News headlines 10-02-2025 | ಮೆಟ್ರೋ ಪ್ರಯಾಣ ದರ ಇಳಿಕೆಗೆ ಬಿಎಂಆರ್ ಸಿಎಲ್ ಗೆ ಬಿಜೆಪಿ ಮನವಿ; ಯತ್ನಾಳ್ ಗೆ ಮತ್ತೆ ನೊಟೀಸ್; ದಕ್ಷಿಣದ ಕುಂಭಮೇಳಕ್ಕೆ ಚಾಲನೆ; ಮುಡಾ: ಸಿಎಂ ಪತ್ನಿಗೆ ರಿಲೀಫ್

News highlights of the day
ಸುದ್ದಿ ಮುಖ್ಯಾಂಶಗಳುonline desk

1. 'ಏರೋ ಇಂಡಿಯಾ 2025' ಶೋಗೆ ಚಾಲನೆ

ಭದ್ರತೆ ದುರ್ಬಲವಾಗಿದ್ದರೆ ಶಾಂತಿ ಸ್ಥಾಪಿಸಲು ಸಾಧ್ಯವಿಲ್ಲ ಮತ್ತು ಬಲಿಷ್ಠರಾಗಿರುವುದರಿಂದ ಮಾತ್ರ ನಾವು ಉತ್ತಮ ಜಗತ್ತಿಗಾಗಿ ಕೆಲಸ ಮಾಡಲು ಸಾಧ್ಯ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದರು. ಬೆಂಗಳೂರಿನ ಯಲಹಂಕ ವಾಯುನೆಲೆಯಲ್ಲಿ ಏರೋ ಇಂಡಿಯಾ 2025 ವೈಮಾನಿಕ ಪ್ರದರ್ಶನವನ್ನು ಉದ್ಘಾಟಿಸಿ ಮಾತನಾಡಿದ ರಾಜನಾಥ್ ಸಿಂಗ್, "ಏರೋ ಇಂಡಿಯಾದಲ್ಲಿ ವಿದೇಶಗಳಿಂದ ಬಂದ ನಮ್ಮ ಸ್ನೇಹಿತರ ಉಪಸ್ಥಿತಿ ಒಂದು ಭೂಮಿ, ಒಂದು ಕುಟುಂಬ, ಒಂದು ಭವಿಷ್ಯದ ನಮ್ಮ ದೃಷ್ಟಿಕೋನವನ್ನು ಹಂಚಿಕೊಳ್ಳುತ್ತಾರೆ ಎಂಬುದಕ್ಕೆ ಸಾಕ್ಷಿಯಾಗಿದೆ" ಎಂದರು. ಬೆಂಗಳೂರು, ಏರೋಸ್ಪೇಸ್ ಉದ್ಯಮದಲ್ಲಿ ಅತ್ಯುತ್ತಮ ಪ್ರತಿಭೆಗಳನ್ನು ಹೊಂದಿದೆ. ವಿಮಾನ ಮತ್ತು ಹೆಲಿಕಾಪ್ಟರ್ ಉತ್ಪಾದನಾ ಸೌಲಭ್ಯಗಳನ್ನು ಸ್ಥಾಪಿಸಲು ಸೂಕ್ತ ಸ್ಥಳವಾಗಿದೆ. ತಯಾರಕರಿಗೆ ಪ್ರೋತ್ಸಾಹ ನೀಡುವ ಮೂಲಕ, ಪ್ರತಿಭಾ ಪಲಾಯನವನ್ನು ತಡೆದು ನಮ್ಮ ದೇಶದ ಪ್ರತಿಭೆಗಳನ್ನು ಭಾರತದೊಳಗೆ ಉಳಿಸಿಕೊಳ್ಳಬಹುದು ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಇದೇ ವೇಳೆ ಹೇಳಿದರು.

