
ಬೆಂಗಳೂರು: ಬೆಂಗಳೂರಿನ ಜನಸಂಖ್ಯೆ ಹೆಚ್ಚಾಗಿದ್ದು, ರಾಜಧಾನಿ ಹೊರತಾಗಿ ಇತರ ಭಾಗದಲ್ಲಿ ಕೈಗಾರಿಕೆಗಳ ಸ್ಥಾಪನೆಗೆ ಆದ್ಯತೆ ನೀಡಲಾಗುವುದು. ಇದಕ್ಕಾಗಿ ಜಿಮ್ ಸಮಾವೇಶದಲ್ಲಿ ನೂತನ ಕೈಗಾರಿಕಾ ನೀತಿ ಪ್ರಕಟಿಸಲಾಗುವುದು" ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದರು.
ಅರಮನೆ ಮೈದಾನದಲ್ಲಿ ನಡೆಯಲಿರುವ "ಇನ್ವೆಸ್ಟ್ ಕರ್ನಾಟಕ 2025" ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶ ಸ್ಥಳದಲ್ಲಿ ಪೂರ್ವಸಿದ್ಧತೆಯನ್ನು ಪರಿಶೀಲಿಸಿದ ಬಳಿಕ ಮಾತನಾಡಿದ ಅವರು. ಬೆಂಗಳೂರಿನ ಜನಸಂಖ್ಯೆ 1.40 ಕೋಟಿ ಮುಟ್ಟಿದ್ದು, ನಗರದಲ್ಲಿ ವಾಹನಗಳ ಸಂಖ್ಯೆ 1.10 ಕೋಟಿಯಷ್ಟಾಗಿದೆ.
ಬೆಂಗಳೂರಿನ ಮೇಲೆ ಹೊರೆ ತಪ್ಪಿಸಬೇಕು. ಬೆಂಗಳೂರಿಗೆ ವಲಸೆ ಬರುವುದನ್ನು ತಪ್ಪಿಸಬೇಕು. ಬಂಡವಾಳ ಹೂಡಿಕೆದಾರರು ಬೆಂಗಳೂರಿನ ಹೊರತಾಗಿ ಇತರೆ ಭಾಗದಲ್ಲಿ ಕೈಗಾರಿಕೆ ಸ್ಥಾಪನೆ ಮಾಡಲು ಮುಂದೆ ಬಂದು ನಮಗೆ ಶಕ್ತಿ ತುಂಬಬೇಕು ಎಂದು ಹೇಳಿದರು.
ಇದಕ್ಕೆ ಪೂರಕವಾಗಿ ಕೈಗಾರಿಕಾ ಸಚಿವರಾದ ಎಂ.ಬಿ ಪಾಟೀಲ್ ಅವರ ತಂಡ ರಾಜ್ಯದಲ್ಲಿ ನೂತನ ಕೈಗಾರಿಕಾ ನೀತಿ ರೂಪಿಸಿದ್ದು, ಮುಖ್ಯಮಂತ್ರಿಗಳು ಸಮಾವೇಶದಲ್ಲಿ ಪ್ರಕಟಿಸಿದ್ದಾರೆ. ಈ ನೀತಿಯ ಮೂಲಕ ನಮ್ಮ ರಾಜ್ಯ ದೇಶಕ್ಕೆ ಮಾದರಿಯಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಬೆಂಗಳೂರು ಜಾಗತಿಕ ನಗರವಾಗಿ ಬೆಳೆದಿದ್ದು, ಇಡೀ ಜಗತ್ತು ಭಾರತವನ್ನು ಬೆಂಗಳೂರಿನ ಮೂಲಕ ನೋಡುತ್ತಿದೆ. ಬಂಡವಾಳ ಹೂಡಿಕೆದಾರರು ನಮ್ಮ ರಾಜ್ಯಕ್ಕೆ ಬರಬೇಕು. ನಾವೆಲ್ಲರೂ ಸೇರಿ ಒಟ್ಟಾಗಿ ಕೆಲಸ ಮಾಡಿ, ಹೆಚ್ಚು ಅವಕಾಶ ಸೃಷ್ಟಿಸಬೇಕು ಎಂದು ತಿಳಿಸಿದರು.
Advertisement