ಬ್ಯಾಂಕ್ ಗೆ ನಕಲಿ ದಾಖಲೆ ನೀಡಿ ವಂಚನೆ ಮಾಡಿದ ಪ್ರಕರಣದಲ್ಲಿ ಮಾಜಿ ಸಚಿವ ಎಸ್.ಎನ್ ಕೃಷ್ಣಯ್ಯ ಶೆಟ್ಟಿ ಜೈಲು ಶಿಕ್ಷೆಗೆ ಗುರಿಯಾಗಿದ್ದಾರೆ. ಬ್ಯಾಂಕ್ ವಂಚನೆ ಪ್ರಕರಣದಲ್ಲಿ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ತಪ್ಪಿತಸ್ಥ ಎಂದು ತೀರ್ಪು ನೀಡಿದೆ. ನ್ಯಾ. ಸಂತೋಷ್ ಗಜಾನನ ಭಟ್ ಅವರು ಶಿಕ್ಷೆಯ ಪ್ರಮಾಣವನ್ನು ಘೋಷಿಸಿದ್ದಾರೆ. ಅದರಂತೆ ಕೃಷ್ಣಯ್ಯ ಶೆಟ್ಟಿಗೆ ಮೂರು ವರ್ಷ ಶಿಕ್ಷೆ ವಿಧಿಸಲಾಗಿದೆ. 120ಬಿ, 420, 467, 471 ಸೆಕ್ಷನ್ಗಳಡಿಯಲ್ಲಿ ಎಂಟಿವಿ ರೆಡ್ಡಿ, ಕೃಷ್ಣಯ್ಯ ಶೆಟ್ಟಿ, ಮುನಿರಾಜು, ಕೆ.ಶ್ರೀನಿವಾಸಗೆ ತಲಾ 1 ಲಕ್ಷ ರೂ. ದಂಡದ ಜೊತೆಗೆ 3 ವರ್ಷ ಶಿಕ್ಷೆ ವಿಧಿಸಿದೆ. ಇದೇ ವೇಳೆ ಕೃಷ್ಣಯ್ಯ ಶೆಟ್ಟಿಗೆ ವಿಧಿಸಲಾಗಿರುವ ಶಿಕ್ಷೆಯನ್ನು ಕೋರ್ಟ್ ಒಂದು ತಿಂಗಳ ಕಾಲ ಅಮಾನತ್ತಿನಲ್ಲಿಟ್ಟಿದ್ದು ಮೇಲ್ಮನವಿ ಸಲ್ಲಿಸಲು ಅವಕಾಶ ನೀಡಿದೆ.
ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅಕ್ರಮ ವಲಸಿಗರ ವಿರುದ್ಧ ಕಠಿಣ ಕ್ರಮ ಕೈಗೊಂಡಿದ್ದು 104 ಭಾರತೀಯರನ್ನು ಗಡಿಪಾರು ಮಾಡಲಾಗಿತ್ತು. ಈ ವಿಷಯ ಇದೀಗ ರಾಜ್ಯಸಭೆಯಲ್ಲಿ ಕೋಲಾಹಲ ಸೃಷ್ಟಿಸಿದೆ. ಗಡಿಪಾರಾದವರ ಕೈಗೆ ಕೋಳ ಹಾಕಿ ಕರೆತಂದ ನಡೆ ಸೇರಿದಂತೆ ಹಲವು ಅಂಶಗಳನ್ನಿಟ್ಟುಕೊಂಡು ಕೇಂದ್ರ ಸರ್ಕಾರದ ವಿರುದ್ಧ ವಿಪಕ್ಷಗಳು ವಾಗ್ದಾಳಿ ನಡೆಸುತ್ತಿವೆ. ಅಮೆರಿಕ ಅಧ್ಯಕ್ಷೀಯ ಚುನಾವಣೆ ಸಂದರ್ಭದಲ್ಲಿ ಮೋದಿ ತಮ್ಮ ಮಿತ್ರ ಟ್ರಂಪ್ ಪರ ಪ್ರಚಾರ ಮಾಡಿದ್ದರು. ಈಗ ಅವರ ಮಿತ್ರ ಭಾರತೀಯರಿಗೆ ಕೋಳ ಹಾಕಿ ಕಳಿಸಿದ್ದಾರೆ ಎಂದು ರಾಜ್ಯಸಭಾ ಸದಸ್ಯ ನಾಸಿರ್ ಹುಸೇನ್ ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ವಿದೇಶಾಂಗ ಸಚಿವ ಎಸ್ ಜೈಶಂಕರ್ ಯಾರಿಗೂ ಮೋದಿ ಪ್ರಚಾರ ಮಾಡಿಲ್ಲ. ಕಾಂಗ್ರೆಸ್ ಸದಸ್ಯರು ತಮ್ಮ ಹೇಳಿಕೆಯನ್ನು ಹಿಂಪಡೆಯಬೇಕೆಂದು ಆಗ್ರಹಿಸಿದರು. ಅಲ್ಲದೆ ಅಮೇರಿಕಾದಿಂದ ಭಾರತೀಯರನ್ನು ಗಡಿಪಾರು ಮಾಡಿರುವುದು ಇದೇ ಮೊದಲೇನೂ ಅಲ್ಲ. ಇದು ಹಲವು ವರ್ಷಗಳಿಂದ ನಡೆಯುತ್ತಾ ಬಂದಿದೆ ಎಂದರು.
ಬಹುಕೋಟಿ ಬಿಟ್ ಕಾಯಿನ್ ಪ್ರಕರಣದಲ್ಲಿ ರಾಜ್ಯ ಯುವ ಕಾಂಗ್ರೆಸ್ ಅಧ್ಯಕ್ಷ ಮೊಹಮ್ಮದ್ ನಲಪಾಡ್ಗೆ ಬಂಧನ ಭೀತಿ ಎದುರಾಗಿದೆ. ಹ್ಯಾಕರ್ ಶ್ರೀಕಿ ಜೊತೆ ನಲಪಾಡ್ಗೆ ವ್ಯವಹಾರಿಕ ನಂಟು ಇದೆ ಎಂಬುದು ತನಿಖೆಯಲ್ಲಿ ಬಯಲಾಗಿತ್ತು. ಈ ಸಂಬಂಧ ವಿಚಾರಣೆಗೆ ಹಾಜರಾಗುವಂತೆ ಸೆಕ್ಷನ್ 41ರಡಿ ವಿಶೇಷ ತನಿಖಾ ತಂಡ (SIT) ನೋಟಿಸ್ ನೀಡಿತ್ತು. ಈ ಹಿನ್ನೆಲೆಯಲ್ಲಿ ಮೊಹಮ್ಮದ್ ನಲಪಾಡ್ ಗುರುವಾರ ಎಸ್ ಐಟಿ ತನಿಖಾಧಿಕಾರಿ ಡಿವೈ ಎಸ್ ಪಿ ಬಾಲರಾಜ್ ಎದುರು ವಿಚಾರಣೆ ಎದುರಿಸಿದರು.
ಬೆಂಗಳೂರು ಉತ್ತರ ತಾಲೂಕಿನ ಸೀಗೆಹಳ್ಳಿ ಗೇಟ್ ಬಳಿ ನಿರ್ಮಾಣ ಹಂತದ ಕಟ್ಟಡದಲ್ಲಿ ಬೆಂಕಿ ಅವಘಡ ಸಂಭವಿಸಿ ಇಬ್ಬರು ಕಾರ್ಮಿಕರು ಮೃತಪಟ್ಟಿದ್ದಾರೆ. ಉತ್ತರ ಪ್ರದೇಶ ಮೂಲದ ಉದಯ್ ಭಾನು(40) ಮತ್ತು ಬಿಹಾರ ಮೂಲದ ರೋಷನ್(23) ಮೃತ ದುರ್ದೈವಿಗಳು. ಸತೀಶ್ ಎಂಬುವರಿಗೆ ಸೇರಿದ ಶಿವಾನಿ ಗ್ರೀನ್ ಲೇಔಟ್ನಲ್ಲಿರುವ 3 ಅಂತಸ್ತಿನ ಕಟ್ಟಡದಲ್ಲಿ ಅಗ್ನಿ ಅವಘಡ ಸಂಭವಿಸಿತ್ತು. ಕಟ್ಟಡದ ನೀರಿನ ಟ್ಯಾಂಕರ್ ಮೇಲೆ ಕುಳಿತುಕೊಂಡಿದ್ದ ಕಾರ್ಮಿಕನೊಬ್ಬನ ರಕ್ಷಣೆ ಮಾಡಲಾಗಿದೆ.
