ಸಣ್ಣ-ಮಧ್ಯಮ ಕೈಗಾರಿಕೆಗಳು ನಮ್ಮ ಆಸ್ತಿ; 2ನೇ ಹಾಗೂ 3ನೇ ಹಂತದ ನಗರಗಳತ್ತ ಗಮನಹರಿಸಿ: ಉದ್ಯಮಿಗಳಿಗೆ DKS ಸಲಹೆ

“ಇಲ್ಲಿರುವ ಎಲ್ಲಾ ಉದ್ಯಮಿಗಳು ನಮ್ಮ ರಾಜ್ಯದ ಆಸ್ತಿ. ನೀವು ಬಲಿಷ್ವಾದಷ್ಟು ನಾವು ಬಲಿಷ್ಠವಾಗಿರುತ್ತದೆ. ನೀವು ದುರ್ಬಲವಾದರೆ ನಾವು ದುರ್ಬಲವಾಗುತ್ತೇವೆ ಎಂದು ನಮ್ಮ ಸರ್ಕಾರ ನಂಬಿದೆ.
DK Shivakumar
ಡಿ.ಕೆ ಶಿವಕುಮಾರ್
Updated on

ಬೆಂಗಳೂರು: ಬೆಂಗಳೂರು ಹೊರತಾಗಿ ರಾಜ್ಯದ 2ನೇ ಹಾಗೂ 3ನೇ ಹಂತದ ನಗರಗಳತ್ತ ಮುಖ ಮಾಡಿ. ನಮ್ಮ ಸರ್ಕಾರ ನಿಮಗೆ ಹೆಚ್ಚಿನ ಪ್ರೋತ್ಸಾಹ ನೀಡುತ್ತದೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಅವರು ಸಲಹೆ ನೀಡಿದರು.

ಅರಮನೆ ಮೈದಾನದಲ್ಲಿ ನಡೆಯುತ್ತಿರುವ ಇನ್ವೆಸ್ಟ್ ಕರ್ನಾಟಕ 2025 ಸಮಾವೇಶದಲ್ಲಿ ಮಾತನಾಡಿದ ಅವರು, ನಮ್ಮ ಸಚಿವರಾದ ಎಂ.ಬಿ ಪಾಟೀಲ್ ಅವರ ನೇತೃತ್ವದಲ್ಲಿ ನೂತನ ಕೈಗಾರಿಕಾ ನೀತಿ ರೂಪಿಸಿದ್ದಾರೆ. ಆ ಮೂಲಕ ಅನೇಕ ಕಾರ್ಯಕ್ರಮ ನಿಮಗಾಗಿ ರೂಪಿಸಲಾಗಿದೆ. ನೀವು ಬೆಂಗಳೂರಿನ ಬಗ್ಗೆ ಹೆಚ್ಚು ಗಮನಹರಿಸಬೇಡಿ. ಬೆಂಗಳೂರು ಹೊರತಾಗಿ ಎರಡನೇ ಹಾಗೂ ಮೂರನೇ ಹಂತದ ನಗರಗಳತ್ತ ಗಮನಹರಿಸಬೇಕು. ನಂಜುಂಡಪ್ಪ ಅವರ ವರದಿ ಆಧಾರದ ಮೇಲೆ ಹಿಂದುಳಿದ ತಾಲೂಕುಗಳನ್ನು ಗುರುತಿಸಲಾಗಿದ್ದು, ಅಲ್ಲಿ ಬಂಡವಾಳ ಹೂಡಿಕೆ ಮಾಡಿದರೆ ಅನೇಕ ಪ್ರೋತ್ಸಾಹ ಕಾರ್ಯಕ್ರಮ ರೂಪಿಸಲಾಗಿದೆ. ಜತೆಗೆ ತಾಲೂಕು ಮಟ್ಟದಲ್ಲಿ ಕೈಗಾರಿಕಾ ಪ್ರದೇಶ ರೂಪಿಸುವ ಉದ್ದೇಶವಿದ್ದು, ಎಲ್ಲೆಡೆ ನೀರು ಹಾಗೂ ವಿದ್ಯುತ್ ಸೌಲಭ್ಯ ನೀಡಲಾಗುವುದು. ಈ ನೂತನ ನೀತಿಯಲ್ಲಿ ದೊಡ್ಡ ಉದ್ಯಮಗಿಳಿಗಿಂತ ಸಣ್ಣ ಹಾಗೂ ಮಧ್ಯಮ ಕೈಗಾರಿಕೆಗಳಿಗೆ ಹೆಚ್ಚಿನ ನೆರವಿನ ಅವಕಾಶ ಕಲ್ಪಿಸಲಾಗಿದೆ” ಎಂದು ತಿಳಿಸಿದರು.

