
ಬೆಂಗಳೂರು: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ(ಮುಡಾ)ದ ನಿವೇಶನ ಹಂಚಿಕೆ ಹಗರಣಕ್ಕೆ ಸಂಬಂಧಿಸಿದ ಜಾರಿ ನಿರ್ದೇಶನಾಲಯ(ಇಡಿ)ದ ಸಮನ್ಸ್ ರದ್ದುಗೊಳಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಿ ಮತ್ತು ಸಚಿವ ಬೈರತಿ ಸುರೇಶ್ ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್, ಗುರುವಾರ ಆದೇಶ ಕಾಯ್ದಿರಿಸಿದೆ.
ಜನವರಿ 27 ರಂದು, ಮುಡಾ ನಿವೇಶನ ಹಂಚಿಕೆ ಪ್ರಕರಣದಲ್ಲಿ ಪಾರ್ವತಿ ಮತ್ತು ಸಚಿವ ಬೈರತಿ ಸುರೇಶ್ ಅವರಿಗೆ ವಿಚಾರಣೆಗೆ ಹಾಜರಾಗುವಂತೆ ಇಡಿ ನೀಡಿದ್ದ ನೋಟಿಸ್‌ಗೆ ಹೈಕೋರ್ಟ್ ತಡೆ ನೀಡಿತ್ತು.
ವಿಚಾರಣೆಯ ಸಮಯದಲ್ಲಿ, ಪಾರ್ವತಿ ಪರ ವಾದ ಮಂಡಿಸಿದ ಹಿರಿಯ ವಕೀಲ ಸಂದೇಶ್ ಜೆ ಚೌಟ ಅವರು, ಈಗಾಗಲೇ ಪ್ರಶ್ನಾರ್ಹ ನಿವೇಶನಗಳನ್ನು ಮರಳಿಸಲಾಗಿದೆ. ಸೈಟ್ ಗಳನ್ನು ಮರಳಿಸಿರುವುದಿರಂದ ಇಡಿಗೆ ತನಿಖೆ ನಡೆಸುವ ಅಧಿಕಾರ ಇಲ್ಲ. ಅಪರಾಧದಿಂದ ಗಳಿಸಿದ ಸಂಪತ್ತಿದ್ದರೆ ಮಾತ್ರ ಇಡಿ ತನಿಖೆ ನಡೆಸಬಹುದು. ಆದರೆ ಸೈಟ್ ಗಳನ್ನು ಮರಳಿಸಿದ ನಂತರ ಇಡಿ ತನಿಖೆ ಆರಂಭಿಸಿದೆ. ಅಪರಾಧದಿಂದ ಗಳಿಸಿದ ಹಣ ಚಟುವಟಿಕೆಗೆ ಬಳಕೆಯಾಗಬೇಕು. ಇಲ್ಲವಾದರೆ ಪಿಎಂಎಲ್‌ಎ ಕಾಯ್ದೆಯ ಅಂಶಗಳು ಅನ್ವಯವಾಗುವುದಿಲ್ಲವೆಂದು ವಾದಿಸಿದರು.
