News headlines 27-02-2025 | Isha ಫೌಂಡೇಶನ್ ಗೆ ಡಿಕೆ ಶಿವಕುಮಾರ್ ಭೇಟಿ- ಪಕ್ಷದಲ್ಲೇ ಭಾರಿ ವಿರೋಧ; ಹೊಟೆಲ್, ಇಡ್ಲಿ ತಯಾರಿಕೆಯಲ್ಲಿ ಪ್ಲಾಸ್ಟಿಕ್ ಬಳಕೆಗೆ ನಿಷೇಧ; ದಕ್ಷಿಣ ರಾಜ್ಯಗಳ ಸಿಎಂ ಜೊತೆ ಸಭೆಗೆ ಸಿದ್ದರಾಮಯ್ಯ ಮುಂದು

News headlines (file pic)
ಸುದ್ದಿ ಮುಖ್ಯಾಂಶಗಳು (ಸಂಗ್ರಹ ಚಿತ್ರ)online desk

1. ಇಡ್ಲಿ ತಯಾರಿಕೆ, ಹೊಟೆಲ್ ಗಳಲ್ಲಿ ಪ್ಲಾಸ್ಟಿಕ್ ನಿಷೇಧ

ಹೊಟೇಲ್, ಉಪಾಹಾರ, ತಿನಿಸು ಕೇಂದ್ರಗಳಲ್ಲಿ ಪ್ಲಾಸ್ಟಿಕ್ ಬಳಕೆ ನಿಷೇಧಿಸಲಾಗುತ್ತಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ. ಹೋಟೆಲ್, ರಸ್ತೆಬದಿ ತಿಂಡಿ ಅಂಗಡಿಗಳಲ್ಲಿ ಪ್ಲಾಸ್ಟಿಕ್ ಕವರ್ ಗಳನ್ನು ಇನ್ನು ಮುಂದೆ ಬಳಸುವಂತಿಲ್ಲ. ಆಹಾರ ತಯಾರಿಕೆ, ವಿತರಣೆ ವೇಳೆ ಕೂಡ ಪ್ಲಾಸ್ಟಿಕ್ ಬಳಸಬಾರದು. ಆಹಾರದ ಬಿಸಿಗೆ ಪ್ಲಾಸ್ಟಿಕ್ ನಿಂದ ಹೊರಸೂಸುವ ಪದಾರ್ಥಗಳು ವಿಷಕಾರಿಯಾಗುತ್ತಿದ್ದು ಕ್ಯಾನ್ಸರ್ ಕಾರಕ ಅಂಶಗಳನ್ನು ಸಹ ಹೊರಸೂಸುತ್ತದೆ ಎಂದು ವರದಿಯಿಂದ ದೃಢಪಟ್ಟಿದೆ ಎಂದು ಸಚಿವರು ತಿಳಿಸಿದ್ದಾರೆ. "ಆಹಾರ ಸುರಕ್ಷತಾ ಇಲಾಖೆಯು ಕರ್ನಾಟಕದಾದ್ಯಂತ 251 ಸ್ಥಳಗಳಲ್ಲಿ ಇಡ್ಲಿ ಮಾದರಿಗಳನ್ನು ಸಂಗ್ರಹಿಸಿತ್ತು. 251 ರಲ್ಲಿ 54 ಹೋಟೆಲ್‌ಗಳು ಪ್ಲಾಸ್ಟಿಕ್ ಬಳಸುತ್ತಿದ್ದವು. ಹೋಟೆಲ್ಗಳಲ್ಲಿ ಇಡ್ಲಿ ತಯಾರಿಗೆ ಹತ್ತಿ ಬಟ್ಟೆ ಬಳಕೆ ಮಾಡಲಾಗುತ್ತಿತ್ತು. ಆದರೆ ಈಗ ಹೆಚ್ಚಿನ ಕಡೆ ಹೋಟೆಲ್ಗಳಲ್ಲಿ ಪ್ಲಾಸ್ಟಿಕ್ ಬಳಸುತ್ತಿದ್ದಾರೆ. ಇದರಿಂದ ಅನಾರೋಗ್ಯಕ್ಕೆ ಕಾರಣವಾದ ಕಾರ್ಸಿನೋಜೆನಿಕ್ ಅಂಶ ಮಿಶ್ರಣವಾಗುತ್ತಿದೆ. ಕಾರ್ಸಿನೋಜೆನಿಕ್ ಅಂಶ ಕ್ಯಾನ್ಸರ್ಗೆ ಕಾರಣವಾಗಬಹುದು. ಆ ಕ್ಯಾನ್ಸರ್ ಕಾರಕ ಅಂಶಗಳು ಇಡ್ಲಿಗೆ ಸಹ ತಗುಲುತ್ತವೆ ಎಂದು ಸಚಿವರು ತಿಳಿಸಿದ್ದಾರೆ.

