News headlines 22-02-2025| ಮಾಜಿ ಸಂಸದ ಪ್ರತಾಪ್ ಸಿಂಹ ವಿರುದ್ಧ FIR, ರಾಜ್ಯ ಸರ್ಕಾರ- ರಾಜ್ಯಪಾಲರ ನಡುವೆ ತಿಕ್ಕಾಟ; 3 ಮಸೂದೆಗಳು ವಾಪಸ್, ಮಹಾರಾಷ್ಟ್ರ- ಕರ್ನಾಟಕದ ನಡುವೆ ಬಸ್ ಸಂಚಾರ ಸ್ಥಗಿತ!

News headlines
ಸುದ್ದಿ ಮುಖ್ಯಾಂಶಗಳುonline desk

1. ಮಹಾರಾಷ್ಟ್ರ- ಕರ್ನಾಟಕದ ನಡುವೆ ಬಸ್ ಸಂಚಾರ ಸ್ಥಗಿತ!

ಬೆಳಗಾವಿಯ ಹೊರವಲಯದಲ್ಲಿ ಮರಾಠಿ ಭಾಷೆಯಲ್ಲಿ ಮಾತನಾಡಲಿಲ್ಲವೆಂದು KSRTC ಬಸ್ ಕಂಡಕ್ಟರ್ ಮೇಲೆ ಮರಾಠಿ ಪುಂಡರು ಹಲ್ಲೆ ನಡೆಸಿರುವ ಘಟನೆ ತೀವ್ರ ಸ್ವರೂಪ ಪಡೆದಿದೆ. ಕಂಡಕ್ಟರ್ ಮೇಲೆ ಹಲ್ಲೆ ಖಂಡಿಸಿ ಕನ್ನಡಪರ ಸಂಘಟನೆಗಳು ಪ್ರತಿಭಟನೆ ನಡೆಸುತ್ತಿದ್ದು, ಬೆಳಗಾವಿ ಗಡಿಯಲ್ಲಿ ಉದ್ವಿಗ್ನ ವಾತಾವರಣ ನಿರ್ಮಾವಾಗಿರುವ ಹಿನ್ನೆಲೆಯಲ್ಲಿ ಮಹಾರಾಷ್ಟ್ರದಿಂದ ರಾಜ್ಯಕ್ಕೆ ಬರುವ ಸಾರಿಗೆ ಬಸ್ ಸಂಚಾರವನ್ನು ಮಹಾರಾಷ್ಟ್ರ ಸರ್ಕಾರ ಸ್ಥಗಿತಗೊಳಿಸಿದೆ. ಸಣ್ಣ ಬಾಳೇಕುಂದ್ರಿ ಗ್ರಾಮದಲ್ಲಿ ಯುವಕನ ಜೊತೆ ಬಸ್ ಹತ್ತಿದ ಯುವತಿಯೋರ್ವಳು ಮರಾಠಿಯಲ್ಲಿ ಮಾತನಾಡಿದ್ದಳು. ಆಗ ನಾನು ನನಗೆ ಮರಾಠಿ ಬರಲ್ಲ, ಕನ್ನಡದಲ್ಲಿ ಮಾತನಾಡಿ ಎಂದು ಹೇಳಿದ್ದಕ್ಕೆ ಜನರನ್ನು ಕರೆಸಿ ನನ್ನ ಮೇಲೆ ಹಲ್ಲೆ ಮಾಡಿದ್ದಾರೆ ಎಂದು 51 ವರ್ಷದ ಕಂಡಕ್ಟರ್ ಮಹಾದೇವಪ್ಪ ಮಲ್ಲಪ್ಪ ಹುಕ್ಕೇರಿ ತಿಳಿಸಿದ್ದಾರೆ. ಸದ್ಯ ಪ್ರಕರಣ ಸಂಬಂಧ ಪೊಲೀಸರು ನಾಲ್ವರನ್ನು ಬಂಧಿಸಿದ್ದಾರೆ.

