ಬಳ್ಳಾರಿ: ಆಸ್ಪತ್ರೆಯಲ್ಲಿ 16 ತಿಂಗಳ ಮಗು ಸಾವು: ವೈದ್ಯರ ನಿರ್ಲಕ್ಷ್ಯ ಆರೋಪ; ಆಸ್ಪತ್ರೆಯಲ್ಲಿ ಶವ ಇಟ್ಟು ಪೋಷಕರ ಪ್ರತಿಭಟನೆ
ಬಳ್ಳಾರಿ: ಬಳ್ಳಾರಿ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ ಶನಿವಾರ 16 ತಿಂಗಳ ಮಗು ಸಾವನ್ನಪ್ಪಿದ್ದು, ಇದಕ್ಕೆ ಅಧಿಕಾರಿಗಳ ನಿರ್ಲಕ್ಷ್ಯವೇ ಕಾರಣ ಎಂದು ಆರೋಪಿಸಿದ ಪೋಷಕರು, ಆಸ್ಪತ್ರೆಯಲ್ಲೇ ಶವ ಇಟ್ಟು ಆಸ್ಪತ್ರೆ ಆಡಳಿತ ಮಂಡಳಿ ವಿರುದ್ಧ ಪ್ರತಿಭಟನೆ ನಡೆಸಿದರು.
ಆಸ್ಪತ್ರೆಯಲ್ಲಿ ಎರಡು ತಿಂಗಳಲ್ಲಿ 5 ವರ್ಷಕ್ಕಿಂತ ಕಡಿಮೆ ವಯಸ್ಸಿನ ಏಳು ಮಕ್ಕಳು ಸಾವನ್ನಪ್ಪಿದ್ದು, ಬಾಣಂತಿಯರ ಮರಣದ ನಂತರ ಈಗ ಬಿಮ್ಸ್‌ಗೆ ದಾಖಲಾಗಿರುವ ಮಕ್ಕಳ ಬಗ್ಗೆ ಪೋಷಕರು ಆತಂಕಗೊಂಡಿದ್ದಾರೆ.
ಬಳ್ಳಾರಿ ನಗರ ಶಾಸಕ ನಾರಾ ಭರತ್ ರೆಡ್ಡಿ ಸೇರಿದಂತೆ ಸ್ಥಳೀಯರಿಗೆ ಬಿಮ್ಸ್ ಆಡಳಿತದ ಬಗ್ಗೆ ಸಮಾಧಾನ ಇಲ್ಲ. ಆದರೆ ಸರ್ಕಾರ ಏಕೆ ಪ್ರಾಧಿಕಾರದ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಜನರು ಕೇಳುತ್ತಿದ್ದಾರೆ.
ಮಗು ಸಾವಿನ ಕುರಿತು ನಿರ್ಲಕ್ಷ್ಯ ಆರೋಪವನ್ನು BIMS ಆಡಳಿತ ಮಂಡಳಿ ನಿರಾಕರಿಸಿದೆ ಮತ್ತು ಚಿಕಿತ್ಸೆ ನೀಡಲಾಗುತ್ತಿದ್ದ ಮಗುವಿಗೆ ತೀವ್ರ ಆರೋಗ್ಯ ಸಮಸ್ಯೆಯಿತ್ತು. ಇದೇ ಅದರ ಸಾವಿಗೆ ಕಾರಣ ಎಂದು ಹೇಳಿರುವುದಾಗಿ ಮೂಲಗಳು ಹೇಳಿವೆ.
ಗುರುವಾರ ಜ್ವರದಿಂದಾಗಿ ನಮ್ಮ ಮಗುವನ್ನು ಬಿಮ್ಸ್‌ಗೆ ದಾಖಲಿಸಲಾಯಿತು. ತದನಂತರ ಯಾವೊಬ್ಬ ವೈದ್ಯರು ತ್ವರಿತಗತಿಯಲ್ಲಿ ಸ್ಪಂದಿಸಲಿಲ್ಲ. ವಿಚಾರಣೆ ಬಳಿಕ ಮಗುವನ್ನು ಐಸಿಯುಗೆ ದಾಖಲಿಸಲಾಯಿತು. ಮಗುವಿನ ಆರೋಗ್ಯ ಸ್ಥಿತಿ ಗಂಭೀರವಾಗಿತ್ತು ಎಂದು ವೈದ್ಯರು ತಿಳಿಸಿದ್ದಾಗಿ ಮೃತ ಮಗುವಿನ ಸಂಬಂಧಿಕರೊಬ್ಬರು ಹೇಳಿದರು.
ಶನಿವಾರ ಬೆಳಗ್ಗೆ ಮಗು ಇನ್ನಿಲ್ಲ ಎಂದು ಆಡಳಿತ ಮಂಡಳಿ ತಿಳಿಸಿದೆ. ವೈದ್ಯರ ನಿರ್ಲಕ್ಷ್ಯದಿಂದ ಮಗು ಸಾವನ್ನಪ್ಪಿದೆ. ನಮಗೆ ನ್ಯಾಯ ಬೇಕು ಮತ್ತು ಶೀಘ್ರದಲ್ಲೇ BIMS ಆಡಳಿತ ಮಂಡಳಿ ವಿರುದ್ಧ ದೂರು ಸಲ್ಲಿಸುತ್ತೇವೆ. ಸರ್ಕಾರವು ಅಧಿಕಾರಿಗಳ ವಿರುದ್ಧ ಅಗತ್ಯ ಕ್ರಮ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದರು.
ಸಾಮಾಜಿಕ ಕಾರ್ಯಕರ್ತ ರಾಜೇಂದ್ರ ರೆಡ್ಡಿ ಮಾತನಾಡಿ, ‘ಕಳೆದ ಎರಡು ತಿಂಗಳಲ್ಲಿ 5 ವರ್ಷದೊಳಗಿನ ಏಳಕ್ಕೂ ಹೆಚ್ಚು ಮಕ್ಕಳು ಇಲ್ಲಿ ಸಾವನ್ನಪ್ಪಿದ್ದಾರೆ. ಶೀಘ್ರದಲ್ಲಿಯೇ ಆರೋಗ್ಯ ಸಚಿವರನ್ನು ಭೇಟಿ ಮಾಡಿ ಬಿಮ್ಸ್ ಪ್ರಾಧಿಕಾರದ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಮನವಿ ಮಾಡುತ್ತೇವೆ ಎಂದರು.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