
ಮೈಸೂರು: ಮೈಸೂರಿನ ಉದಯಗಿರಿ ಪೊಲೀಸ್ ಠಾಣೆ ಮೇಲಿನ ಕಲ್ಲು ತೂರಾಟ ಪ್ರಕರಣಕ್ಕೆ ಸಂಬಂಧಿಸಿದಂತೆ ಎಂಟು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಮೈಸೂರಿನ ಶಾಂತಿನಗರದ ನಿವಾಸಿಗಳಾದ ಸುಹೇಲ್ ರಹಿಲ್ ಪಾಶಾ, ಅಯಾನ್ ಬಿನ್ ಜಬೀವುಲ್ಲಾ, ಗೌಸಿಯಾ ನಗರದ ಸೈಯದ್ ಸಾದಿಕ್ ಬಿನ್ ನವೀದ್, ಸತ್ಯನಗರದ ಇಜಾಜ್ ಬಿನ್ ಅಬ್ದುಲ್ ವಾಜೀದ್, ರಾಜೀವ್ ನಗರದ ಸಾದಿಕ್ ಪಾಶಾ @ ಖಾಲಿದ್ ಪಾಷಾ ಸೇರಿದಂತೆ 8 ಆರೋಪಿಗಳನ್ನು ಬಂಧಿಸಲಾಗಿದ್ದು, ಮತ್ತಷ್ಟು ಆರೋಪಿಗಳ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.
ಮೌಲ್ವಿಯೊಬ್ಬರ ಪ್ರಚೋದನಕಾರಿ ಭಾಷಣ ಮಾಡಿರುವ ವಿಡಿಯೋ ವೈರಲ್ ಆದ ಬಳಿಕ ಉದಯಗಿರಿ ಪೊಲೀಸ್ ಠಾಣೆಯ ಮೇಲೆ ಕಲ್ಲು ತೂರಾಟ ನಡೆದಿತ್ತು. ಈ ಹಿನ್ನಲೆಯಲ್ಲಿ ಪ್ರಚೋದನಕಾರಿ ಭಾಷಣ ಮಾಡಿದ್ದ ಮುಫ್ತಿ ಮುಷ್ತಾಕ್ ಮಕ್ಬೋಲಿ ಎಂಬ ಮೌಲ್ವಿಯ ಬಂಧನಕ್ಕಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ.
ವೈರಲ್ ಆಗಿರುವ ವಿಡಿಯೋದಲ್ಲೇನಿದೆ...?
ಧರ್ಮ ರಕ್ಷಣೆಗೆ ಬದ್ಧತೆ ನಿನ್ನೆಯೂ ಇತ್ತು, ಇವತ್ತು ಇದೆ. ಎಲ್ಲರೂ ಘೋಷಣೆ ಕೂಗಿ, ನಾವು ಪ್ರಾಣ ಬೇಕಾದರೂ ಕೊಡುತ್ತೇವೆ. ಸದಾ ಮುಸ್ಲಿಮನ್ನು ಗುರಿ ಮಾಡಲಾಗುತ್ತಿದೆ. ಸುರೇಶ್ ಹೆಸರಿನ ನಾಯಿ, ಸುರೇಶ್ ಹೆಸರಿನ ಹರಾಮಿ ನನ್ನ ಮಾಲೀಕನ ಬಗ್ಗೆ ಕೆಟ್ಟದಾಗಿ ಪೋಸ್ಟ್ ಮಾಡಿದ್ದಾನೆ. ಆತನನ್ನು ಕೂಡಲೇ ಬಂಧಿಸಿ. ಆತನನ್ನು ನೇಣಿಗೆ ಹಾಕಬೇಕು ಮರಣದಂಡನೆ ವಿಧಿಸಬೇಕು. ನಿಮ್ಮ ಇಚ್ಛೆ ಏನು? ಆತನಿಗೆ ಮರಣದಂಡನೆಯಾಗಬೇಕು ಎಂಬುವುದು. ಮೈಸೂರಿನ ಎಲ್ಲ ಮುಸ್ಲಿಂರು ಒಂದಾಗಿ. ಇದಕ್ಕೆ ತಕ್ಕ ಉತ್ತರ ಕೊಡಬೇಕಾಗಿದೆ. ಈ ವಿಡಿಯೋವನ್ನು ಎಲ್ಲ ಕಡೆ ಶೇರ್ ಮಾಡಿ” ಎಂದು ಭಾಷಣ ಮಾಡಿದ್ದಾನೆ. ಈ ವಿಡಿಯೋ ವೈರಲ್ ಆಗಿದೆ.
ಏನಿದು ಘಟನೆ?
ಸೋಷಿಯಲ್ ಮಿಡೀಯಾದಲ್ಲಿ ವ್ಯಕ್ತಿಯೊಬ್ಬ ಮಾಡಿದ್ದ ಪೋಸ್ಟ್ ವೊಂದು ಒಂದು ಸಮುದಾಯವನ್ನು ಕೆರಳಿಸಿತ್ತು. ಪೋಸ್ಟ್ ಮಾಡಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಆತನನ್ನು ವಶಕ್ಕೆ ನೀಡುವಂತೆ ಇನ್ನೂರು ಜನ ಠಾಣೆ ಬಳಿ ಬಂದು ಆರೋಪಿಗಳು ಗಲಾಟೆ ಮಾಡಿ, ಕಲ್ಲು ತೂರಿದ್ದಾರೆ. ಆಗ ಪೊಲೀಸರು ಅಶ್ರುವಾಯು ಸಿಡಿಸಿ, ನಿಯಂತ್ರಣಕ್ಕೆ ತೆಗೆದುಕೊಂಡಿದ್ದಾರೆ.
ಪೋಸ್ಟ್ ನಲ್ಲೇನಿತ್ತು?
ದೆಹಲಿಯಲ್ಲಿ ಬಿಜೆಪಿ ಗೆಲುವು ಸಾಧಿಸಿದ ಹಿನ್ನೆಲೆಯಲ್ಲಿ ಯುವಕನೋರ್ವ ಸಂಸದ ರಾಹುಲ್ ಗಾಂಧಿ, ಉತ್ತರಪ್ರದೇಶದ ಮಾಜಿ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಹಾಗೂ ದೆಹಲಿ ಮಾಜಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ವಿವಸ್ತ್ರಗೊಳಿಸಿ, ಭಾವಚಿತ್ರಕ್ಕೆ ತಲೆ ಮೇಲೆ ಮುಸ್ಲಿಮರು ಬಳಸುವ ಟೊಪ್ಪಿ ಇಟ್ಟು, ದೇಹದ ಮೇಲೆಲ್ಲಾ ಉರ್ದು ಭಾಷೆಯ ಕೆಲ ಪದ ಬರೆದು ಪೋಸ್ಟ್ ಮಾಡಿದ್ದ. ಇದು ಮುಸ್ಲಿಂ ಸಮುದಾಯದವರು ಕೆರಳುವಂತೆ ಮಾಡಿತ್ತು.
Advertisement