
ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಮುಖ ಆರೋಪಿಯಾಗಿರುವ ಮುಡಾ( ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ) ಭೂ ಹಗರಣದ ತನಿಖೆ ನಡೆಸುತ್ತಿರುವ ರಾಜ್ಯ ಲೋಕಾಯುಕ್ತರು ತನ್ನ ಅಂತಿಮ ವರದಿ ಸಲ್ಲಿಸಲು ನ್ಯಾಯಾಲಯದಿಂದ ಹೆಚ್ಚಿನ ಕಾಲಾವಕಾಶವನ್ನು ಕೇಳಿದ್ದಾರೆ.
ಮನವಿಯನ್ನು ಪರಿಗಣಿಸಿದ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಸಂತೋಷ್ ಗಜಾನನ ಭಟ್ ಪ್ರಕರಣದ ಮುಂದಿನ ವಿಚಾರಣೆಯನ್ನು ಫೆ.24ಕ್ಕೆ ಮುಂದೂಡಿದ್ದಾರೆ.
ಲೋಕಾಯುಕ್ತ ಎಡಿಜಿಪಿ ಎ. ಸುಬ್ರಮಣ್ಯೇಶ್ವರ ರಾವ್ ಅವರು ವರದಿಯನ್ನು ಪರಿಶೀಲಿಸುತ್ತಿದ್ದಾರೆ ಎಂದು ಪ್ರಾಸಿಕ್ಯೂಷನ್ ಪರವಾಗಿ ವಾದಿಸಿದ ವಕೀಲರು, ತಾಂತ್ರಿಕ ಕಾರಣಗಳಿಂದಾಗಿ ಸಲ್ಲಿಕೆಗೆ ಹೆಚ್ಚುವರಿ ಸಮಯವನ್ನು ಕೋರಿದರು.
ನ್ಯಾಯಮೂರ್ತಿ ಎಂ. ನಾಗಪ್ರಸನ್ನ ನೇತೃತ್ವದ ಹೈಕೋರ್ಟ್ ಪೀಠದ ನಿರ್ದೇಶನದ ಮೇರೆಗೆ ಮೈಸೂರು ಲೋಕಾಯುಕ್ತ ಎಸ್ಪಿ ಟಿ.ಜೆ. ಉದೇಶ್ ಅವರು ಫೆಬ್ರವರಿ 13 ರಂದು ಲೋಕಾಯುಕ್ತ ಎಡಿಜಿಪಿ ಸುಬ್ರಹ್ಮಣ್ಯೇಶ್ವರ ರಾವ್ ಅವರಿಗೆ ಮುಡಾ ಹಗರಣದ ವರದಿಯನ್ನು ಸಲ್ಲಿಸಿದ್ದರು.
ಮುಡಾ ಹಗರಣದ ಅಂತಿಮ ವರದಿಯು ಐದು ಸಂಪುಟಗಳಲ್ಲಿ 550 ಪುಟಗಳನ್ನು ಒಳಗೊಂಡಿದೆ. ಲೋಕಾಯುಕ್ತದ ಕಾನೂನು ಘಟಕ ವರದಿಯನ್ನು ಪರಿಶೀಲಿಸಿ ಚಾರ್ಜ್‌ಶೀಟ್ ಸಲ್ಲಿಸಬೇಕೆ ಅಥವಾ ಮುಕ್ತಾಯ ವರದಿಯನ್ನು ಸಲ್ಲಿಸಬೇಕೆ ಎಂದು ನಿರ್ಧರಿಸಲಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕುಟುಂಬಕ್ಕೆ ಮುಡಾ 14 ನಿವೇಶನಗಳ ಹಂಚಿಕೆಯಲ್ಲಿ ಯಾವುದೇ ರಾಜಕೀಯ ಪ್ರಭಾವ ಕಂಡುಬಂದಿಲ್ಲ ಎಂದು ತನಿಖೆಯಿಂದ ತಿಳಿದುಬಂದಿದೆ ಎಂದು ಮೂಲಗಳು ತಿಳಿಸಿವೆ.
Advertisement