“ಇಲ್ಲಿರುವ ಎಲ್ಲಾ ಉದ್ಯಮಿಗಳು ನಮ್ಮ ರಾಜ್ಯದ ಆಸ್ತಿ. ನೀವು ಬಲಿಷ್ವಾದಷ್ಟು ನಾವು ಬಲಿಷ್ಠವಾಗಿರುತ್ತದೆ. ನೀವು ದುರ್ಬಲವಾದರೆ ನಾವು ದುರ್ಬಲವಾಗುತ್ತೇವೆ ಎಂದು ನಮ್ಮ ಸರ್ಕಾರ ನಂಬಿದೆ. ನಮ್ಮ ರಾಜ್ಯದ 7 ಕೋಟಿ ಜನಸಂಖ್ಯೆಯಲ್ಲಿ ಸುಮಾರು 1 ಕೋಟಿ ಜನರಿಗೆ ಉದ್ಯೋಗ ಸೃಷ್ಟಿಸಿರುವುದು ನಮ್ಮ ರಾಜ್ಯದ ಸಣ್ಣ ಹಾಗೂ ಮಧ್ಯಮ ಕೈಗಾರಿಕೆಗಳು. ನೀವೆಲ್ಲರೂ ಸರ್ಕಾರಕ್ಕೆ ನೆರವಾಗುತ್ತಿದ್ದೀರಿ” ಎಂದು ತಿಳಿಸಿದರು.

“ನಮ್ಮ ರಾಜ್ಯಕ್ಕೆ ದೊಡ್ಡ ಇತಿಹಾಸವಿದೆ. ನೆಹರೂ ಅವರ ಕಾಲದಿಂದ ನೋಡುತ್ತಿದ್ದೀರಿ. ಸ್ವಾತಂತ್ರ್ಯಕ್ಕೂ ಮುನ್ನ ಇಡೀ ಏಷ್ಯಾದಲ್ಲೇ ಮದಲು ವಿದ್ಯುತ್ ಉತ್ಪಾದನೆ ಮಾಡಿದ್ದು 1904ರಲ್ಲಿ ಶಿವನಸಮುದ್ರದಲ್ಲಿ. ಅಲ್ಲಿಂದ ಕೆಜಿಎಫ್ ಗೆ ರವಾನೆಯಾಯಿತು. ನಂತರ ಅದೇ ವರ್ಷ ಬೆಂಗಳೂರಿಗೂ ವಿದ್ಯುತ್ ಸರಬರಾಜು ಮಾಡಲಾಯಿತು. ಇನ್ನು ಬಾಹ್ಯಾಕಾಶ ಯೋಜನೆ ಮೊದಲು ರೂಪಿಸಿದ್ದು ನಮ್ಮ ಪೀಣ್ಯ ಕೈಗಾರಿಕಾ ಪ್ರದೇಶದಲ್ಲಿ. ಹೆಚ್ಎಎಲ್, ಐಐಟಿ, ಏರ್ ಫೋರ್ಸ್, ಬಿಹೆಚ್ ಇಎಲ್ ಸೇರಿದಂತೆ ದೊಡ್ಡ ಸಂಸ್ಥೆಗಳನ್ನು ಬೆಂಗಳೂರಿನಲ್ಲಿ ಆರಂಭಿಸಲಾಯಿತು. ನಮ್ಮಲ್ಲಿರುವ ಹವಾಗುಣ, ನಮ್ಮಲ್ಲಿರುವ ಪ್ರತಿಭೆ, ಮಾನವ ಸಂಪನ್ಮೂಲ, ಶೈಕ್ಷಣಿಕ ಗುಣಮಟ್ಟ, ಕೌಶಲ್ಯ ಭಾರತದ ಬೇರೆ ಪ್ರದೇಶದಲ್ಲಿ ಇಲ್ಲ” ಎಂದು ಹೇಳಿದರು.

