
ಮೈಸೂರು: ಭಾರತದ ಎಲ್ಲ ಭಾಷೆಗಳ ಮೇಲೆ ಅಭಿಮಾನ ಇರಿಸಿಕೊಂಡೇ ಸಂಪರ್ಕ ಭಾಷೆಯಾಗಿ ಹಿಂದಿಯನ್ನು ಬೆಳೆಸಬೇಕಿದೆ. ವಿದೇಶಿ ಭಾಷೆಯನ್ನು ಸಂಪರ್ಕ ಭಾಷೆಯಾಗಿ ಬಳಸಬಾರದು ಎಂದು ಬಿಹಾರ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ಪ್ರತಿಪಾದಿಸಿದ್ದಾರೆ.
ಕೆಎಸ್‌ಒಯು ಘಟಿಕೋತ್ಸವ ಭವನದಲ್ಲಿ ಕೇಂದ್ರ ಗೃಹ ಸಚಿವಾಲಯದ ಅಧಿಕೃತ ಭಾಷಾ ವಿಭಾಗವು ಶನಿವಾರ ಆಯೋಜಿಸಿದ್ದ ‘ದಕ್ಷಿಣ ಹಾಗೂ ನೈರುತ್ಯ ವಿಭಾಗದ ಅಧಿಕೃತ ಭಾಷಾ ಸಮ್ಮೇಳನ ಹಾಗೂ ಪ್ರಶಸ್ತಿ ಪ್ರದಾನ’ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ರಾಜ್ಯಪಾಲರು, ಯಾವುದೇ ವಿದೇಶಿ ಭಾಷೆಯನ್ನು ಕಲಿಯಬಹುದು. ಆದರೆ, ನಮ್ಮ ದೇಶದ ಭಾಷೆಗಳನ್ನು ಪ್ರೀತಿಸಬೇಕು. ದ್ವೇಷಿಸಬಾರದು ಎಂದರು.
ದೇಶದ ಸಂಸ್ಕೃತಿಯ ರಾಯಭಾರಿಯಾಗಿರುವ ಎಲ್ಲ ಭಾಷೆಗಳನ್ನು ಕಲಿಯಲು ಮುಂದಾದಾಗ ಮಾತ್ರವೇ ವೈವಿಧ್ಯತೆಯನ್ನು ಅರಿಯಲು ಸಾಧ್ಯವಾಗುತ್ತದೆ. ಭಾರತೀಯ ಸಮಾಜದ ಅಭಿವ್ಯಕ್ತಿಯೇ ಭಾಷೆಯಾಗಿದೆ’ ಎಂದು ತಿಳಿಸಿದರು.
‘ಸಶಕ್ತ ಪರಂಪರೆ ಹೊಂದಿರುವ ದೇಶದ ಅನೇಕತೆಯಲ್ಲಿಯೇ ಏಕತೆಯಿದೆ. ನಮ್ಮ ಸಂಸ್ಕೃತಿಯು ಇತಿಹಾಸ ಹಾಗೂ ಜ್ಞಾನದ ಆಧಾರದ ಮೇಲೆ ನಿಂತಿದೆ. ಹೀಗಾಗಿಯೇ ಹೆಚ್ಚು ವಿದೇಶಿಗರು ದೇಶದ ಜ್ಞಾನ ಭಂಡಾರ ಅರಿಯಲು ಇಲ್ಲಿಗೆ ಬರುತ್ತಾರೆ. ಜ್ಞಾನಿಗಳಾದ ಭಾರತೀಯರು ಸಮಾಜದ ಅಭಿವೃದ್ಧಿಯ ಕಡೆಗೆ ಯೋಚಿಸಬೇಕು’ ಎಂದು ಸಲಹೆ ನೀಡಿದರು.
ಕೇಂದ್ರ ಗೃಹ ವ್ಯವಹಾರಗಳ ರಾಜ್ಯ ಸಚಿವ ನಿತ್ಯಾನಂದ ರಾಯ್ ಮಾತನಾಡಿ, ಹಿಂದಿಯನ್ನು ಸಂವಾದದ ಭಾಷೆಯನ್ನಾಗಿ ಮಾಡಲು ಸಂಕಲ್ಪ ಮಾಡಿದ್ದೇವೆ. ತಮಿಳು, ಕನ್ನಡ, ತೆಲುಗು, ಮಲಯಾಳಂ ಭಾಷೆಗಳನ್ನು ಮಾತನಾಡುವ ದಕ್ಷಿಣ ಭಾರತದಲ್ಲಿ ಹಿಂದಿ ಸಹ ಒಂದು ಪ್ರಮುಖ ಮಾಧ್ಯಮವಾಗಿದೆ, ಇದು ಜನರಿಗೆ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಸಂವಾದದಲ್ಲಿ ಭಾಗವಹಿಸಲು ಅವಕಾಶವನ್ನು ಕೂಡಾ ನೀಡುತ್ತದೆ. ರಾಷ್ಟ್ರೀಯ ಏಕತೆಯನ್ನು ಬಲಪಡಿಸುವ ಮಾಧ್ಯಮವೂ ಆಗಿದೆ ಎಂದು ಹೇಳಿದರು.
ಆಂಧ್ರಪ್ರದೇಶ, ಕರ್ನಾಟಕ, ತೆಲಂಗಾಣ, ಕೇರಳ, ತಮಿಳುನಾಡು, ಪಾಂಡಿಚೇರಿ, ಲಕ್ಷದ್ವೀಪದ ಕೇಂದ್ರ ಸರ್ಕಾರದ ಕಚೇರಿಗಳು, ಬ್ಯಾಂಕ್‌ಗಳಲ್ಲಿ ಭಾಷಾ ಅನುಷ್ಠಾನಗೊಳಿಸಿದ 32 ಉತ್ತಮ ಅಧಿಕಾರಿಗಳು ಹಾಗೂ ಸಿಬ್ಬಂದಿಯನ್ನು ಸನ್ಮಾನಿಸಿ, ಪ್ರಮಾಣ ಪತ್ರ ನೀಡಲಾಯಿತು.
ಸಂಸದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಮತ್ತಿತರರು ಸಮ್ಮೇಳನದಲ್ಲಿ ಉಪಸ್ಥಿತರಿದ್ದರು.
Advertisement