2. ಯತ್ನಾಳ್ ಗೆ ಮತ್ತೆ ಬಿಜೆಪಿ ನೊಟೀಸ್

ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಅವರ ವಿರುದ್ಧ ಬಹಿರಂಗವಾಗಿ ವಾಗ್ದಾಳಿ ನಡೆಸುತ್ತಿರುವ ಬಿಜೆಪಿ ಹಿರಿಯ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರಿಗೆ ಬಿಜೆಪಿ ಕೇಂದ್ರ ಶಿಸ್ತು ಸಮಿತಿ ಮತ್ತೆ ನೋಟಿಸ್ ನೀಡಿದೆ. ಈ ಹಿಂದೆಯೂ ಯತ್ನಾಳ್ ಅವರಿಗೆ ಬಿಜೆಪಿ ಕೇಂದ್ರ ಶಿಸ್ತು ಸಮಿತಿ ನೋಟಿಸ್‌ ನೀಡಿತ್ತು. ಅದಕ್ಕೆ ಅವರು ಉತ್ತರ ಸಹ ನೀಡಿದ್ದರು. ಆದರೆ ವಿಜಯೇಂದ್ರ ವಿರುದ್ಧ ನಿರಂತವಾಗಿ ಹೇಳಿಕೆ ನೀಡುವುದನ್ನು ಮಾತ್ರ ನಿಲ್ಲಿಸಿಲ್ಲ. ಹೀಗಾಗಿ ಇಂದು ಮತ್ತೊಮ್ಮೆ ಯತ್ನಾಳ್ ಅವರಿಗೆ ಕಾರಣ ಕೇಳಿ ಶೋಕಾಸ್ ನೋಟಿಸ್ ನೀಡಿ 72 ಗಂಟೆಗಳಲ್ಲೇ ಉತ್ತರಿಸುವಂತೆ ಸೂಚಿಸಲಾಗಿದೆ. ನಿಗದಿತ ಸಮಯದಲ್ಲಿ ಉತ್ತರ ನೀಡದಿದ್ದರೆ ಮುಂದಿನ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಲಾಗಿದೆ. ಇತ್ತೀಚಿನ ಮಾಹಿತಿಯ ಪ್ರಕಾರ ದೆಹಲಿಯಲ್ಲಿದ್ದ ಯತ್ನಾಳ್ ಅವರು ಈಗ ಹೈದರಾಬಾದ್ ನತ್ತ ಪ್ರಯಾಣ ಬೆಳಸಿದ್ದಾರೆ.

3. ನಮ್ಮ ಮೆಟ್ರೋ ದರ ಏರಿಕೆಗೆ ವಿರೋಧ; ದರ ಇಳಿಕೆ ಮಾಡಲು ಬಿಜೆಪಿ ಮನವಿ 

ನಮ್ಮ ಮೆಟ್ರೋ ಪ್ರಯಾಣದಲ್ಲಿ ಭಾರಿ ಏರಿಕೆಯಾಗಿರುವುದನ್ನು ವಿರೋಧಿಸಿ ವಿಪಕ್ಷ ನಾಯಕರು ಮೆಟ್ರೋ ಪ್ರಧಾನ ಕಚೇರಿಗೆ ಭೇಟಿ ನೀಡಿ ದರ ಇಳಿಕೆ ಮಾಡಲು ಮನವಿಪತ್ರ ಸಲ್ಲಿಸಿದ್ದಾರೆ. ಬೆಂಗಳೂರಿನ ಬಿಜೆಪಿ ಶಾಸಕರಾದ ಸಿ.ಕೆ.ರಾಮಮೂರ್ತಿ, ರವಿಸುಬ್ರಹ್ಮಣ್ಯ, ಬೆಂಗಳೂರು ಉತ್ತರ ಜಿಲ್ಲಾ ಬಿಜೆಪಿ ಘಟಕದ ಅಧ್ಯಕ್ಷ ಎಸ್.ಹರೀಶ್ ಮತ್ತು ಮಾಜಿ ಮೇಯರ್ ಗೌತಮ್ ಕುಮಾರ್ ಮತ್ತಿತರರಿದ್ದ ನಿಯೋಗ, ಬಿಎಂಆರ್ಸಿಎಲ್ ಎಂಡಿಗೆ ಮನವಿ ಪತ್ರ ಸಲ್ಲಿಸಿದೆ. ದರ ಏರಿಕೆ ಕಡಿಮೆ ಮಾಡಿದಿದ್ದರೆ ಹೋರಾಟ ಮಾಡುವುದಾಗಿ ಹೇಳಿದ್ದೇವೆ. ಜನಕ್ಕೆ ಹೆಚ್ಚು ಹೊರೆಯಾಗದಂತೆ ಏರಿಸಲಿ ಎಂದು ಸಿಕೆ ರಾಮಮೂರ್ತಿ ಮಾಧ್ಯಮಗಳಿಗೆ ತಿಳಿಸಿದ್ದಾರೆ. ಇದೇ ವೇಳೆ ಬಿಎಂಆರ್ ಸಿಎಲ್ ಭಾರಿ ಪ್ರಮಾಣದ ದರ ಏರಿಕೆಯನ್ನು ಸಮರ್ಥಿಸಿಕೊಂಡಿದೆ. 'ಆಟೋ, AC ಬಸ್, ಟ್ಯಾಕ್ಸಿ, ಕ್ಯಾಬ್ ಗಳಿಗೆ ಹೋಲಿಸಿದರೆ Namma Metro ಟಿಕೆಟ್ ದರ ಈಗಲೂ ಕಡಿಮೆಯೇ ಇದೆ ಎಂದು ಹೇಳಿದೆ.

