
ಕಾರವಾರ: ಕಾರವಾರ ನೌಕಾ ನೆಲೆಯ ಕುರಿತಾದ ಸೂಕ್ಷ್ಮ ಮಾಹಿತಿಯನ್ನು ಪಾಕಿಸ್ತಾನಕ್ಕೆ ಸೋರಿಕೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಅಧಿಕಾರಿಗಳು ಇಬ್ಬರು ವ್ಯಕ್ತಿಗಳನ್ನು ಬಂಧಿಸಿದ್ದಾರೆ ಎಂದು ಮೂಲಗಳು ಮಂಗಳವಾರ ದೃಢಪಡಿಸಿವೆ.
ಬಂಧಿತ ವ್ಯಕ್ತಿಗಳನ್ನು ಮುದುಗ ಗ್ರಾಮದ ನಿವಾಸಿ ವೆತನಾ ತಾಂಡೆಲ್ ಮತ್ತು ಹಲವಳ್ಳಿ ನಿವಾಸಿ ಅಕ್ಷಯ್ ನಾಯಕ್ ಎಂದು ಗುರುತಿಸಲಾಗಿದೆ. ಹೈದರಾಬಾದ್‌ನ ತಂಡವೊಂದು ಸೋಮವಾರ ಕಾರವಾರಕ್ಕೆ ಆಗಮಿಸಿ ಆರೋಪಿಗಳನ್ನು ವಶಕ್ಕೆ ಪಡೆದುಕೊಂಡಿತು.
ಕಾರವಾರ ನೌಕಾನೆಲೆಯ ಮಾಹಿತಿ ಸೋರಿಕೆ ವಿಚಾರವಾಗಿ 2024ರ ಆಗಸ್ಟ್ ತಿಂಗಳಲ್ಲಿ ಮೂವರನ್ನು ವಿಚಾರಣೆ ನಡೆಸಿದ್ದ ಎನ್ಐಎ ನೋಟೀಸ್ ನೀಡಿ ಬಿಟ್ಟಿತ್ತು. ಆರೋಪಿಗಳು ಹಣಕ್ಕಾಗಿ ಪಾಕಿಸ್ತಾನಕ್ಕೆ ಕಾರವಾರ ನೌಕಾ ನೆಲೆಯ ಛಾಯಾಚಿತ್ರಗಳನ್ನು ಕಳುಹಿಸಿದ್ದಾರೆ ಎಂದು ಆರೋಪಿಸಲಾಗಿದೆ.
2023 ರಲ್ಲಿ ಹೈದರಾಬಾದ್‌ನಲ್ಲಿ ಎನ್ಐಎ ದೀಪಕ್ ಮತ್ತು ಇತರರನ್ನು ಬಂಧಿಸಿದ ನಂತರ ಬೇಹುಗಾರಿಕೆಯಲ್ಲಿ ಅವರ ಪಾತ್ರ ಬೆಳಕಿಗೆ ಬಂದಿತು. ತಮ್ಮ 'ಸೇವೆಗಳಿಗೆ' ಪಾವತಿಯಾಗಿ ಆರೋಪಿಗಳ ಬ್ಯಾಂಕ್ ಖಾತೆಗಳಿಗೆ ಹಣವನ್ನು ಜಮಾ ಮಾಡಲಾಗಿದೆ ಎಂದು ತನಿಖಾಧಿಕಾರಿಗಳು ಕಂಡುಹಿಡಿದಿದ್ದಾರೆ.
ವೇತನಾ ಮತ್ತು ಅಕ್ಷಯ್ ಕಾರವಾರದ ಚಂದ್ಯಾ ಪ್ರದೇಶದಲ್ಲಿರುವ ಐರನ್ ಮತ್ತು ಮರ್ಕ್ಯುರಿ ಎಂಬ ಕಂಪನಿಯೊಂದಿಗೆ ಒಪ್ಪಂದದ ಆಧಾರದ ಮೇಲೆ ಕೆಲಸ ಮಾಡಿದರು. ಈ ಹಿಂದೆ ಸೀ ಬರ್ಡ್ ನೇವಲ್ ಬೇಸ್‌ನ ಕ್ಯಾಂಟೀನ್‌ನಲ್ಲಿ ಗುತ್ತಿಗೆ ಕೆಲಸಗಾರನಾಗಿ ಕೆಲಸ ಮಾಡುತ್ತಿದ್ದ ಸುನಿಲ್ ಪ್ರಸ್ತುತ ಚಾಲಕನಾಗಿ ಕೆಲಸ ಮಾಡುತ್ತಿದ್ದಾನೆ.
ಎನ್‌ಐಎ ಅವರ ಚಟುವಟಿಕೆಗಳ ಕುರಿತು ಹೆಚ್ಚಿನ ಗುಪ್ತಚರ ಮಾಹಿತಿಯನ್ನು ಸಂಗ್ರಹಿಸಿದೆ. ಬಂಧಿತ ವ್ಯಕ್ತಿಗಳನ್ನು ಮಾಹಿತಿ ಸೋರಿಕೆಗೆ ಸಂಬಂಧಿಸಿದಂತೆ ವಿಚಾರಣೆ ನಡೆಸಲಾಗುವುದು. ತನಿಖೆಯ ಭಾಗವಾಗಿ ಎನ್‌ಐಎ ತಂಡವು ಕಾರವಾರದಲ್ಲಿರುವ ಸೀ ಬರ್ಡ್ ನೌಕಾ ನೆಲೆಯ ಅಧಿಕಾರಿಗಳನ್ನು ಭೇಟಿ ಮಾಡುತ್ತಿದೆ. ಈ ಪ್ರಕರಣದಲ್ಲಿ ಇನ್ನಷ್ಟು ವ್ಯಕ್ತಿಗಳು ಭಾಗಿಯಾಗಿರಬಹುದು ಎಂದು ಅಧಿಕಾರಿಗಳು ಶಂಕಿಸಿದ್ದಾರೆ.
Advertisement