
ಬೆಂಗಳೂರು: ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ(ಕೆಐಎಡಿಬಿ) ಹಣಕಾಸು ಸಂಸ್ಥೆಗಳಿಂದ ಪಡೆಯುವ ಸಾಲದ ಮಿತಿಯನ್ನು 500 ಕೋಟಿ ರೂಪಾಯಿಗಳಿಂದ 5,000 ಕೋಟಿ ರೂಪಾಯಿಗಳಿಗೆ ಹೆಚ್ಚಿಸಲು ರಾಜ್ಯ ಸಚಿವ ಕ್ಯಾಬಿನೆಟ್ ಗುರುವಾರ ಅನುಮೋದನೆ ನೀಡಿದೆ.
ಇಂದು ವಿಧಾನಸೌಧದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್‌ಕೆ ಪಾಟೀಲ್ ಅವರು, ರಾಜ್ಯದಾದ್ಯಂತ 24 ಕೈಗಾರಿಕಾ ಪ್ರದೇಶಗಳ ಅಭಿವೃದ್ಧಿಗಾಗಿ ಕೆಐಎಡಿಬಿ 28,741 ಎಕರೆ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳುತ್ತಿರುವ ಕಾರಣ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದರು.
ಈ ಕೈಗಾರಿಕಾ ಪ್ರದೇಶಗಳನ್ನು ಅಭಿವೃದ್ಧಿಪಡಿಸಲು ಭೂಸ್ವಾಧೀನಕ್ಕೆ 26,505 ಕೋಟಿ ಸೇರಿದಂತೆ ಕನಿಷ್ಠ 32,380 ಕೋಟಿ ರೂ.ಗಳ ಅಗತ್ಯವಿದೆ ಎಂದು ಪಾಟೀಲ್ ಹೇಳಿದರು.
ಅಸ್ತಿತ್ವದಲ್ಲಿರುವ 14 ಗೋಶಾಲೆಗಳನ್ನು ಬಲಪಡಿಸಲು ಸಚಿವ ಸಂಪುಟವು ಆಡಳಿತಾತ್ಮಕ ಅನುಮೋದನೆ ನೀಡಿದೆ ಎಂದು ಪಾಟೀಲ್ ತಿಳಿಸಿದರು.
ನಾವು ಹೊಸ ಗೋಶಾಲೆಗಳನ್ನು ರದ್ದು ಮಾಡುತ್ತಿಲ್ಲ. ಆದರೆ ಅಸ್ತಿತ್ವದಲ್ಲಿರುವ 14 ಗೋಶಾಲೆಗಳನ್ನು ಮತ್ತಷ್ಟು ಬಲಪಡಿಸಲು 10.5 ಕೋಟಿ ರೂ.ಗಳನ್ನು ವಿನಿಯೋಗಿಸುತ್ತಿದ್ದೇವೆ ಎಂದು ಅವರು ಹೇಳಿದರು.
35 ಹೊಸ ಗೋಶಾಲೆಗಳ ಕಾಮಗಾರಿ ಆರಂಭವಾಗಿದ್ದು, 14 ಪೂರ್ಣಗೊಂಡಿವೆ. ಅಸ್ತಿತ್ವದಲ್ಲಿರುವ ಇವುಗಳನ್ನು ಬಲಪಡಿಸುವತ್ತ ಸರ್ಕಾರ ಗಮನಹರಿಸುತ್ತಿದೆ.
ಬೆಂಗಳೂರು ನಗರ ಪಾಲಿಕೆ ವ್ಯಾಪ್ತಿಯಲ್ಲಿ ಮೂರನೇ ಹಂತದ ವೈಟ್ ಟಾಪಿಂಗ್ ರಸ್ತೆಗಳನ್ನು ರದ್ದುಪಡಿಸಲು ಸಂಪುಟ ಸಭೆ ನಿರ್ಧರಿಸಿದೆ.