DK Shivakumar
ಕರ್ನಾಟಕವನ್ನು ಕೈಗಾರಿಕಾ ಪ್ರಗತಿ ಜತೆಗೆ ಸುಸ್ಥಿರ ರಾಜ್ಯ ಮಾಡುವ ಗುರಿ; ನೂತನ ನೀತಿ ಮೂಲಕ 20 ಲಕ್ಷ ಉದ್ಯೋಗ ಸೃಷ್ಟಿ: ಡಿ.ಕೆ ಶಿವಕುಮಾರ್

ಒಂದು ವರ್ಷ ನೂರಾರು ಕೋಟಿ ಬಂಡವಾಳ ಹೂಡಿಕೆ ಮಾಡಿದರೆ, ಮತ್ತೊಂದು ವರ್ಗ ಸಣ್ಣದಾಗಿ ಬಂಡವಾಳ ಹೂಡಿಕೆ ಮಾಡಿದ್ದಾರೆ. ಯಾರೂ ಆರಂಭದಲ್ಲೇ ದೊಡ್ಡದಾಗಿ ಬೆಳೆಯುವುದಿಲ್ಲ. ಆರಂಭದಿಂದ ಸಣ್ಣ ಹೆಜ್ಜೆ ಇಟ್ಟುಕೊಂಡು ಹೋಗುತ್ತಾರೆ. ಉದ್ಯೋಗಿಗಳಿಗಿಂತ ಉದ್ಯೋಗದಾತರರಿಗೆ ನಾವು ಹೆಚ್ಚಿನ ಶಕ್ತಿ ತುಂಬಬೇಕು ಎಂದು ನಾನು ಕೊವಿಡ್ ಸಮಯದಲ್ಲಿ ಹೇಳಿದ್ದೆ. ನಿಮಗೆ ಕಡಿಮೆ ದರದಲ್ಲಿ ಜಮೀನು, ಕಡಿಮೆ ಬಡ್ಡಿ ಸಾಲ ಸೇರಿದಂತೆ ಅನೇಕ ಪ್ರೋತ್ಸಾಹಗಳನ್ನು ಸರ್ಕಾರ ನೀಡಬೇಕು” ಎಂದರು.

ನಾನು ಇಂಧನ ಸಚಿವನಾಗಿದ್ದಾಗ ಸೋಲಾರ್ ಪಾರ್ಕ್ ನಿರ್ಮಿಸಿದ್ದೇವೆ. ಆಮೂಲಕ ನಮ್ಮ ರಾಜ್ಯ ಇಂಧನ ಸ್ವಾವಲಂಬನೆ ಸಾಧಿಸಿದೆ. ಯಲಹಂಕದಲ್ಲಿ ಅನಿಲದ ಮೂಲಕ ಇಂಧನ ಉತ್ಪಾದನೆ ಕೇಂದ್ರ ಆರಂಭಿಸಲಾಗಿದೆ. ನಮ್ಮ ರಾಜ್ಯದಲ್ಲಿ 250 ಇಂಜಿನಿಯರಿಂಗ್ ಕಾಲೇಜು, ಐಟಿಐ, ಆರೋಗ್ಯ ಕ್ಷೇತ್ರದಲ್ಲಿ 900ಕ್ಕೂ ಹೆಚ್ಚು ಶಿಕ್ಷಣ ಸಂಸ್ಥೆಗಳಿವೆ. ಇಲ್ಲಿ ಓದುವ ಮಕ್ಕಳು ವಿಶ್ವ ಮಟ್ಟದಲ್ಲಿ ಕೆಲಸ ಮಾಡುತ್ತಿದ್ದಾರೆ. ಕಳೆದ 10-15 ವರ್ಷಗಳಿಂದ ಇಲ್ಲೇ ಉದ್ಯೋಗ ಸೃಷ್ಟಿಸಲು ಮುಂದಾಗುತ್ತಿದ್ದಾರೆ. ಇಡೀ ವಿಶ್ವ ಭಾರತವನ್ನು ಕರ್ನಾಟಕ ಹಾಗೂ ಬೆಂಗಳೂರಿನ ಮೂಲಕ ನೋಡುವಂತಾಗಿದೆ” ಎಂದರು.

