ರಾಜ್ಯ ರಾಜಕೀಯದಲ್ಲಿ ತೀವ್ರ ಬಿರುಗಾಳಿ ಎಬ್ಬಿಸಿದ್ದ ಮುಡಾ ನಿವೇಶ ಹಂಚಿಕೆ ಹಗರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಅವರ ಪತ್ನಿ ಪಾರ್ವತಿ ಮತ್ತು ಇತರರ ವಿರುದ್ಧ ತನಿಖೆ ಪೂರ್ಣಗೊಳಿಸಿರುವ ಲೋಕಾಯುಕ್ತ ಪೊಲೀಸರು ನ್ಯಾಯಾಲಯಕ್ಕೆ ಬಿ ರಿಪೋರ್ಟ್ ಸಲ್ಲಿಸಲು ಸಿದ್ಧತೆ ನಡೆಸಿದ್ದಾರೆ. ಈ ಸಂಬಂಧ ಲೋಕಾಯುಕ್ತ ಪೊಲೀಸರು ದೂರುದಾರ ಸ್ನೇಹಮಯಿ ಕೃಷ್ಣಗೆ ನೋಟಿಸ್ ನೀಡಿದ್ದು, ಎಲ್ಲಾ ಆರೋಪಗಳು ಸಾಕ್ಷ್ಯಾಧಾರಗಳ ಕೊರತೆಯಿಂದ ಸಾಬೀತಾಗಿಲ್ಲ ಎಂದು ತಿಳಿಸಿದೆ. ಇದರಲ್ಲಿ ನೀವು ನೀಡಿದ ದೂರಿನ ಸಂಬಂಧ A1 ಆರೋಪಿಯಿಂದ A4 ಆರೋಪಿವರೆಗೆ ವಿಚಾರಣೆ ನಡೆಸಲಾಗಿದೆ. ಇದು ಸಿವಿಲ್ ಸ್ವರೂಪ್ಪದ್ದಾಗಿದ್ದು, ತನಿಖೆ ನಡೆಸಲು ತಕ್ಕುದಲ್ಲ, ಕಾನೂನಿನ ತಪ್ಪು ತಿಳುವಳಿಕೆಯಿಂದ ಕೂಡಿದೆ. ಅಲ್ಲದೆ ದೂರಿನಲ್ಲಿ ವಜಾ ಮಾಡಿದ ಪ್ರಕರಣಗಳು ಸಹ ಇದೆ ಎಂದು ನೋಟಿಸ್ ನಲ್ಲಿ ತಿಳಿಸಲಾಗಿದೆ. ಅಂತಿಮ ವರದಿ ನ್ಯಾಯಾಲಯಕ್ಕೆ ಸಲ್ಲಿಕೆಯಾಗುತ್ತಿದೆ. ಆದ್ದರಿಂದ ಇದಕ್ಕೆ ವಿರೋಧವಿದ್ದರೆ ನೋಟಿಸ್ ತಲುಪಿದ ಒಂದು ವಾರದೊಳಗೆ ನ್ಯಾಯಾಧೀಶರಿಗೆ ತಿಳಿಸಿ ಎಂದು ನೋಟಿಸ್ ನಲ್ಲಿ ಉಲ್ಲೇಖಿಸಲಾಗಿದೆ.