ವೈಟ್ ಟಾಪಿಂಗ್ ಗುತ್ತಿಗೆ ನೀಡಲಾಗಿತ್ತು. ಆದರೆ ಕೆಲಸ ಪ್ರಾರಂಭಿಸಲು ಸಾಧ್ಯವಾಗದ ಕಾರಣ ಟೆಂಡರ್‌ಗಳನ್ನು ರದ್ದುಗೊಳಿಸಲಾಗಿದೆ ಎಂದು ಸಚಿವರು ಹೇಳಿದರು.
ಬಂದರು ನಿರ್ಮಾಣಕ್ಕೆ ಅನುಮೋದನೆ
ಕೇಂದ್ರ ಪುರಸ್ಕೃತ ಯೋಜನೆಯಡಿ ಉಡುಪಿ ಜಿಲ್ಲೆಯ ಹೆಜಮಾಡಿ ಕೋಡಿಯಲ್ಲಿನ ಮೀನುಗಾರಿಕೆ ಬಂದರು ನಿರ್ಮಾಣ ಕಾಮಗಾರಿಯ 209.13 ಕೋಟಿ ರೂ.ಗಳ ಅಂದಾಜಿಗೆ ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ.ಕೇಂದ್ರ ಪುರಸ್ಕೃತ ಯೋಜನೆಯಡಿ ಹಾಲಿ ಇರುವ ಮೀನುಗಾರಿಕೆ ಬಂದರುಗಳ ಆಧುನೀಕರಣ ಹಾಗೂಮೀನುಗಾರಿಕೆ ಬಂದರು ಮತ್ತು ಇಳಿದಾಣ ಕೇಂದ್ರಗಳಲ್ಲಿ ನಿರ್ವಹಣಾ ಹೂಳೆತ್ತುವಿಕೆ ಯ ಕಾಮಗಾರಿಗಳ 84.57 ಕೋಟಿ ರೂ.ಗಳ ಅಂದಾಜು ಮೊತ್ತಕ್ಕೆ ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ.
ಧಾರವಾಡ ಮಹಾನಗರ ಪಾಲಿಕೆ ರಚನೆಗೆ ಸಚಿವ ಸಂಪುಟ ಒಪ್ಪಿಗೆ
ಹುಬ್ಬಳ್ಳಿ- ಧಾರವಾಡ ಮಹಾನಗರ ಪಾಲಿಕೆಯನ್ನು ವಿಭಜಿಸಿ, ಪ್ರತ್ಯೇಕವಾಗಿ ಧಾರವಾಡ ಮಹಾನಗರ ಪಾಲಿಕೆ ರಚನೆಗೆ ಗುರುವಾರ ಸಚಿವ ಸಂಪುಟ ಅನುಮೋದನೆ ನೀಡಿದೆ.
ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯನ್ನು ವಿಭಜಿಸಿ ಪ್ರಸ್ತುತ ಇರುವ ಹುಬ್ಬಳ್ಳಿ- ಧಾರವಾಡ ಮಹಾನಗರ ಪಾಲಿಕೆಯ ವಾರ್ಡ್ ನಂ.1 ರಿಂದ 26 ಅನ್ನು ಸೇರಿಸಿ ಪ್ರತ್ಯೇಕ ಧಾರವಾಡ ಮಹಾನಗರ ಪಾಲಿಕೆ ರಚಿಸಲಾಗುತ್ತದೆ. ಇನ್ನೂಳಿದ ವಾರ್ಡ್ ನಂ.27 ರಿಂದ 82 ರವರೆಗಿನ ಪ್ರದೇಶಗಳನ್ನು ಹುಬ್ಬಳ್ಳಿ ಮಹಾನಗರ ಪಾಲಿಕೆಯನ್ನಾಗಿ ಮುಂದುವರೆಸಲು ಅನುಮತಿ ನೀಡಲಾಗಿದೆ.
Advertisement