
ಬೆಂಗಳೂರು: 7.17 ಕೋಟಿ ರೂ. ಬ್ಯಾಂಕ್ ವಂಚನೆ ಪ್ರಕರಣದಲ್ಲಿ ಮಾಜಿ ಸಚಿವ ಮತ್ತು ಬಿಜೆಪಿ ನಾಯಕ ಮಾಲೂರು ಕೃಷ್ಣಯ್ಯ ಶೆಟ್ಟಿ ಅವರಿಗೆ ವಿಶೇಷ ನ್ಯಾಯಾಲಯ ಗುರುವಾರ ಮೂರು ವರ್ಷ ಜೈಲು ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.
ನಕಲಿ ದಾಖಲೆ ನೀಡಿ ಕೋಟ್ಯಾಂತರ ರೂಪಾಯಿ ಸಾಲ ಪಡೆದು ವಂಚಿಸಿದ ಪ್ರಕರಣದಲ್ಲಿ ಮಾಜಿ ಸಚಿವ ಕೃಷ್ಣಯ್ಯ ಶೆಟ್ಟಿ, ಎಂಟಿವಿ ರೆಡ್ಡಿ, ಶ್ರೀನಿವಾಸ್ ಹಾಗೂ ಮುನಿರಾಜು ನಾಲ್ವರೂ ತಪ್ಪಿತಸ್ಥರು ಎಂದು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಇಂದು ಬೆಳಗ್ಗೆ ತೀರ್ಪು ನೀಡಿತ್ತು. ಆದರೆ ಶಿಕ್ಷೆಯ ಪ್ರಮಾಣವನ್ನು ಸಂಜೆಗೆ ಕಾಯ್ದಿರಿಸಿತ್ತು.
ಇದೀಗ ಶಿಕ್ಷೆಯ ಪ್ರಮಾಣ ಪ್ರಕಟಿಸಿದ ಕೋರ್ಟ್, 120ಬಿ, 420, 467, 471 ಸೆಕ್ಷನ್ಗಳಡಿಯಲ್ಲಿ ಎಂಟಿವಿ ರೆಡ್ಡಿ, ಕೃಷ್ಣಯ್ಯ ಶೆಟ್ಟಿ, ಮುನಿರಾಜು, ಕೆ.ಶ್ರೀನಿವಾಸಗೆ ತಲಾ 1 ಲಕ್ಷ ರೂ. ದಂಡದ ಜೊತೆಗೆ 3 ವರ್ಷ ಶಿಕ್ಷೆ ವಿಧಿಸಿದೆ. ಆದರೆ ಕೋರ್ಟ್, ಕೃಷ್ಣಯ್ಯ ಶೆಟ್ಟಿಗೆ ಮೇಲ್ಮನವಿ ಸಲ್ಲಿಸಲು ಅವಕಾಶ ನೀಡಿದ್ದು, ವಿಧಿಸಲಾಗಿರುವ ಶಿಕ್ಷೆಯನ್ನು ಒಂದು ತಿಂಗಳ ಕಾಲ ಅಮಾನತ್ತಿನಲ್ಲಿಟ್ಟಿದೆ.
ಶಿಕ್ಷೆಯನ್ನು ಅಮಾನತ್ತಿನಲ್ಲಿಟ್ಟು ಜಾಮೀನು ನೀಡುವಂತೆ ಕೃಷ್ಣಯ್ಯ ಶೆಟ್ಟಿ ಪರ ವಕೀಲ ನಾಗೇಂದ್ರ ನಾಯಕ್ ಅವರು ಕೋರ್ಟ್ಗೆ ಮನವಿ ಮಾಡಿದರು. ಈ ಮನವಿಯನ್ನು ಪುರಸ್ಕರಿಸಿದ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ, ಒಂದು ತಿಂಗಳ ಕಾಲ ಶಿಕ್ಷೆ ಅಮಾನತ್ತಿನಲ್ಲಿಟ್ಟಿದ್ದು, 5 ಲಕ್ಷ ರೂ. ಬಾಂಡ್, ಒಬ್ಬರ ಶ್ಯೂರಿಟಿ ಒದಗಿಸಲು ನ್ಯಾಯಾಧೀಶ ಸಂತೋಷ್ ಗಜಾನನ ಭಟ್ ಅವರು ಸೂಚನೆ ನೀಡಿದ್ದಾರೆ.
2012 ರಲ್ಲಿ ಖಾಸಗಿ ಬ್ಯಾಂಕ್‌ಗೆ ಗ್ಯಾಂಗ್ ವಂಚನೆ ಮಾಡಿತ್ತು. ಆರೋಪಿಗಳು ಕೋಟ್ಯಂತರ ರೂಪಾಯಿ ವಂಚನೆ ಮಾಡಿದ್ದರು. ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ತನಿಖೆ ನಡೆಸಿತ್ತು. ನಕಲಿ ದಾಖಲೆ ನೀಡಿ ಕೋಟ್ಯಂತರ ರೂಪಾಯಿ ಸಾಲವನ್ನು ಕೃಷ್ಣ ಶೆಟ್ಟಿ ಪಡೆದುಕೊಂಡಿದ್ದರು.
ಮಾಲೂಕು ಕ್ಷೇತ್ರದ ಬಿಜೆಪಿ ಶಾಸಕರೂ ಆಗಿದ್ದ, ಬಾಲಾಜಿಕೃಪಾ ಎಂಟರ್‌ಪ್ರೈಸಸ್‌ನ ಮಾಲೀಕ ಕೃಷ್ಣಯ್ಯ ಶೆಟ್ಟಿ 1993ರಲ್ಲಿ ಸಾರ್ವಜನಿಕ ಉದ್ದಿಮೆಗಳ ನೌಕರರಿಗೆ ಗೃಹ ನಿರ್ಮಾಣಕ್ಕೆ ಸಾಲ ಕೊಡಿಸುವುದಾಗಿ ಆಮಿಷವೊಡ್ಡಿ, ಹಲವು ನೌಕರರ ಹೆಸರಿನಲ್ಲಿ ನಕಲಿ ಖಾತೆಗಳನ್ನು ಸೃಷ್ಟಿಸಿ 7.17 ಕೋಟಿ ರೂ. ಬ್ಯಾಂಕ್ ಸಾಲ ಪಡೆದಿದ್ದರು. ಇದರಲ್ಲಿ 3.53 ಕೋಟಿ ಸಾಲ ತೀರಿಸಿಲ್ಲ ಎಂದು ಆರೋಪಿಸಲಾಗಿತ್ತು. ಪ್ರಕರಣವನ್ನು ಸಿಬಿಐ ತನಿಖೆ ನಡೆಸಿ, ಚಾರ್ಜ್‌ಶೀಟ್ ಸಲ್ಲಿಸಿತ್ತು.
ಕೃಷ್ಣಯ್ಯ ಶೆಟ್ಟಿ, ಕೆ.ವಿ.ಹನುಮಪ್ಪ ರೆಡ್ಡಿ, ಜಿ.ಎಂ.ರಮೇಶ್ ಹಾಗೂ ಇತರ ಆರೋಪಿಗಳ ವಿರುದ್ಧ ಭಾರತೀಯ ದಂಡ ಸಂಹಿತೆ 120ಬಿ, 409, 419, 420, 467, 471 ಹಾಗೂ ಸಿಆರ್‌ಪಿಸಿ ಸೆಕ್ಷನ್ 13(1)ಡಿ, 13(2)ರಡಿ ಸಿಬಿಐ ಕೇಸ್ ದಾಖಲಿಸಿತ್ತು.
Advertisement