2. ನಕಲಿ ಅಂಕಪಟ್ಟಿ: ಓರ್ವನ ಬಂಧನ 

ದೇಶದ ವಿವಿಧ ವಿಶ್ವವಿದ್ಯಾಲಯಗಳ ನಕಲಿ ಅಂಕಪಟ್ಟಿ ತಯಾರಿಸಿ ನಿರುದ್ಯೋಗಿ ಯುವಕರಿಗೆ ಮಾರಾಟ ಮಾಡುತ್ತಿದ್ದ ಕಿಂಗ್ ಪಿನ್ನನ್ನು ಕಲಬುರಗಿ ಸೈಬರ್ ಕ್ರೈಂ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಯನ್ನು ದೇಹಲಿ ಮೂಲದ ರಾಜೀವ ಸಿಂಗ್ ಆರೋರಾ ಎಂದು ಗುರುತಿಸಲಾಗಿದ್ದು, ಕಲಬುರಗಿ ಪೊಲೀಸರು ದೆಹಲಿಯ ರಾಮಪಾರ್ಕ್ ಅಪಾರ್ಟ್ಮೆಂಟ್ ದ್ವಾರಕ್ ಮೋಡ್ನಲ್ಲಿ ಬಂಧಿಸಿದ್ದಾರೆ. ಕರ್ನಾಟಕದ ಬೆಂಗಳೂರು, ಮೈಸೂರು, ಕರ್ನಾಟಕ ಮುಕ್ತ ವಿಶ್ವವಿದ್ಯಾಲಯ ಹೆಸರಲ್ಲಿ ನಕಲಿ ಅಂಕಪಟ್ಟಿ ತಯಾರಿ ಮಾಡುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಬಂಧಿತನಿಂದ 522 ನಕಲಿ ಅಂಕಪಟ್ಟಿಗಳು, 1626 ಖಾಲಿ ಅಂಕಪಟ್ಟಿಗಳು, 36 ಮೊಬೈಲ್, 2 ಲ್ಯಾಪ್‌ ಟಾಪ್, 1 ಪ್ರಿಂಟರ್, ವಿವಿಧ ವಿಶ್ವವಿದ್ಯಾಲಯಗಳ 122 ನಕಲಿ ಸೀಲ್ಗಳು, ಎಟಿಎಂ ಕಾರ್ಡ್ ಮತ್ತು ಆರೋಪಿಯ 123 ನಕಲಿ ಐಡಿಗಳು, ಆರೋಪಿಯ 85 ಬ್ಯಾಂಕ್ ಅಕೌಂಟ್ಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

3. ದಕ್ಷಿಣ ರಾಜ್ಯಗಳ ಸಿಎಂ ಜೊತೆ ಸಿದ್ದರಾಮಯ್ಯ ಸಭೆ!

ಲೋಕಸಭಾ ಕ್ಷೇತ್ರಗಳ ಮರು ವಿಂಗಡಣೆ ವಿಷಯವಾಗಿ ಸಿಎಂ ಸಿದ್ದರಾಮಯ್ಯ ಕೇಂದ್ರ ಸರ್ಕಾರದ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸರಣಿ ಟ್ವೀಟ್ ಮಾಡಿರುವ ಸಿಎಂ ಸಿದ್ದರಾಮಯ್ಯ, ಕ್ಷೇತ್ರ ಮರುವಿಂಗಡಣೆ ನಡೆದಾಗ ದಕ್ಷಿಣದ ರಾಜ್ಯಗಳಿಗೆ ಅನ್ಯಾಯವಾಗಲು ಬಿಡುವುದಿಲ್ಲ ಎನ್ನುವ ಕೇಂದ್ರ ಗೃಹ ಸಚಿವರ ಹೇಳಿಕೆ ನಂಬಿಕೆಗೆ ಅರ್ಹವಾಗಿಲ್ಲ. ಈ ಅನ್ಯಾಯದ ವಿರುದ್ದ ಸಮಗ್ರ ರೂಪದ ಹೋರಾಟವನ್ನು ನಡೆಸಲು ನೆರೆಯ ದಕ್ಷಿಣದ ರಾಜ್ಯಗಳ ಜೊತೆಯಲ್ಲಿಯೂ ಮಾತುಕತೆ ನಡೆಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ಅನ್ಯಾಯಕ್ಕೀಡಾಗಿರುವ ಎಲ್ಲ ರಾಜ್ಯಗಳ ಜೊತೆಗೂಡಿ ಸಂಘಟಿತವಾದ ಹೋರಾಟ ನಡೆಸಲಾಗುವುದು ಎಂದು ಸಿಎಂ ಹೇಳಿದ್ದಾರೆ.

