
ಬೆಂಗಳೂರು: ಬಿಜೆಪಿಗೆ ಸಾಮಾನ್ಯ ಜ್ಞಾನವಿಲ್ಲ. ಈಶ್ವರಪ್ಪ ಪ್ರಕರಣದಲ್ಲಿ ಗುತ್ತಿಗೆದಾರರು ಸಚಿವರ ಹೆಸರು ಹೇಳಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಗುತ್ತಿಗೆದಾರ ಬರೆದಿದ್ದನ್ನು ಸರಿಯಾಗಿ ಓದಿ ಬಿಜೆಪಿ ನಾಯಕರಿಗೆ ಸಚಿವ ಪ್ರಿಯಾಂಕ್ ಖರ್ಗೆ ತಿರುಗೇಟು ನೀಡಿದ್ದಾರೆ.
ಈ ಸಂಬಂಧ ತಮ್ಮ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿರುವ ಅವರು, ನನ್ನ ಸಾವಿಗೆ ನೇರ ಕಾರಣ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಇಲಾಖೆಯ ಸಚಿವರಾದ ಕೆಎಸ್ ಈಶ್ವರಪ್ಪನವರು. ಇವರಿಗೆ ತಕ್ಕ ಶಿಕ್ಷೆ ಆಗಬೇಕು.
ನನ್ನೆಲ್ಲ ಆಸೆಗಳನ್ನು ಬದಿಗೊತ್ತಿ ಈ ನಿರ್ಧಾರ ಮಾಡಿರುತ್ತೇನೆ. ನನ್ನ ಹೆಂಡತಿ ಮಗುವಿಗೆ ಸರ್ಕಾರ ಅಂದರೆ ಮಾನ್ಯ ಪ್ರಧಾನ ಮಂತ್ರಿಗಳು ಹಾಗೂ ಮಾನ್ಯ ಮುಖ್ಯಮಂತ್ರಿಗಳು ಹಾಗೂ ನಮ್ಮ ಹಿರಿಯ ಲಿಂಗಾಯತ ನಾಯಕರಾದ ಬಿಎಸ್ ಯಡಿಯೂರಪ್ಪನವರು. ಹಾಗೆಯೇ ಅವರಿವರೆನ್ನದೆ ಎಲ್ಲರೂ ಸಹಾಯಹಸ್ತ ನೀಡಬೇಕೆಂದು ಕೈ ಮುಗಿದು ಕೇಳಿಕೊಳ್ಳುತ್ತೇನೆ.
ಮಾಧ್ಯಮ ಮಿತ್ರರಿಗೆ ಕೋಟಿ ಕೋಟಿ ಧನ್ಯವಾದಗಳು. ನನ್ನ ಜೊತೆ ಬಂದ ನನ್ನ ಗೆಳೆಯರಾದ ಸಂತೋಷ ಮತ್ತು ಪ್ರಶಾಂತ್‌ಗೆ ನಾವು ಪ್ರವಾಸ ಹೋಗೋಣ ಎಂದು ನನ್ನ ಜೊತೆಗೆ ಕರೆದುಕೊಂಡು ಬಂದಿರುತ್ತೇನೆ ಅಷ್ಟೇ. ಅವರಿಗೆ ನನ್ನ ಸಾವಿನ ಬಗ್ಗೆ ಯಾವುದೇ ಸಂಬಂಧ ಇರುವುದಿಲ್ಲ ಎಂದು ಬರೆದಿದ್ದರು, ಇದರಿಂದ ಮಾಜಿ ಸಚಿವ, ಆರೋಪಿ ನಂಬರ್ 1 ಆಗಿದ್ದಾರೆ.
ಸಚಿನ್ ಪ್ರಕರಣದಲ್ಲಿ 8 ಆರೋಪಿಗಳು ಇದ್ದಾರೆ, ನಾನು ಪಟ್ಟಿಯಲ್ಲಿ ಇದ್ದೇನಾ? ಬಿಜೆಪಿ ನಾಯಕರಿಗೆ ತಮ್ಮ ಅಸ್ತಿತ್ವ ಉಳಿಸಿಕೊಳ್ಳಲು ನಾನು ಅನಿವಾರ್ಯವಾಗಿದ್ದೇನೆ. ಅಂದು ನಿಮ್ಮ ಪಕ್ಷದ ನಾಯಕರ ಮತ್ತು ನಿಮ್ಮ ಪಕ್ಷದ ನಿಲುವು ಏನೆಂಬುದನ್ನು ದಯವಿಟ್ಟು ನೆನಪಿಸಿಕೊಳ್ಳಿ ಎಂದು ಹೇಳಿದ್ದಾರೆ.
ಆತ್ಮಹತ್ಯೆ ಮಾಡಿಕೊಂಡ ಗುತ್ತಿಗೆದಾರ ಸಚಿನ್ ಡೆತ್‌ನೋಟ್‌ನಲ್ಲಿ ಪ್ರಿಯಾಂಕ್ ಖರ್ಗೆ ಅವರ ಹೆಸರು ಸ್ಪಷ್ಟವಾಗಿ ಉಲ್ಲೇಖವಾಗಿದೆ. ಎಫ್‌ಎಸ್‌ಎಲ್ ವರದಿ ಕೂಡಾ ಡೆತ್‌ನೋಟ್ ನಕಲಿಯಲ್ಲ, ಅಸಲಿ ಎಂದಿದೆ. ಎಫ್‌ಐಆರ್ ದಾಖಲಾಗಿ ಹಲವು ದಿನಗಳಾದರೂ ಪ್ರಮುಖ ಆರೋಪಿಯ ಬಂಧನವಾಗಿಲ್ಲ. ಬಿಜೆಪಿ ನಾಯಕರ ಮೇಲೆ, ಕಾರ್ಯಕರ್ತರ ಮೇಲೆ ಕೇಸು ದಾಖಲಾದ ಕೂಡಲೇ ಬಂಧಿಸುವ ಪೊಲೀಸ್ ಇಲಾಖೆ ಈಗೇಕೆ ಮೌನವಾಗಿದೆ? ಎಂದು ಬಿಜೆಪಿ ನಾಯಕ ಛಲವಾದಿ ನಾರಾಯಣಸ್ವಾಮಿ ಪ್ರಶ್ನಿಸಿದ್ದರು.
Advertisement