4. ಮುಡಾ ಕೇಸ್: ಸಿದ್ದರಾಮಯ್ಯ ಪತ್ನಿಗೆ ರಿಲೀಫ್

ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ(ಮುಡಾ)ದ ನಿವೇಶನ ಹಂಚಿಕೆ ಹಗರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಿ ಮತ್ತು ಸಚಿವ ಬೈರತಿ ಸುರೇಶ್ ಅವರಿಗೆ ಜಾರಿ ನಿರ್ದೇಶನಾಲಯ(ಇಡಿ)ದ ನೋಟಿಸ್ ಗೆ ನೀಡಿದ್ದ ತಡೆಯಾಜ್ಞೆಯನ್ನು ಹೈಕೋರ್ಟ್ ಸೋಮವಾರ ವಿಸ್ತರಿಸಿದೆ. ಇಡಿ ಸಮನ್ಸ್ ರದ್ದು ಕೋರಿ ಸಿಎಂ ಪತ್ನಿ ಪಾರ್ವತಿ ಹಾಗೂ ಸಚಿವ ಭೈರತಿ ಸುರೇಶ್ ಸಲ್ಲಿಸಿದ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್, ವಿಚಾರಣೆಯನ್ನು ಫೆಬ್ರವರಿ 20ಕ್ಕೆ ಮುಂದೂಡಿದೆ. ಇಡಿ ಸಮನ್ಸ್ ಗೆ ತಡೆಯಾಜ್ಞೆ ವಿಸ್ತರಣೆಯಾಗಿದೆ. ಇದರಿಂದ ಸಿಎಂ ಪತ್ನಿ ಹಾಗೂ ಬೈರತಿ ಸುರೇಶ್ಗೆ ತಾತ್ಕಾಲಿಕ ರಿಲೀಫ್ ಸಿಕ್ಕಂತಾಗಿದೆ.

5. ದಕ್ಷಿಣದ ಕುಂಭಮೇಳಕ್ಕೆ ಚಾಲನೆ

ದಕ್ಷಿಣ ಭಾರತದ ಐತಿಹಾಸಿಕ ಕುಂಭಮೇಳ ಟಿ ನರಸಿಪುರದ ತ್ರಿವೇಣಿ ಸಂಗಮದಲ್ಲಿ ಇಂದಿನಿಂದ ಆರಂಭವಾಗಿದೆ. ಈ ಕುಂಭಮೇಳ ಪ್ರತಿ 3 ವರ್ಷಗಳಿಗೆ ಒಮ್ಮೆ ನಡೆಯಲಿದೆ. ಬೆಳಿಗ್ಗೆ 11 ಗಂಟೆಗೆ ಅಗಸ್ತ್ಯೇಶ್ವರ ದೇವಾಲಯದಲ್ಲಿ ಪೂಜೆ ಸಲ್ಲಿಸುವ ಮೂಲಕ ಕುಂಭಮೇಳಕ್ಕೆ ಚಾಲನೆ ನೀಡಲಾಯಿತು. ತಿರುಮಕೂಡಲು ನರಸೀಪುರದಲ್ಲಿ ಕಾವೇರಿ, ಕಪಿಲ ಹಾಗೂ ಸ್ಪಟಿಕ ಸರೋವರ ಸಂಗಮವಿದ್ದು, ಕುಂಭಮೇಳ ನಡೆಯುತ್ತದೆ. 1989 ರಲ್ಲಿ ಮೊದಲ ಬಾರಿಗೆ ಇಲ್ಲಿ ಕುಂಭಮೇಳಕ್ಕೆ ಚಾಲನೆ ನೀಡಲಾಗಿತ್ತು. ಮೂರು ದಿನಗಳ ಕಾಲ ಕುಂಭಮೇಳ ನಡೆಯಲಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com