4. Isha ಫೌಂಡೇಶನ್ ಗೆ ಡಿಕೆ ಶಿವಕುಮಾರ್ ಭೇಟಿ- ಪಕ್ಷದಲ್ಲೇ ಭಾರಿ ವಿರೋಧ

ಡಿಸಿಎಂ ಡಿಕೆ ಶಿವಕುಮಾರ್ ಶಿವರಾತ್ರಿ ಅಂಗವಾಗಿ ಇಶಾ ಫೌಂಡೇಶನ್ ಗೆ ಭೇಟಿ ನೀಡಿ ಅಮಿತ್ ಶಾ ಜೊತೆ ವೇದಿಕೆ ಹಂಚಿಕೊಂಡಿದ್ದು ಈಗ ರಾಜ್ಯಾದ್ಯಂತ ಭಾರಿ ಚರ್ಚೆಗೆ ಗ್ರಾಸವಾಗುತ್ತಿದೆ. ಎಐಸಿಸಿ‌ ಕಾರ್ಯದರ್ಶಿ ಕೇರಳದ ಮಾಜಿ ಉಸ್ತುವಾರಿ ಪಿ.ವಿ.ಮೋಹನ್ ಡಿಕೆ ಶಿವಕುಮಾರ್ ನಡೆಗೆ ಅಸಮಾಧಾನ ವ್ಯಕ್ತಪಡಿಸಿ ಡಿಕೆ ಶಿವಕುಮಾರ್ ಅವರದ್ದು ಪಕ್ಷದ ತತ್ವ ಸಿದ್ದಾಂತ ಹಾಗೂ ರಾಹುಲ್ ಗಾಂಧಿ ಅವರ ತತ್ವಕ್ಕೆ ವಿರುದ್ದವಾದ ನಡೆ ಎಂದು ಟೀಕಿಸಿದ್ದಾರೆ. ಈ ಬೆಳವಣಿಗೆಗಳಿಂದ ಡಿಕೆ ಶಿವಕುಮಾರ್ ಪಕ್ಷ ತೊರೆಯಲಿದ್ದಾರಾ? ಎಂಬ ಊಹಾಪೋಹಗಳೂ ಮೂಡಿವೆ. ನನ್ನ ಧಾರ್ಮಿಕ ನಂಬಿಕೆಗಳು ನನ್ನ ವೈಯಕ್ತಿಕ ವಿಚಾರ. ಅದಕ್ಕೂ ಮತ್ತು ನನ್ನ ರಾಜಕೀಯಕ್ಕೂ ಯಾವ ಸಂಬಂಧವೂ ಇಲ್ಲ. ಓರ್ವ ನಂಬಿಗಸ್ಥ ಹಿಂದೂವಾಗಿ ನಾನು ಶಿವನ ಆರಾಧನೆ ಮಾಡುವುದರಲ್ಲಿ ತಪ್ಪೇನಿದೆ? ಅಮಿತ್‌ ಶಾ ಅವರೊಂದಿಗೆ ರಾಜಕೀಯ ಚರ್ಚೆ ಮಾಡಲು ನಾನು ಇಶಾ ಫೌಂಡೇಶನ್‌ಗೆ ಹೋಗಿರಲಿಲ್ಲ ಎಂದು ಡಿಸಿಎಂ ಸ್ಪಷ್ಟಪಡಿಸಿದ್ದಾರೆ.

5. ಬೇಸಿಗೆ ಆರಂಭದಲ್ಲೇ Heatwave

ಕರಾವಳಿ ಕರ್ನಾಟಕದ ಹಲವು ಭಾಗಗಳಲ್ಲಿ ಬುಧವಾರದಿಂದ ಬಿಸಿಗಾಳಿ ಆವರಿಸಿದ್ದು, ಭಾರತೀಯ ಹವಾಮಾನ ಇಲಾಖೆ ಎರಡು ದಿನ 'ಯೆಲ್ಲೂ' ಅಲರ್ಟ್ ಘೋಷಿಸಿದೆ. ಬುಧವಾರ 37 ಡಿಗ್ರಿ ಸೆಲ್ಸಿಯಸ್‌ ಗರಿಷ್ಠ ತಾಪಮಾನ ದಾಖಲಾಗಿತ್ತು. ಈ ರೀತಿಯ ಹವಾಮಾನ ಮಾರ್ಚ್ 3 ರವರೆಗೆ ಇರುತ್ತದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಮುಂದಿನ ಎರಡು ದಿನಗಳ ಕಾಲ ಕರಾವಳಿ ಕರ್ನಾಟಕದ ಜಿಲ್ಲೆಗಳಲ್ಲಿ ಬಿಸಿಗಾಳಿ ಬೀಸುವ ಸಾಧ್ಯತೆಯಿದೆ. ಉತ್ತರ ಕನ್ನಡ ಜಿಲ್ಲೆಯಲ್ಲಿ ಮುಂದಿನ ಮೂರು ದಿನಗಳವರೆಗೆ ಬಿಸಿಗಾಳಿ ಇರಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮಾಹಿತಿ ನೀಡಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com