
ಬೆಂಗಳೂರು: ನಗರದ ಸಂಚಾರ ದಟ್ಟಣೆಯನ್ನು ಕಡಿಮೆ ಮಾಡಲು ಸರ್ಕಾರ ಮತ್ತು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಪ್ರಸ್ತಾಪಿಸಿರುವ ಮೊಬಿಲಿಟಿ ಯೋಜನೆಯನ್ನು "ಬುದ್ಧಿಹೀನ" ಪ್ರಾಜೆಕ್ಟ್ ಎಂದು ಹಿರಿಯ ನಟ ಪ್ರಕಾಶ್ ಬೆಳವಾಡಿ ಹೇಳಿದ್ದಾರೆ.
ಪ್ರಕಾಶ್ ಬೆಳವಾಡಿ ನೇತೃತ್ವದಲ್ಲಿ ಸೋಮವಾರ ಬೆಂಗಳೂರಿನಲ್ಲಿ ನಡೆದ ವಿವಿಧ ನಾಗರಿಕರ ಗುಂಪುಗಳ ಸಭೆಯಲ್ಲಿ, ಬೆಂಗಳೂರಿನ ಪ್ರಸ್ತಾವಿತ ಯೋಜನೆಗಳ ಬಗ್ಗೆ ಮಾತನಾಡಿದ ಅವರು, ಬೆಂಗಳೂರಿನಲ್ಲಿ ಮೂಲಸೌಕರ್ಯಕ್ಕಾಗಿ ವೈಜ್ಞಾನಿಕ ವಿಧಾನದ ಅಗತ್ಯತೆ ಮತ್ತು ನಗರದ ಆಡಳಿತಕ್ಕಾಗಿ ಮಾಸ್ಟರ್ ಪ್ಲಾನ್ ಬಗ್ಗೆ ಸಾರ್ವಜನಿಕ ಪ್ರತಿನಿಧಿಗಳಿಗೆ ತಿಳಿಸಲು ಸುಮಾರು 50 ನಾಗರಿಕ ಗುಂಪುಗಳನ್ನು ಒಳಗೊಂಡ ವೇದಿಕೆಯಾದ 'ಬೆಂಗಳೂರು ಟೌನ್ ಹಾಲ್' ಅಡಿಯಲ್ಲಿ ಸಾರ್ವಜನಿಕರು ಒಂದಾಗಬೇಕೆಂದು ಮನವಿ ಮಾಡಿದರು. ಈ ನಿಟ್ಟಿನಲ್ಲಿ ಸುಪ್ರೀಂ ಕೋರ್ಟ್‌ನಲ್ಲಿ ಪಿಐಎಲ್ ಸಲ್ಲಿಸುವಂತೆಯೂ ಅವರು ಒತ್ತಾಯಿಸಿದರು.
ಬೆಂಗಳೂರು ಈಗಾಗಲೇ ಜನಸಂಖ್ಯಾ ಗರಿಷ್ಠ ಮಿತಿಯನ್ನು ತಲುಪಿದೆ. ಹೀಗಾಗಿ ಎಲಿವೇಟೆಡ್ ಕಾರಿಡಾರ್ ಅಥವಾ ಸುರಂಗ ಮಾರ್ಗಗಳಂಥ ಯೋಜನೆಗಳಿಂದ ನಗರದ ಜನರ ಜೀವನದ ಗುಣಮಟ್ಟವನ್ನು ಸುಧಾರಿಸಲು ಸಾಧ್ಯವಿಲ್ಲ ಎಂದು ನಾಗರಿಕರ ವೇದಿಕೆ ಪ್ರತಿಪಾದಿಸಿದೆ.
ಸುರಂಗ ಮಾರ್ಗಗಳಂಥ ಯೋಜನೆಗಳ ಬದಲಾಗಿ, ನಗರದ ಸವಾಲುಗಳನ್ನು ಸಮರ್ಪಕವಾಗಿ ಪರಿಹರಿಸುವ ದೃಷ್ಟಿಯಿಂದ ತಜ್ಞರ ಸಲಹೆಗಳನ್ನು ಆಧರಿಸಿ ಪರ್ಯಾಯ ಯೋಜನೆ ರೂಪಿಸಬೇಕು ಎಂದು ವೇದಿಕೆ ಹೇಳಿದೆ.
ಇದೇ ರೀತಿ, ಬೆಂಗಳೂರಿನ ನಾಗರಿಕರ ಕಾರ್ಯಸೂಚಿಯ ಸಂಚಾಲಕ ಸಂದೀಪ್ ಅನಿರುದ್ಧನ್, ಮಾತನಾಡಿ"ಯಾವುದೇ ವೈಯಕ್ತಿಕ ಯೋಜನೆಯ ತಿದ್ದುಪಡಿಗಾಗಿ ಹೋರಾಡುವ ಬದಲು, ಇಡೀ ಆಡಳಿತವನ್ನು ಸುವ್ಯವಸ್ಥಿತಗೊಳಿಸಲು ಸರಿಯಾದ ವೇದಿಕೆಯನ್ನು ಹೊಂದಬೇಕು ಎಂಬ ಬೆಳವಾಡಿ ಅವರ ಮಾತಿಗೆ ನಾನು ಸಮ್ಮತಿಸುತ್ತೇನೆ.
ನಗರಕ್ಕಾಗಿ ಮಹಾನಗರ ಯೋಜನಾ ಸಮಿತಿ ಮತ್ತು ಪರಿಷ್ಕೃತ ಮಾಸ್ಟರ್ ಪ್ಲಾನ್ ಅನ್ನು ಜಾರಿಗೆ ತರಬೇಕು ಮತ್ತು ಇದನ್ನು ಆದ್ಯತೆಯಾಗಿ ಪೂರ್ಣಗೊಳಿಸುವುದು ನಮ್ಮ ಹೋರಾಟವಾಗಿರಬೇಕು" ಎಂದು ಅವರು ಹೇಳಿದರು.
ಈ ಹಿಂದೆ ಯೋಜನೆಯ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದ ಭಾರತೀಯ ವಿಜ್ಞಾನ ಸಂಸ್ಥೆಯ ಸುಸ್ಥಿರ ಸಾರಿಗೆ ಪ್ರಯೋಗಾಲಯದ ಸಂಚಾಲಕ ಆಶಿಶ್ ವರ್ಮಾ ಮಾತನಾಡಿ ಸುರಂಗ ರಸ್ತೆಗಳು ಮತ್ತು ಡಬಲ್ ಡೆಕ್ಕರ್‌ಗಳಂತಹ ಯೋಜನೆಗಳು ಸಾಮೂಹಿಕ ಕ್ಷಿಪ್ರ ಸಾರಿಗೆ ವ್ಯವಸ್ಥೆಯ ಮೇಲೆ ಪರಿಣಾಮ ಬೀರುತ್ತವೆ ಎಂದು ಹೇಳಿದರು. ನಮ್ಮ ಮೆಟ್ರೋ ಮಾರ್ಗಗಳಲ್ಲಿ ಪ್ರಯಾಣಿಕರು ನಿರುತ್ಸಾಹಗೊಳ್ಳುತ್ತಾರೆ ಮತ್ತು ಇದು ವೈಯಕ್ತಿಕ ವಾಹನಗಳ ಬಳಕೆಗೆ ಕಾರಣವಾಗಬಹುದು ಎಂದು ಅವರು ಹೇಳಿದರು.
Advertisement