
ಬೆಂಗಳೂರು: ಇತ್ತೀಚಿನ ತಿಂಗಳುಗಳಲ್ಲಿ ಅನ್ನಭಾಗ್ಯ, ಗೃಹ ಲಕ್ಷ್ಮಿ ಯೋಜನೆಗಳ ಹಣ ಬಿಡುಗಡೆ ಮಾಡದೇ ಟೀಕೆಗೆ ಒಳಗಾಗಿರುವ ರಾಜ್ಯ ಸರ್ಕಾರ ಈಗ ಗೃಹಜ್ಯೋತಿ ಯೋಜನೆಯ ವಿಷಯವಾಗಿಯೂ ತೀವ್ರ ಮುಜುರುಗರ ಎದುರಿಸಿದೆ.
5 ಗ್ಯಾರೆಂಟಿ ಯೋಜನೆಗಳಿಗೆ ಹಣ ಒದಗಿಸಲು ಪರದಾಡುತ್ತಿರುವ ಸರ್ಕಾರಕ್ಕೆ, ಗೃಹಜ್ಯೋತಿ ಯೋಜನೆಯ ಹಣವನ್ನು ಎಸ್ಕಾಂಗಳಿಗೆ ನೀಡಲು ಸಾಧ್ಯವಾಗಿಲ್ಲ. ಈ ಹಿನ್ನೆಲೆಯಲ್ಲಿ ಎಸ್ಕಾಂ ಗಳು ಸಾರ್ವಜನಿಕರಿಂದಲೇ ಹಣ ವಸೂಲಿ ಮಾಡುವ ಪ್ರಸ್ತಾವನೆಯನ್ನು ಮುಂದಿಟ್ಟಿವೆ ಎಂಬ ಮಾಹಿತಿ ಲಭ್ಯವಾಗಿದೆ.
ಗೃಹಜ್ಯೋತಿ ಹಣವನ್ನು ಸರ್ಕಾರ ಮುಂಚಿತವಾಗಿ ಪಾವತಿ ಮಾಡಬೇಕು. ಇಲ್ಲದೇ ಇದ್ದಲ್ಲಿ ಆ ದುಡ್ಡನ್ನು ಜನರಿಂದಲೇ ವಸೂಲಿ ಮಾಡಲು ಅವಕಾಶ ಒದಗಿಸಬೇಕು ಎಂದು ರಾಜ್ಯದ ವಿವಿಧ ಎಸ್ಕಾಮ್ ಗಳು ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗಕ್ಕೆ ಮನವಿ ಮಾಡಿವೆ ಎಂಬ ಬಗ್ಗೆ ವರದಿಯಾಗಿದೆ.
ಎಸ್ಕಾಮ್ ಗಳ ಮನವಿ ಈಗ ಸರ್ಕಾರಕ್ಕೆ ಮುಜುಗರ ಉಂಟುಮಾಡಿದ್ದು, ಗೃಹಜ್ಯೋತಿ ಯೋಜನೆ ಶೀಘ್ರವೇ ಸ್ಥಗಿತಗೊಳ್ಳಲಿದೆಯೇ? ಎಂಬ ಪ್ರಶ್ನೆ ಮೂಡುವಂತೆ ಮಾಡಿದೆ.
ಈ ಬಗ್ಗೆ ವಿಪಕ್ಷ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಪ್ರತಿಕ್ರಿಯೆ ನೀಡಿದ್ದು, ಸರ್ಕಾರವನ್ನು ಕಟುವಾಗಿ ಟೀಕಿಸಿದ್ದಾರೆ. ಸರ್ಕಾರ ಹಣ ಪಾವತಿಸದಿದ್ದರೆ ಎಸ್ಕಾಂಗಳು ವಿದ್ಯುತ್ ಬಿಲ್ ಅನ್ನು ಜನರಿಂದಲೇ ವಸೂಲಿ ಮಾಡಲು ಪ್ರಸ್ತಾಪಿಸಿದ್ದು, ಗೃಹಜ್ಯೋತಿ ರದ್ದಾಗಲಿದೆಯೇ ಎಂಬ ಅನುಮಾನ ವ್ಯಕ್ತವಾಗಿದೆ ಎಂದು ವಿಜಯೇಂದ್ರ ಹೇಳಿದ್ದಾರೆ.
ಒಂದು ವೇಳೆ ಎಸ್ಕಾಮ್ ಗಳ ಪ್ರಸ್ತಾವನೆಗೆ ಅನುಮತಿ ಸಿಕ್ಕಿದರೆ, ಎಸ್ಕಾಂಗಳು ವಿದ್ಯುತ್ ಬಿಲ್ಲನ್ನು ಗ್ರಾಹಕರಿಂದಲೇ ವಸೂಲಿ ಮಾಡಲಿವೆ. ಹಾಗಾದರೆ ಗೃಹಜ್ಯೋತಿ ಯೋಜನೆಯ ಪ್ರಯೋಜನ ಜನರಿಗೆ ಸಿಗಲಾರದು.
ಈ ಮಾಧ್ಯಮ ವರದಿಗಳ ಬೆನ್ನಲ್ಲೇ, ಸರ್ಕಾರದ ವಿರುದ್ಧ ವಿಜಯೇಂದ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. "ಬಿಟ್ಟಿ ಭಾಗ್ಯಗಳಲ್ಲಿ ಒಂದಾದ ಗೃಹ ಜ್ಯೋತಿ ನಂದಿಸಲು ಎಸ್ಕಾಂಗಳು ಸನ್ನದ್ಧವಾಗಿವೆ. 15 ಬಾರಿ ಬಜೆಟ್ ಮಂಡಿಸಿರುವ ದಾಖಲೆ ತಮ್ಮದೆಂದು ಹೇಳಿಕೊಳ್ಳುವ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಈ ಬಿಟ್ಟಿ ಭಾಗ್ಯಗಳಿಗೆ ಹಣ ಸರಿದೂಗಿಸಲು ಸಮತೋಲನ ಕಳೆದುಕೊಂಡಿರುವುದು ಅವರು ಅಧಿಕಾರಕ್ಕೆ ಬಂದ ದಿನದಿಂದಲೂ ಅನಾವರಣಗೊಳ್ಳುತ್ತಿದೆ. ಆರ್ಥಿಕ ದೂರದೃಷ್ಟಿತ್ವವಿಲ್ಲದ, ಬದ್ಧತೆಯಿಲ್ಲದ ಮತ ಬ್ಯಾಂಕ್ ಆಧಾರಿತ ಯೋಜನೆಗಳು ಸೊರಗುತ್ತಿದೆ, ಅಭಿವೃದ್ಧಿ ಎನ್ನುವುದು ಗಗನಕುಸುಮವಾಗಿದೆ, ಬೆಲೆ ಏರಿಕೆಯ ಬಿಸಿ ಜನಸಾಮಾನ್ಯರನ್ನು ಹೈರಾಣಾಗಿಸುತ್ತಿದೆ. ಇದರ ನಡುವೆ ಪಂಚ ಗ್ಯಾರಂಟಿಯ ಯೋಜನೆಗಳು ತೋರಿಕೆಗೆ, ಹೇಳಿಕೆಗೆ ಮಾತ್ರ ಎಂಬಂತೆ ಜನರಿಗೆ ತಲುಪುವಲ್ಲಿ ಬಹುತೇಕ ವಿಫಲವಾಗಿವೆ ಎಂದು ವಿಜಯೇಂದ್ರ ವಾಗ್ದಾಳಿ ನಡೆಸಿದ್ದಾರೆ".
Advertisement