2. ನಿರ್ವಾಹಕನ ವಿರುದ್ಧ ಪೋಕ್ಸೋ ಪ್ರಕರಣ

ಮರಾಠಿ ಮಾತನಾಡದ ನಿರ್ವಾಹಕನ ಮೇಲೆ ಪುಂಡರು ಹಲ್ಲೆ ನಡೆಸಿದ ಪ್ರಕರಣದ ಸಂಬಂಧ ಮತ್ತೊಂದು ಬೆಳವಣಿಗೆಯಲ್ಲಿ ಹಲ್ಲೆಗೊಳಗಾದ ನಿರ್ವಾಹಕನ ವಿರುದ್ಧವೇ POCSO ಪ್ರಕರಣ ದಾಖಲಿಸಲಾಗಿದೆ. ಬಸ್‌ನಲ್ಲೇ ಕೆಟ್ಟ ದೃಷ್ಟಿಯಿಂದ ನೋಡಿ ಬಾಲಕಿ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ್ದಾರೆ ಎಂದು ಆರೋಪಿಸಿ ಮಾರಿಹಾಳ ಪೊಲೀಸ್‌ ಠಾಣೆಯಲ್ಲಿ ಎಫ್‌ಐಆರ್‌ ದಾಖಲಾಗಿದೆ. ಈ ಪ್ರಕರಣ ರಾಜ್ಯಾದ್ಯಂತ ಸುದ್ದಿಯಾಗುತ್ತಿದ್ದಂತೆ ಇಂದು ನಸುಕಿನ ಜಾವ 2:30ರ ವೇಳೆಗೆ ಬಾಲಕಿಯಿಂದ ದೂರು ದಾಖಲಾಗಿದೆ. ಪೋಕ್ಸೋ ಬಗ್ಗೆ ಶುಕ್ರವಾರ ಬೆಳಗ್ಗೆಯಿಂದ ರಾತ್ರಿಯವರೆಗೂ ಎಲ್ಲೂ ಪ್ರಸ್ತಾಪವೇ ಆಗಿಲ್ಲ. ಆದರೆ ನಿರ್ವಾಹಕ ಆಸ್ಪತ್ರೆಗೆ ದಾಖಲಾಗುತ್ತಿದ್ದಂತೆ ರಾತ್ರೋರಾತ್ರಿ ಪೋಕ್ಸೋ ಪ್ರಕರಣ ದಾಖಲಾಗಿರುವುದು ಹಲವು ಅನುಮಾನಗಳನ್ನು ಹುಟ್ಟಿಹಾಕಿದೆ. ಇನ್ನು ನಿರ್ವಾಹಕನ ವಿರುದ್ಧವೇ ಪೋಕ್ಸೋ ಪ್ರಕರಣ ದಾಖಲಿಸಿರುವ ಕ್ರಮವನ್ನು ಖಂಡಿಸಿ ಕನ್ನಡಪರ ಸಂಘಟನೆಗಳು ತಮ್ಮ ಪ್ರತಿಭಟನೆ ತೀವ್ರಗೊಳಿಸಿವೆ.

3. ಮಾಜಿ ಸಂಸದ ಪ್ರತಾಪ್ ಸಿಂಹ ವಿರುದ್ಧ FIR

ಉದಯಗಿರಿ ಪೊಲೀಸ್ ಠಾಣೆ ಮೇಲಿನ ದಾಂಧಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಸ್ಲಿಮರ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ ಆರೋಪದ ಮೇಲೆ ಬಿಜೆಪಿ ಮಾಜಿ ಸಂಸದ ಪ್ರತಾಪ್‌ ಸಿಂಹ ವಿರುದ್ಧ ಎಫ್‌ಐಆರ್‌ ದಾಖಲಾಗಿದೆ. ಮೈಸೂರು ಯುವ ಕಾಂಗ್ರೆಸ್‌ ಮುಖಂಡ ಸೈಯದ್‌ ಅಬ್ರರ್ ನೀಡಿದ ದೂರಿನ ಆಧಾರದಲ್ಲಿ ಪ್ರತಾಪ್ ಸಿಂಹ ವಿರುದ್ಧ ಉದಯಗಿರಿ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಗಲಭೆ ಪ್ರಕರಣದ ಬಗ್ಗೆ ಪ್ರತಿಕ್ರಿಯೆ ನೀಡಿದ್ದ ಪ್ರತಾಪ್ ಸಿಂಹ, ‘ದೇಶ ಇಬ್ಭಾಗವಾದಾಗಲೇ ಮುಸ್ಲಿಮರು ಈ ದೇಶ ಬಿಟ್ಟು ತೊಲಗಿಬಿಡಬೇಕಿತ್ತು. ಇಲ್ಲಿ ಉಳಿದಕೊಂಡವರು ಮಕ್ಕಳನ್ನು ಹುಟ್ಟಿಸುವುದು ಬಿಟ್ಟು ಬೇರೇನು ಮಾಡುತ್ತಿದ್ದಾರೆ ಹೇಳಿ? ಎಂದು ಹೇಳಿದ್ದರು. ದೆಹಲಿಯಲ್ಲಿ ಬಿಜೆಪಿ ಗೆಲುವು ಸಾಧಿಸಿದ ಹಿನ್ನೆಲೆಯಲ್ಲಿ ಕೇಜ್ರಿವಾಲ್ ಅವರನ್ನು ಟೀಕಿಸಲು ಸೋಷಿಯಲ್ ಮಿಡೀಯಾದಲ್ಲಿ ವ್ಯಕ್ತಿಯೊಬ್ಬ ಮಾಡಿದ್ದ ಪೋಸ್ಟ್ ಮುಸ್ಲಿಂ ಸಮುದಾಯವನ್ನು ಕೆರಳಿಸಿತ್ತು.