ಪಾರ್ವತಿ ಅವರು ಅಕ್ಟೋಬರ್ 1, 2024 ರಂದು ವಿವಾದಿತ ಸೈಟ್ ಗಳನ್ನು ಹಿಂದಿರುಗಿಸಿದ್ದಾರೆ|ಮುಡಾದ 14 ಸೈಟ್ ಗಳಲ್ಲದೇ 1708 ಸೈಟ್ ಗಳ ಬಗ್ಗೆಯೂ ತನಿಖೆ ನಡೆಸುತ್ತಿದೆ. ಈಗಾಗಲೇ 160 ಸೈಟ್ ಗಳನ್ನು ಇಡಿ ತಾತ್ಕಾಲಿಕ ಜಪ್ತಿ ಮಾಡಿದೆ. ತನ್ನ ಕಾರ್ಯವ್ಯಾಪ್ತಿ ಮೀರಿ ಇಡಿ ಪರ್ಯಾಯ ತನಿಖೆ ನಡೆಸುತ್ತಿದೆ. ಇಡಿ ತಾತ್ಕಾಲಿಕ ಜಪ್ತಿ ಆದೇಶದಲ್ಲಿ ಹಲವು ಅಂಶಗಳನ್ನು ಪ್ರಸ್ತಾಪಿಸಿದೆ. ಭೂಸ್ವಾಧೀನ, ಭೂಪರಿವರ್ತನೆ ಇತ್ಯಾದಿಗಳ ಬಗ್ಗೆಯೂ ತನಿಖೆ ನಡೆಸಿದೆ. ಲೋಕಾಯುಕ್ತ ಪೊಲೀಸರ ತನಿಖಾ ವ್ಯಾಪ್ತಿಯಲ್ಲಿ ಇಡಿ ಪ್ರವೇಶಿಸಿದೆ. ಮುಡಾಗೆ ಹಿಂತಿರುಗಿಸಿರುವ 14 ಸೈಟ್ಗಳನ್ನು ಇಡಿ ಜಪ್ತಿ ಮಾಡಿಲ್ಲ. ಆದರೆ ಇತರೆ 160 ಸೈಟ್ ಗಳನ್ನು ಇಡಿ ಜಪ್ತಿ ಮಾಡಿದೆ. ಈಗಾಗಲೇ ಲೋಕಾಯುಕ್ತ ಪೊಲೀಸರು ಬಿ ರಿಪೋರ್ಟ್ ಸಲ್ಲಿಸಿದ್ದಾರೆ. ತನಿಖೆಯಲ್ಲಿ ಯಾವುದೇ ಅಕ್ರಮ ಕಂಡುಬಂದಿಲ್ಲವೆಂದು ವರದಿ ಸಲ್ಲಿಸಿದ್ದಾರೆ ಎಂದು ಸಿಎಂ ಪತ್ನಿ ಪಾರ್ವತಿ ಪರ ಸಂದೇಶ್ ಚೌಟ ವಾದ ಮಂಡಿಸಿದ್ದರು.
ಲೋಕಾಯುಕ್ತರು ಎಫ್‌ಐಆರ್ ದಾಖಲಿಸಿದ 4 ದಿನಗಳಲ್ಲೇ ಇಡಿ ಇಸಿಐಆರ್ ದಾಖಲಿಸಿದೆ. ಲೋಕಾಯುಕ್ತ ಪೊಲೀಸರ ತನಿಖೆಯನ್ನೇ ಇಡಿ ಪುನರಾವರ್ತಿಸುತ್ತಿದೆ ಎಂದು ವಾದಿಸಿ EDಯ ತನಿಖಾ ವ್ಯಾಪ್ತಿಯನ್ನು ಅವರು ಪ್ರಶ್ನಿಸಿದರು.
ಪ್ರತಿವಾದ ಮಂಡಿಸಿದ ಇಡಿ ಪರ ಹೆಚ್ಚುವರಿ ಸಾಲಿಸಿಟರ್ ಜನರಲ್ ಅರವಿಂದ್ ಕಾಮತ್ ಅವರು, ನಡೆಯುತ್ತಿರುವ ಇಡಿ ತನಿಖೆಯನ್ನು ಸಮರ್ಥಿಸಿಕೊಂಡರು. ಮುಡಾ ನಿವೇಶನ ಹಂಚಿಕೆ ಹಗರಣವು ಕೆಲವು ವಹಿವಾಟುಗಳಿಗೆ ಸೀಮಿತವಾಗಿಲ್ಲ, ಬದಲಾಗಿ ವ್ಯವಸ್ಥಿತ ಉಲ್ಲಂಘನೆಗಳನ್ನು ಸೂಚಿಸುತ್ತದೆ ಎಂದು ವಾದಿಸಿದರು.
ರಾಜಕಾರಣಿಗಳು ಮತ್ತು ಪ್ರಮುಖ ಅಧಿಕಾರಿಗಳ ಸಂಬಂಧಿಕರಿಗೆ ನಿವೇಶನಗಳನ್ನು ಹಂಚಿಕೆ ಮಾಡಲಾಗುತ್ತಿರುವ ಮಾದರಿಯನ್ನು ಇಡಿ ಬಹಿರಂಗಪಡಿಸಿದೆ ಎಂದು ಕಾಮತ್ ಹೇಳಿದರು.