“ಬೆಂಗಳೂರಿನಲ್ಲಿ ಈ ಹಿಂದೆ 70 ಲಕ್ಷ ಜನಸಂಖ್ಯೆಯಿತ್ತು, ಈಗ ಅದು 1.40 ಕೋಟಿಗೆ ಏರಿಕೆಯಗಿದೆ. ರಸ್ತೆ ಅಗಲೀಕರಣ ಸಾಧ್ಯವಿಲ್ಲ, ಸಂಚಾರ ದಟ್ಟಣೆ ನಿವಾರಣೆಗೆ ನಾವು ಪ್ರಯತ್ನಿಸುತ್ತಿದ್ದು, ಮೆಟ್ರೋ ವಿಸ್ತರಣೆ, ಡಬಲ್ ಡೆಕ್ಕರ್ ಮೇಲ್ಸೇತುವೆ ಮೂಲಕ ಅನೇಕ ಕಾರ್ಯಕ್ರಮ ರೂಪಿಸಿದ್ದೇವೆ. ಮುಂದಿನ ಎಲ್ಲಾ ಮೆಟ್ರೋ ಮಾರ್ಗ ಡಬಲ್ ಡೆಕ್ಕರ್ ಆಗಿರಲಿದೆ. ಇನ್ನು ರಸ್ತೆಗಳ ಅಗಲೀಕರಣಕ್ಕೆ ಭೂಸ್ವಾಧೀನ ಸಮಸ್ಯೆ ಇರುವುದರಿಂದ ಟನಲ್ ರಸ್ತೆ ನಿರ್ಮಿಸಲು ಮುಂದಾಗಿದ್ದೇವೆ. ಇನ್ನು ಬೆಂಗಳೂರಿಗೆ ಹೆಚ್ಚುವರಿಯಾಗಿ 6 ಟಿಎಂಸಿ ನೀರನ್ನು ಜಲಸಂಪನ್ಮೂಲ ಸಚಿವನಾಗಿ ನಾನೇ ಅನುಮೋದನೆ ನೀಡಿದ್ದೇನೆ. ಈ ಸರ್ಕಾರ ನಿಮ್ಮ ಬಗ್ಗೆ ಅಪಾರ ವಿಶ್ವಾಸವಿದೆ” ಎಂದು ಹೇಳಿದರು.

“ನೀವು ಚಿಂತೆ ಮಾಡುವುದು ಬೇಡ. ನಿಮಗೆ ಕಡಿಮೆ ಮೊತ್ತದ ಕಾರ್ಮಿಕರು ಬೇಕಾದಲ್ಲಿ ನೀವು ಎರಡು ಹಾಗೂ ಮೂರನೇ ಹಂತದ ನಗರಗಳತ್ತ ಮುಖ ಮಾಡಬೇಕು. ಮೂಲಸೌಕರ್ಯ ಒದಗಿಸಲಾಗುವುದು. ಈ ಸಮಾವೇಶದಿಂದ 10 ಲಕ್ಷ ಕೋಟಿ ಬಂಡವಾಳ ಹೂಡಿಕೆ ನಿರೀಕ್ಷೆ ಮಾಡಲಾಗಿದ್ದು, 19 ದೇಶಗಳಿಂದ ಅನೇಕ ಸಂಸ್ಥೆಗಳು ಇಲ್ಲಿ ಹೂಡಿಕೆ ಮಾಡಲು ಒಡಂಬಡಿಕೆ ಮಾಡಿಕೊಂಡಿವೆ. ಇನ್ನು ನಮ್ಮ ರಾಜ್ಯದಲ್ಲಿ ನೂತನ ಪ್ರವಾಸೋದ್ಯಮ ನೀತಿ ತರಲಾಗಿದೆ. ಇದರ ಜತೆಗೆ ಕರಾವಳಿ ಭಾಗದಲ್ಲಿ 300 ಕಿ.ಮೀ ಉದ್ದದ ಪ್ರದೇಶಕ್ಕೆ ವಿಶೇಷ ನೀತಿ ರೂಪಿಸಲು ಮುಂದಾಗಿದ್ದೇವೆ. ಕೃಷಿ ಕ್ಷೇತ್ರದಲ್ಲೂ ಅನೇಕ ಬಂಡವಾಳ ಹೂಡಿಕೆಗೆ ಮುಂದಾಗಿದ್ದಾರೆ” ಎಂದು ಹೇಳಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com