
ಬೆಂಗಳೂರು: ಸಾಂಪ್ರದಾಯಿಕ ಮರಳಿನ ಚೀಲಗಳನ್ನು ಜೋಡಿಸಿ ಅದರ ಮರೆಯಲ್ಲಿ ಕುಳಿತು ದಿನದ 24 ಗಂಟೆಗಳಲ್ಲಿ ಕಠಿಣ ಪರಿಸ್ಥಿತಿಗಳನ್ನು ಎದುರಿಸುತ್ತಾ ನಮ್ಮ ದೇಶ ಸೈನಿಕರು ಗಡಿ ಕಾಯುತ್ತಿರುತ್ತಾರೆ.
ದೇಶ ಕಾಯುತ್ತಿರುವ ಭಾರತೀಯ ಸೇನೆ, IAF, BSF, CISF ಮತ್ತು ಇತರರ ಸಿಬ್ಬಂದಿಗಾಗಿ ಚೆನ್ನೈನ ವೈಜ್ಞಾನಿಕ ಮತ್ತು ಕೈಗಾರಿಕಾ ಸಂಶೋಧನಾ ಮಂಡಳಿ (CSIR) ಸ್ಟ್ರಕ್ಚರಲ್ ಎಂಜಿನಿಯರಿಂಗ್ ಸಂಶೋಧನಾ ಕೇಂದ್ರ ಸಂಪೂರ್ಣ ಸ್ಥಳೀಯ ಮೂಲಮಾದರಿಯ ಗುಂಡು ನಿರೋಧಕ ಭದ್ರತಾ ಬೂತ್ ಅಭಿವೃದ್ಧಿಪಡಿಸಿದೆ
ಮದ್ದು-ಗುಂಡು ನಿರೋಧಕ ಈ ಬೂತ್ ಏರೋ ಇಂಡಿಯಾದಲ್ಲಿ ಪಾದಾರ್ಪಣೆ ಮಾಡಿದೆ. ರಕ್ಷಣಾ ಕಾರ್ಯತಂತ್ರದ ಭಾಗವಾಗಿ ಭಾರತೀಯ ಸೇನಾಪಡೆಗಳು, ಸಶಸ್ತ್ರ ಮೀಸಲು ಪಡೆ, ಗಡಿ ಭದ್ರತಾ ಪಡೆ ಹಾಗೂ ಕೇಂದ್ರ ಕೈಗಾರಿಕಾ ಭದ್ರತಾ ಪಡೆ ಸೇರಿದಂತೆ ಇನ್ನಿತರ ಸೇನಾ ತುಕಡಿಗಳಿಗೆ ಸೆಕ್ಯೂರಿಟಿ ಬೂತ್ ಸಹಕಾರಿಯಾಗಲಿದೆ.
ಕ್ಲಿಷ್ಟಕರ ವಾತಾವರಣದಲ್ಲಿ ಏಕಾಏಕಿ ಶತ್ರುಗಳು ದಾಳಿ ನಡೆಸಿದಾಗ ಪ್ರತಿರೋಧ ತೋರುವ ಸಂದರ್ಭದಲ್ಲಿ ಯೋಧರ ಸಾವು-ನೋವುಗಳು ಸಂಭವಿಸುತ್ತಿತ್ತು. ಹೀಗಾಗಿ ಯೋಧರ ಅಮೂಲ್ಯ ಜೀವ ಉಳಿಸಿ ಅವರ ರಕ್ಷಣೆ ಕಲ್ಪಿಸಲು ಸೆಕ್ಯೂರಿಟಿ ಬೂತ್ ಪರಿಣಾಮಕಾರಿಯಾಗಲಿದೆ.
ಈ ಸೆಕ್ಯೂರಿಟಿ ಬೂತ್ ಚಕ್ರಗಳ ನೆರವಿನೊಂದಿಗೆ ಚಲಿಸಲಿದೆ. ಒಂದು ಗಂಟೆಯಲ್ಲಿ ಇದನ್ನು ಜೋಡಿಸಿ ತೆಗೆಯಬಹುದು ಅಥವಾ ಸುಲಭವಾಗಿ ಸಾಗಿಸಬಹುದು. ಇದರ ತೂಕ 1,650 ಕೆ.ಜಿ. ಇದೆ. ಕ್ಲಿಷ್ಣಕರ ಸನ್ನಿವೇಶಗಳಲ್ಲಿ ಬೂತ್ ಸದಾ ತಂಪಾಗಿಸಲು ವಿನೂತನವಾಗಿ ವಿನ್ಯಾಸಗೊಳಿಸಲಾಗಿದೆ. ಇದರೊಳಗೆ ಓರ್ವ ಯೋಧ ಇರಬಹುದಾಗಿದ್ದು ಏಕಾಏಕಿ ಶತ್ರು ಪಡೆ ಗುಂಡಿನ ದಾಳಿ ನಡೆಸಿದರೂ ಸುಲಭವಾಗಿ ತಪ್ಪಿಸಿಕೊಳ್ಳಬಹುದಾಗಿದೆ.
ಖರೀದಿ ವೆಚ್ಚ ಕಡಿಮೆಯಿದೆ. ಮುಂದಿನ ಆರು ತಿಂಗಳಲ್ಲಿ ರಕ್ಷಣಾ ಇಲಾಖೆಯಡಿಯ ವಿವಿಧ ಭದ್ರತಾ ಪಡೆಗಳಿಗೆ ಮಾರಾಟ ಮಾಡುವ ಗುರಿ ಹೊಂದಲಾಗಿದೆ ಎಂದು ಸಿಎಸ್ಐಆರ್ ಹಿರಿಯ ವಿಜ್ಞಾನಿ ಅಮರ್ ಪ್ರಕಾಶ್ ಮಾಹಿತಿ ನೀಡಿದ್ದಾರೆ.
‘ಹೈ-ವೆಲಾಸಿಟಿ ಮಲ್ಟಿ-ಹಿಟ್ ರೆಸಿಸ್ಟೆಂಟ್ ಮೂವಬಲ್ ಪ್ರೊಟೆಕ್ಟಿವ್ ಬೂತ್’ 4 ಅಡಿ X 4 ಅಡಿ X 8 ಅಡಿ ಉದ್ದವಿದ್ದು, "7.62-ಎಂಎಂ ಕ್ಯಾಲಿಬರ್‌ನ ಸಣ್ಣ ಸ್ಪೋಟಕಗಳಿಂದ ಅಪೇಕ್ಷಿತ ರಕ್ಷಣೆಯೊಂದಿಗೆ ಕಾರ್ಯನಿರ್ವಹಿಸಲು ಭದ್ರತಾ ಸಿಬ್ಬಂದಿಗೆ ಬೂತ್ ಸಾಕಷ್ಟು ಸ್ಥಳಾವಕಾಶವನ್ನು ನೀಡುತ್ತದೆ. ಪ್ರತಿ ಬೂತ್‌ನ ಬೆಲೆ 2 ಲಕ್ಷ ರೂ. ಇದೆ ಎಂದು ಮಾಹಿತಿ ನೀಡಿದ್ದಾರೆ.
Advertisement