ರಾಹುಲ್ ಗೆ ಅವಮಾನಿಸಿದ್ದ ಜಗ್ಗಿ ವಾಸುದೇವ್, Amit shah ಜೊತೆ ವೇದಿಕೆ ಹಂಚಿಕೆ; ಇದೆಲ್ಲಾ ಸರಿ ಅಲ್ಲ... DK Shivakumar ಗೆ ಹೈಕಮಾಂಡ್ ವಾರ್ನಿಂಗ್!
ಬೆಂಗಳೂರು: ಕೊಯಮತ್ತೂರಿನ ಇಶಾ ಫೌಂಡೇಶನ್‌ನಲ್ಲಿ ನಡೆಯುತ್ತಿರುವ ಶಿವರಾತ್ರಿ ಕಾರ್ಯಕ್ರಮದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಜೊತೆ ಡಿಸಿಎಂ ಡಿ.ಕೆ.ಶಿವಕುಮಾರ್ ವೇದಿಕೆ ಹಂಚಿಕೊಂಡಿರುವುದು ಈಗ ದೇಶಾದ್ಯಂತ ಭಾರಿ ಸುದ್ದಿಯಾಗತೊಡಗಿದೆ.
ಕಾಂಗ್ರೆಸ್ ನಲ್ಲಿ ಸಿಎಂ ಆಗಬೇಕೆಂಬ ಮಹತ್ವಾಕಾಂಕ್ಷೆ ಇಟ್ಟುಕೊಂಡಿರುವ ಡಿಕೆ ಶಿವಕುಮಾರ್ ಅವರ ಈ ನಡೆ ಕಾಂಗ್ರೆಸ್ ಹೈಕಮಾಂಡ್ ಕೆಂಗಣ್ಣಿಗೆ ಗುರಿಯಾಗಿದೆ.
ಕುಂಭಮೇಳಕ್ಕೆ ಹೋಗಿದ್ದಕ್ಕೆ, ಇಶಾ ಫೌಂಡೇಶನ್ ಗೆ ಹೋಗುತ್ತಿರುವುದಕ್ಕೆ ಸಮಾಜಿಕ ಜಾಲತಾಣಗಳಲ್ಲಿ ಬಂದಿರುವ ಟೀಕೆಗಳಿಗೆ ಪ್ರತಿಕ್ರಿಯೆ ನೀಡಿದ್ದ ಡಿಕೆ ಶಿವಕುಮಾರ್, ನಾನು ಕುಂಭ ಮೇಳವನ್ನು ಯೋಗಿ ಸರ್ಕಾರ ಅದ್ಭುತವಾಗಿ ಆಯೋಜಿಸಿದೆ, ಹಿಂದೂ ಆಗಿ ಹುಟ್ಟಿದ್ದೇನೆ, ಹಿಂದೂ ಆಗಿ ಸಾಯುತ್ತೇನೆ ಎಂದು ಹೇಳಿದ್ದರು.
ಈ ಹೇಳಿಕೆ ಬೆನ್ನಲ್ಲೆ ಎಐಸಿಸಿ ಕಾರ್ಯದರ್ಶಿ ಕೇರಳದ ಮಾಜಿ ಉಸ್ತುವಾರಿ ಪಿ.ವಿ.ಮೋಹನ್ ಡಿಕೆ ಶಿವಕುಮಾರ್ ಗೆ ಬಹಿರಂಗ ಎಚ್ಚರಿಕೆ ನೀಡಿದ್ದಾರೆ. ಡಿಕೆ ಶಿವಕುಮಾರ್ ಅವರದ್ದು ಪಕ್ಷದ ತತ್ವ ಸಿದ್ದಾಂತ ಹಾಗೂ ರಾಹುಲ್ ಗಾಂಧಿ ಅವರ ತತ್ವಕ್ಕೆ ವಿರುದ್ದವಾದ ನಡೆ ಎಂದು ಸಾಮಾಜಿಕ ಜಾಲತಾಣದ ಪೋಸ್ಟ್ ಮೂಲಕ ಪಿವಿ ಮೋಹನ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಇಶಾ ಫೌಂಡೇಶನ್ ಕಾರ್ಯಕ್ರಮದಲ್ಲಿ ಡಿಕೆ ಶಿವಕುಮಾರ್ ಅಮಿತ್ ಶಾ ಅವರೊಂದಿಗೆ ಭಾಗಿಯಾಗುತ್ತಿರುವುದನ್ನು ವಿರೋಧಿಸಿರುವ ಪಿವಿ ಮೋಹನ್, ನಮ್ಮ ನಾಯಕ ರಾಹುಲ್ ಗಾಂಧೀಜಿ ಅವರನ್ನು ಅಪಹಾಸ್ಯ ಮಾಡುವ, ಯಾವಾಗಲೂ ಆರ್‌ಎಸ್‌ಎಸ್‌ನ ನಿರೂಪಣೆಗಳೊಂದಿಗೆ ಹೊಂದಿಕೆಯಾಗುವ ವ್ಯಕ್ತಿ (ಇಶಾ ಫೌಂಡೇಶನ್) ಗೆ ಜಾತ್ಯತೀತ ಪಕ್ಷದ ಅಧ್ಯಕ್ಷನಾಗಿದ್ದುಕೊಂಡು, ಜಾತ್ಯತೀತ ಸರ್ಕಾರದ ಡಿಸಿಎಂ ಆಗಿ ಸಾರ್ವಜನಿಕವಾಗಿ ಧನ್ಯವಾದ ಹೇಳುವುದು ಮತ್ತು ಕೃತಜ್ಞತೆಯನ್ನು ವ್ಯಕ್ತಪಡಿಸುವುದು ಪಕ್ಷದ ಕಾರ್ಯಕರ್ತರಿಗೆ ತಪ್ಪು ಸಂದೇಶವನ್ನು ರವಾನಿಸುತ್ತದೆ, ಇದೆಲ್ಲಾ ಸರಿ ಅಲ್ಲ ಎಂದು ಹೇಳಿದ್ದಾರೆ.
ಪಕ್ಷದ ಪ್ರಗತಿ ಮತ್ತು ಬೆಳವಣಿಗೆಗೆ ರಾಜಿಯಾಗಬಾರದು. ದೃಢನಿಶ್ಚಯಕ್ಕೆ ಬದ್ಧತೆ ಬಹಳ ಮುಖ್ಯ, ಇದನ್ನು ನಿರ್ಲಕ್ಷಿಸಿದರೆ ಪಕ್ಷದ ಸೈದ್ಧಾಂತಿಕ ನೆಲೆ ದುರ್ಬಲಗೊಳ್ಳಬಹುದು ಎಂದು ಪಿವಿ ಮೋಹನ್ ಎಚ್ಚರಿಕೆ ನೀಡಿರುವುದು ಈಗ ರಾಜ್ಯ ರಾಜಕಾರಣದಲ್ಲಿ ಸಂಚಲನ ಸೃಷ್ಟಿಸಿದೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