
ಬೆಂಗಳೂರು: ಮೋದಿ ಸರ್ಕಾರ ಏನು ಮಾಡಿದರೂ ಸರಿ, ಸಿದ್ದರಾಮಯ್ಯ ಸರ್ಕಾರ ಮಾಡಿದ್ದೆಲ್ಲವೂ ತಪ್ಪು ಎನ್ನುವ ಮನಸ್ಥಿತಿಯಿಂದ ಮೊದಲು ಹೊರಗೆ ಬನ್ನಿ ಕೈಗಾರಿಕಾ ಸಚಿವ ಎಂಬಿ ಪಾಟೀಲ್ ಅವರು ಉದ್ಯಮಿ ಮೋಹನದಾಸ್ ಪೈ ಅವರಿಗೆ ಗುರುವಾರ ತಿರುಗೇಟು ನೀಡಿದ್ದಾರೆ.
ಇಂದು ತಮ್ಮ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಎಂಬಿ ಪಾಟೀಲ್ ಅವರು, ಪೈ ನಗರದ ವ್ಯವಸ್ಥೆ ಬಗ್ಗೆ ಟೀಕೆ ಮಾಡುವುದನ್ನು ಬಿಟ್ಟು, ಸುಧಾರಣೆಗೆ ಸಲಹೆ ಕೊಡಲಿ ಎಂದರು.
ಮೋದಿ ಸರ್ಕಾರ ಏನು ಮಾಡಿದರೂ ಸರಿ, ಸಿದ್ದರಾಮಯ್ಯ ಸರ್ಕಾರ ಮಾಡಿದ್ದೆಲ್ಲವೂ ತಪ್ಪು ಎನ್ನುವುದಲ್ಲ. ಇಂತಹ ಟೀಕೆಗಳಿಂದ ಪೈ ದೊಡ್ಡ ಮನುಷ್ಯರಾಗುವುದಿಲ್ಲ ಎಂದು ಎಂಬಿ ಪಾಟೀಲ್ ಗುಡುಗಿದರು.
'ಪೈ ಕೂಡ ಬೆಂಗಳೂರಿನಿಂದಲೇ ಲಾಭ ಮಾಡಿಕೊಂಡಿರುವವರು. ಇಲ್ಲಿಂದಲೇ ಎಲ್ಲವನ್ನೂ ಪಡೆದುಕೊಂಡಿರುವವರು. ಈಗ ಅವರು ಇಲ್ಲಿಂದ ಹುಬ್ಬಳ್ಳಿಗಾಗಲಿ, ಮೈಸೂರಿಗಾಗಲಿ ಹೋಗಲು ತಯಾರಿಲ್ಲ'. ಪದೇ ಪದೇ ಹೀಗೆ ಮಾತನಾಡುತ್ತಿರುವ ಅವರ ಮನಸ್ಸಿನಲ್ಲಿ ಏನಿದೆಯೋ ಗೊತ್ತಿಲ್ಲ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಹರಿಹಾಯ್ದಿದ್ದಾರೆ.
ಬೆಂಗಳೂರು ಪರಿಸ್ಥಿತಿ ದಿನೇ ದಿನೇ ಕೆಟ್ಟದಾಗುತ್ತಿದೆ. ಡಿಕೆ ಶಿವಕುಮಾರ್ ಸಚಿವರಾದ ಬಳಿಕ ಇನ್ನಷ್ಟು ಹದಗೆಟ್ಟಿದೆ. ಬೆಂಗಳೂರಿಗೆ ದೊಡ್ಡ ದೊಡ್ಡ ಯೋಜನೆ ಘೋಷಿಸುವ ಬದಲು, ಇರುವ ಪಾದಾಚಾರಿ ಮಾರ್ಗದ ಸುಸ್ಥೀತಿ, ಎಲೆಕ್ಟ್ರಿಕ್ ವಾಹನಗಳು, ಮೆಟ್ರೋ ಮಾರ್ಗ ಕಾಮಗಾರಿ ತ್ವರಿತಗೊಳಿಸಬೇಕು ಎಂದು ಪೈ ಹೇಳಿದ್ದರು.
Advertisement