ಈ ಪ್ರಕರಣವು ಭ್ರಷ್ಟಾಚಾರ ತಡೆ ಕಾಯ್ದೆಯಡಿ ಭ್ರಷ್ಟಾಚಾರವನ್ನು ಒಳಗೊಂಡಿದೆ. ತನಿಖೆಯು ಕೇವಲ 14 ನಿವೇಶನಗಳ ಬಗ್ಗೆ ಅಲ್ಲ. ಮುಡಾದ ಅಕ್ರಮಗಳ ಬಗ್ಗೆ ಇಡಿ ತನಿಖೆ ನಡೆಸುತ್ತಿದೆ. ಮುಡಾ ಮಾಜಿ ಆಯುಕ್ತರ ಸಂಬಂಧಿಗಳಿಗೆ ಹಲವು ಸೈಟ್ ಹಂಚಲಾಗಿದೆ ಎಂದರು.
ವಿಚಾರಣೆಯ ಸಮಯದಲ್ಲಿ, ಹೈಕೋರ್ಟ್ ಇಡಿಯ ತನಿಖೆಯು ನಿಜವಾಗಿಯೂ ಹಣ ವರ್ಗಾವಣೆಯನ್ನು ಒಳಗೊಂಡಿದೆಯೇ ಅಥವಾ ಲೋಕಾಯುಕ್ತದ ಬಿ-ರಿಪೋರ್ಟ್‌ನಿಂದ ಈಗಾಗಲೇ ಮುಚ್ಚಲ್ಪಟ್ಟ ಆರಂಭಿಕ ಭ್ರಷ್ಟಾಚಾರ ತನಿಖೆಯ ವಿಸ್ತರಣೆಯಾಗಿದೆಯೇ ಎಂದು ಪರಿಶೀಲಿಸಿತು.
"ಈ ಪ್ರಕರಣದಲ್ಲಿ ಅಪರಾಧದ ಆದಾಯ ಎಲ್ಲಿದೆ? ಇಲ್ಲಿ ನಿವೇಶನ ಖರೀದಿ ಅಥವಾ ಮಾರಾಟವಾಗಿಲ್ಲ. ಭೂ ಬಳಕೆಗೆ ಬದಲಾಗಿ ನಿವೇಶನಗಳನ್ನು ಹಂಚಿಕೆ ಮಾಡಲಾಗಿದೆ. ಅಪರಾಧದ ಆದಾಯವು ಈ ಪ್ರಕ್ರಿಯೆಯಿಂದ ಹೊರಹೊಮ್ಮಿದೆ ಎಂಬುದಕ್ಕೆ ಯಾವುದೇ ಪುರಾವೆಗಳಿಲ್ಲ" ಎಂದು ನ್ಯಾಯಾಲಯ ಹೇಳಿತು.
ಆದಾಗ್ಯೂ, ಲೋಕಾಯುಕ್ತ ತನ್ನ ಪ್ರಕರಣವನ್ನು ಮುಕ್ತಾಯಗೊಳಿಸಿದ್ದರೂ ಸಹ, ಸ್ವತಂತ್ರ ತನಿಖೆ ನಡೆಸುವ ಅಧಿಕಾರ ಇಡಿಗೆ ಇದೆ ಎಂದು ಕಾಮತ್ ಸಮರ್ಥಿಸಿಕೊಂಡರು.
ವಾದ, ಪ್ರತಿವಾದ ಆಲಿಸಿದ ಹೈಕೋರ್ಟ್ ತನ್ನ ತೀರ್ಪನ್ನು ಕಾಯ್ದಿರಿಸಿದ್ದು, ಲೋಕಾಯುಕ್ತ ಪ್ರಕರಣದ ಮುಂದಿನ ವಿಚಾರಣೆಯನ್ನು ಫೆಬ್ರವರಿ 24 ಕ್ಕೆ ನಿಗದಿಪಡಿಸಲಾಗಿದೆ.
Advertisement