ಅನ್ನಭಾಗ್ಯದಡಿ ಫಲಾನುಭವಿಗಳಿಗೆ ನೀಡುತ್ತಿದ್ದ ಹಣದ ಬದಲಿಗೆ ಅಕ್ಕಿಯನ್ನೇ ನೀಡಲು ರಾಜ್ಯ ಸರ್ಕಾರ ತೀರ್ಮಾನಿಸಿದೆ. ಈ ಬಗ್ಗೆ ಮಾತನಾಡಿದ ಆಹಾರ ಸಚಿವ ಕೆ.ಎಚ್ ಮುನಿಯಪ್ಪ ಕೇಂದ್ರ ಸರ್ಕಾರದಿಂದ ಅಕ್ಕಿ ಲಭ್ಯವಿರುವ ಹಿನ್ನೆಲೆ ಹೆಚ್ಚುವರಿಯಾಗಿ 5 ಕೆಜಿ ಅಕ್ಕಿಯನ್ನು OMSS ಯೋಜನೆ ಅಡಿಯಲ್ಲಿ ಖರೀದಿಸಿ ಈ ತಿಂಗಳಿನಿಂದಲೇ ಅಕ್ಕಿ ವಿತರಿಸಲಾಗುತ್ತದೆ ಎಂದರು. ಕಾಂಗ್ರೆಸ್ ಸರ್ಕಾರದ ಮಹತ್ವಕಾಂಕ್ಷಿಯ ಗ್ಯಾರಂಟಿ ಯೋಜನೆಗಳಾದ ಗೃಹಲಕ್ಷ್ಮಿ, ಅನ್ನಭಾಗ್ಯದ ಹಣ ಕಳೆದ ನಾಲ್ಕೈದು ತಿಂಗಳಿನಿಂದ ಖಾತೆಗಳಿಗೆ ವರ್ಗಾವಣೆ ಮಾಡಿಲ್ಲ ಎಂದು ಬಿಜೆಪಿ ಟೀಕಿಸಿತ್ತು. ಈಮಧ್ಯೆ, ಇದಕ್ಕೆ ಪ್ರತಿಕ್ರಿಯಿಸಿರುವ ಕೆಜೆ ಜಾರ್ಜ್ ಗೃಹಲಕ್ಷ್ಮಿ, ಅನ್ನಭಾಗ್ಯ ಹಣವೇನು ತಿಂಗಳ ಸಂಬಳ ಅಲ್ವಲ್ಲಾ ಎಂದು ಉಡಾಫೆಯ ಉತ್ತರ ನೀಡಿದ್ದು ಇದೀಗ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.
ಮಾರ್ಚ್ 7ರಂದು ರಾಜ್ಯ ಬಜೆಟ್ ಮಂಡನೆಗೂ ಮುನ್ನ ರಾಜ್ಯದಲ್ಲಿನ ಹಣಕಾಸು ಪರಿಸ್ಥಿತಿ ಕುರಿತು ಶ್ವೇತ ಪತ್ರ ಹೊರಡಿಸಬೇಕು ಎಂದು ಬಿಜೆಪಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಒತ್ತಾಯಿಸಿದೆ. ಇಂದು ಸುದ್ದಿಗೋಷ್ಠಿ ನಡೆಸಿದ ಮಾತನಾಡಿದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, ಕಾಂಗ್ರೆಸ್ ಸರ್ಕಾರದ ಐದು ಗ್ಯಾರಂಟಿ ಯೋಜನೆಗಳಿಂದಾಗಿ ಖಜಾನೆ ಬರಿದಾಗಿದ್ದು, ರಾಜ್ಯ ಆರ್ಥಿಕ ದಿವಾಳಿಯತ್ತ ಸಾಗುತ್ತಿದೆ ಎಂದು ಆರೋಪಿಸಿದರು. ಅಸಮರ್ಪಕ ಹಣಕಾಸು ನಿರ್ವಹಣೆಯಿಂದಾಗಿ KSRTC ಮುಚ್ಚುವ ಹಂತ ತಲುಪಿದೆ. ಕಾಂಗ್ರೆಸ್ ಸರ್ಕಾರದ ಗ್ಯಾರಂಟಿಗಳಿಂದಾಗಿ ರಾಜ್ಯದ ಜನರು ದೊಡ್ಡ ಬೆಲೆ ತೆತ್ತಿದ್ದಾರೆ. ಆಸ್ತಿ ಮಾರ್ಗಸೂಚಿ ಮೌಲ್ಯ ಶೇ.30ರಷ್ಟು, ಆಸ್ತಿ ನೋಂದಣಿ ಶುಲ್ಕ ಶೇ. 600ರಷ್ಟು, ಮೆಟ್ರೋ ಪ್ರಯಾಣ ದರ ಶೇ.50 ಹಾಗೂ ಹಾಲಿನ ಬೆಲೆ ಶೇ. 15ರಷ್ಟು ಏರಿಕೆಯಾಗಿದೆ ಎಂದು ಟೀಕಿಸಿದರು.
