
ಬೆಂಗಳೂರು: ಚಿನ್ನದಂಗಡಿ ಮಾಲಕಿಯಿಂದ ಕೋಟ್ಯಂತರ ರೂಪಾಯಿ ಮೌಲ್ಯದ ಚಿನ್ನಾಭರಣ ಸಾಲ ಪಡೆದು ವಂಚನೆ ಆರೋಪ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿರುವ ಐಶ್ವರ್ಯಾ ಗೌಡ ಮತ್ತು ಅವರ ಪತಿ ಕೆ. ಎನ್. ಹರೀಶ್ ಗೆ ಹೈಕೋರ್ಟ್ ಮಧ್ಯಂತರ ಜಾಮೀನು ಮಂಜೂರು ಮಾಡಿದೆ.
ಅಲ್ಲದೇ, ಬಂಧಿತರನ್ನು ತಕ್ಷಣ ಕೂಡಲೇ ಬಿಡುಗಡೆ ಮಾಡುವಂತೆ ಚಂದ್ರಾಲೇಔಟ್ ಠಾಣೆ ಪೊಲೀಸರಿಗೆ ನಿರ್ದೇಶಿಸಿದೆ. ಪ್ರಕರಣ ಸಂಬಂಧ ತಮ್ಮ ವಿರುದ್ಧ ಚಂದ್ರಾಲೇಔಟ್ ಠಾಣಾ ಪೊಲೀಸರು ದಾಖಲಿಸಿರುವ ಎಫ್‌ಐಆರ್ ರದ್ದುಪಡಿಸುವಂತೆ ಕೋರಿ ಐಶ್ವರ್ಯಾ ಗೌಡ ಮತ್ತು ಅವರ ಪತಿ ಕೆ. ಎನ್. ಹರೀಶ್ ಸಲ್ಲಿಸಿರುವ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸೂರಜ್ ಗೋವಿಂದ ರಾಜ್ ಅವರ ಪೀಠ ಈ ಆದೇಶ ಮಾಡಿದೆ.
ಪ್ರಕರಣದಲ್ಲಿ ಅರ್ಜಿದಾರರು ಪ್ರಕರಣ ಸಂಬಂಧ ಪೊಲೀಸರು ನೀಡಿದ್ದ ನೋಟಿಸ್‌ಗೆ ಪೂರಕವಾಗಿ ಸ್ಪಂದಿಸಿ, ಸ್ವಯಿಚ್ಛೆಯಿಂದ ಠಾಣೆಗೆ ತೆರಳಿ ತನಿಖೆಗೆ ಸಹಕರಿಸಿದ್ದರು. ಆದರೆ, ಪೊಲೀಸರು ಅರ್ಜಿದಾರರನ್ನು ಏಕಾಏಕಿಯಾಗಿ ಬಂಧಿಸಿದ್ದಾರೆ. ಅದಕ್ಕೂ ಮುನ್ನ ಪೊಲೀಸರು ಬಂಧನಕ್ಕೆ ಸಕಾರಣಗಳನ್ನು ಲಿಖಿತವಾಗಿ ಅರ್ಜಿದಾರರಿಗೆ ನೀಡಿಲ್ಲ. ಇದು ಸುಪ್ರೀಂ ಕೋರ್ಟ್ ತೀರ್ಪಿನ ಸ್ಪಷ್ಟ ಉಲ್ಲಂಘನೆಯಾಗಿದೆ. ಅದರಂತೆ ಅರ್ಜಿದಾರರ ಬಂಧನವು ಕಾನೂನು ಬಾಹಿರವಾಗಿದೆ ಎಂದು ಅಭಿಪ್ರಾಯಪಟ್ಟ ಹೈಕೋರ್ಟ್, ಅರ್ಜಿದಾರರನ್ನು ಕೂಡಲೇ ಬಿಡುಗಡೆ ಮಾಡಬೇಕು ಎಂದು ಪೊಲೀಸರಿಗೆ ಸೂಚನೆ ನೀಡಿದೆ.
ಅಲ್ಲದೆ, ಆರೋಪಿಗಳು ಪೊಲೀಸರ ತನಿಖೆಗೆ ಸೂಕ್ತವಾಗಿ ಸಹಕರಿಸಬೇಕು ಎಂದು ಷರತ್ತು ವಿಧಿಸಿರುವ ಹೈಕೋರ್ಟ್, ಅರ್ಜಿಯಲ್ಲಿ ಪ್ರತಿವಾದಿಗಳಾಗಿರುವ ಚಂದ್ರಾಲೇಔಟ್ ಠಾಣಾ ಪೊಲೀಸರು ಮತ್ತು ದೂರುದಾರೆ ವನಿತಾ ಐತಾಳ್ ಅವರಿಗೆ ನೋಟಿಸ್ ಜಾರಿ ಮಾಡಿದೆ.
Advertisement