಸರ್ಕಾರ ತಿಳಿಸಬೇಕು, ಸರ್ಕಾರ ನಿಖರ ಸಂಖ್ಯೆಗಳನ್ನು ಮುಚ್ಚಿಡುತ್ತಿದೆ ಎಂದು ವಿಪಕ್ಷಗಳ ಸಂಸದರು ಗದ್ದಲವೆಬ್ಬಿಸುತ್ತಿದ್ದಾರೆ. ಈ ನಡುವೆ ರಾಜ್ಯದಲ್ಲಿ ಕಾಲ್ತುಳಿತ ಸಂತ್ರಸ್ತರ ಕುಟುಂಬ ಸದಸ್ಯರೊಬ್ಬರು ಸಾಮಾಜಿಕ ಜಾಲತಾಣದಲ್ಲಿ ಬರೆದಿರುವ ಅಂಶವೊಂದು ಗಮನಸೆಳೆಯುತ್ತಿದೆ.
ಕುಂಭಮೇಳದಲ್ಲಿ ಉಂಟಾದ ಕಾಲ್ತುಳಿತದಲ್ಲಿ ಬೆಳಗಾವಿಯ ನಾಲ್ವರು ಸಾವನ್ನಪ್ಪಿದ್ದರು. ಅವರ ಕುಟುಂಬದ ಸದಸ್ಯರೊಬ್ಬರು ಯುಪಿ ಸರ್ಕಾರದ ವ್ಯವಸ್ಥೆಯ ಪಾರದರ್ಶಕತೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಬೆಳಗಾವಿಯ ವಡಗಾವಿ ನಿವಾಸಿ ಜ್ಯೋತಿ ಹತ್ತರವಾಠ(50) ಮತ್ತು ಅವರ ಮಗಳು ಮೇಘಾ(18) ಹತ್ತರವಾಠ ಕಾಲ್ತುಳಿತದಲ್ಲಿ ಸಾವನ್ನಪ್ಪಿದ್ದರು. ಜ್ಯೋತಿ ಹತ್ತರವಾಠ ಅವರ ಸಹೋದರ ಗುರುರಾಜ್ ಹುದ್ದಾರ್ ಸಾಮಾಜಿಕ ಜಾಲತಾಣದಲ್ಲಿ ಬರೆದಿದ್ದು
"ನನ್ನ ಅಕ್ಕ ಹಾಗೂ ಅಕ್ಕನ ಮಗಳು ಕಾಲ್ತುಳಿತದಲ್ಲಿ ತೀರಿಹೋದರು ಅವರ ಶವಗಳ ಜೊತೆಗೆ ಅವರು ಧರಿಸಿದ ಎಲ್ಲಾ ಆಭರಣಗಳು 1600 ಕಿ.ಮೀ ದೂರದ ನಮ್ಮ ಮನೆಗೆ ಬಂದು ಸೇರಿದವು. ಇದು ಪ್ರಾಮಾಣಿಕತೆಯ ಉದಾಹರಣೆ ಜೊತೆಗೆ ವ್ಯವಸ್ಥೆ ಎಷ್ಟು ಅಚ್ಚುಕಟ್ಟಾಗಿದೆ ಎನ್ನುವುದನ್ನು ಹೇಳುತ್ತಿದೆ" ಎಂದು ಹೇಳಿದ್ದಾರೆ.
ಗುರುರಾಜ್ ಹುದ್ದಾರ್ ಕಾಮೆಂಟ್ ನ ಸ್ಕ್ರೀನ್ ಶಾಟ್ ಎಲ್ಲೆಡೆ ವೈರಲ್ ಆಗತೊಡಗಿದ್ದು, ಯೋಗಿ ಆದಿತ್ಯನಾಥ್ ಸರ್ಕಾರದ ವಿರುದ್ಧ ಕೇಳಿಬರುತ್ತಿರುವ ಟೀಕೆಗಳಿಗೆ ಸಮರ್ಥನೆಯಾಗಿ ಜನತೆ ಹಂಚಿಕೊಳ್ಳತೊಡಗಿದ್ದಾರೆ. ಬಿಜೆಪಿ ಶಾಸಕ ಸುರೇಶ್ ಕುಮಾರ್ ಸಹ ಈ ಸ್ಕ್ರೀನ್ ಶಾಟ್ ಹಂಚಿಕೊಂಡಿದ್ದು, ಪ್ರಾಮಾಣಿಕತೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
Advertisement