ಕೆಲಸ ಮಾಡುತ್ತಿದ್ದಾಗ ಹಠಾತ್ ಹೃದಯಾಘಾತ ಉಂಟಾಗಿ ಮೃತಪಟ್ಟ ಬಿಹಾರದ ವಲಸೆ ಕಾರ್ಮಿಕನ ಮೃತದೇಹವನ್ನು ಪ್ರಾಣಿಯ ತರಹ ಎಳೆದೊಯ್ದಿರುವ ಆಘಾತಕಾರಿ ಘಟನೆ ಕಲಬುರಗಿ ಜಿಲ್ಲೆಯಲ್ಲಿ ನಡೆದಿದೆ. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು ಸಾರ್ವಜನಿಕರಿಂದ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಕಲಬುರಗಿಯ ಸೇಡಂ ಪಟ್ಟಣದ ಸಮೀಪದ ಕೋಡ್ಲಾ ಗ್ರಾಮದ ಶ್ರೀ ಸಿಮೆಂಟ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾಗ ಹೃದಯಾಘಾತವಾಗಿ ಬಿಹಾರದ ವಲಸೆ ಕಾರ್ಮಿಕ ಚಂದನ್ ಸಿಂಗ್ ಮೃತಪಟ್ಟಿದ್ದರು. ಅವರಿಗೆ ಲೋ ಬಿಪಿ ಇತ್ತು ಎನ್ನಲಾಗಿದೆ. ಸಾವಿಗೆ ನಿಖರ ಕಾರಣವನ್ನು ತಿಳಿಯಲು ಪೊಲೀಸರು ಮರಣೋತ್ತರ ಪರೀಕ್ಷೆಯ ವರದಿಗಾಗಿ ಕಾಯುತ್ತಿದ್ದಾರೆ.
ಸ್ನೇಹಿತರ ಜೊತೆ ಈಜಲು ಹೋಗಿದ್ದ ವೈದ್ಯೆಯೊಬ್ಬಳು 20 ಅಡಿ ಎತ್ತರದಿಂದ ತುಂಗಭದ್ರಾ ನದಿಗೆ ಬಿದ್ದಿದ್ದು ನೀರಿನ ಸೆಳೆತಕ್ಕೆ ಸಿಲುಕಿ ನಾಪತ್ತೆಯಾಗಿದ್ದಾರೆ. ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಸಣಾಪುರದ ಬಳಿ ನದಿಗೆ ಹೈದರಾಬಾದ್ ಮೂಲದ 26 ವರ್ಷದ ಅನನ್ಯ ರಾವ್ ಜಿಗಿದಿದ್ದಳು. ಆದರೆ ನೀರಿನ ಹರಿವು ಹೆಚ್ಚಾಗಿದ್ದರಿಂದ ಈಜಲು ಸಾಧ್ಯವಾಗದೇ ಮುಳುಗಿದ್ದಾಳೆ. ಹೈದರಬಾದ್ ಖಾಸಗಿ ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ಅನನ್ಯರಾವ್, ಮೂವರು ಸ್ನೇಹಿತರ ಜತೆ ಪ್ರವಾಸಕ್ಕೆ ಬಂದಿದ್ದು, ಇಂದು ಬೆಳಗ್ಗೆ ನದಿಗೆ ಈಜಲು ತೆರಳಿದ್ದರು. ಅನನ್ಯ ನದಿಗೆ ಜಿಗಿದ ದೃಶ್ಯಗಳನ್ನು ಸ್ನೇಹಿತರೆ ಸೆರೆ ಹಿಡಿದಿದ್ದರು. ಸ್ಥಳಕ್ಕೆ ಗಂಗಾವತಿ ಪೊಲೀಸರು ಹಾಗೂ ಅಗ್ನಿಶಾಮಕ ಸಿಬ್ಬಂದಿ ಭೇಟಿ ನೀಡಿದ್ದು, ವೈದ್ಯೆಗಾಗಿ ಶೋಧ ಕಾರ್ಯ ನಡೆಸಿದ್ದಾರೆ.
Advertisement