4. ರಾಜ್ಯ ಸರ್ಕಾರ- ರಾಜ್ಯಪಾಲರ ನಡುವೆ ತಿಕ್ಕಾಟ; 3 ಮಸೂದೆಗಳು ವಾಪಸ್

ರಾಜ್ಯ ಸರ್ಕಾರ ಮತ್ತು ರಾಜ್ಯಪಾಲರ ನಡುವಿನ ಸಂಘರ್ಷ ಮುಂದುವರಿದಿದೆ. ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್​ ವಿಶ್ವವಿದ್ಯಾಲಯ ತಿದ್ದುಪಡಿ ಮಸೂದೆ-2024 ಸೇರಿದಂತೆ ಒಟ್ಟು ಮೂರು ಮಸೂದೆಗಳಿಗೆ ಸಹಿ ಹಾಕದೆ ರಾಜ್ಯಪಾಲ ಥಾವರ್ ಚಂದ್​ ಗೆಹ್ಲೋಟ್​ ಸರ್ಕಾರಕ್ಕೆ ವಾಪಸ್ ಕಳುಸಿದ್ದಾರೆ. ಈ ತಿದ್ದುಪಡಿಯು ಬದಲಾವಣೆ ತರುವ ಉದ್ದೇಶಕ್ಕಿಂತಲೂ ಅಧಿಕಾರ ಕಿತ್ತುಕೊಳ್ಳುವ ಯತ್ನವಾಗಿದೆ ಎಂದು ರಾಜ್ಯಪಾಲರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಕರ್ನಾಟಕ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್​ ವಿಶ್ವವಿದ್ಯಾಲಯ ತಿದ್ದುಪಡಿ ಮಸೂದೆಯನ್ನು ಚಳಿಗಾಲದ ಅಧಿವೇಶನದಲ್ಲಿ ಮಂಡಿಸಲಾಗಿತ್ತು. ಈ ಮಸೂದೆ ಪ್ರಕಾರ ವಿಶ್ವವಿದ್ಯಾಲಯಗಳಿಗೆ ರಾಜ್ಯಾಪಾಲರ ಬದಲು ಮುಖ್ಯಮಂತ್ರಿಗಳು ಕುಲಾಧಿಪತಿಗಳಾಗಲಿದ್ದಾರೆ. ಈ ಮೂಲಕ ರಾಜ್ಯಪಾಲರ ಅಧಿಕಾರವನ್ನು ಮೊಟಕುಗೊಳಿಸಲಾಗಿದೆ.

5. ತಡರಾತ್ರಿವರೆಗೂ ಪೊಲೀಸ್ ಠಾಣೆಯಲ್ಲಿ ಗರ್ಭಿಣಿ ಮಹಿಳೆ: ವ್ಯಾಪಕ ಟೀಕೆ, ಆಕ್ರೋಶ

ಬೆಂಗಳೂರಿನ ಪೊಲೀಸ್ ಠಾಣೆಯಲ್ಲಿ ಗರ್ಭಿಣಿ ಮಹಿಳೆಯೊಬ್ಬರು ತಡರಾತ್ರಿವರೆಗೂ ಸಂಕಷ್ಟ ಅನುಭವಿಸಿದ ಘಟನೆಯೊಂದು ಬೆಳಕಿಗೆ ಬಂದಿದೆ. ಶೇಷಾದ್ರಿಪುರಂ ಪೊಲೀಸ್ ಠಾಣೆಯಲ್ಲಿ ಕಳೆದ ದಿನ ರಾತ್ರಿ ತಡರಾತ್ರಿಯವರೆಗೂ ಗರ್ಭಿಣಿ ಮಹಿಳೆ ಪರದಾಡಿದ್ದಾರೆ. ರಾತ್ರಿ 10 ಗಂಟೆವರೆಗೂ ಠಾಣೆಯಲ್ಲಿ ನಾಲ್ಕು ತಿಂಗಳ ಗರ್ಭಿಣಿಯನ್ನು ಇರಿಸಲಾಗಿತ್ತು ಎಂಬ ಆರೋಪ ಕೇಳಿ ಬಂದಿದೆ. ನಿಯಮದ ಪ್ರಕಾರ ಗರ್ಭಿಣಿ ಮಹಿಳೆಯನ್ನು ಸಂಜೆ ಆರು ಗಂಟೆ ಒಳಗೆ ಸಾಂತ್ವಾನ ಕೇಂದ್ರಕ್ಕೆ ಕಳುಹಿಸಬೇಕು. ಆದರೆ ರಾತ್ರಿ 10 ಗಂಟೆವರೆಗೆ ಠಾಣೆಯಲ್ಲಿಯೇ ಪೊಲೀಸರು ಗರ್ಭಿಣಿಯನ್ನು ಇರಿಸಿಕೊಂಡಿದ್ದು, ಈ ಬಗ್ಗೆ ಆಕ್ರೋಶಗಳು ವ್ಯಕ್ತವಾಗುತ್ತಿವೆ. ರಾತ್ರಿ 10 ಗಂಟೆ ಬಳಿಕ ಪೊಲೀಸರಿಂದ ಸಖಿ ಕೇಂದ್ರಕ್ಕೆ ಗರ್ಭಿಣಿಯನ್ನು ಶಿಫ್ಟ್ ಮಾಡಲಾಗಿದ್ದು, ಪೊಲೀಸರ ಮೇಲೆ ಕರ್ತವ್ಯ ಲೋಪದ ಆರೋಪ ಕೇಳಿ ಬಂದಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com