ಬಿ.ಎಸ್. ಯಡಿಯೂರಪ್ಪ ವಿರುದ್ಧ "ಅವಮಾನಕರ" ಹೇಳಿಕೆಗಳನ್ನು ನೀಡುತ್ತಿರುವ ನಾಯಕರನ್ನು ಪಕ್ಷದ ಹಿರಿಯ ನಾಯಕರು ತಡೆಯದಿರುವ ಬಗ್ಗೆ ಕರ್ನಾಟಕ ಬಿಜೆಪಿ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಗುರುವಾರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಸುದ್ದಿ ಗೋಷ್ಠಿಯಲ್ಲಿ ಮಾತನಾಡಿರುವ ವಿಜಯೇಂದ್ರ, ರಾಜ್ಯ ಬಿಜೆಪಿಯಲ್ಲಿ ಬಣ ಬಡಿದಾಟ ದುರದೃಷ್ಟಕರ ಎಂದಿದ್ದಾರೆ. ರಾಜ್ಯ ಅಧ್ಯಕ್ಷರ ಚುನಾವಣೆ ಅಥವಾ ಆಯ್ಕೆ ಪ್ರಕ್ರಿಯೆ ಯಾವುದೇ ಕ್ಷಣದಲ್ಲಿ ನಡೆಯಬಹುದು. ಫೆಬ್ರವರಿ 20 ರೊಳಗೆ ಇಡೀ ಪ್ರಕ್ರಿಯೆಯು ಪೂರ್ಣಗೊಳ್ಳುವ ಸೂಚನೆಗಳಿವೆ ಎಂದು ತಿಳಿಸಿದರು.
ಬಿಜೆಪಿ ಕಾರ್ಯಾಧ್ಯಕ್ಷ ಮತ್ತು ಮಾಜಿ ಪರಿಷತ್ ಸದಸ್ಯ ರಾಜೇಶ್ ಬನ್ನೂರು ಅವರ ಮನೆ ನೆಲಸಮ ಮಾಡಿದ್ದರ ವಿರುದ್ಧ ಆಕ್ರೋಶ ಭುಗಿಲೆದ್ದಿದ್ದು ಶ್ರೀ ಮಹಾಲಿಂಗೇಶ್ವರ ದೇವಾಲಯ ಆವರಣದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿತ್ತು. ಮುಸುಕುಧಾರಿಗಳು ಓಮ್ನಿ ಕಾರಿನಲ್ಲಿ ಬಂದು ನೆಲಸಮ ಮಾಡಿದ್ದಾರೆ. ಈ ವೇಳೆ ಮನೆಯಲ್ಲಿದ್ದ ನಾಯಿ ಮರಿ ಮಣ್ಣಿನಡಿ ಸಿಲುಕಿ ಸಾವನಪ್ಪಿದೆ. ಅಲ್ಲದೆ ಮನೆಯಲ್ಲಿದ್ದ 32 ಗ್ರಾಂ ಚಿನ್ನ, ದಾಖಲೆ ಪತ್ರ, ನಗದು ಹಣನ್ನು ಮುಸುಧಾರಿಗಳು ದೋಚಿದ್ದಾರೆ ಎಂದು ಆರೋಪಿಸಲಾಗಿದೆ. ಈ ಸಂಬಂಧ ಪುತ್ತೂರು ಪೊಲೀಸರು ಮಹಾಲಿಂಗೇಶ್ವರ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಈಶ್ವರ್ ಭಟ್ ಪಂಜಿಗುಡ್ಡೆ, ಟ್ರಸ್ಟಿ ವಿನಯ ಸುವರ್ಣ ಮತ್ತು ಇತರರ ಮೇಲೆ ಪ್ರಕರಣ ದಾಖಲಿಸಿದ್ದಾರೆ.
Advertisement